ನವದೆಹಲಿ : ದೇಶದ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ, ಪ್ರಸಕ್ತ ಶೈಕ್ಷಣಿಕ ವರ್ಷದಿಂದ ದೇಶಾದ್ಯಂತ ಒಟ್ಟು 58 ಎಂಜಿನಿಯರಿಂಗ್ ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ಅನುಮತಿ ನೀಡಿದೆ. ತಾಂತ್ರಿಕ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಮುಚ್ಚಲ್ಪಡುವ ಸಂಸ್ಥೆಗಳ ಪಟ್ಟಿಯಲ್ಲಿ ಕರ್ನಾಟಕದ ಎರಡು ಪ್ರಮುಖ ಎಂಜಿನಿಯರಿಂಗ್ ಕಾಲೇಜುಗಳೂ ಸೇರಿವೆ.
ರಾಜ್ಯವಾರು ವಿವರಗಳ ಪ್ರಕಾರ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ತಲಾ 12 ಕಾಲೇಜುಗಳು ಮುಚ್ಚಲಿದ್ದು, ಅತಿ ಹೆಚ್ಚು ಪರಿಣಾಮ ಈ ಎರಡು ರಾಜ್ಯಗಳ ಮೇಲೆಯೇ ಬೀಳಲಿದೆ. ಮಧ್ಯಪ್ರದೇಶದಲ್ಲಿ 8, ತೆಲಂಗಾಣ ಹಾಗೂ ಪಂಜಾಬ್‌ನಲ್ಲಿ ತಲಾ 4 ಕಾಲೇಜುಗಳು ಸ್ಥಗಿತಗೊಳ್ಳಲಿವೆ. ಒಟ್ಟು 58 ಸಂಸ್ಥೆಗಳಲ್ಲಿ ಮೂರು ಸರ್ಕಾರಿ ಅನುದಾನಿತ ಕಾಲೇಜುಗಳಾಗಿದ್ದು, ಉಳಿದವು ಖಾಸಗಿ ಸ್ವಾಯತ್ತ ಶಿಕ್ಷಣ ಸಂಸ್ಥೆಗಳಾಗಿವೆ.
ಕಾಲೇಜುಗಳಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ದಾಖಲಾತಿ ಕುಸಿಯುತ್ತಿರುವುದು, ಅರ್ಹ ಬೋಧಕ ಸಿಬ್ಬಂದಿಯ ಕೊರತೆ ಹಾಗೂ AICTE ನಿಗದಿಪಡಿಸಿರುವ ಮೂಲಸೌಕರ್ಯ ಮತ್ತು ಶೈಕ್ಷಣಿಕ ಮಾನದಂಡಗಳನ್ನು ಪಾಲಿಸದಿರುವುದು ಈ ನಿರ್ಧಾರಕ್ಕೆ ಪ್ರಮುಖ ಕಾರಣಗಳಾಗಿವೆ. ಇದೇ ವೇಳೆ, ದೇಶದ ವಿವಿಧ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಬೇಡಿಕೆ ಕಳೆದುಕೊಂಡಿರುವ ಸುಮಾರು 950ಕ್ಕೂ ಹೆಚ್ಚು ಕೋರ್ಸ್‌ಗಳನ್ನು ಕೂಡ ಈ ಶೈಕ್ಷಣಿಕ ವರ್ಷದಿಂದ ಸ್ಥಗಿತಗೊಳಿಸಲಾಗಿದೆ.
ಆದರೆ ಈಗಾಗಲೇ ಈ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಆತಂಕಪಡುವ ಅಗತ್ಯವಿಲ್ಲ ಎಂದು AICTE ಸ್ಪಷ್ಟಪಡಿಸಿದೆ. ‘ಪ್ರೊಗ್ರೆಸಿವ್ ಕ್ಲೋಸರ್’ (Progressive Closure) ನಿಯಮದಡಿ ಕಾಲೇಜುಗಳನ್ನು ಹಂತ ಹಂತವಾಗಿ ಮುಚ್ಚಲಾಗುತ್ತಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಹೊಸ ವಿದ್ಯಾರ್ಥಿಗಳ ದಾಖಲಾತಿಯನ್ನು ಮಾತ್ರ ನಿಷೇಧಿಸಲಾಗಿದೆ. ಈಗಾಗಲೇ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ತಮ್ಮ ಕೋರ್ಸ್ ಪೂರ್ಣಗೊಳ್ಳುವವರೆಗೆ ಅದೇ ಕಾಲೇಜಿನಲ್ಲಿ ವ್ಯಾಸಂಗ ಮುಂದುವರಿಸಲು ಅವಕಾಶ ಕಲ್ಪಿಸಲಾಗಿದೆ.
