ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತವರ ಕುಟುಂಬದ ಮೇಲಿನ ಅಸೂಯೆ ಮತ್ತು ದ್ವೇಷ ಇಂದು ನಿನ್ನೆಯದಲ್ಲ. ಬಿಜೆಪಿ ಮತ್ತು ಆರ್ಎಸ್ಎಸ್ ಸಂಘಟನೆ ಹಲವು ವರ್ಷಗಳಿಂದ ವ್ಯವಸ್ಥಿತವಾಗಿ ಇದನ್ನು ಬಿಂಬಿಸಿಕೊಂಡು ಬಂದದ್ದು ಈಗ ಗುಟ್ಟಾಗೇನು ಉಳಿದಿಲ್ಲ. ಇಂತದ್ದೇ ಒಂದು ದ್ವೇಷದ ಪರಾಕಾಷ್ಠೆ ತಲುಪಿದ ಸ್ಟೋರಿ ಈಗ ರಾಷ್ಟ್ರದ ಜನತೆಯ ಹುಬ್ಬೇರಿಸುವಂತೆ ಮಾಡಿದೆ. ಅಷ್ಟೇ ಅಲ್ಲದೆ ದ್ವೇಷಿಸುವವರ ಮಾನಸಿಕ ಸ್ಥಿಮಿತದ ಬಗ್ಗೆ ಅನುಮಾನ ಹುಟ್ಟುವಂತೆ ಮಾಡಿದೆ.
ಬಿಹಾರದ ನಿವಾಸಿಯೊಬ್ಬರು ರಾಹುಲ್ ಗಾಂಧಿಯಿಂದ ನನಗೆ 250 ರೂಪಾಯಿ ನಷ್ಟವಾಗಿದೆ. ಇದನ್ನು ರಾಹುಲ್ ಗಾಂಧಿ ಭರಿಸಿ ಕೊಡಬೇಕು ಎಂದು ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಸ್ಟೋರಿಯ ಹಿನ್ನೆಲೆ ಕೇಳಿದರೆ ನಿಜಕ್ಕೂ ನಗು ಮಾತ್ರವಲ್ಲ ಮೊಕದ್ದಮೆ ಹೂಡಿದವರ ಮನಸ್ಥಿತಿಯ ಬಗ್ಗೆ ಮರುಕ ಹುಟ್ಟುವುದು ಸುಳ್ಳಲ್ಲ.
‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನನ್ನ 250 ರು. ಮೌಲ್ಯದ 5 ಲೀ. ಹಾಲು ನಷ್ಟವಾಗಲು ಕಾರಣರಾಗಿದ್ದಾರೆ’ ಎಂದು ಆರೋಪಿಸಿ ಬಿಹಾರದ ನಿವಾಸಿಯೊಬ್ಬರು ಸ್ಥಳೀಯ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ ಘಟನೆ ನಡೆದಿದೆ. ಸಮಷ್ಟಿಪುರ ಜಿಲ್ಲೆಯಲ್ಲಿ ಈ ವಿಚಿತ್ರ ಬೆಳವಣಿಗೆ ನಡೆದಿದ್ದು, ಕಳೆದ ವಾರ ರಾಹುಲ್ ಗಾಂಧಿಯವರು ನೀಡಿದ ‘ಭಾರತದ ವಿರುದ್ಧ ಇಂದು ಕಾಂಗ್ರೆಸ್ ಹೋರಾಡುತ್ತಿದೆ’ ಎಂಬ ಹೇಳಿಕೆಯನ್ನು ಕೇಳಿ ಆಘಾತವಾಯಿತು.
ಆ ಸಂದರ್ಭದಲ್ಲಿ ಆದ ಆಘಾತದಿಂದ ನನ್ನ ಕೈಯಲ್ಲಿದ್ದ 5ಲೀಟರ್ ಹಾಲು ನನ್ನ ಕೈ ಜಾರಿ ನೆಲದ ಪಾಲಾಯಿತು. ಪ್ರತಿ ಲೀಟರ್ ಗೆ 50 ರೂಪಾಯಿಯಂತೆ, 5ಲೀಟರ್ ಗೆ 250 ರೂಪಾಯಿ ಆದ ನಷ್ಟವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರಿಸಿ ಕೊಡಬೇಕು ಎಂದು ಕೋರ್ಟ್ ಮೆಟ್ಟಿಲೇರಿದ್ದಾರೆ.
ಕಳೆದ ವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ರಾಹುಲ್, ‘ಇಂದು ದೇಶದ ಎಲ್ಲ ಸಾಂವಿಧಾನಿಕ ಸಂಸ್ಥೆಗಳನ್ನು ಬಿಜೆಪಿ ಆಕ್ರಮಿಸಿದೆ. ಹೀಗಾಗಿ ಇಂದು ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ನಾವು ಹೋರಾಡುತ್ತಿದ್ದು, ಇದು ಭಾರತದ ವಿರುದ್ಧವೇ ಹೋರಾಡಿದಂತೆ ಭಾಸವಾಗುತ್ತದೆ’ ಎಂದಿದ್ದರು.
ಈ ಮಾತು ಬಿಹಾರಿ ಪ್ರಜೆ ದೂರುದಾರ ಮುಖೇಶ್ ಚೌಧರಿಗೆ ಆಘಾತ ತಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೇಶದ್ರೋಹಕ್ಕೆ ಸಂಬಂಧಿಸಿದ ಸೆಕ್ಷನ್ 152 ಸೇರಿದಂತೆ ಭಾರತೀಯ ನಾಗರಿಕ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ರಾಹುಲ್ ಗಾಂಧಿಯವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಅರ್ಜಿಯನ್ನು ನ್ಯಾಯಾಲಯ ಅಂಗೀಕರಿಸಿದೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ.