Home ದೇಶ ಶಬರಿಮಲೆ ವಿಗ್ರಹಗಳ 4.5 ಕೆಜಿ ಚಿನ್ನ ಮಾಯ! ತನಿಖೆಗೆ ಆದೇಶ ನೀಡಿದ ನ್ಯಾಯಾಲಯ

ಶಬರಿಮಲೆ ವಿಗ್ರಹಗಳ 4.5 ಕೆಜಿ ಚಿನ್ನ ಮಾಯ! ತನಿಖೆಗೆ ಆದೇಶ ನೀಡಿದ ನ್ಯಾಯಾಲಯ

0

ಕೊಚ್ಚಿ: ಕೇರಳದ ಪ್ರಸಿದ್ಧ ಶಬರಿಮಲೆ ದೇವಾಲಯದಲ್ಲಿನ ವಿಗ್ರಹಗಳ ಚಿನ್ನದ ಲೇಪನದ ಫಲಕಗಳನ್ನು (Golden Plated panels) ಅನುಮತಿಯಿಲ್ಲದೆ ತೆಗೆದುಹಾಕಿದ್ದು ಇತ್ತೀಚೆಗೆ ವಿವಾದಾತ್ಮಕವಾಗಿತ್ತು. ಇದೀಗ ಇದಕ್ಕೆ ಸಂಬಂಧಿಸಿದ ಮತ್ತೊಂದು ಪ್ರಮುಖ ವಿಷಯವು ಬೆಳಕಿಗೆ ಬಂದಿದೆ.

ಈ ವಿಗ್ರಹಗಳ ಲೇಪನಗಳ ಚಿನ್ನದ ತೂಕ ಕಡಿಮೆಯಾಗಿರುವುದನ್ನು ಕೇರಳ ಹೈಕೋರ್ಟ್ (Kerala High Court) ಗಂಭೀರವಾಗಿ ಪರಿಗಣಿಸಿದೆ. ಇದರ ಕುರಿತು ವಿಜಿಲೆನ್ಸ್ ಸಮಿತಿ ತನಿಖೆ ನಡೆಸುವಂತೆ ನ್ಯಾಯಾಲಯವು ಆದೇಶಿಸಿದೆ.

ಪ್ರಕರಣದ ವಿವರಗಳೇನು?

2019 ರಲ್ಲಿ ಶಬರಿಮಲೆ ದೇವಾಲಯದ ಗರ್ಭಗುಡಿಯ ಮುಂದೆ ಇರುವ ದ್ವಾರಪಾಲಕ ವಿಗ್ರಹಗಳ ಮೇಲಿದ್ದ ಚಿನ್ನದ ಲೇಪನವಿರುವ ತಾಮ್ರದ ಫಲಕಗಳನ್ನು (Gold plated copper panels) ದುರಸ್ತಿ ನೆಪದಲ್ಲಿ ತೆಗೆದುಹಾಕಲಾಯಿತು.

ಉನ್ನಿಕೃಷ್ಣನ್ ಎಂಬ ದಾನಿಯೊಬ್ಬರು ಅವುಗಳನ್ನು ಸರಿಪಡಿಸಿ, ಹೊಸ ಚಿನ್ನದ ಲೇಪನವನ್ನು ಮಾಡಿ ನೀಡುತ್ತೇನೆ ಎಂದು ಹೇಳಿ ತೆಗೆದುಕೊಂಡು ಹೋಗಿದ್ದರು. ಈ ಕೆಲಸವನ್ನು ಚೆನ್ನೈ ಮೂಲದ ಒಂದು ಸಂಸ್ಥೆಗೆ ವಹಿಸಲಾಗಿತ್ತು.

ತೂಕದಲ್ಲಿ ಭಾರಿ ಇಳಿಕೆ

2019 ರಲ್ಲಿ ಫಲಕಗಳನ್ನು ತೆಗೆದುಹಾಕುವ ಸಮಯದಲ್ಲಿ ಅವುಗಳ ತೂಕ 42.8 ಕೆಜಿ ಇದ್ದ ಬಗ್ಗೆ ದಾಖಲೆಗಳಿವೆ.

ಆದರೆ, ಚೆನ್ನೈನ ಕಂಪನಿಯು, ಆ ಫಲಕಗಳನ್ನು ತಮ್ಮಲ್ಲಿಗೆ ತಂದಾಗ ಅವುಗಳ ತೂಕ ಕೇವಲ 38.28 ಕೆಜಿ ಮಾತ್ರ ಇತ್ತು ಎಂದು ತಿಳಿಸಿದೆ.

ಅಲ್ಲದೆ, ದೇವಾಲಯದಿಂದ ಫಲಕಗಳನ್ನು ತೆಗೆದುಹಾಕಿದ ಸುಮಾರು 40 ದಿನಗಳ ನಂತರ ಅವುಗಳನ್ನು ಚೆನ್ನೈನ ಕಂಪನಿಗೆ ತಲುಪಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಬೆಳವಣಿಗೆಗಳ ಬಗ್ಗೆ ನ್ಯಾಯಾಲಯವು ಅನುಮಾನ ವ್ಯಕ್ತಪಡಿಸಿದೆ. ದಿಢೀರನೆ ಫಲಕಗಳ ತೂಕ 4.524 ಕೆಜಿ ಕಡಿಮೆಯಾಗಿರುವುದನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಅವುಗಳನ್ನು ಮರಳಿ ಅಳವಡಿಸುವಾಗ ಏಕೆ ತೂಕವನ್ನು ಸರಿಯಾಗಿ ಪರಿಶೀಲಿಸಲಿಲ್ಲ ಎಂದು ಪ್ರಶ್ನಿಸಿದೆ.

ಈ ತೂಕ ಇಳಿಕೆಗೆ ಚಿನ್ನದ ಲೇಪನ ಕಡಿಮೆಯಾಗಿರುವುದೇ ಏಕೈಕ ಕಾರಣ ಇರಬಹುದು ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಇಲ್ಲವೇ, ದಾನಿಯು ಬೇರೊಂದು ಫಲಕಗಳ ಗುಂಪನ್ನು ಕಂಪನಿಗೆ ನೀಡಿರುವ ಸಾಧ್ಯತೆಯೂ ಇದೆ ಎಂದು ಉಲ್ಲೇಖಿಸಿದೆ.

“ಇಲ್ಲಿ ಹಲವಾರು ಲೋಪದೋಷಗಳು ಕಾಣುತ್ತಿವೆ,” ಎಂದು ಹೇಳಿ, ತೂಕ ಹೇಗೆ ಕಡಿಮೆಯಾಯಿತು ಎಂಬುದನ್ನು ತಿಳಿಯಲು ವಿಜಿಲೆನ್ಸ್ ಸಮಿತಿಯ ತನಿಖೆಗೆ ಆದೇಶಿಸಿದೆ. ತನಿಖೆಗೆ ಸಹಕರಿಸುವಂತೆ ತಿರುವಾಂಕೂರು ದೇವಸ್ವಂ ಮಂಡಳಿಗೆ (Travancore Devaswom Board) ಸೂಚಿಸಿದೆ. ಇದರ ಸಂಪೂರ್ಣ ವರದಿಯನ್ನು ಮೂರು ವಾರಗಳಲ್ಲಿ ಒದಗಿಸುವಂತೆ ಸ್ಪಷ್ಟಪಡಿಸಿದ್ದು, ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 30ಕ್ಕೆ ಮುಂದೂಡಿದೆ.

ಶಬರಿಮಲೆ ವಿಶೇಷ ಆಯುಕ್ತರಿಗೆ ಮಾಹಿತಿ ನೀಡದೆಯೇ ದ್ವಾರಪಾಲಕ ವಿಗ್ರಹಗಳ ಚಿನ್ನದ ಫಲಕಗಳನ್ನು ದುರಸ್ತಿ ನೆಪದಲ್ಲಿ ತೆಗೆದುಹಾಕಿದ್ದರ ವಿರುದ್ಧ ಹೈಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಾಗಿತ್ತು. ಈ ಕುರಿತು ಇತ್ತೀಚೆಗೆ ವಿಚಾರಣೆ ನಡೆಸಿದ ನ್ಯಾಯಾಲಯವು ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು ಮತ್ತು ಪೂರ್ವಾನುಮತಿ ಇಲ್ಲದೆ ಅವುಗಳನ್ನು ಹೇಗೆ ಸ್ಥಳಾಂತರಿಸಲಾಯಿತು ಎಂದು ಪ್ರಶ್ನಿಸಿ, ಮಂಡಳಿಯಿಂದ ವಿವರಣೆ ಕೋರಿತ್ತು.

You cannot copy content of this page

Exit mobile version