ಹಾಸನ: ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (SIR) ಪ್ರಕ್ರಿಯೆ ಬಳಿಕ ಹಾಸನ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 13,75,517 ಮತದಾರರು ಮತದಾರರ ಪಟ್ಟಿಯಲ್ಲಿ ಉಳಿದಿದ್ದು, 1,67,285 ಮತದಾರರನ್ನು ವಿವಿಧ ಕಾರಣಗಳಿಂದ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಎಸ್‌ಐಆರ್‌ಗೂ ಮುನ್ನ ಜಿಲ್ಲೆಯಲ್ಲಿ ಒಟ್ಟು 15,42,802 ಮತದಾರರು ಇದ್ದರು. ಪರಿಶೀಲನೆ ಬಳಿಕ 13,75,517 ಮತದಾರರ ಮತದಾರರ ಚೀಟಿಗಳನ್ನು ಡಿಜಿಟಲೀಕರಣಗೊಳಿಸಲಾಗಿದ್ದು, ಇದು ಒಟ್ಟು ಮತದಾರರ 89.16ರಷ್ಟು ಆಗಿದೆ. ವಿವಿಧ ಕಾರಣಗಳಿಂದ 1,67,285 ಮತದಾರರ ಹೆಸರುಗಳನ್ನು ತಾತ್ಕಾಲಿಕವಾಗಿ ಹೊರಗಿಡಲಾಗಿದೆ ಎಂದರು.
52 ಸಾವಿರಕ್ಕೂ ಹೆಚ್ಚು ಮಂದಿ ಸಾವು : ಎಸ್‌ಐಆರ್ ಸಂದರ್ಭದಲ್ಲಿ ಪಟ್ಟಿಯಿಂದ ಹೊರಗುಳಿದಿರುವ 1,67,285 ಮತದಾರರಲ್ಲಿ 52,022 ಮಂದಿ ಮೃತಪಟ್ಟಿರುವುದು, 73,964 ಮಂದಿ ಶಾಶ್ವತವಾಗಿ ವಲಸೆ ಹೋಗಿರುವುದು ಪತ್ತೆಯಾಗಿದೆ. 13,616 ಪುನರಾವರ್ತಿತ (ಡೂಪ್ಲಿಕೇಟ್) ಹೆಸರುಗಳು, 24,632 ಗೈರು ಮತದಾರರು ಹಾಗೂ 3,051 ಮಂದಿ ಇತರೆ ಕಾರಣಗಳಿಂದ ಪಟ್ಟಿಯಿಂದ ಹೊರಗುಳಿದಿದ್ದಾರೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ 47,032, ಶ್ರವಣಬೆಳಗೊಳದಲ್ಲಿ 22,375, ಅರಸೀಕೆರೆಯಲ್ಲಿ 16,297, ಬೇಲೂರಿನಲ್ಲಿ 19,092, ಹೊಳೆನರಸೀಪುರದಲ್ಲಿ 21,559, ಅರಕಲಗೂಡಿನಲ್ಲಿ 22,864 ಹಾಗೂ ಸಕಲೇಶಪುರದಲ್ಲಿ 18,066 ಮತದಾರರನ್ನು ವಿವಿಧ ಕಾರಣಗಳಿಂದ ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ತಿಳಿಸಿದರು.
ಮಹಿಳಾ ಮತದಾರರ ಸಂಖ್ಯೆ ಅಧಿಕ : ಎಸ್‌ಐಆರ್ ಬಳಿಕ ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಮಹಿಳಾ ಮತದಾರರ ಸಂಖ್ಯೆ ಪುರುಷರಿಗಿಂತ ಹೆಚ್ಚಾಗಿದೆ. 6,80,925 ಪುರುಷರು ಹಾಗೂ 6,94,559 ಮಹಿಳಾ ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
79,778 ಮತದಾರರಿಗೆ ನೋಟಿಸ್ ಜಿಲ್ಲೆಯಲ್ಲಿ 23,641 ಮತದಾರರ ನೋ ಮ್ಯಾಪಿಂಗ್ ಹಾಗೂ 56,137 ಮತದಾರರ ಹೊಂದಾಣಿಕೆಯಾಗದ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು 79,778 ಮತದಾರರಿಗೆ ಜಿಲ್ಲಾಡಳಿತದಿಂದ ನೋಟಿಸ್ ಜಾರಿಗೊಳಿಸಲಾಗುವುದು ಎಂದು ಕೆ.ಎಸ್. ಲತಾಕುಮಾರಿ ತಿಳಿಸಿದರು.ನೋಟಿಸ್ ಪಡೆದ ಮತದಾರರು ತಮ್ಮ ಹಕ್ಕನ್ನು ಸಮರ್ಥಿಸಿಕೊಳ್ಳಲು ಅಗತ್ಯ ದಾಖಲೆಗಳನ್ನು ಸಲ್ಲಿಸಬಹುದಾಗಿದೆ. ಯಾವುದೇ ಗುರುತಿನ ಚೀಟಿ, ಜನನ ಪ್ರಮಾಣಪತ್ರ, ಪಾಸ್‌ಪೋರ್ಟ್ ಸೇರಿದಂತೆ ಚುನಾವಣಾ ಆಯೋಗ ಸೂಚಿಸಿರುವ ದಾಖಲೆಗಳ ಮೂಲಕ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ.
ಸೆ.23ರವರೆಗೆ ಅವಕಾಶ: ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಪರಿಶೀಲಿಸಿಕೊಂಡು, ಹೆಸರು ಕೈಬಿಡಲಾಗಿದ್ದರೆ ಅಥವಾ ಯಾವುದೇ ಆಕ್ಷೇಪಣೆ ಇದ್ದರೆ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
ಕ್ಷೇತ್ರವಾರು ಡಿಲೀಟ್ ಮಾಡಲಾದ ಮತದಾರರ ಮಾಹಿತಿ:
ಶ್ರವಣಬೆಳಗೊಳ: ಎಸ್‌ಐಆರ್‌ಗೂ ಮೊದಲು 2,14,454 ಮತದಾರರು ಇದ್ದು, ಈ ಪೈಕಿ 22,375 ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ.
ಅರಸೀಕೆರೆ: ಒಟ್ಟು 2,21,014 ಮತದಾರರ ಪೈಕಿ 16,297 ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ.
ಬೇಲೂರು: 2,04,786 ಮತದಾರರ ಪೈಕಿ 19,092 ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ.
ಹಾಸನ: 2,35,943 ಮತದಾರರ ಪೈಕಿ ಅತಿ ಹೆಚ್ಚು 47,032 ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ.
ಹೊಳೆನರಸೀಪುರ: ಒಟ್ಟು 2,24,676 ಮತದಾರರ ಪೈಕಿ 21,559 ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ.
ಅರಕಲಗೂಡು: 2,36,667 ಮತದಾರರ ಪೈಕಿ 22,864 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ.
ಸಕಲೇಶಪುರ: 2,05,262 ಮತದಾರರ ಪೈಕಿ 18,066 ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ.
