“Foreign Official #1″ ಎಂಬುದು ಯುನೈಟೆಡ್ ಸ್ಟೇಟ್ಸ್‌ನ ದೋಷಾರೋಪಣೆ ಆದೇಶವು ಆಂಧ್ರಪ್ರದೇಶದ ಉನ್ನತ ಶ್ರೇಣಿಯ ಅಧಿಕಾರಿಯನ್ನು ಹೀಗೆ ಗುರುತಿಸಿದೆ, ಈ ಅಧಿಕಾರಿಯನ್ನು ಗೌತಮ್ ಅದಾನಿ ಅವರು ಸೌರ ಒಪ್ಪಂದಗಳನ್ನು ಪಡೆಯಲು ಲಂಚವನ್ನು ನೀಡಲು ಆಗಸ್ಟ್ 2021 ರಲ್ಲಿ ವೈಯಕ್ತಿಕವಾಗಿ ಭೇಟಿಯಾಗಿದ್ದರು ಎಂದು ಹೇಳಲಾಗಿದೆ. ದೋಷಾರೋಪಣೆ ಆದೇಶವು ಅಧಿಕಾರಿಯ ಹೆಸರನ್ನು ಬಹಿರಂಗಪಡಿಸುವುದಿಲ್ಲ, ಹಾಗಾಗಿ “Foreign Official #1” ಎಂದು ಕರೆದಿದೆ.
ಆದರೆ ನವೆಂಬರ್‌ನಲ್ಲಿ ಯುನೈಟೆಡ್ ಸ್ಟೇಟ್ಸ್ ಸೆಕ್ಯುರಿಟೀಸ್ ಆಂಡ್ ಎಕ್ಸ್‌ಚೇಂಜ್ ಕಮಿಷನ್ ಸಲ್ಲಿಸಿದ ದೂರಿನಲ್ಲಿ ಉಲ್ಲೇಖಿಸಿರುವ ಈ ಅಧಿಕಾರಿ “ಆಂಧ್ರಪ್ರದೇಶದ ಮುಖ್ಯಮಂತ್ರಿ”, ಆ ಸಮಯದಲ್ಲಿ ವೈಎಸ್ ಜಗನ್ ಮೋಹನ್ ರೆಡ್ಡಿ ಆಗಿದ್ದರು ಎಂದು ಸ್ಕ್ರಾಲ್ ವರದಿ ಮಾಡಿದೆ.
ಪ್ರಕರಣದಲ್ಲಿ ವಿಚಾರಣೆಯನ್ನು ಕೋರಿರುವ ದೂರಿನಲ್ಲಿ ಹೀಗೆ ಆರೋಪಿಸಲಾಗಿದೆ: “ಆಗಸ್ಟ್ 2021 ರಲ್ಲಿ, ಆಂಧ್ರಪ್ರದೇಶವು SECIನೊಂದಿಗೆ ವಿದ್ಯುತ್ ಸರಬರಾಜು ಒಪ್ಪಂದವನ್ನು ಮಾಡಿಕೊಂಡಿಲ್ಲ ಎಂಬುದನ್ನು ತಿಳಿದು, ಆಂಧ್ರಪ್ರದೇಶವನ್ನು ಹಾಗೆ ಮಾಡಲು ಪ್ರೋತ್ಸಾಹದ ಅಗತ್ಯವಿದೆ ಎಂದು ಹೇಳಿಕೊಂಡು ಗೌತಮ್ ಅದಾನಿ ಆಂಧ್ರಪ್ರದೇಶದ ಮುಖ್ಯಮಂತ್ರಿಯನ್ನು ಖುದ್ದಾಗಿ ಭೇಟಿಯಾದರು.”
SECI ಅಥವಾ ಸೋಲಾರ್ ಎನರ್ಜಿ ಕಾರ್ಪೊರೇಶನ್ ಆಫ್ ಇಂಡಿಯಾವು ಕೇಂದ್ರ ಸರ್ಕಾರದ ಸಂಸ್ಥೆಯಾಗಿದ್ದು, 2019 ಮತ್ತು 2020 ರಲ್ಲಿ ಅದಾನಿ ಗ್ರೂಪ್ ಮತ್ತು Azure Power ಗೆ 12 ಗಿಗಾವ್ಯಾಟ್ ಸೌರ-ಉತ್ಪಾದಿತ ವಿದ್ಯುತ್ ಅನ್ನು ನಿರ್ದಿಷ್ಟ ಬೆಲೆಗೆ ಪೂರೈಸಲು ಟೆಂಡರ್‌ಗಳನ್ನು ನೀಡಿತ್ತು. ಇದಕ್ಕೆ ಪ್ರತಿಯಾಗಿ, SECIಗೆ ಆ ಬೆಲೆಗೆ ವಿದ್ಯುತ್ ಖರೀದಿಸಲು ಸಿದ್ಧರಿರುವ ರಾಜ್ಯ ವಿದ್ಯುತ್ ಕಂಪನಿಗಳನ್ನು ಕಂಡುಹಿಡಿಯುವ ಅಗತ್ಯವಿತ್ತು. ಯುಎಸ್ ತನಿಖಾಧಿಕಾರಿಗಳ ಪ್ರಕಾರ, ಹೆಚ್ಚಿನ ಬೆಲೆಗಳಿಂದಾಗಿ SECI ಖರೀದಿಸುವವರನ್ನು ಹುಡುಕಲು ಸಾಧ್ಯವಾಗದ ನಂತರ, ಅದಾನಿ ಮತ್ತು Azure ರಾಜ್ಯ ಅಧಿಕಾರಿಗಳಿಗೆ ಲಂಚ ನೀಡಲು ಸಂಚು ರೂಪಿಸಿದ್ದರು.
ಆಗಸ್ಟ್ 2021 ರ ಸಭೆಯನ್ನು ಉಲ್ಲೇಖಿಸಿ, ಯುಎಸ್ ಸೆಕ್ಯುರಿಟೀಸ್ ಆಂಡ್ ಎಕ್ಸ್‌ಚೇಂಜ್ ಕಮಿಷನ್‌ನ ದೂರಿನ ಟಿಪ್ಪಣಿಗಳಲ್ಲಿ: “ಈ ಸಭೆಯಲ್ಲಿ ಅಥವಾ ಆ ಸಭೆಗೆ ಸಂಬಂಧಿಸಿದಂತೆ, ಗೌತಮ್ ಅದಾನಿ ಅವರು 7,000 MW ವಿದ್ಯುತ್ ಸಾಮರ್ಥ್ಯವನ್ನು ಖರೀದಿಸಲು SECI ಯೊಂದಿಗೆ ವಿದ್ಯುತ್ ಸರಬರಾಜು ಒಪ್ಪಂದಗಳನ್ನು ಮಾಡಿಕೊಳ್ಳಲು ಆಂಧ್ರಪ್ರದೇಶ ಸರ್ಕಾರದ ಅಧಿಕಾರಿಗಳಿಗೆ ಲಂಚವನ್ನು ಪಾವತಿಸಿದ್ದಾರೆ ಅಥವಾ ಲಂಚದ ಆಸೆ ತೋರಿಸಿದ್ದಾರೆ,” ಎಂದು ಉಲ್ಲೇಖಿಸಿದೆ.
ನವೆಂಬರ್‌ನಲ್ಲಿ US ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್ ಸಲ್ಲಿಸಿದ ದೂರಿನ ಒಂದು ಆಯ್ದ ಭಾಗ.
ಸಭೆಯ ಸ್ವಲ್ಪ ಸಮಯದ ನಂತರ, ಆಂಧ್ರಪ್ರದೇಶವು ಸೋಲಾರ್ ಎನರ್ಜಿ ಕಾರ್ಪೊರೇಶನ್ ಆಫ್ ಇಂಡಿಯಾದಿಂದ ಏಳು ಗಿಗಾವ್ಯಾಟ್ ವಿದ್ಯುತ್ ಖರೀದಿಸಲು ಒಪ್ಪಿಕೊಂಡಿತು, ನಂತರ ಅದು ಅದಾನಿ ಗ್ರೀನ್ ಮತ್ತು ಇನ್ನೊಂದು ಸಂಸ್ಥೆಯಾದ Azure Power ನೊಂದಿಗೆ ವಿದ್ಯುತ್ ಖರೀದಿ ಒಪ್ಪಂದಕ್ಕೆ ಸಹಿ ಹಾಕಿತು ಎಂದು ಅದು ಆರೋಪಿಸಿದೆ.
“ಅದಾನಿ ಗ್ರೀನ್ ಮತ್ತು Azureನ ಆಂತರಿಕ ಮಾತುಕತೆಗಳು ಆಂಧ್ರಪ್ರದೇಶವು ಎಸ್ಇಸಿಐನಿಂದ ವಿದ್ಯುತ್ ಖರೀದಿಸಲು ಒಪ್ಪಿಕೊಂಡಿದೆ ಎಂದು ತೋರಿಸುತ್ತವೆ,” ಎಂದು ದೂರಿನಲ್ಲಿ ಸೇರಿಸಲಾಗಿದೆ.
ದೂರಿನಲ್ಲಿ, “ಬೇರೆ ರೀತಿಯಲ್ಲಿ ಹೇಳುವುದಾದರೆ, ಲಂಚ ಪಾವತಿಸಿದ ಅಥವಾ ಭರವಸೆ ನೀಡಲಾಯಿತು,” ಹೇಳಲಾಗಿದೆ.
ಗುರುವಾರದ ತಮ್ಮ ಹೇಳಿಕೆಯಲ್ಲಿ, ಅದಾನಿ ದೋಷಾರೋಪಣೆಯಲ್ಲಿ ಒಳಗೊಂಡಿರುವ ಆರೋಪಗಳನ್ನು ನಿರಾಕರಿಸಿದರು ಮತ್ತು ಅವುಗಳನ್ನು “ಆಧಾರರಹಿತ” ಎಂದು ತಳ್ಳಿಹಾಕಿದರು. ಇದು “ಕಾನೂನು ಪಾಲಿಸುವ ಸಂಸ್ಥೆಯಾಗಿದ್ದು, ಎಲ್ಲಾ ಕಾನೂನುಗಳನ್ನೂ ಸಂಪೂರ್ಣವಾಗಿ ಅನುಸರಿಸುತ್ತದೆ” ಎಂದು ಹೇಳಿದ್ದರು.
US ಸೆಕ್ಯುರಿಟೀಸ್ ಆಂಡ್ ಎಕ್ಸ್‌ಚೇಂಜ್ ಕಮಿಷನ್ ಪ್ರಕಾರ, ಪ್ರತಿ ಮೆಗಾವ್ಯಾಟ್‌ಗೆ 25 ಲಕ್ಷದಂತೆ ಒಟ್ಟು 1,750 ಕೋಟಿ ರೂ ಲಂಚವನ್ನು ನೀಡಲಾಯಿತು ಎಂದು ಹೇಳಲಾಗುತ್ತದೆ .
“ನಂತರ ಅದಾನಿ ಗ್ರೀನ್ ಎಕ್ಸಿಕ್ಯೂಟಿವ್‌ಗಳು Azureನ ಕಾರ್ಯನಿರ್ವಾಹಕರಿಗೆ ನೀಡಿದ ಹೇಳಿಕೆಗಳು… ಆಂಧ್ರಪ್ರದೇಶದಲ್ಲಿ ನೀಡಿದ ಲಂಚದ ಮೊತ್ತ ಸುಮಾರು $200 ಮಿಲಿಯನ್ ಎಂದು ಸೂಚಿಸಿದೆ” ಎಂದು ದೂರಿನಲ್ಲಿ ಹೇಳಲಾಗಿದೆ. “ಇದು ಅದಾನಿ ಗ್ರೀನ್ ಅವರ ಆಂತರಿಕ ದಾಖಲೆಗಳೊಂದಿಗೆ ಸ್ಥಿರವಾಗಿದೆ.”
ಈ ಬಗ್ಗೆ ವರದಿ ಮಾಡಿರುವ ಸ್ಕ್ರಾಲ್ ಜಗನ್ ಮೋಹನ್ ರೆಡ್ಡಿ ಅವರ ಕಚೇರಿಯಿಂದ ಪ್ರತಿಕ್ರಿಯೆ ಕೇಳಿದೆ. ಆರೋಪಪಟ್ಟಿಯಲ್ಲಿ ರೆಡ್ಡಿ ಹೆಸರಿಲ್ಲ ಎಂದು ಕಚೇರಿಯು ಮೊದಲು ಹೇಳಿತು, ದೂರಿನಲ್ಲಿ ಮಾಜಿ ಮುಖ್ಯಮಂತ್ರಿ ಎಂದು ಉಲ್ಲೇಖಿಸಲಾಗಿದೆ ಎಂದು ಸೂಚಿಸಿದಾಗ, ಆಮೇಲೆ ಪ್ರತಿಕ್ರಿಯೆಯೊಂದಿಗೆ ಹಿಂತಿರುಗಿಸುವುದಾಗಿ ಕಚೇರಿ ತಿಳಿಸಿದೆ.