ಮುಂಬೈ: ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ಕಲುಷಿತ ನೀರು ಕುಡಿದು ಸುಮಾರು 100 ಗ್ರಾಮಸ್ಥರು ಅಸ್ವಸ್ಥರಾಗಿದ್ದಾರೆ. ಬಳಿಕ ಅಲ್ಲಿಗೆ ಆಗಮಿಸಿದ ವೈದ್ಯಕೀಯ ತಂಡಗಳು ಅಸ್ವಸ್ಥರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಾಂದೇಡ್ ಜಿಲ್ಲೆಯ ಮುಗವ್ ತಾಂದ್ರ ಗ್ರಾಮದಲ್ಲಿ 107 ಮನೆಗಳಿದ್ದು, 440 ಜನಸಂಖ್ಯೆ ಇದೆ. ಈ ಗ್ರಾಮಸ್ಥರು ಬಾವಿಯಿಂದ ಸರಬರಾಜಾಗುವ ಕಲುಷಿತ ನೀರನ್ನು ಸೇವಿಸಿದ್ದು, ಜೂನ್ 26 ಮತ್ತು 27ರಂದು 93 ಗ್ರಾಮಸ್ಥರು ಹೊಟ್ಟೆನೋವು ಮತ್ತು ಅತಿಸಾರದಿಂದ ಬಳಲುತ್ತಿದ್ದರು.
ಮಾಹಿತಿ ಪಡೆದ ವೈದ್ಯರು 56 ಮಂದಿಯನ್ನು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಹಾಗೂ 37 ಮಂದಿಯನ್ನು ಮಂಜರಂ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕರೆದೊಯ್ದರು. ವೈದ್ಯಕೀಯ ತಂಡಗಳು ಮುಗವ್ ತಾಂಡಾ ಗ್ರಾಮದಲ್ಲಿ ಬೀಡುಬಿಟ್ಟು ಅಲ್ಲಿನ ಪರಿಸ್ಥಿತಿ ಅವಲೋಕಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಆ ಬಾವಿಯಿಂದ ಗ್ರಾಮಕ್ಕೆ ಸರಬರಾಜಾಗುವ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಯಿತು.
ಕೊಳವೆಬಾವಿ ನೀರು ಕಲುಷಿತಗೊಂಡು ನೂರಾರು ಜನರು ಅಸ್ವಸ್ಥರಾಗಿದ್ದಾರೆ. ಹೀಗಾಗಿ ಕೂಡಲೇ ಬಾವಿಯನ್ನು ಮುಚ್ಚಿ ಗ್ರಾಮಸ್ಥರಿಗೆ ಸಮೀಪದ ಫಿಲ್ಟರ್ ಪ್ಲಾಂಟ್‌ನಿಂದ ಕುಡಿಯುವ ನೀರು ಪೂರೈಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.