Home ಅಂಕಣ PACL ವಂಚನೆ ಪ್ರಕರಣದ ಕುರಿತು ಕುಮಾರಸ್ವಾಮಿ ಯಾವತ್ತಾದರೂ ಒಂದು ಶಬ್ದ ಮಾತಾಡಿದ್ದಾರೆಯೇ? – ಮುನೀರ್ ಕಾಟಿಪಳ್ಳ

PACL ವಂಚನೆ ಪ್ರಕರಣದ ಕುರಿತು ಕುಮಾರಸ್ವಾಮಿ ಯಾವತ್ತಾದರೂ ಒಂದು ಶಬ್ದ ಮಾತಾಡಿದ್ದಾರೆಯೇ? – ಮುನೀರ್ ಕಾಟಿಪಳ್ಳ

0

ಎರಡು ಸಲ ಮುಖ್ಯಮಂತ್ರಿ, ಈಗ ಕೇಂದ್ರದ ಕ್ಯಾಬಿನೆಟ್ ಸಚಿವರಾಗಿರುವ ಕುಮಾರ ಸ್ವಾಮಿಯ ನಡವಳಿಕೆ ಮಾಫಿಯಾ ಕೂಟದ ಜನರ ತರ ಇದೆ. ತನ್ನ ವಿರುದ್ಧದ ಪ್ರಕರಣವನ್ನು ಕಾನೂನು, ನಿಯಮಗಳಿಗೆ ಬದ್ದರಾಗಿ ತನಿಖೆ ಮಾಡಿದ ಪೊಲೀಸ್ ತಂಡದ ಮುಖ್ಯಸ್ಥ ಚಂದ್ರಶೇಖರ್ ವಿರುದ್ದ ಕುಮಾರಸ್ವಾಮಿ ಪತ್ರಿಕಾಗೋಷ್ಟಿ ನಡೆಸಿ ಮಾಡಿದ ಆರೋಪಗಳು ಅತ್ಯಂತ ಕೀಳು ಅಭಿರುಚಿಯದ್ದು ಹಾಗೂ ಪೊಲೀಸ್ ಅಧಿಕಾರಿಗಳನ್ನು ಬೆದರಿಸಿ ಹಿಮ್ಮೆಟ್ಟಿಸುವ, ಮಾನಸಿಕವಾಗಿ ಕುಗ್ಗಿಸುವ ರೀತಿಯಲ್ಲಿದೆ.

ಮಾಹಿತಿ ಸೋರಿಕೆಗೆ ಸಂಬಂಧಿಸಿ ರಾಜಭವನದ ಸಿಬ್ಬಂದಿಗಳ ತನಿಖೆಗೆ ತನಿಖಾ ತಂಡದ ಮುಖ್ಯಸ್ಥರಾದ ಚಂದ್ರಶೇಖರ್ ಅನುಮತಿ ಕೇಳಿದರೆ ತಪ್ಪೇನಿದೆ !. ಅಷ್ಟಕ್ಕೆ ಕುಮಾರ ಸ್ವಾಮಿ ಕೆಂಡಾಮಂಡಲರಾಗುವುದೇಕೆ ? ಕುಮಾರ ಸ್ವಾಮಿ ಭೂಹಗರಣದ ಕುರಿತು ಪ್ರಭಾವಗಳಿಗೆ ಒಳಗಾಗದೆ ಚಂದ್ರಶೇಖರ್ ನಿಷ್ಪಕ್ಷಪಾತಿಯಾಗಿ ತನಿಖೆ ನಢಸಿರುವುದು ತಪ್ಪೆ ? ತನಿಖೆ ಪೂರ್ಣಗೊಂಡು ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿದ್ದು ತಪ್ಪೆ ?

PACL ವಂಚನೆ ಪ್ರಕರಣದಲ್ಲಿ ಲಕ್ಷಾಂತರ ಜನರ ಸಾವಿರಾರು ಕೋಟಿ ರೂಪಾಯಿ ವಂಚನೆಗೆ ಒಳಗಾಗಿಲ್ಲವೆ ? ಈ ವಂಚನೆ ಪ್ರಕರಣದ ಕುರಿತು ಕುಮಾರ ಸ್ವಾಮಿ ಯಾವತ್ತಾದರು ಒಂದು ಶಬ್ದ ಮಾತಾಡಿದ್ದಾರೆಯೆ. ಈವರಗೆ ಮೌನವಹಿಸಲು ಕಾರಣ ಏನು ? ಈ ಪ್ರಕರಣದಲ್ಲಿ ತನಿಖೆಯ ಜವಾಬ್ದಾರಿ ದೊರೆತಾಗ ಚಂದ್ರಶೇಖರ್ ನನಗೆ ತಿಳಿದ ಹಾಗೆ ಪ್ರಕರಣಕದ ಆಳಕ್ಕೆ ಇಳಿದಿದ್ದರು. PACL ವಂಚನೆಯಲ್ಲಿ ಶಾಮೀಲಾದ, ಕೋಟಿಗಟ್ಟಲೆ ರೂಪಾಯಿ ಹೊಡೆದ ಖತರ್ ನಾಕ್ ಪೊಲೀಸ್ ಇನ್ಸ್ ಪೆಕ್ಟರ್ ಗಳ ಜಾತಕವನ್ನು ವರದಿಯಲ್ಲಿ ತಂದಿದ್ದರು. ಅಂತಹ ಭ್ರಷ್ಟ ಅಧಿಕಾರಿಗಳ ಮೇಲೆ ಕ್ರಮ ಜರುಗದಂತೆ, ಆರೋಪ ಪಟ್ಟಿ ಸಲ್ಲಿಕೆಯಾಗದಂತೆ ತಡೆದದ್ದು ಯಾರು ? ಕುಮಾರ ಸ್ವಾಮಿ ಈ ದಾಖಲೆಯನ್ನೂ ಬಿಡುಗಡೆ ಮಾಡುತ್ತಾರಾ ? PACL ಹಗರಣದಲ್ಲಿ ಕುಮಾರ ಸ್ವಾಮಿ ಚಂದ್ರಶೇಖರ್ ವಿರುದ್ಧ ಮಾಡಿರುವ ಆರೋಪ ಹಿಟ್ ಅಂಡ್ ರನ್ ಅಷ್ಟೆ,ಯಾವ ಸಾಕ್ಷ್ಯ, ಆಧಾರಗಳನ್ನು ಕುಮಾರ ಸ್ವಾಮಿ ಬಹಿರಂಗ ಪಡಿಸಿಲ್ಲ.

ಕುಮಾರ ಸ್ವಾಮಿ ತನ್ನ ವಿರುದ್ದದ ಪ್ರಕರಣದ ತನಿಖಾಧಿಕಾರಿಗಳನ್ನು ಬೆದರಿಸಲು ತನಗಿರುವ ಅಧಿಕಾರದ ಸ್ಥಾನ, ಪ್ರಭಾವವನ್ನು ಬಳಸುತ್ತಿದ್ದಾರೆ. ಅಧಿಕಾರಿಗಳನ್ನು ಅಧೀರಗೊಳಿಸಲು ಯತ್ನಿಸುತ್ತಿದ್ದಾರೆ. ನ್ಯಾಯಾಂಗದ ನಿಯಮಗಳ ಪ್ರಕಾರವೇ ಅವರು ಜಾಮೀನಿನ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಸರಕಾರ ನ್ಯಾಯಾಲಯದ ಗಮನಕ್ಕೆ ಇದನ್ನೆಲ್ಲ ತರಬೇಕು. ಅತ್ಯುನ್ನತ ಸ್ಥಾನದಲ್ಲಿ ಇರುವ ಓರ್ವ ರಾಜಕಾರಣಿ, ಜನಪ್ರತಿನಿಧಿ ಪದೇ ಪದೆ ಭೂಗತ ಜಗತ್ತಿನ ಭಾಷೆಯಲ್ಲಿ ಮಾತಾಡುವುದು ಶೋಭೆಯಲ್ಲ.

ಕುಮಾರ ಸ್ವಾಮಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿ. ಕೇಂದ್ರ ಸರಕಾರದ ಕ್ಯಾಬಿನೆಟ್ ನಲ್ಲಿದ್ದಾರೆ. ಅಮಿತ್ ಶಾ ಆಪ್ತ ಬೇರೆ. ರಾಜ್ಯದ ಚುನಾಯಿತ ಸರಕಾರವನ್ನು ಉರುಳಿಸಿ ಬಿಜೆಪಿ ಮೈತ್ರಿಯಲ್ಲಿ ಸರಕಾರ ರಚಿಸುವ ಯತ್ನದಲ್ಲಿದ್ದಾರೆ‌. ಇಂತಹ ಸಂದರ್ಭದಲ್ಲಿ ಕುಮಾರ ಸ್ವಾಮಿಯ “ಮುಗಿಸಿ ಬಿಡುವ” ದಾಟಿಯ ಬೆದರಿಕೆಗೆ ಕೊಂಚವೂ ಅಳುಕದೆ ADGP ಚಂದ್ರಶೇಖರ್, ಜಾರ್ಜ್ ಬರ್ನಾಡ್ ಷಾ ಅವರ ಪ್ರಖ್ಯಾತ ಮಾತನ್ನು ಉಲ್ಲೇಖಿಸಿ ಕುಮಾರ ಸ್ವಾಮಿಯವರಿಗೆ ಉತ್ತರಿಸಿರುವುದು ಚಂದ್ರಶೇಖರ್ ಅವರು ತನಿಖೆಯಲ್ಲಿ ಪ್ರಾಮಾಣಿಕರಾಗಿದ್ದಾರೆ ಎಂಬದುದರ ಸಂಕೇತ. ಸರಿ ಇರುವ ಹಿರಿಯ ಅಧಿಕಾರಿಗಳೇ ಕುಮಾರ ಸ್ವಾಮಿ ಎಂದಾಗ ಹಿಂದಕ್ಕೆ ಸರಿಯುವ ಉದಾಹರಣೆಗಳೆ ಇರುವಾಗ ತಪ್ಪು ಮಾಡಿದ ಅಧಿಕಾರಿ ಇಷ್ಟು ದೃಢವಾಗಿ ಉತ್ತರಿಸಲು, ತನ್ನ ತಂಡದಲ್ಲಿ ಕೆಲಸ ಮಾಡಿದ ಕಿರಿಯ ಅಧಿಕಾರಿಗಳ ಪರವಾಗಿ ನಿಲ್ಲಲು ಸಾಧ್ಯವಿಲ್ಲ. ಚಂದ್ರಶೇಖರ್ ಅವರು ಮಂಗಳೂರಿನಲ್ಲಿ ಕಮೀಷನರ್ ಆಗಿದ್ದಾಗಲೂ ಅವರ ಕಾರ್ಯವೈಖರಿ ನಾವು ನೋಡಿದ್ದೇವೆ. ತನಿಖೆಯಲ್ಲಿ, ಕರ್ತವ್ಯ ನಿರ್ವಣೆಯಲ್ಲಿ ಅವರು ಯಾವಾಗಲೂ ದಕ್ಷರು. ಪ್ರಭಾವಕ್ಕೆ ಒಳಗಾಗುವವರು ಅಲ್ಲ.

ಮುನೀರ್ ಕಾಟಿಪಳ್ಳ

You cannot copy content of this page

Exit mobile version