ಚುನಾವಣಾ ಬಾಂಡ್‌ಗಳ ಮೂಲಕ ಹಣ ಸುಲಿಗೆ ಅರೋಪದ ಹಿನ್ನೆಲೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಬಿಜೆಪಿ ಪಕ್ಷದ ಘಟಾನುಘಟಿ ನಾಯಕರುಗಳ ಮೇಲೆ ಬೆಂಗಳೂರಿನ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ದೂರುದಾರರಾದ ಜನಾಧಿಕಾರ ಸಂಘರ್ಷ ಪರಿಷತ್ (ಜೆಎಸ್‌ಪಿ)ನ ಆದರ್ಶ ಆರ್. ಅಯ್ಯರ್ ಅವರು ತಿಲಕ್ ನಗರ ಠಾಣೆಯಲ್ಲಿ ದೂರು ನೀಡಲು ಅಲ್ಲಿನ ಪೊಲೀಸರು ನಿರಾಕರಿಸಿದ ಹಿನ್ನೆಲೆಯಲ್ಲಿ ಡಿಜಿಪಿ ಮೊರೆ ಹೋಗಿದ್ದರು. ಅಲ್ಲೂ ಸಹ ಸೂಕ್ತ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮೊರೆ ಹೋದ ನಂತರ, ನ್ಯಾಯಾಲಯ ದೂರನ್ನು ಸ್ವೀಕರಿಸಲು ಇದು ಸೂಕ್ತ ಪ್ರಕರಣ ಆಗಿರುವ ಹಿನ್ನೆಲೆಯಲ್ಲಿ ತಿಲಕ್ ನಗರ ಪೊಲೀಸರು ನೇರವಾಗಿ ಎಫ್ಐಆರ್ ದಾಖಲಿಸಬೇಕು ಎಂದು ಆದೇಶಿಸಿದ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಆರೋಪ ಸಂಬಂಧ ನಿರ್ಮಲಾ ಸೀತಾರಾಮನ್ ವಿರುದ್ಧ ಅಪರಾಧಿಕ ಒಳಸಂಚು, ಸುಲಿಗೆಯಡಿ ಎಫ್ಐಆರ್ ದಾಖಲಾಗಿದೆ. ಅಲ್ಲದೇ, ಹಿಂದಿನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ರಾಜ್ಯದಲ್ಲಿ ನಳಿನ್ ಕುಮಾರ್ ಕಟೀಲ್ ರಹಸ್ಯ ಮಾರ್ಗವಾಗಿ ಹಣ ವರ್ಗಾವಣೆಗೆ ಸಹಕಾರಿಯಾಗಿದ್ದಾರೆ. ರಾಜಕೀಯ ಲಾಭಕ್ಕಾಗಿ ಜಾರಿ ನಿರ್ದೇಶನಾಲಯದ ಸಂಸ್ಥೆ ಬಳಸಿಕೊಂಡು ವಿವಿಧ ಕಾರ್ಪೊರೇಟ್ ಕಂಪನಿಗಳ ಮೇಲೆ ದಾಳಿ ಮಾಡಿ, ಸಿಇಒ ಹಾಗೂ ಎಂ.ಡಿಯನ್ನು ಬ್ಲಾಕ್ಮೇಲ್ ಮಾಡಲಾಗಿದೆ. ಬಂಧನಕ್ಕೆ ಹೆದರಿದ ಕಂಪನಿ ಮಾಲೀಕರಿಗೆ ಚುನಾವಣಾ ಬಾಂಡ್ ಖರೀದಿಗೆ ಒತ್ತಾಯಿಸಿದ್ದಾರೆ ಎಂದು ದೂರಿನಲ್ಲಿ ಆದರ್ಶ ಆರ್. ಅಯ್ಯರ್ ವಿವರಿಸಿದ್ದಾರೆ.
ಕಾರ್ಪೋರೇಟ್ ಅಲ್ಯೂಮಿನಿಯಂ ಮತ್ತು ಕಾಫರ್ ಜೈಂಟ್, ಎಂ.ಎಸ್.ಸ್ಕೇರ್ ಲೈಟ್, ವೇದಾಂತ ಕಂಪನಿಗಳಿಂದ 2019ನೇ ಸಾಲಿನ ಏಪ್ರಿಲ್ನಿಂದ 2022ರ ಅಗಸ್ಟ್ವರೆಗೆ ಮತ್ತು 2023ರ ನವೆಂಬರ್ವರೆಗೆ ಒಟ್ಟು 230.15 ಕೋಟಿ ರೂ. ಪಡೆದುಕೊಂಡಿದ್ದಾರೆ. ಅರವಿಂದ ಫಾರ್ಮಾ ಕಂಪನಿಯಿಂದ 2022 ಹಾಗೂ 2023ರವರೆಗೆ 49.5 ಕೋಟಿ ರೂ. ಸೇರಿ ರಹಸ್ಯವಾಗಿ ಸುಮಾರು 8 ಸಾವಿರ ಕೋಟಿ ರೂ.ಗಳನ್ನು ಎಲ್ಲ ಆರೋಪಿಗಳು ಚುನಾವಣಾ ಬಾಂಡ್ಗೆ ಪರಿವರ್ತಿಸಿದ್ದಾರೆ. ಈ ಸಂಬಂಧ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖೀಸಿದ್ದಾರೆ.
ಸಧ್ಯ ಮುಡಾ ಪ್ರಕರಣದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತಿರುಗಿ ಬಿದ್ದಿದ್ದ ಬಿಜೆಪಿಗೆ ಈಗ ಚುನಾವಣಾ ಬಾಂಡ್ ಹಗರಣದ ಎಫ್ಐಆರ್ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಒಂದು ಕಡೆ ಸ್ವಪಕ್ಷೀಯರಿಂದಲೇ ಆರೋಪ ಬರುತ್ತಿರುವಾಗ ಈಗ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಚುನಾವಣಾ ಬಾಂಡ್ ಅಕ್ರಮದ ವಿಚಾರಣೆ ಎದುರಿಸುವ ಅನಿವಾರ್ಯತೆ ಎದುರಾಗಿದೆ.