ಬೆಂಗಳೂರು: ತನ್ನ ಸರ್ಕಾರವಿದ್ದಾಗ ನಡೆದ ನಿಧಿ ದುರ್ಬಳಕೆ ವಿಚಾರವಾಗಿ ಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದನ್ನು ಈಗಿನ ಸರ್ಕಾರಕ್ಕೆ ಆರೋಪಿಸಲು ಹೋಗಿ ವಿಪಕ್ಷ ನಾಯಕ ಆರ್ ಅಶೋಕ್ ಪೇಚಿಗೆ ಸಿಲುಕಿದ್ದಾರೆ.
ಹಿಂದಿನ ಸರ್ಕಾರದ ಅವಧಿಯಲ್ಲಿ ಕಾರ್ಮಿಕ ಮಂಡಳಿಯ ನಿಧಿಯನ್ನು ಬೇರೆ ಕಾರಣಕ್ಕೆ ಬಳಸಿಕೊಂಡಿದ್ದಕ್ಕಾಗಿ ಕೋರ್ಟ್ ತರಾಟೆಗೆ ತೆಗೆದುಕೊಂಡು ಅದರ ಕುರಿತು ಪೂರ್ತಿ ವಿವರವನ್ನು ಸಲ್ಲಿಸುವಂತೆ ಆದೇಶ ನೀಡಿತ್ತು. ಆದರೆ ಪತ್ರಿಕೆಯೊಂದು ಹಿಂದಿನ ಸರ್ಕಾರವನ್ನು ಉಲ್ಲೇಖಿಸದೆ ಈ ವರದಿಯನ್ನು ಮಾಡಿದೆ. ಆ ವರದಿಯ ತುಣುಕನ್ನು ಹಂಚಿಕೊಂಡು ಆರ್ ಅಶೋಕ್ ಸಿದ್ಧರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
“ಈ ಲಜ್ಜೆಗೆಟ್ಟ ಸರ್ಕಾರಕ್ಕೆ ನ್ಯಾಯಾಲಯಗಳಿಂದ ಎಷ್ಟು ಬಾರಿ ಛೀಮಾರಿ ಹಾಕಿಸಿಕೊಂಡರೂ ಬುದ್ಧಿ ಬರೋದಿಲ್ಲ. ಲೂಟಿ ಹೊಡೆಯುವುದನ್ನೇ ಕಸುಬು ಮಾಡಿಕೊಂಡಿರುವ ಈ ಮಾನಗೇಡಿ ಸರ್ಕಾರದಲ್ಲಿ ಕನ್ನಡಿಗರು ಇನ್ನು ಏನೇನು ಕರ್ಮಕಾಂಡ ನೋಡಬೇಕೋ ಏನೋ ಆ ಪರಮಾತ್ಮನೇ ಬಲ್ಲ” ಎಂದೆಲ್ಲ ಅವರು ಟ್ವೀಟ್ ಮಾಡಿದ್ದರು.
ಆದರೆ ಆ ಟ್ವೀಟ್ ಈಗ ಅವರೆಡೆಗೇ ಬೌನ್ಸ್ ಆಗಿದೆ. ವಿಷಯದ ಕುರಿತಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಅವರು ತಮ್ಮ ಟ್ವೀಟಿನಲ್ಲಿ “ಕಾರ್ಮಿಕರ ಕಲ್ಯಾಣ ನಿಧಿ ಬಳಕೆಯ ಬಗ್ಗೆ ವೃಥಾ ಆರೋಪ ಮಾಡುತ್ತಿರುವ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ ಅವರೇ ನೀವು ಇನ್ನೂ ನಿದ್ದೆಯಿಂದ ಎದ್ದಂತೆ ಕಾಣುತ್ತಿಲ್ಲ! ಸ್ವಲ್ಪ ನಿದ್ದೆಯಿಂದ ಎದ್ದು ಕೇಳಿಸಿಕೊಳ್ಳಿ, ಕಳೆದ ಸಲ ನಿಮ್ಮದೇ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಮಾಡಿಹೋದ ಎಡವಟ್ಟುಗಳನ್ನು ನಾವು ಆಡಿಟ್ ಮಾಡಿಸಿದಾಗ ಬಯಲಾದ ಸಂಗತಿಗಳನ್ನೇ ಘನ ನ್ಯಾಯಪೀಠ ಪುನರುಚ್ಛರಿಸಿದೆ ಹೊರತು ಮತ್ತೇನಿಲ್ಲ!
ಮಂಡಳಿಯ ನಿಧಿಯಲ್ಲಿ ಕಾರುಗಳನ್ನು ಖರೀದಿ ಮಾಡಿದ್ದು ನಮ್ಮ ಸರ್ಕಾರ ಅಲ್ಲ ಸ್ವಾಮಿ, ನಿಮ್ಮದೇ ಬಿಜೆಪಿ ಸರ್ಕಾರ! ಕೋವಿಡ್ ಸಮಯದಲ್ಲಿ ಇಂದಿರಾ ಕ್ಯಾಂಟೀನ್ ಗಳಿಗೆ ಮಂಡಳಿಯ ಹಣ ವೆಚ್ಚ ಮಾಡಿದ್ದು ಸಹ ನೀವೇ. ಯಾಕೆಂದರೆ ಆಗ ಅಧಿಕಾರದಲ್ಲಿದ್ದಿದ್ದು ನಿಮ್ಮದೇ ಬಿಜೆಪಿ ಸರ್ಕಾರ ಅಲ್ಲವೇ? ನರೇಗಾ ಯೋಜನೆಗೆ ಮಂಡಳಿಯ ನಿಧಿ ಬಳಕೆ ಮಾಡಿಕೊಳ್ಳಿ ಎಂದು ಅಧಿಸೂಚನೆ ಹೊರಡಿಸಿದ್ದು ಸಹ ತಮ್ಮದೇ ಕೇಂದ್ರ ಬಿಜೆಪಿ ಸರ್ಕಾರ ಎಂಬುದು ತಮಗೆ ತಿಳಿದಿಲ್ಲವೇ? ಇನ್ನು ಕಳೆದ ಅವಧಿಯ ನಿಮ್ಮ ಸರ್ಕಾರದಲ್ಲಿ ಕಾರ್ಮಿಕರಲ್ಲದವರಿಗೆಲ್ಲ ಕಾರ್ಮಿಕ ಕಾರ್ಡ್ ಗಳನ್ನು ಮಾಡಿಕೊಟ್ಟು ಕಾರ್ಮಿಕರ ಕಲ್ಯಾಣ ನಿಧಿಯನ್ನು ನುಂಗಿದ್ದು ಮರೆತು ಹೋದಿರಾ ಆರ್ ಅಶೋಕ್ ಅವರೇ?
ಅಧಿಕಾರ ಕಳೆದುಕೊಂಡ ಹತಾಶೆ, ಪಕ್ಷದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲದ ಪರಿಸ್ಥಿತಿ ನಿಮಗೆ ಹೀಗೆಲ್ಲ ಮಾತಾಡಿಸುತ್ತಿದೆ ಎಂಬುದು ನಮಗೂ ಅರ್ಥವಾಗುತ್ತದೆ! ದಯವಿಟ್ಟು ನ್ಯಾಯ ಪೀಠ ಹೇಳಿರುವ ಅಂಶಗಳನ್ನೊಮ್ಮೆ ಓದಿಕೊಳ್ಳಿ. ಆಗ ನಿಮ್ಮದೇ ಬಿಜೆಪಿ ಸರ್ಕಾರ ಮಾಡಿಹೋದ ಕರ್ಮಗಳೆಲ್ಲ ನಿಮ್ಮ ಮುಖಕ್ಕೇ ರಾಚದಿದ್ದರೆ ಹೇಳಿ!” ಎಂದು ತಿವಿದಿದ್ದಾರೆ.
ಈ ವರದಿ ಬರೆಯುವ ತನಕ ಈ ಕುರಿತು ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅಲ್ಲದೆ ವಿಷಯದ ಕುರಿತಾಗಿ ಕಾಂಗ್ರೆಸ್ ಪಕ್ಷದ ಉಚ್ಛಾಟಿತ ನಾಯಕಿಯಾದ ಕವಿತಾ ರೆಡ್ಡಿಯವರೂ ಪ್ರತಿಕ್ರಿಯಿಸಿದ್ದು, ಅವರು “ಅಶೋಕಣ್ಣ ನೀವು LOP ಆದರೆ ಯಾವುದೋ ಸಿಲ್ಲಿ ಕಾರ್ಪೊರೇಟರ್‌ನಂತೆ ವರ್ತಿಸುತ್ತಿದ್ದೀರಿ. ಕಾಮೆಂಟ್ ಮಾಡುವ ಮೊದಲು ವಕೀಲರಿಂದ ವಿವರಗಳನ್ನು ತೆಗೆದುಕೊಳ್ಳಿ, ನೀವು ಎಷ್ಟು ಜೋರಾಗಿ ಕಿರುಚುತ್ತೀರೋ ಅಷ್ಟು ವೇಗವಾಗಿ ನಿಮ್ಮ ಯಲ್ಲಾಪುರ ಶಾಸಕರು ಜೈಲು ತಲುಪುತ್ತಾರೆ.
10 ಲಕ್ಷಕ್ಕೂ ಹೆಚ್ಚು ನಕಲಿ ಕಟ್ಟಡ ಕಾರ್ಮಿಕರ ಕಾರ್ಡ್‌ಗಳು, ಹೆಚ್ಚಿಸಿದ ವಿದ್ಯಾರ್ಥಿವೇತನದ ಮೊತ್ತ, ಕಿಟ್‌ಗಳ ಹೆಸರಿನಲ್ಲಿ ಲೂಟಿ ಎಲ್ಲವೂ ಆಡಿಟ್ ಆಗುತ್ತಿದೆ. “ಪ್ರೆವೆಂಟಿವ್ ಹೆಲ್ತ್‌ಕೇರ್” ದರಗಳು ಕೇಂದ್ರದ ನಿಯಮಗಳ ಪ್ರಕಾರವೆ. ನೀವು ಈಗ ಮಾತನಾಡುತ್ತಿರುವ ಟೆಂಡರ್‌ಗಳು ನಿಮ್ಮ ಸರ್ಕಾರಕ್ಕೆ ಸೇರಿವೆ.
ನೀವು ಶೀಘ್ರದಲ್ಲೇ ನಿಮ್ಮ ಹುದ್ದೆಯನ್ನು ಕಳೆದುಕೊಳ್ಳುತ್ತೀರಿ ಮತ್ತು ನೀವು ಮೂರ್ಖ ಹೇಳಿಕೆಗಳನ್ನು ನೀಡುವುದನ್ನು ಮುಂದುವರಿಸಿದರೆ ಬೆಂಗಳೂರಿನಲ್ಲೂ ಹಿಡಿತವನ್ನು ಕಳೆದುಕೊಳ್ಳುತ್ತೀರಿ. ಮತ್ತು ನಿಮ್ಮ ಮಾಜಿ ಸಚಿವರು & ನಿಮ್ಮ ಸರ್ಕಾರ ಮಾಡಿದ ಎಲ್ಲಾ ವಿಷಯಗಳ ಬಗ್ಗೆ ಪ್ರತಿದಿನ ಮಾತನಾಡಲು ಪ್ರಾರಂಭಿಸಿದರೆ ನೀವು ಮಾಧ್ಯಮದ ಪ್ರಶ್ನೆಗಳನ್ನು ಎದುರಿಸಲು ಸಾಧ್ಯವಾಗುವುದಿಲ್ಲ” ಎಂದು ಹೇಳಿದ್ದಾರೆ.