ಹಬ್ಬವೊಂದರ ಹಿನ್ನೆಲೆಯಲ್ಲಿ ಪುಣ್ಯನದಿಯಲ್ಲಿ ಸ್ನಾನ ಮಾಡುವ ಸಂದರ್ಭದಲ್ಲಿ ವಿವಿಧೆಡೆ ದುರಂತ ಸಂಭವಿಸಿ ಒಂದೇ ದಿನ ಒಟ್ಟು 46 ಜನರು ಮೃತಪಟ್ಟಿದ್ದಾರೆ.
37 ಮಕ್ಕಳು ಮತ್ತು ಏಳು ಮಹಿಳೆಯರು ಸೇರಿದಂತೆ 46 ಜನರು ನೀರಿನಲ್ಲಿ ಮುಳುಗಿ ತೀರಿಕೊಂಡಿದ್ದಾರೆ. ಈ ಘಟನೆ ನಡೆದಿರುವುದು ಬಿಹಾರದಲ್ಲಿ.
ಇಲ್ಲಿನ ತಾಯಂದಿರು ‘ಜೀವಿತಪುತ್ರಿಕಾ’ ಹಬ್ಬದ ಸಂದರ್ಭದಲ್ಲಿ ತಮ್ಮ ಮಕ್ಕಳ ಯೋಗಕ್ಷೇಮಕ್ಕಾಗಿ ಉಪವಾಸ ಮಾಡುತ್ತಾರೆ. ನಂತರ ಮಕ್ಕಳೊಂದಿಗೆ ಪವಿತ್ರ ಸ್ನಾನವನ್ನೂ ಮಾಡುತ್ತಾರೆ. ಈ ಸಂದರ್ಭದಲ್ಲಿ ಬಿಹಾರ ರಾಜ್ಯದ 15 ಜಿಲ್ಲೆಗಳ ವ್ಯಾಪ್ತಿಯಲ್ಲಿ ಸುಮಾರು 46 ಮಂದಿ ನದಿ, ಕೊಳಗಳಲ್ಲಿ ಪುಣ್ಯಸ್ನಾನ ಮಾಡುತ್ತಿದ್ದ ವೇಳೆ ನಾಪತ್ತೆಯಾಗಿದ್ದಾರೆ. ಇದುವರೆಗೆ 43 ಮೃತದೇಹಗಳು ಪತ್ತೆಯಾಗಿವೆ.
ಬಿಹಾರದ ಪೂರ್ವ, ಪಶ್ಚಿಮ ಚಂಪಾರಣ್, ನಳಂದಾ, ಔರಂಗಾಬಾದ್, ಕೈಮೂರ್, ಬಕ್ಸರ್, ಸಿವಾನ್, ರೋಹ್ತಾಸ್, ಸರನ್, ಪಾಟ್ನಾ, ವೈಶಾಲಿ, ಮುಜಾಫರ್‌ಪುರ, ಸಮಸ್ತಿಪುರ್, ಗೋಪಾಲ್‌ಗಂಜ್ ಮತ್ತು ಅರ್ವಾಲ್ ಜಿಲ್ಲೆಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ನೀರಿನಲ್ಲಿ ಮುಳುಗಿರುವ ಘಟನೆಗಳು ವರದಿಯಾಗಿವೆ ಎಂದು ರಾಜ್ಯ ಸರ್ಕಾರ ಗುರುವಾರ ಬಹಿರಂಗಪಡಿಸಿದೆ. 37 ಮಕ್ಕಳು ಮತ್ತು ಏಳು ಮಹಿಳೆಯರು ಸೇರಿದಂತೆ 46 ಜನರು ನೀರಿನಲ್ಲಿ ಮುಳುಗಿದ್ದಾರೆ ಎಂದು ಅದು ಹೇಳಿದೆ.
ಮತ್ತೊಂದೆಡೆ ಸಿಎಂ ನಿತೀಶ್ ಕುಮಾರ್ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಗಳಿಗೆ ರೂ.4 ಲಕ್ಷ ಪರಿಹಾರ ಘೋಷಿಸಲಾಗಿದೆ. ಮೃತರಲ್ಲಿ ಎಂಟು ಮಂದಿಯ ಕುಟುಂಬ ಸದಸ್ಯರಿಗೆ ಈಗಾಗಲೇ ಪರಿಹಾರ ನೀಡಲಾಗಿದೆ ಎಂದು ಹೇಳಲಾಗಿದೆ.