ಹಾಸನ : ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ಭವನದಲ್ಲಿ ನವೆಂಬರ್ 23ರ ಭಾನುವಾರದಂದು ಬೆಳಿಗ್ಗೆ 9ಕ್ಕೆ ಜಿಲ್ಲಾ ಚಿತ್ರಕಲಾ ಶಿಕ್ಷಕರ 15ನೇ ಶೈಕ್ಷಣಿಕ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಾಸನ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ವೈ.ಬಿ. ರವಿ ಮತ್ತು ಚಿತ್ರಕಲಾ ನಿವೃತ್ತ ಶಿಕ್ಷಕ ಬಿ.ಎಸ್. ದೇಸಾಯಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಾಸನ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಚಿತ್ರಕಲಾ ಶಿಕ್ಷಕರ ೧೫ನೇ ಶೈಕ್ಷಣಿಕ ಸಮ್ಮೇಳನವನ್ನು ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಏರ್ಪಡಿಸಲಾಗಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಅಂದು ಬೆಳಿಗ್ಗೆ ಲಲಿತಾ ಅಕಾಡೆಮಿ ಸದಸ್ಯ ಹೆಚ್.ಎಸ್. ಮಂಜುನಾಥ್ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಚಿತ್ರಕಲಾ ಮಹಾ ವಿದ್ಯಾಲಯ ನಿವೃತ್ತ ಪ್ರಾಂಶುಪಾಲ ಎನ್. ನಾಗೇಶ್, ಕಾರ್ಯದರ್ಶಿ ಹೆಚ್.ಎಂ. ರಮೇಶ್, ಹೊಯ್ಸಳ ಚಿತ್ರಕಲಾ ಪರಿಷತ್ತು ಶಿಕ್ಷಕ ಕೆ.ಎನ್. ಶಂಕರಪ್ಪ, ಶಿಕ್ಷಕ ವೈ.ಹೆಚ್. ಜಯರಾಂ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು. ವಿದ್ಯಾರ್ಥಿಗಳ ಕಲಾತ್ಮಕ ಪ್ರತಿಭೆಯನ್ನು ಹೊರಹೊಮ್ಮಿಸಲು ಶಾಲೆಯಲ್ಲಿ ವಿಶಾಲ ಮಟ್ಟದ ಚಿತ್ರರಚನಾ ಸ್ಪರ್ಧೆ ನೆಡೆಯಲಿದೆ. ಸ್ಪರ್ಧೆಯನ್ನು ವಿವಿಧ ವಿಭಾಗಗಳಾಗಿ ಹಂಚಲಾಗಿದ್ದು, ಪ್ರತಿ ವರ್ಗದ ಮಕ್ಕಳಿಂದ ವಿಭಿನ್ನ ವಿಷಯಗಳ ಆಧಾರದ ಮೇಲೆ ಚಿತ್ರ ಕಲೆ ಕೃತಿಗಳನ್ನು ನಿರೀಕ್ಷಿಸಲಾಗಿದೆ. ಸ್ಪರ್ಧಾ ನಿಯಮಗಳೆಂದರೇ ಚಿತ್ರ ರಚನೆಗಾಗಿ 14 ಅಳತೆಯ ಡ್ರಾಯಿಂಗ್ ಪೇಪರ್ ಮಾತ್ರ ಸಂಸ್ಥೆಯಿಂದ ನೀಡಲಾಗುತ್ತದೆ. ಬಣ್ಣ, ಬ್ರಷ್ ಹಾಗೂ ಇತರ ಕಲಾಪರಿಕರಗಳನ್ನು ಭಾಗವಹಿಸುವ ವಿದ್ಯಾರ್ಥಿಗಳೇ ತರಬೇಕು. ಯಾವುದೇ ಮಾಧ್ಯಮದಲ್ಲಿ ಚಿತ್ರ ರಚಿಸಬಹುದು.ವರ್ಣ ಸಂಯೋಜನೆಗೆ ವಿಶೇಷ ಆದ್ಯತೆ ಕೊಡಲಾಗಿದೆ. ಪ್ರತಿ ವಿಭಾಗಕ್ಕೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಎರಡು ಸಮಾಧಾನಕರ ಬಹುಮಾನಗಳು ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು.ಭಾಗವಹಿಸಿದ ಎಲ್ಲಾ ಮಕ್ಕಳಿಗೂ ವರ್ಣರಂಜಿತ ಪ್ರಶಂಸಾ ಪತ್ರ ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಮಕ್ಕಳು ೨೫ ರೂ. ಶುಲ್ಕ ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಹೇಳಿದರು.
