ಬೆಳಗಾವಿ: ಕೆಲವು ದಿನಗಳ ಹಿಂದೆ ಪತಿ ಹಾಗೂ ಮಾವನ ವಿರುದ್ಧ ವರದಕ್ಷಿಣೆ ಕಿರುಕುಳ, ಲೈಂಗಿಕ ದೌರ್ಜನ್ಯ ಆರೋಪ ಮಾಡಿ ವಿಷ ಸೇವಿಸಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಇಂದು ತಿರುಗಿಬಿದ್ದು ಬಿಜೆಪಿ ಮುಖಂಡ ಹಾಗೂ ಆತನ ಪುತ್ರನ ವಿರುದ್ಧ ಗೃಹ ಬಂಧನ ವಿಧಿಸಿದ ಆರೋಪ ಹೊರಿಸಿದ್ದಾರೆ.
ಈ ಕುರಿತು ಬೆಳಗಾವಿಯ ಖಡೇಬಜಾರ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಮುಖಂಡ ಎನ್ನಲಾದ ಪೃಥ್ವಿ ಸಿಂಗ್ ಹಾಗೂ ಆತನ ಮಗ ಜಸ್ವೀರ್ ಸಿಂಗ್ ವಿರುದ್ಧ ಕೇಸ್ ದಾಖಲಾಗಿದೆ. ಇವರಿಬ್ಬರ ವಿರುದ್ಧ ಮಹಿಳೆಯೊಬ್ಬರು ವಿರುದ್ಧ ಗಂಭೀರ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ಮಹಿಳೆ ಕೆಲವು ದಿನಗಳ ಹಿಂದೆ ತನ್ನ ವಿರುದ್ಧ ಮಾವ ಹಾಗೂ ಪತಿ ವರದಕ್ಷಿಣೆ ಕಿರುಕುಳ, ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾರೆಂದು ಆರೋಪಿಸಿ ದೂರು ನೀಡಿದ್ದರು. ಇದೀಗ ಮಹಿಳೆ ತಿರುಗಿಬಿದ್ದು ತನಗೆ ಪ್ರಥ್ವಿ ಸಿಂಗ್ ಹಾಗೂ ಆತನ ಮಗ ಜಸ್ವೀರ್ ಸಿಂಗ್ ನನ್ನ ಪತಿ ಹಾಗೂ ಮಾವನ ವಿರುದ್ಧ ಸುಳ್ಳು ಆರೊಪ ಮಾಡಿ ಪ್ರಕರಣ ದಾಖಲಿಸುವಂತೆ ಹಿಂಸಿಸುತ್ತಿದ್ದಾರೆಂದು ಹೇಳಿದ್ದಾರೆ. ಅವರು ಇದೇ ಕಾರಣಕ್ಕಾಗಿ ನನ್ನನ್ನು ಕೂಡಿಹಾಕಿ ವಿಷ ಕುಡಿಸುವುದಕ್ಕೂ ಪ್ರಯತ್ನಿಸಿದ್ದಾರೆ ಎಂದು ದೂರಿದ್ದಾರೆ.
ಇದೀಗ ಮಹಿಳೆ ನೀಡಿದ ದೂರನ್ನು ಆಧರಿಸಿ ಬೆಳಗಾವಿಯ ಖಡೇ ಬಜಾರ ಠಾಣೆಯಲ್ಲಿ ದೂರನ್ನು ದಾಖಲಿಸಿಕೊಳ್ಳಲಾಗಿದೆ.
ಸಿಂಗ್ ತಾನು ಬಿಜೆಪಿ ಮುಖಂಡ ಎಂದು ಸುಳ್ಳು ಹೇಳಿಕೊಂಡು ಇಂತಹ ಕೃತ್ಯವೆಸಗುತ್ತಿದ್ದು, ಆತ ಯಾವುದೇ ಮುಖಂಡ ಪಕ್ಷದ ಕಾರ್ಯಕರ್ತನೂ ಅಲ್ಲ ಎಂದು ಮಹಿಳೆ ಹೇಳಿದ್ದಾರೆ.
ಇದೇ ಪ್ರಥ್ವಿ ಸಿಂಗ್ ಈ ಹಿಂದೆ ತಾನು ಬಿಜೆಪಿ ಮುಖಂಡ, ನನಗೆ ರಮೇಶ ಜಾರಕಿಹೊಳಿ ಆಪ್ತರು, ನನ್ನ ಮೇಲೆ ಹಲ್ಲೆ ನಡೆದಿದೆ ಎಂದು ಬೆಳಗಾವಿ ಅಧಿವೇಶನದ ಸಮಯದಲ್ಲಿ ಹೇಳಿಕೊಂಡಿದ್ದ. ನಂತರ ಈತನ ಪರವಾಗಿ ಹೋರಾಟ ನಡೆಸಲು ಹೋಗಿ ಬಿಜೆಪಿ ಮುಖಭಂಗಕ್ಕೆ ಈಡಾಗಿತ್ತು ಎಂದು ಸುದ್ದಿ ಮಾಧ್ಯವೊಂದು ವರದಿ ಮಾಡಿದೆ.