ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಮೂರು ಬೂತ್‌ಗಳಲ್ಲಿ ಇದೆ ಎಂದು ಆರೋಪಿಸಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಮಾಜಿ ಸಚಿವ ಹೆಚ್‌ಕೆ ಪಾಟೀಲ್ ಆಗ್ರಹಿಸಿದ್ದಾರೆ. ಆದರೆ, ತಾವು ಅಧಿಕೃತ ದಾಖಲೆಗಳ ಆಧಾರದ ಮೇಲೆಯೇ ಹೇಳಿಕೆ ನೀಡಿದ್ದು, ಕ್ಷಮೆ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್.ಕೆ. ಪಾಟೀಲ, ಯಾವುದೇ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆ ತಮ್ಮ ವಿರುದ್ಧ ಆರೋಪ ಮಾಡಿರುವುದು ಬೇಸರ ತಂದಿದೆ ಎಂದು ಹೇಳಿದರು. ಹುಲಕೋಟಿ ಗ್ರಾಮದಲ್ಲಿ ಒಂದೇ ಹೆಸರಿನ ಇಬ್ಬರು ಎಚ್.ಕೆ. ಪಾಟೀಲರು ಇದ್ದು, ಮತದಾರರ ಪಟ್ಟಿಯಲ್ಲಿ ಅವರವರ ಭಾವಚಿತ್ರ ಹಾಗೂ ವಿವರಗಳು ಸ್ಪಷ್ಟವಾಗಿ ದಾಖಲಾಗಿವೆ ಎಂದು ವಿವರಿಸಿದರು.
ಹುಲಕೋಟಿ ಗ್ರಾಮದ ಬೂತ್ ಸಂಖ್ಯೆ 143ರ ಕ್ರಮ ಸಂಖ್ಯೆ 183ರಲ್ಲಿ ತಮ್ಮ ಹೆಸರಿದ್ದು, ಅದೇ ಬೂತ್‌ನ ಕ್ರಮ ಸಂಖ್ಯೆ 161ರಲ್ಲಿ ತಮ್ಮ ಸಂಬಂಧಿಕರಾದ ಮತ್ತೊಬ್ಬ ಎಚ್.ಕೆ. ಪಾಟೀಲರ ಹೆಸರು ಇದೆ ಎಂದು ತಿಳಿಸಿದರು. ಇದೇ ರೀತಿ ಬೂತ್ ಸಂಖ್ಯೆ 153 ಅಸುಂಡಿ ಗ್ರಾಮಕ್ಕೆ ಸಂಬಂಧಿಸಿದ್ದು, ಅಲ್ಲಿರುವ ಎಚ್.ಕೆ. ಪಾಟೀಲ ಎಂಬ ಹೆಸರು ತಮ್ಮದಲ್ಲ, ಮತ್ತೊಬ್ಬ ಮತದಾರರದ್ದಾಗಿದೆ ಎಂದು ಸ್ಪಷ್ಟಪಡಿಸಿದರು.
40 ವರ್ಷಗಳ ಸಾರ್ವಜನಿಕ ಜೀವನದಲ್ಲಿ ತಮ್ಮ ವಿರುದ್ಧ ಇಂತಹ ಆಧಾರರಹಿತ ಆರೋಪ ಕೇಳಿಬಂದಿರಲಿಲ್ಲ. ಮಾಜಿ ಮುಖ್ಯಮಂತ್ರಿಯಂತಹ ಜವಾಬ್ದಾರಿಯುತ ಸ್ಥಾನದಲ್ಲಿದ್ದವರು ವಾಸ್ತವಾಂಶಗಳನ್ನು ಪರಿಶೀಲಿಸದೆ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಅವರು ಟೀಕಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ತಾವು ವೈಯಕ್ತಿಕವಾಗಿ ಯಾವುದೇ ಆರೋಪ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಮತದಾರರ ಪಟ್ಟಿಯಲ್ಲಿನ ಅಧಿಕೃತ ಮಾಹಿತಿಯ ಆಧಾರದ ಮೇಲೆಯೇ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ ಎಂದು ಹೇಳಿದರು.
ಒಂದೇ ಕ್ಷೇತ್ರದಲ್ಲಿ, ಒಂದೇ ಊರು ಹಾಗೂ ಪಕ್ಕದ ಊರಿನಲ್ಲಿ ವ್ಯಕ್ತಿಯ ಹೆಸರು ಮತ್ತು ತಂದೆಯ ಹೆಸರು ಒಂದೇ ರೀತಿಯಲ್ಲಿರುವ ಬಗ್ಗೆ ಪಕ್ಷದ ಮುಖಂಡರು ಸಂಶಯ ವ್ಯಕ್ತಪಡಿಸಿದ್ದರು. ಅದರ ಆಧಾರದ ಮೇಲೆಯೇ ವಿಷಯವನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸಲಾಗಿದೆ ಎಂದ ಅವರು, ಎಚ್.ಕೆ. ಪಾಟೀಲ ನೀಡಿರುವ ಸ್ಪಷ್ಟೀಕರಣವನ್ನು ಮುಖ್ಯ ಚುನಾವಣಾಧಿಕಾರಿ ಕೂಲಂಕಷವಾಗಿ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ಇದು ಕೇವಲ ಎಚ್.ಕೆ. ಪಾಟೀಲ ಪ್ರಕರಣಕ್ಕೆ ಸೀಮಿತವಲ್ಲ. ಒಂದೇ ಹೆಸರಿನಲ್ಲಿ ನಾಲ್ಕೈದು ಮತಗಳು ದಾಖಲಾಗಿರುವ ಹಲವು ಪ್ರಕರಣಗಳು ರಾಜ್ಯದಲ್ಲಿ ಕಂಡುಬಂದಿದ್ದು, ಮ್ಯಾಪಿಂಗ್ ಪ್ರಕ್ರಿಯೆಯ ಬಳಿಕವೂ ಇಂತಹ ಲೋಪಗಳು ಮರುಕಳಿಸುತ್ತಿರುವುದು ಗಂಭೀರ ವಿಚಾರ ಎಂದು ಬೊಮ್ಮಾಯಿ ಹೇಳಿದರು.
ತಮ್ಮ ಬಳಿ ಇದ್ದ ಅಧಿಕೃತ ಮಾಹಿತಿಯನ್ನು ಮಾತ್ರ ಬಹಿರಂಗಪಡಿಸಿದ್ದು, ಎಚ್.ಕೆ. ಪಾಟೀಲ ವಿರುದ್ಧ ವೈಯಕ್ತಿಕ ಆಪಾದನೆ ಮಾಡಿಲ್ಲ. ಹೀಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಬಸವರಾಜ ಬೊಮ್ಮಾಯಿ ಪುನರುಚ್ಚರಿಸಿದರು.
