ತಮಿಳುನಾಡು ರಾಜಕೀಯದಲ್ಲಿ ಹೊಸ ಬದಲಾವಣೆ ಬಂದಿದ್ದು, ಆಡಳಿತ ಪಕ್ಷ ಡಿಎಂಕೆ ಭವಿಷ್ಯದ ದೃಷ್ಟಿಯಿಂದ ಮುಖ್ಯಮಂತ್ರಿ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಘೋಷಣೆ ಮಾಡಲಾಗಿದೆ.
ತಮಿಳುನಾಡು ಸರ್ಕಾರದ ಸಚಿವ ಸಂಪುಟ ಪುನರ್‌ರಚನೆಯಾಗುತ್ತಿದ್ದು, ಹೊಸ ಸಚಿವ ಸಂಪುಟ ಸಭೆಯಲ್ಲಿ ಉದಯನಿಧಿ ಸ್ಟಾಲಿನ್ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹೀಗಾಗಿ ಡಿಎಂಕೆ ಪಕ್ಷ ಈಗಲೇ ತನ್ನ ಉತ್ತರಾಧಿಕಾರಿಯನ್ನು ಮುನ್ನೆಲೆಗೆ ತರುವ ಮೂಲಕ ಪಕ್ಷ ಬಲವರ್ಧನೆಗೂ ಕೈ ಹಾಕಿದೆ ಎಂಬ ಚರ್ಚೆ ಶುರುವಾಗಿದೆ.
ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರು ತಮಿಳುನಾಡು ಸಚಿವ ಸಂಪುಟ ಪುನಾರಚನೆಗೆ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರದ ಸಚಿವ ಸಂಪುಟ ಪುನರ್ರಚನೆಗೆ ಆಡಳಿತ ಪಕ್ಷ ಡಿಎಂಕೆ ಎಲ್ಲಾ ತಯಾರಿ ಮಾಡಿಕೊಂಡಿದೆ. ಚೆನ್ನೈ ರಾಜಭವನದಲ್ಲಿ ಸೆಪ್ಟೆಂಬರ್ 29ರ (ಭಾನುವಾರ) ಮಧ್ಯಾಹ್ನ 3.30ಕ್ಕೆ ನಡೆಯುವ ಹೊಸ ಸಚಿವ ಸಂಪುಟ ಸಭೆಯಲ್ಲಿ ಉದಯನಿಧಿ ಸ್ಟಾಲಿನ್ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹಾಗೂ 6 ಪ್ರಮುಖ ಖಾತೆಗಳ ಬದಲಾವಣೆ ಮೂಲಕ ಆರು ಮಂದಿ ಹೊಸ ಸಚಿವರೂ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಅದಾಗಲೇ ಕ್ರೀಡಾ ಮತ್ತು ಯುವ ಕಲ್ಯಾಣ ಇಲಾಖೆ ಜವಾಬ್ದಾರಿಯನ್ನು ಉದಯನಿಧಿ ಸ್ಟ್ಯಾಲಿನ್ ಗೆ ನೀಡಲಾಗಿತ್ತು. ಈಗ ಕ್ರೀಡಾ ಮತ್ತು ಯುವ ಕಲ್ಯಾಣ ಇಲಾಖೆಯ ಜೊತೆಗೆ ಉಪಮುಖ್ಯಮಂತ್ರಿ ಹುದ್ದೆ ಕೂಡ ಅವರ ಹೆಗಲಿಗೇರಲಿದ್ದು, ಈ ಹುದ್ದೆ ಪಕ್ಷವನ್ನು ಭವಿಷ್ಯದಲ್ಲಿ ಬಲಿಷ್ಠವಾಗಿ ರೂಪಿಸಲು ಮುಂದಾಗಲಿದೆ ಎಂಬ ಚರ್ಚೆ ಜೋರಾಗಿದೆ.