ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟಿರುವ ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿರುವ ಭಾರತೀಯ ನೌಕೆಗಳ ಕುರಿತು ಕೇಂದ್ರ ವಿದೇಶಾಂಗ ಸಚಿವಾಲಯ ಮಹತ್ವದ ಮಾಹಿತಿ ನೀಡಿದೆ. ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.
ಯುದ್ಧ ಆರಂಭವಾದಾಗಿನಿಂದ ಇದುವರೆಗೆ ಭಾರತದ 11 ನೌಕೆಗಳು ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿವೆ ಎಂದು ಜೈಸ್ವಾಲ್ ತಿಳಿಸಿದ್ದಾರೆ. ಈ ನೌಕೆಗಳು ಸದ್ಯ ಸುರಕ್ಷಿತವಾಗಿ ಭಾರತದತ್ತ ಪ್ರಯಾಣ ಬೆಳೆಸಿವೆ ಅಥವಾ ತಲುಪಿವೆ ಎಂದು ಅವರು ಖಚಿತಪಡಿಸಿದ್ದಾರೆ.
ಆದರೆ, ಇನ್ನು 13 ಭಾರತೀಯ ನೌಕೆಗಳು ಪರ್ಷಿಯನ್ ಗಲ್ಫ್ ಸಮೀಪದ ಜಲಸಂಧಿಯಲ್ಲೇ ಸಿಲುಕಿಕೊಂಡಿವೆ. ಈ ಹಡಗುಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಭಾರತ ಸರ್ಕಾರವು ಇರಾನ್ ಅಧಿಕಾರಿಗಳೊಂದಿಗೆ ನಿರಂತರವಾಗಿ ರಾಜತಾಂತ್ರಿಕ ಮಾತುಕತೆ ನಡೆಸುತ್ತಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
ಅಂತರಾಷ್ಟ್ರೀಯ ತೈಲ ಸಾಗಾಣಿಕೆಗೆ ಹಾರ್ಮುಜ್ ಜಲಸಂಧಿಯು ಜಗತ್ತಿನ ಅತ್ಯಂತ ಪ್ರಮುಖ ಮಾರ್ಗವಾಗಿದೆ. ಈ ಮಾರ್ಗವನ್ನು ಮುಚ್ಚಿರುವುದರಿಂದ ಭಾರತ ಸೇರಿದಂತೆ ಹಲವು ದೇಶಗಳು ತೈಲ ಪೂರೈಕೆಯ ಸಮಸ್ಯೆಯನ್ನು ಎದುರಿಸುತ್ತಿವೆ. ಅನೇಕ ರಾಷ್ಟ್ರಗಳ ನೌಕೆಗಳು ಇನ್ನೂ ಅಲ್ಲಿಯೇ ಬಾಕಿ ಉಳಿದಿವೆ.
ಪರ್ಷಿಯನ್ ಗಲ್ಫ್‌ನಲ್ಲಿರುವ ಭಾರತೀಯ ನಾವಿಕರ ಮತ್ತು ಹಡಗುಗಳ ಸುರಕ್ಷತೆಯೇ ಸರ್ಕಾರದ ಮೊದಲ ಆದ್ಯತೆಯಾಗಿದೆ. ಇರಾನ್ ಜೊತೆಗಿನ ಮಾತುಕತೆಗಳು ಸಕಾರಾತ್ಮಕವಾಗಿ ನಡೆಯುತ್ತಿದ್ದು, ಶೀಘ್ರದಲ್ಲೇ ಉಳಿದ ನೌಕೆಗಳೂ ಬಿಡುಗಡೆಯಾಗುವ ವಿಶ್ವಾಸವನ್ನು ಕೇಂದ್ರ ಸರ್ಕಾರ ವ್ಯಕ್ತಪಡಿಸಿದೆ.
