ಕುಶಾಲನಗರ: ಜನಪದ ಸಿರಿ ದೇಸಿ ಚಾನೆಲ್ ಅರ್ಪಿಸುವ ವೀರಭೂಮಿ ಜನಪದ ಗ್ರಾಮ ಸಹಯೋಗದಲ್ಲಿ ನಡೆದ ಜನರ ಬಳಿಗೆ ಜಾನಪದ ವೇದಿಕೆಯ ಉದ್ಘಾಟನೆಯನ್ನು ದಿ. ನಾಡೋಜ ಎಚ್. ಎಲ್ ನಾಗೇಗೌಡ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಅರ್ಪಿಸುವುದರ ಮೂಲಕ ಖ್ಯಾತ ವಿದ್ವಾಂಸರಾದ ಡಾ. ಕುರುವ ಬಸವರಾಜ, ಪದ್ಮಶ್ರೀ ಡಾ. ರಾಣಿ ಮಾಚಯ್ಯ, ಜಗದೀಶ ಮಲ್ನಾಡ್ ನೆರವೇರಿಸಿದರು.
ನಂತರ ಜರಗನಹಳ್ಳಿ ಕಾಂತರಾಜು ಮಾತನಾಡುತ್ತಾ, ಕುಶಾಲನಗರದ ಈ ಪ್ರಖ್ಯಾತ ವೀರಭೂಮಿ ರೆಸ್ಟೋರೆಂಟ್ ಇಂದಿನಿಂದ ಜಾನಪದ ಕಲಾಗ್ರಾಮ ಎಂದು ಸಾಕ್ಷಿಯಾಗಲು ಇಲ್ಲಿ ಎಲ್ಲ ನಮ್ಮ ಕಲಾವಿದರು ಸಜ್ಜಾಗಿದ್ದೀರಿ. ಜಾನಪದ ಕಲಾವಿದರು ಅನಾಥರಲ್ಲ ಅವರೆಲ್ಲರನ್ನೂ ಸೇರಿಸಿ ನೇಪಾಳದಲ್ಲಿ ಸರ್ಕಾರಕ್ಕೆ ಮಾರ್ಗದರ್ಶಿಯಾಗಿರುವಂತೆ ಜನಪದ ಸಿರಿ ಕನ್ನಡ ವಾಹಿನಿ ವತಿಯಿಂದ ಬರುವ ತಿಂಗಳಿನಲ್ಲಿ ಅಂತರಾಷ್ಟೀಯ ಕಾರ್ಯಕ್ರಮ ಮಾಡಿ, ಶಾಸ್ತ್ರೀಯ ಕಲಾವಿದರಿಗಿಂತ ಜಾನಪದ ಕಲಾವಿದರು ಕಡಿಮೆ ಇಲ್ಲ ಎಂದು ತೋರಿಸುವ ಕಾರ್ಯಕ್ರಮ ಇದಾಗಿದೆ ಎಂದು ಅಭಿಪ್ರಾಯಪಟ್ಟರು.
ಎಚ್.ಎಲ್ ನಾಗೇಗೌಡ ಸ್ಥಾಪಿತ ಕರ್ನಾಟಕ ಜಾನಪದ ಪರಿಷತ್ ಯುನೆಸ್ಕೊ ಮಾನ್ಯತೆ ಪಡೆದಿದ್ದರಿಂದ ಅದರ ಈಗಿನ ಅಧ್ಯಕ್ಷರಾದ ಜಾನಪದ ವಿದ್ವಾಂಸ ಡಾ. ಹಿ.ಚಿ ಬೋರಲಿಂಗಯ್ಯ ಅವರು ದೂರವಾಣಿಯ ಮುಖಾಂತರ ಹರ್ಷವ್ಯಕ್ತಪಡಿಸಿ, ತಮಿಳುನಾಡಿನಲ್ಲಿ ಪರಿಷತ್‌ನ ಶಾಖೆ ಪ್ರಾರಂಭವಾಗುತ್ತಿದೆ ಎಂದು ತಿಳಿಸಿದರು. ರಾಜ್ಯದ ನಾನಾ ಜಿಲ್ಲೆಗಳಿಂದ ಬಂದ ನೂರಐವತ್ತು ಜನ ಮೂಲ ಜಾನಪದ ಕಲಾವಿದರು ತಮ್ಮ ತಂಡದೊಂದಿಗೆ ಕಲಾಪ್ರದರ್ಶನವನ್ನು ಪ್ರಸ್ತುತಪಡಿಸಿದವು ಹಾಗೂ ಪ್ರಖ್ಯಾತ ಹಾಡುಗಾರರಾದ ಮೈಸೂರು ಗುರುರಾಜ್, ಉಮಾ ವೈ.ಜೆ, ಜುಂಜಪ್ಪ ಖ್ಯಾತಿಯ ಮೋಹನ್ ಕುಮಾರ್, ಆರ್. ರವಿಕುಮಾರ್, ಆರ್. ಮಹೇಂದ್ರ, ಗೌತಮಿ ಮಧುಸೂಧನ್ ಹಾಗೂ ಪದ್ಮಶ್ರೀ ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಜನಪದ ಕಲಾವಿದರು ಪುರಿಗಾಲಿ ಮಹಾದೇವಸ್ವಾಮಿ, ಕೈಲಾಸ ಮೂರ್ತಿ, ಕೆಬ್ಬೇಪುರ ಸಿದ್ಧರಾಜು ಜನಪದ ಮಹಾಕಾವ್ಯಗಳನ್ನು ಪ್ರಸ್ತುತಪಡಿಸಿದರು.
ವಿಶೇಷವಾಗಿ ಉಡುಪಿ ಜಿಲ್ಲೆಯ ಕಟಪಾಡಿ ಕಲೆ, ಕೊಡಗು ಜಿಲ್ಲೆಯ ಉಮ್ಮತ್ತಾಟ್ ಕಲೆ, ಸಿದ್ಧಿ ಜನಾಂಗದ ಮಹಿಳಾ ಕಲೆ, ಮಂಡ್ಯ ಕಲಾವಿದರ ಪೂಜಾ ಕುಣಿತ ಪ್ರೇಕ್ಷಕರ ಗಮನ ಸೆಳೆಯಿತು. ವೇದಿಕೆಯಲ್ಲಿ ವೀರಭೂಮಿ ಕಲಾಗ್ರಾಮದ ಹೆಚ್.ಆರ್. ನಾಗೇಂದ್ರ, ಪುಷ್ಪ, ಬಿ. ಸಿದ್ಧರಾಜಯ್ಯ ಕಲಾಗ್ರಾಮದ ಬಳಗ ಮತ್ತು ಇನ್ನಿತರರು ಉಪಸ್ಥಿತರಿದ್ದರು.