Friday, June 14, 2024

ಸತ್ಯ | ನ್ಯಾಯ |ಧರ್ಮ

ಕರ್ನಾಟಕದ  ಅಸ್ಮಿತೆ ಮತ್ತು ಸಹಕಾರೀ ಚಳುವಳಿಗಳು

ಬಿಜೆಪಿ ಸರಕಾರದ ಆಳ್ವಿಕೆಯಲ್ಲಿ ಕನ್ನಡವು ಹಂತ ಹಂತವಾಗಿ ತನ್ನ ನೆಲೆ ಕಳೆದುಕೊಳ್ಳುತ್ತಾ ಹೋಗುತ್ತಿದೆ. ಈಗ ಅದು ಸಹಕಾರೀ ಕ್ಷೇತ್ರಕ್ಕೆ ಕೈ ಹಾಕಿದೆ. ಇದೂ ಕನ್ನಡವನ್ನು ಇನ್ನಷ್ಟು ಪತನಗೊಳಿಸಲಿದೆ. ದಹಿ ಬಂದ ಹಾಗೆ ಇನ್ನು ಏನೇನೋ ಹಿಂಬಾಗಿಲಿಂದ ಬರಲಿವೆ – ಪುರುಷೋತ್ತಮ ಬಿಳಿಮಲೆ 

ಅಮುಲ್‌ ನಂದಿನಿಯನ್ನು ನಿಧಾನವಾಗಿ ನಿರ್ಜೀವಗೊಳಿಸುತ್ತದೆ. ಅಲ್ಲಿಗೆ ಕರ್ನಾಟಕದ ಅಸ್ಮಿತೆಯ ಪುಟ್ಟ ಎಳೆಯೊಂದು ಕಮರಿ ಹೋಗುತ್ತದೆ. 

ಕರ್ನಾಟಕ ಜನ್ಯ ಬ್ಯಾಂಕುಗಳು ಎಲ್ಲೆಲ್ಲೋ ವಿಲೀನಗೊಂಡಾಗ ಆ ಬ್ಯಾಂಕುಗಳಿಂದ ಕನ್ನಡಿಗರು ಹೊರಬಿದ್ದರು. ಅಲ್ಲಿಗೆ ಕರ್ನಾಟಕದ ಇನ್ನೊಂದು ಎಳೆ ಕಾಣೆಯಾಯಿತು. 

ಕನ್ನಡದ ನಾಮ ಫಲಕಗಳಿಲ್ಲದೇ ಕೇಂದ್ರ ಸಚಿವರು ಇವತ್ತು ಕರ್ನಾಟಕದಲ್ಲಿ ಕಾರ್ಯಕ್ರಮ ನಡೆಸಬಲ್ಲರು. 

ಕರ್ನಾಟಕದ ಮೂಲೆ ಮೂಲೆಗಳಲ್ಲಿ ಹಿಂದಿ ಭಾಷಿಕರು ತುಂಬಿಕೊಳ್ಳುತ್ತಿದ್ದಾರೆ. ಅವರಿಗೆ ಸಹಾಯ ಮಾಡಲು ಕನ್ನಡಿಗರೇ ಹಿಂದಿ ಕಲಿಯುತ್ತಿದ್ದಾರೆ. 

ಹೀಗೆ ಬಿಜೆಪಿ ಸರಕಾರದ ಆಳ್ವಿಕೆಯಲ್ಲಿ ಕನ್ನಡವು ಹಂತ ಹಂತವಾಗಿ ತನ್ನ ನೆಲೆ ಕಳೆದುಕೊಳ್ಳುತ್ತಾ ಹೋಗುತ್ತಿದೆ. ಈಗ ಅದು ಸಹಕಾರೀ ಕ್ಷೇತ್ರಕ್ಕೆ ಕೈ ಹಾಕಿದೆ. ಇದೂ ಕನ್ನಡವನ್ನು ಇನ್ನಷ್ಟು ಪತನಗೊಳಿಸಲಿದೆ. ದಹಿ ಬಂದ ಹಾಗೆ ಇನ್ನು ಏನೇನೋ ಹಿಂಬಾಗಿಲಿಂದ ಬರಲಿವೆ. 

20ನೇ ಶತಮಾನದ ಮೊದಲ ದಶಕದಲ್ಲಿ ಸಹಕಾರೀ ಚಳುವಳಿ ಸುರು ಆದದ್ದೇ ಕರ್ನಾಟಕದಲ್ಲಿ. 1905ರಲ್ಲಿ ಮೈಸೂರು ಸಹಕಾರ ಸಂಘಗಳ ನಿಯಯಮಾವಳಿಗಳನ್ನು ಜ್ಯಾರಿ ಮಾಡುವ ಅದು ನಮ್ಮ ರಾಜ್ಯದಲ್ಲಿ ಆರಂಭಗೊಂಡಿತು. 1914-15ರ ಹೊತ್ತಿಗೆ ಮೈಸೂರು ರಾಜ್ಯದಲ್ಲಿ ಒಟ್ಟು 725 ಸಹಕಾರ ಸಂಘಗಳಿದ್ದವು. ಅದರಲ್ಲಿ 56,267 ಸದಸ್ಯರಿದ್ದರು. ಅದರ  ಒಟ್ಟು ಬಂಡವಾಳ ರೂ.30.85ಲಕ್ಷದಷ್ಟಿತ್ತು. ಶೇ. 62 ರಷ್ಟು ಗ್ರಾಮೀಣ ಪ್ರದೇಶದ ಜನರು ಅದರ ಪ್ರಯೋಜನ ಪಡೆದಿದ್ದರು.

ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಕೃಷಿ ಪತ್ತಿನ ಸಹಕಾರ ಕ್ಷೇತ್ರಕ್ಕೆ ಬುನಾದಿ ಹಾಕಿದ್ದು ಕೂಡಾ  ಕರ್ನಾಟಕ ರಾಜ್ಯವೇ. 1904ರಲ್ಲಿ ಆಗಿನ ಧಾರವಾಡ ಜಿಲ್ಲೆಯ ಕಣಗಿನಹಾಳ ಗ್ರಾಮದ ಎಸ್.ಎಸ್.ಪಾಟೀಲರು ಊರಿನ ರೈತರನ್ನು ಸೇರಿಸಿಕೊಂಡು ಅದನ್ನು ಕಟ್ಟಿದರು.

ʼಎಲ್ಲರಿಗಾಗಿ ನಾನು; ನನಗಾಗಿ ಎಲ್ಲರೂʼ  ಎಂಬುದು  ಸಹಕಾರ ತತ್ವದ ಮುಖ್ಯ ಸಂದೇಶವಾಗಿದ್ದದರಿಂದ ಸಹಕಾರೀ ಚಳುವಳಿ ಜನಪ್ರಿಯವಾಗಿದ್ದ ಪ್ರದೇಶಗಳಲ್ಲಿ ದ.ಕ ಜಿಲ್ಲೆಯೂ ಸೇರಿದಂತೆ, ಎಲ್ಲಿಯೂ    ಕೋಮುವಾದಕ್ಕೆ ಅವಕಾಶವೇ ಇರಲಿಲ್ಲ. ಮುಂದೆ ಜಿಲ್ಲಾ ಮಟ್ಟದ ಮತ್ತು ಗ್ರಾಮೀಣ ಸಹಕಾರಿ ಸಂಘಗಳು ಹಾಗೂ  ಬ್ಯಾಂಕುಗಳು ಜನರೊಡನೆ ನೇರ ಸಂಪರ್ಕ ಸಾಧಿಸಿ ಊರುಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ದವು. ಒಂದು ಕಾಲಕ್ಕೆ ನಮ್ಮಲ್ಲಿ 38,430 ಸಹಕಾರ ಸಂಸ್ಥೆಗಳು, ಮತ್ತು ಬ್ಯಾಂಕ್‌ಗಳು ಕ್ರಿಯಾಶೀಲವಾಗಿದ್ದುವು. ಕೈಗಾರಿಕಾ ಸಹಕಾರೀ ಬ್ಯಾಂಕ್  ಕೈಗಾರಿಕೆಗಳ ಅಭಿವೃದ್ಧಿಗೆ ಸಾವಿರಾರು ಕೋಟಿ ರೂಪಾಯಿ ಸಾಲ ನೀಡಿದ್ದುವು. 

ನಂಬಿಕೆ,  ಪಾರದರ್ಶಕ ವ್ಯವಹಾರ, ಗ್ರಾಹಕರ ಜೊತೆ ನೇರ ಸಂಪರ್ಕ, ಅನಗತ್ಯ ವೆಚ್ಚಕ್ಕೆ ಕಡಿವಾಣ ಇತ್ಯಾದಿಗಳು ಸಹಕಾರೀ ತತ್ವವನ್ನು ಕರ್ನಾಟಕದಲ್ಲಿ ಬೆಳೆಸಿದವು. ಕರ್ನಾಟಕದಲ್ಲಿ ಇವನ್ನೆಲ್ಲ ನೋಡಿಕೊಳ್ಳಲು ಒಬ್ಬ ಸಹಕಾರೀ ಸಚಿವರೂ ಇದ್ದಾರೆ. ಆದರೂ ಕಾರಣಾಂತರಗಳಿಂದ ಕರ್ನಾಟಕದಲ್ಲಿ ಸಹಕಾರೀ ಚಳುವಳಿಗಳು ಹಿಂದೆ ಬಿದ್ದಿವೆ. ಇದನ್ನು ನೆವವಾಗಿರಿಸಿಕೊಂಡು, ಅವೆಲ್ಲವನ್ನೂ ಮುಚ್ಚಿ ಪರ್ಯಾಯ ವ್ಯವಸ್ಥೆಯನ್ನು ಜ್ಯಾರಿಗೆ ತರಲು ಚಿಂತನೆ ನಡೆದಿದೆ. ಬಿಜೆಪಿ ಸರಕಾರ ಇದನ್ನು ಮಾಡಿದರೆ, ಅಲ್ಲೆಲ್ಲಾ ಯಾರು ತುಂಬಿಕೊಂಡಿರುತ್ತಾರೆ ಎಂಬುದನ್ನು ಊಹಿಸಿಕೊಳ್ಳುವುದು ಕಷ್ಟವಲ್ಲ. 

ಕರ್ನಾಟಕದ ಸಹಕಾರೀ ಚಳುವಳಿಯನ್ನು ಮರುಜೀವಗೊಳಿಸುವ ಮೂಲಕ ಕರ್ನಾಟಕದ ಅಸ್ಮಿತೆಯನ್ನು ಕಾಪಾಡಿಕೊಳ್ಳಬೇಕಾದ್ದು ಇವತ್ತಿನ ಅಗತ್ಯ. ಕರ್ನಾಟಕವು ಗುಜರಾತಿನ ವಸಾಹತು ಆಗಬೇಕಾದ ಅಗತ್ಯ ಇಲ್ಲ.

ಪುರುಷೋತ್ತಮ ಬಿಳಿಮಲೆ

ಚಿಂತಕರು

Related Articles

ಇತ್ತೀಚಿನ ಸುದ್ದಿಗಳು