ನೇಪಾಳದ ತನಾಹುನ್ ಜಿಲ್ಲೆಯಲ್ಲಿ ಉತ್ತರ ಪ್ರದೇಶ ರಾಜ್ಯಕ್ಕೆ ಸೇರಿದ ಪ್ರವಾಸಿ ಬಸ್ ನಿಯಂತ್ರಣ ತಪ್ಪಿ ಮರ್ಸ್ಯಾಂಗ್ಡಿ ನದಿಗೆ ಬಿದ್ದಿದೆ. ಅದರ ನಂತರ ನದಿಯಲ್ಲಿ ಕೊಚ್ಚಿಕೊಂಡು ಹೋಗಿದೆ.
ಈ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಅಪಘಾತದ ವೇಳೆ ಬಸ್‌ನಲ್ಲಿ 40 ಯಾತ್ರಾರ್ಥಿಗಳು ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಸ್ ನದಿಗೆ ಬಿದ್ದಿರುವ ಮಾಹಿತಿ ತಿಳಿದ ತಕ್ಷಣ ಸ್ಥಳೀಯ ಪೊಲೀಸರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಇದುವರೆಗೆ ಒಟ್ಟು 14 ಮೃತದೇಹಗಳು ಪತ್ತೆಯಾಗಿವೆ. ಪರಿಹಾರ ಕಾರ್ಯಗಳು ಇನ್ನೂ ನಡೆಯುತ್ತಿವೆ. ಉಳಿದ 26 ಪ್ರಯಾಣಿಕರಿಗಾಗಿ ರಕ್ಷಣಾ ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಬೆಳಿಗ್ಗೆ ಭಾರತದಿಂದ ಬಂದ ಯುಪಿ ಎಫ್‌ಟಿ 7623 ಸಂಖ್ಯೆಯ ಬಸ್ ಮರ್ಸ್ಯಾಂಗ್ಡಿ ನದಿಗೆ ಉರುಳಿದೆ. ಬಸ್ಸು ಪೋಖರಾದಿಂದ ಕಠ್ಮಂಡುವಿಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ.