ದೆಹಲಿ: ಕರ್ನಾಟಕದ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ 6,018 ಜನರ ಹೆಸರನ್ನು ಮತದಾರರ ಪಟ್ಟಿಯಿಂದ ರದ್ದುಗೊಳಿಸುವ ಪ್ರಯತ್ನ ನಡೆದಿತ್ತು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದೂರಿದ್ದಾರೆ.
ಮತ ಕಳ್ಳತನದ ಕುರಿತು ಗುರುವಾರ ದೆಹಲಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿದ ಅವರು, 2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಆಳಂದ ಕ್ಷೇತ್ರದಲ್ಲಿ 6,018 ಮಂದಿಯ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಪ್ರಯತ್ನ ಮಾಡಲಾಗಿದೆ. ಆದರೆ, ನಿಜವಾಗಿ ಅಳಿಸಿಹಾಕಿದವರ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎಂದು ಅವರು ಹೇಳಿದರು.
ಕಾಕತಾಳೀಯವಾಗಿ ಬಯಲಾದ ಕಳ್ಳತನ ಯತ್ನ
ಆಳಂದದಲ್ಲೂ ಮತ ಕಳ್ಳತನಕ್ಕೆ ಯತ್ನ ನಡೆದಿತ್ತು ಎಂದು ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಅವರು ದೃಢಪಡಿಸಿದರು.
“ಈ ಮತ ಕಳ್ಳತನದ ಪ್ರಯತ್ನವನ್ನು ಯಾರೋ ಪತ್ತೆಹಚ್ಚಿದ್ದಾರೆ. ಸಾಮಾನ್ಯವಾಗಿ ಎಲ್ಲಾ ಅಪರಾಧಗಳಲ್ಲಿ ಆಗುವಂತೆ, ಇಲ್ಲಿಯೂ ಕಾಕತಾಳೀಯವಾಗಿ ಕಳ್ಳತನ ಬಯಲಾಗಿದೆ. ತಮ್ಮ ಚಿಕ್ಕಪ್ಪನ ಹೆಸರು ಮತದಾರರ ಪಟ್ಟಿಯಿಂದ ಕಾಣೆಯಾಗಿರುವುದು ಒಂದು ಬೂತ್ ಮಟ್ಟದ ಅಧಿಕಾರಿಗೆ ತಿಳಿದುಬಂದಿದೆ. ಹೆಸರನ್ನು ತೆಗೆದುಹಾಕಿದವರು ಯಾರು ಎಂದು ಪರಿಶೀಲಿಸಿದಾಗ, ಅದು ನೆರೆಮನೆಯವರೇ ಎಂದು ಗೊತ್ತಾಗಿದೆ. ಆದರೆ, ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲ್ಪಟ್ಟವರಿಗೂ ಮತ್ತು ತೆಗೆದುಹಾಕಿದವರಿಗೂ ಈ ವಿಷಯ ತಿಳಿದೇ ಇಲ್ಲ. ಯಾವುದೋ ಒಂದು ಶಕ್ತಿ ಇಡೀ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಂಡು ಮತದಾರರ ಪಟ್ಟಿಯಿಂದ ಹೆಸರು ಅಳಿಸಿಹಾಕಿದೆ. ಸೌಭಾಗ್ಯವಶಾತ್ ನಮಗೆ ಅದು ದೊರಕಿತು” ಎಂದು ರಾಹುಲ್ ಗಾಂಧಿ ಹೇಳಿದ್ದನ್ನು ಕಾಂಗ್ರೆಸ್ ತನ್ನ X (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದೆ.
ಸಾಫ್ಟ್‌ವೇರ್ ಬಳಸಿ ಕೃತ್ಯ
ಮತದಾರರ ಸೋಗಿನಲ್ಲಿ ಕರ್ನಾಟಕದ ಹೊರಗಿನ ಮೊಬೈಲ್ ಸಂಖ್ಯೆಗಳನ್ನು ಬಳಸಿಕೊಂಡು ಈ 6,018 ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ, ಹೆಸರು ತೆಗೆದುಹಾಕಲ್ಪಟ್ಟ ಮತ್ತು ತೆಗೆದವರಾದ ಇಬ್ಬರನ್ನೂ ರಾಹುಲ್ ಗಾಂಧಿ ಅವರು ವೇದಿಕೆಗೆ ಕರೆತಂದರು. ಸಾಫ್ಟ್‌ವೇರ್ ಉಪಯೋಗಿಸಿ ಈ ಕೃತ್ಯವನ್ನು ಎಸಗಲಾಗಿದೆ ಎಂದು ಅವರು ಆರೋಪಿಸಿದರು.
https://x.com/INCIndia/status/1968553717051138163