ಹಾಸನ: ಸಂವಿಧಾನದ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ವಿರೋಧಿ ಮತ್ತು ದಲಿತ ವಿರೋಧಿ ಆರ್‌ಎಸ್‌ಎಸ್ ವಿರುದ್ಧ ಅದರ ಚಟುವಟಿಕೆ ನಿಷೇಧಕ್ಕೆ ಆಗ್ರಹಿಸಿ ಇದೇ ತಿಂಗಳ 28 ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿ ರಾಜ್ಯ ಸಂಚಾಲಕ ಎಂ. ಸೋಮಶೇಖರ್ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆರ್‌ಎಸ್‌ಎಸ್, ಎಬಿವಿಪಿ, ವಿಹೆಚ್‌ಪಿ, ಭಜರಂಗದಳ ಮೊದಲಾದ ಸಂಘಟನೆಗಳು ನೋಂದಣಿ ಆಗಿರದ ಸಂಘಟನೆ. ಇವುಗಳ ಉದ್ದೇಶವೇ ಸಮಾಜ ಒಡೆಯುವುದು, ಶಾಂತಿ ಕದಡುವುದು, ಕೋಮುಗಲಭೆ, ಸಂವಿಧಾನ ವಿರೋಧಿ ಚಟುವಟಿಕೆ ನಡೆಸುವುದು ಎಂದು ದೂರಿದರು. ಈ ಸಂಘಟನೆಗಳ ವಿರುದ್ಧ ಹೋರಾಡುವ ಶಕ್ತಿ ಇರುವುದು ರಾಜ್ಯದ ಎಲ್ಲ ದಲಿತ ಸಂಘಟನೆಗಳಿಗೆ ಮಾತ್ರ, ಆರ್‌ಎಸ್‌ಎಸ್‌ಗೆ ನೂರು ವರ್ಷ ತುಂಬಿರ ಬಹುದು, ದಲಿತ ಸಂಘಟನೆಗಳಿಗೆ 50 ವರ್ಷ ಆಗಿರಬಹುದು, ಆದರೂ ಅವರ ವಿರುದ್ಧ ಹೋರಾಡುವ ಶಕ್ತಿ ಇದೆ ಎಂದರು.ಸಂವಿಧಾನ ರಚನೆಯಾಗಿ 75ವರ್ಷ ಕಳೆದಿದ್ದರೂ ಪ್ರಬುದ್ಧ ಸಮಾಜ ನಿರ್ಮಾಣ ದೂರವೇ ಇದೆ. ಧರ್ಮ, ಜಾತಿ ಆಧಾರಿತ ರಾಜಕೀಯ, ಸುಳ್ಳು ಪ್ರಚಾರ ಹಾಗೂ ಅಸಹನೆಯನ್ನು ಉದ್ದೇಶ ಪೂರ್ವಕವಾಗಿ ಹರಡುತ್ತಿರುವ ಆರೋಪಕ್ಕೆ ಒಳಗಾದ ಸಂಸ್ಥೆಗಳ ವಿರುದ್ಧ ಕ್ರಮ ಆಗಬೇಕು ಎಂದು ಆಗ್ರಹಿಸಿದರು.
ನಾಗಪುರದ ಆರ್‌ಎಸ್‌ಎಸ್ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸುವುದಿಲ್ಲ, ಸಂವಿಧಾನ ಮೌಲ್ಯಗಳನ್ನು ಕುಂದಿಸುವ ನಿಲುವು ಅವರದು. ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಮೌನ ಬೆಂಬಲ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರನ್ನು ಅವಮಾನಿಸಿದ ಘಟನೆ, ರಾಜ್ಯದ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಕೊಲೆ ಬೆದರಿಕೆ ಹಾಕಿದ್ದು, ದೇಶವ್ಯಾಪಿ ದಲಿತರಿಗೆ ಅವಮಾನ, ಹಿಂಸೆ ಹಾಗೂ ದೌರ್ಜನ್ಯ ಇವು ಸಂವಿಧಾನ ವಿರೋಧಿ ನಿಲುವು ಎಂದು ದೂರಿದರು.ದೇಶದಲ್ಲಿ ಹಿಂದೂ ರಾಷ್ಟ್ರೀಯತೆಯ ಹೆಸರಲ್ಲಿ ಮನುಸ್ಮೃತಿಯನ್ನು ಪ್ರತಿಷ್ಠಾಪಿಸುವ ಹುನ್ನಾರ ನಡೆಯುತ್ತಿದೆ. ಇದು ಭಾರತೀಯ ಬಹುತ್ವ, ಸಂವಿಧಾನ ಮೌಲ್ಯಗಳು ಹಾಗೂ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಅಪಾಯಕಾರಿಯಾಗಿದೆ. ಸಂವಿಧಾನ ಒಪ್ಪದ ಈ ಸಂಘಟನೆಯನ್ನು ನಿಷೇಧ ಮಾಡಬೇಕು. ಇದು ದೇಶದ್ರೋಹ ಸಂಘಟನೆ ಹಾಗೂ ಕೂಡಲೇ ಸಂಘಟನೆಯ ಚಟುವಟಿಕೆಗಳನ್ನು ನಿಷೇಧ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸುವುದಾಗಿ ಹೇಳಿದರು.
ಇದೇ ವಿಚಾರ ಮುಂದಿಟ್ಟು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಎಲ್ಲ ದಲಿತ, ಪ್ರಗತಿಪರ ಸಂಘಟನೆಗಳು ಹಾಗೂ ಸಂವಿಧಾನ ಪ್ರೇಮಿಗಳು, ಆರ್‌ಎಸ್‌ಎಸ್ ವಿರೋಧಿಸುವವರು ಅಂದಿನ ಹೋರಾಟದಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದರು.ನ.೨೮ರಂದು ಡಿಸಿ ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿ ನಂತರ ಸಮಾವೇಶ ನಡೆಯುವ ಅಂಬೇಡ್ಕರ್ ಭವನದವರೆಗೆ ಮೆರವಣಿಗೆ ನಡೆಯಲಿದೆ. ಎಲ್ಲರೂ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಆರ್.ಪಿ.ಐ. ರಾಜ್ಯಾಧ್ಯತ ಸತೀಶ್, ಹಿರಿಯ ದಲಿತ ಮುಖಂಡರಾದ ಕೃಷ್ಣದಾಸ್, ಹೆಚ್.ಕೆ.ಸಂದೇಶ್, ಅಂಬುಗ ಮಲ್ಲೇಶ್, ಈರೇಶ್ ಹಿರೇಹಳ್ಳಿ, ನಾರಾಯಣದಾಸ್, ಎಂ.ವಿ. ಗೋವಿಂದರಾಜು, ರಾಜೇಶ್, ಚನ್ನಕೇಶವ, ತೋಟೇಶ್ ನಿಟ್ಟೂರ್, ವಾಲ್ಮೀಕಿ ಸಮುದಾಯದ ಶಿವಪ್ಪನಾಯಕ ಇದ್ದರು.
