ಹೊಸದಿಲ್ಲಿ: ಬಿಹಾರದಲ್ಲಿ ವಿಧಾನಸಭಾ ಚುನಾವಣೆಗಳನ್ನು (Bihar Assembly Elections) ಮೂರು ಹಂತಗಳಲ್ಲಿ ನಡೆಸಲು ಸಿದ್ಧತೆ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಮೊದಲ ಹಂತದ ಮತದಾನ ನವೆಂಬರ್ ಮೊದಲ ವಾರದಲ್ಲಿ ನಡೆಯುವ ಸಾಧ್ಯತೆ ಇದೆ.
ಚುನಾವಣಾ ಆಯೋಗದ (EC) ಕರಡು ಪ್ರಸ್ತಾವನೆಯ ಮೂಲಕ ಒಂದು ಮಾಧ್ಯಮ ಸಂಸ್ಥೆ ಈ ಅಂದಾಜನ್ನು ಮಾಡಿದೆ. ಬಿಹಾರ ವಿಧಾನಸಭಾ ಚುನಾವಣೆಗಳಿಗೆ ಸಂಬಂಧಿಸಿದ ಕಾರ್ಯಸೂಚಿಯನ್ನು (Schedule) ಚುನಾವಣಾ ಆಯೋಗವು ಅಕ್ಟೋಬರ್ ಮೊದಲ ವಾರದಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ. ಛಾತ್ ಪೂಜೆಯ ಸಂಭ್ರಮ ಮುಗಿದ ನಂತರ ಚುನಾವಣಾ ಪ್ರಕ್ರಿಯೆಯನ್ನು ಕೈಗೊಳ್ಳುವ ಯೋಚನೆಯಲ್ಲಿ ಆಯೋಗವಿದೆ ಎಂದು ತಿಳಿದುಬಂದಿದೆ. ಮೂರು ಹಂತಗಳಲ್ಲಿಯೇ ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆಯೋಗ ಯೋಜಿಸುತ್ತಿದೆ ಎಂದು ಭಾವಿಸಲಾಗಿದೆ.
ಬಿಹಾರ ವಿಧಾನಸಭೆಯ ಅವಧಿಯು ನವೆಂಬರ್ 22 ರಂದು ಕೊನೆಗೊಳ್ಳಲಿದೆ. ಆ ದಿನಾಂಕದೊಳಗೆ ಚುನಾವಣೆ ಪ್ರಕ್ರಿಯೆಗಳು ಮುಗಿಯಬೇಕಿದೆ. 2020 ರಲ್ಲಿ ಕೂಡ ಬಿಹಾರ ಚುನಾವಣೆಗಳನ್ನು ಮೂರು ಹಂತಗಳಲ್ಲಿಯೇ (ಅಕ್ಟೋಬರ್ 28, ನವೆಂಬರ್ 3, ನವೆಂಬರ್ 7) ನಡೆಸಲಾಗಿತ್ತು ಮತ್ತು ಫಲಿತಾಂಶಗಳನ್ನು ನವೆಂಬರ್ 10 ರಂದು ಪ್ರಕಟಿಸಲಾಗಿತ್ತು.
ಇವಿಎಂಗಳಲ್ಲಿ ಅಭ್ಯರ್ಥಿಗಳ ಬಣ್ಣದ ಭಾವಚಿತ್ರ
ಈ ಬಾರಿ ಬಿಹಾರ ವಿಧಾನಸಭಾ ಚುನಾವಣೆಯಿಂದ ಇವಿಎಂಗಳನಲ್ಲಿ (EVMs) ಅಭ್ಯರ್ಥಿಗಳ ಬಣ್ಣದ ಭಾವಚಿತ್ರಗಳನ್ನು ಅಳವಡಿಸಲಾಗುತ್ತದೆ. ಇವಿಎಂ ಬ್ಯಾಲೆಟ್ ಪೇಪರ್‌ನಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಳದಲ್ಲಿ ಅಭ್ಯರ್ಥಿಯ ಮುಖ ಕಾಣಿಸುತ್ತದೆ.
ಸೆಪ್ಟೆಂಬರ್ 30 ರಂದು ಬಿಹಾರದ ಮತದಾರರ ಅಂತಿಮ ಪಟ್ಟಿ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಕೆ (ನಾಮಿನೇಷನ್ ಫೈಲಿಂಗ್) ಕೊನೆಯ ದಿನಾಂಕಕ್ಕೆ 18 ವರ್ಷ ತುಂಬುವ ಮತದಾರರನ್ನು ಸಹ ಈ ಪಟ್ಟಿಯಲ್ಲಿ ಸೇರಿಸಲಾಗುತ್ತದೆ.