Friday, June 14, 2024

ಸತ್ಯ | ನ್ಯಾಯ |ಧರ್ಮ

ಕೇರಳಕ್ಕೇ ಯಾಕೆ ನಿಫಾ ವೈರಸ್‌ ಬರುತ್ತಿದೆ?

ಬೆಂಗಳೂರು, ಸಪ್ಟೆಂಬರ್.‌15: ಕೇರಳದ ಕೋಯಿಕ್ಕೋಡ್‌ನಲ್ಲಿ ಮಾರಣಾಂತಿಕ ನಿಪಾ ವೈರಸ್‌ನ (Nipah virus)  ಪತ್ತೆಯಾಗಿದ್ದು, ಸೋಂಕು ದೃಢಪಟ್ಟಿರುವ ಐದು ಜನರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಸುಮಾರು 700 ಮಂದಿ ಶಂಕಿತ ಸೋಂಕಿತರಾಗಿದ್ದು, ಅವರಲ್ಲಿ 76 ಮಂದಿಯಿಂದ ಹೆಚ್ಚಿನ ಅಪಾಯವಿದೆ ಗುರುತಿಸಲಾಗಿದೆ.

ಆರನೇ ಬಾರಿಗೆ ನಿಫಾ ವೈರಸ್‌ ಭಾರತಕ್ಕೆ!

ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಕಾರ ನಿಫಾ ವೈರಸ್‌ನಿಂದ ಸಂಭವಿಸಿದ ಮರಣ ಪ್ರಮಾಣ  40% ನಿಂದ 75%. 1999ರಲ್ಲಿ ಮಲೇಷ್ಯಾದಲ್ಲಿ (Malaysia) ಮೊದಲ ಬಾರಿಗೆ ಕಾಣಿಸಿಕೊಂಡ ನಿಫಾ ವೈರಸ್‌ ಭಾರತದಲ್ಲಿ ಮೊದಲ ಎರಡು ಬಾರಿ ಪತ್ತೆಯಾಗಿದ್ದು ಪಶ್ಚಿಮ ಬಂಗಾಳದಲ್ಲಿ (West Bengal). ನಿಫಾದ ಮಾರಣಾಂತಿಕ ದಾಳಿಯಾಗಿದ್ದು 2೦೦1ರಲ್ಲಿ. ಆಗ ಪ.ಬಂಗಾಳದಲ್ಲಿ 66 ಕೇಸ್‌ಗಳು ದಾಖಲಾಗಿ, 45 ಜನರು ಸಾವನ್ನಪ್ಪಿದ್ದರು. 2007 ರಲ್ಲಿ ಮತ್ತೆ ಪಶ್ಚಿಮ ಬಂಗಾಳದಲ್ಲಿ ಕಾಣಿಸಿಕೊಂಡ ಈ ವೈರಸ್‌ನಿಂದ ಐದು ಜನರು ಸಾವನ್ನಪ್ಪಿದ್ದರು.

2007ರ ನಂತರ ಹತ್ತು ವರ್ಷಗಳಷ್ಟು ವಿರಾಮ ತೆಗೆದುಕೊಂಡ ಈ ಸೋಂಕು ಮತ್ತೆ 2018ರಲ್ಲಿ ದಾಂಗುಡಿ ಇಟ್ಟದ್ದು ಕೇರಳಕ್ಕೆ.  ಕೋಯಿಕ್ಕೋಡ್‌ (Kozhikode) ಹಾಗೂ ಮಲಪ್ಪುರಂ (Malappuram)ನಲ್ಲಿ 18 ಕೇಸ್‌ಗಳು ಪತ್ತೆಯಾಗಿ, 17ಜನರು ಸಾವನ್ನಪ್ಪಿದ್ದರು. ಇದಾದ ನಂತರದ ವರ್ಷದಲ್ಲಿ ಎರ್ನಾಕುಲಂ (Ernakulam)ನಲ್ಲಿ ಓರ್ವ ವ್ಯಕ್ತಿಗೆ ಸೋಂಕು ತಗುಲಿ ಬದುಕುಳಿದರು. 2021 ರಲ್ಲಿ ಕೇರಳದ ಕೋಯಿಕ್ಕೋಡಿನಲ್ಲಿ ವ್ಯಕ್ತಿಯೋರ್ವರಿಗೆ ಸೋಂಕು ತಗುಲಿ, ಸಾವನ್ನಪ್ಪಿದ್ದರು.

ನಿಪಾ ಒಂದು ಝೂನೋಟಿಕ್ ವೈರಸ್ (zoonotic virus) , ಅಂದರೆ ಪ್ರಾಣಿಗಳಿಂದ ಮನುಷ್ಯರಿಗೆ ಇದು ಹರಡುತ್ತದೆ. ನಿಫಾ ವೈರಸ್‌ ಹಣ್ಣುಗಳನ್ನು ತಿನ್ನುವ ಬಾವಲಿ (bats) ಗಳಿಂದ ಹರಡಿದೆ. ಸೋಂಕಿತ ಆಹಾರ ಸೇವನೆ ಅಥವಾ ನೇರವಾಗಿ ಸೋಂಕಿತರ ಜೊತೆಗೆ ಸಂಪರ್ಕ ಇಟ್ಟುಕೊಂಡರೆ ನಿಫಾ ಹರಡುವ ಸಾಧ್ಯತೆಗಳಿವೆ.  ಮಲೇಷ್ಯಾದಲ್ಲಿ ಮೊದಲ ಬಾರಿಗೆ ನಿಫಾ ಬಂದಾಗ, ಸಿಂಗಾಪುರಕ್ಕೂ ( Singapore) ಹರಡಿತ್ತು. ಆಗ ಹಂದಿಗಳಿಂದ ಮಾನವರಿಗೆ ಈ ಸೋಂಕು ಹರಡಿತು. ಹಂದಿಗಳನ್ನು ಸ್ಪರ್ಷಿಸುವುದರಿಂದ, ಅವುಗಳ ಜೊಲ್ಲು, ಇತರ ಅಂಗಾಶಗಳ ಸ್ಪರ್ಷದಿಂದ ಹರಡಿತು.

ನಿಫಾ ಸೋಂಕು ತಗುಲಿದ ಆರಂಭದಲ್ಲಿ ಜ್ವರ, ತಲೆನೋವು , ಮೈಯಾಲ್ಜಿಯಾ (myalgia) ಅಥವಾ ಸ್ನಾಯು ನೋವು, ವಾಂತಿ ಮತ್ತು ಗಂಟಲು ನೋವು ಮುಂತಾದ ರೋಗಲಕ್ಷಣಗಳನ್ನು ಕಾಣಿಸಿಕೊಳ್ಳುತ್ತದೆ. ಆದರೆ ಯಾವುದೇ ರೋಗ ಲಕ್ಷಣಗಳನ್ನು ತೋರಿಸದೆಯೂ (asymptomatic) ಇರಬಹದು.  

ಆರಂಭಿಕ ಹಂತದಲ್ಲೇ ಸೋಂಕಿತರು ತಲೆತಿರುಗುವಿಕೆ, ಅರೆನಿದ್ರಾವಸ್ಥೆ, ಪ್ರಜ್ಞೆ ಬದಲಾಗುವುದು ಮತ್ತು ತೀವ್ರವಾದ ಎನ್ಸೆಫಾಲಿಟಿಸ್ (ಮೆದುಳಿನ ಉರಿಯೂತ – acute encephalitis) ಮುಂತಾದ ನರ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಕೆಲವರಿಗೆ ನ್ಯುಮೋನಿಯಾ ( pneumonia) ಮತ್ತು ತೀವ್ರವಾದ ಉಸಿರಾಟದ ತೊಂದರೆ ಮತ್ತು ಎನ್ಸೆಫಾಲಿಟಿಸ್ ಸೇರಿದಂತೆ ಉಸಿರಾಟದ ಸಮಸ್ಯೆಗಳು ಬರಬಹುದು. 24 ರಿಂದ 48 ಗಂಟೆಗಳ ಒಳಗೆ ಕೋಮಾಕ್ಕೆ ಹೋಗುವ ಸಾಧ್ಯತೆಯೂ ಇದೆ.

ಸೋಂಕು ಅರಂಭವಾದ ದಿನದಿಂದ ನಾಲ್ಕರಿಂದ ಹದಿನಾಲ್ಕು ದಿನಗಳ ಕಾಲ ಇರುತ್ತದೆ. ಒಮ್ಮೊಮ್ಮೆ 45 ದಿನಗಳ  ಕಾಲ ಕೂಡ ಇರಬಹುದು. ತೀವ್ರವಾದ ಎನ್ಸೆಫಾಲಿಟಿಸ್‌ನಿಂದ ಬದುಕುಳಿದವರು ಚೇತರಿಸಿಕೊಳ್ಳಲು ಸಮಯ ಬೇಕು. ಅವರಿಗೆ ದೀರ್ಘಕಾಲಿಕ ನರ ಸಂಬಂಧಿ ಸಮಸ್ಯೆಗಳು ಬರುವ ಸಾಧ್ಯತೆಗಳೂ ವರದಿಯಾಗಿವೆ. ಪ್ರಸ್ತುತ ನಿಪಾ ವೈರಸ್‌ಗೆ ನಿರ್ದಿಷ್ಟವಾದ ಯಾವುದೇ ಔಷಧಿಗಳು ಅಥವಾ ಲಸಿಕೆಗಳು ಲಭ್ಯವಿಲ್ಲ. ನಿಪಾ ವೈರಸ್ ಸೋಂಕಿತ ಜನರೊಂದಿಗೆ ಅಸುರಕ್ಷಿತ ಸಂಪರ್ಕವನ್ನು ಇಟ್ಟುಕೊಳ್ಳದೇ ಇರುವುದು ಮಾರ್ಗ.

ಕೇರಳವೇ ಯಾಕೆ ಬಲಿಯಾಗುತ್ತಿದೆ?

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ( Indian Council of Medical Research -ICMR) ನ ವಿಜ್ಞಾನಿಯೋರ್ವರು ದಿ ಪ್ರಿಂಟ್‌ಗೆ ನಿಫಾ ವೈರಸ್‌ ಹರಡುವಿಕೆಯ ಬಗ್ಗೆ ರಾಷ್ಟ್ರೀಯ ವೈರಾಲಜಿ ಸಂಸ್ಥೆ ( National Institute of Virology – NIV) ನಡೆಸುತ್ತಿರುವ ಸಂಶೋಧನೆಗಳ ಬಗ್ಗೆ ತಿಳಿಸಿರುವ ಮಾಹಿತಿ ವರದಿಯಾಗಿದೆ. ಬಾವಲಿಗಳ ಕಾರಣದಿಂದಾಗಿ ಭಾರತದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಬಿಹಾರ, ಅಸ್ಸಾಂ, ಮೇಘಾಲಯ, ತಮಿಳುನಾಡು ಮತ್ತು ಗೋವಾ, ಕೇರಳ ಮತ್ತು ಪಶ್ಚಿಮ ಬಂಗಾಳ ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ನಿಫಾ ವೈರಸ್‌ ಹರಡಿರುವ ಬಗ್ಗೆ ತಿಳಿಸಿದ್ದಾರೆ.

“ಈ ಸೋಂಕು ಕೆಲವು ರಾಜ್ಯಗಳಿಗೆ ಮಾತ್ರ ಏಕೆ ಸೀಮಿತವಾಗಿದೆ ಎಂಬ ಪ್ರಶ್ನೆಗೆ ಉತ್ತರವನ್ನು ಅಲ್ಲಿನ ಆಹಾರ ಪದ್ಧತಿ ಅಥವಾ ಪ್ರಾಣಿ-ಮನುಷ್ಯರ ನಡುವಿನ ಸಂಪರ್ಕ ಹಾಗೂ ಸಾಂಸ್ಕೃತಿಕ ಕಾರಣಗಳನ್ನು ನೀಡಿ ಉತ್ತರಿಸಬಹುದು” ಎಂದು ಅವರು ತಿಳಿಸಿದ್ದಾರೆ.

“ಬಾವಲಿಗಳು ಬಹಳ ದೂರ ಹಾರುವುದಿಲ್ಲ. ಅರಣ್ಯನಾಶ ಮತ್ತು ಹವಾಮಾನ ಬದಲಾವಣೆ ಕಾರಣಗಳಿಂದ ಬಾವಲಿಗಳು ಮನುಷ್ಯರಿಗೆ ಹತ್ತಿರವಿದ್ದು ಬದುಕುತ್ತವೆ. ಆ ಪ್ರದೇಶದಲ್ಲಿ ಈ ಬಾವಲಿಗಳಿಂದಲೇ ವೈರಸ್ ಹರಡುವ ಸಾಧ್ಯತೆಯಿದೆ,” ಎಂಬ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಗ್ರೀನ್ ಟೆಂಪಲ್ಟನ್ ಕಾಲೇಜಿನಲ್ಲಿ (Green Templeton College) ಫೆಲೋ ಮತ್ತು ಅಶೋಕ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿರುವ ಹಿರಿಯ ವೈರಾಲಜಿಸ್ಟ್ ಡಾ ಶಾಹಿದ್ ಜಮೀಲ್ (Dr Shahid Jameel) ಅವರ ಅಭಿಪ್ರಾಯವನ್ನು ದಿ ಪ್ರಿಂಟ್‌ ವರದಿ ಮಾಡಿದೆ.

ಜಲೀಲ್‌ ಪ್ರಕಾರ ಈ ಪ್ರದೇಶಗಳ ಜನರು ಬೆಳಗ್ಗೆ ತಾಜಾ ಕಳ್ಳು (ಶೇಂದಿ) ಹಾಗೂ ಹಣ್ಣಿನ ರಸ ಕುಡಿಯುವ ಸಂಸ್ಕೃತಿಯವರು. ಇದೇ ಹಣ್ಣುಗಳಿಗೆ ರಾತ್ರಿ ಬಾವಲಿಗಳು ಬಾಯಿಹಾಕಿರುತ್ತವೆ. ಬಾವಲಿ ಹಾಗೂ ಮಾನವರ ಈ ಸಂಪರ್ಕ ನಿಫಾ ವೈರಸ್‌ ಹರಡಲು ಕಾರಣವಾಗಿರಬಹುದು. ಋತುಮಾನದ ಕಾರಣದಿಂದಾಗಿ ಬಾವಲಿಗಳು ಹೆಚ್ಚು ವೈರಸ್‌ ಹರಡಬಹುದು.

ವಿಧಾನಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಕೇರಳದಲ್ಲಿ ಕಂಡುಬರುವ ವೈರಸ್ ಬಾಂಗ್ಲಾದೇಶದ ರೂಪಾಂತರವಾಗಿದ್ದು, ಇದರಿಂದ ಹೆಚ್ಚಿನ ಮರಣ ಸಂಭಿವಿಸುವ ಸಾಧ್ಯತೆ ಇದೆ ಎಂದಿರುವ ಹೇಳಿಕೆಗಳು ವರದಿಯಾಗಿವೆ.

ಈ ವರೆಗೆ ಮೂರು ವಿಭಿನ್ನ ನಿಪಾ ವೈರಸ್ ರೂಪಾಂತರಗಳನ್ನು ಗುರುತಿಸಲಾಗಿದೆ. ಅವು – ಮಲೇಷ್ಯಾ M ಜೀನೋಟೈಪ್, ಬಾಂಗ್ಲಾದೇಶ B ಜೀನೋಟೈಪ್ ಮತ್ತು ಭಾರತ I ಜೀನೋಟೈಪ್ (Malaysia M genotype, Bangladesh B genotype India I genotype). ಕೇರಳದಲ್ಲಿ ಪತ್ತೆಯಾಗಿರುವುದು ಇಂಡಿಯಾ I ಜೀನೋಟೈಪ್ ಎಂದು ತೋರುತ್ತದೆ” ಎಂದು ಐಸಿಎಂಆರ್‌ ವಿಜ್ಞಾನಿಗಳು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು