Thursday, June 20, 2024

ಸತ್ಯ | ನ್ಯಾಯ |ಧರ್ಮ

ಪರಿಸರ ಸ್ನೇಹಿ ದೀಪಾವಳಿ ಆಚರಣೆ ಇರಲಿ

ಪಟಾಕಿ ಸಿಡಿಸುವುದರಿಂದ ಮಕ್ಕಳಿಗೆ ಗಾಯ, ಪ್ರಾಣಿಗಳಿಗೆ ಹಾನಿಯಾಗುವ ಸುದ್ದಿಗಳನ್ನು ಪತ್ರಿಕೆಗಳಲ್ಲಿ ನೋಡ್ತಾನೇ ಇರುತ್ತೇವೆ. ಹೀಗಾಗಿ ಪಟಾಕಿಗಳ ಬಳಕೆ ಕಡಿಮೆ ಮಾಡಿ, ಮಾಲಿನ್ಯವನ್ನು ಸಹ ಕಡಿಮೆ ಮಾಡಿ ಉತ್ತಮವಾದ ಪರಿಸರ ಸ್ನೇಹಿ ದೀಪಾವಳಿ ಹಬ್ಬದ ಆಚರಣೆಯನ್ನು ಮಾಡೋಣ ಅನ್ನೋದು ನನ್ನ ಆಶಯ – ಅಭಿಷೇಕ್ ಚವ್ಹಾಣ, ವಿಜಯಪುರ

 ಪ್ರತಿ ವರ್ಷದ ಕೊನೆಯಲ್ಲಿ ಬಲು ವಿಜೃಂಭಣೆಯಿಂದ ಆಚರಣೆ ಮಾಡುವ ಹಬ್ಬ ದೀಪಾವಳಿ. ತುಂಬಾ ಸಡಗರದಿಂದ ಮನೆ ಮಂದಿ ಎಲ್ಲರೂ ಸೇರಿ ಮನೆಯನ್ನು ಸ್ವಚ್ಛಗೊಳಿಸಿ ದೀಪಗಳಿಂದ ಅಲಂಕಾರ ಮಾಡುತ್ತಾರೆ ಜೊತೆಗೆ ಮನೆ ಮೇಲೊಂದು ಆಕಾಶ ಬುಟ್ಟಿ ಕಟ್ಟಿ ಅದಕ್ಕೂ ಅಲಂಕಾರ ಮಾಡುತ್ತಾರೆ.  ದೀಪಾವಳಿ ಹಬ್ಬ ಎಂದರೆ ಹಿಂದೆ ನಾವು ಮನೆ ಮಂದಿ ಎಲ್ಲರೂ ಸೇರಿ  ತಮ್ಮ ದುಡಿಮೆಯ ಕೆಲಸಗಳನ್ನು ಬಿಟ್ಟು ಪರಸ್ಪರ ಜೊತೆಗೂಡಿ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಾ ಸಂಭ್ರಮಿಸುವುದು ವಾಡಿಕೆ. ಆದರೆ ಇತ್ತೀಚಿನ ದಿನಗಳಲ್ಲಿ  ಜನರು ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿ ಇಂತಹ ವಿಶೇಷವಾದ ಹಬ್ಬಗಳನ್ನು ಆಚರಿಸದೆ ತಮ್ಮ ಮನೆಮಂದಿಗೆ  ಮಕ್ಕಳಿಗೆ ಸರಿಯಾದ ಸಮಯನ್ನು ಕೊಡದೆ, ಒತ್ತಡದಲ್ಲಿ ಜೀವನವನ್ನು ಸಾಗಿಸುತ್ತಿರುವುದನ್ನು ನೋಡಿ ತುಂಬಾ ವಿಷಾದವೆನಿಸುತ್ತದೆ.

ಮೊನ್ನೆ  ಸುಮ್ನೆ ಹಾಗೇ ಮಾರ್ಕೆಟ್ ಗೆ ಹೋಗಿದ್ದೆ. ಇಡೀ ಮಾರ್ಕೆಟ್ ಜನರಿಂದ ತುಂಬಿತ್ತು. ಹೆಣ್ಣುಮಕ್ಳು, ಗಂಡಮಕ್ಳು ಜೊತೆಗೆ ಮಕ್ಕಳಿಂದ ಹಬ್ಬದ ಖರೀದಿ ಜೋರು  ನಡೆದಿತ್ತು. ಅದರಲ್ಲಿ ಮುಸ್ಲಿಂ ಹಾಗೂ ಇನ್ನೂ ಬೇರೆ ಧರ್ಮದ, ಬೇರೆ ರಾಜ್ಯದ ಜನರು ಪಟಾಕಿ ಅಂಗಡಿ, ಬಟ್ಟೆ ಅಂಗಡಿ, ಸ್ಟೇಷನರಿ ಅಂಗಡಿ, ಹಾಗೂ ಹೂವು ಹಣ್ಣುಗಳ ಅಂಗಡಿಗಳಿಗೆ ಮುಗಿಬಿದ್ದಿದ್ದರು. ನಮ್ಮ ಉತ್ತರ ಕರ್ನಾಟಕದ ಭಾಗದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರು ಸರ್ವೆ ಸಾಮಾನ್ಯವಾಗಿ ಪರಸ್ಪರ ಪ್ರೀತಿ, ಸ್ನೇಹ, ಆತ್ಮೀಯತೆಯಿಂದ   ಹಬ್ಬ ಹರಿದಿನಗಳಲ್ಲಿ ಕೂಡಿ ಸಂಭ್ರಮಿಸುವುದನ್ನು ಹೆಚ್ಚಾಗಿ ನೋಡಬಹುದು. ಯಾವುದೇ ಭೇದ ಇಲ್ಲದೆ, ಯಾವುದೇ ಉಚ್ಚ ನೀಚ ಭಾವ ಇಲ್ಲದೆ ಜನರು ವಸ್ತುಗಳ ಖರೀದಿಯಲ್ಲಿ ತಲ್ಲೀನರಾಗಿರುವುದನ್ನು ನೋಡಿ ತುಂಬಾ ಖುಷಿಯಾಯ್ತು. ಬಹುತ್ವದ ಗಾಳಿಯ ಉಸಿರನ್ನು ತೆಗೆದುಕೊಳ್ಳುತ್ತಾ ಮುಂದೆ ಸಾಗಿದೆ. 

ಹಿಂದಿನ ಕಾಲದಿಂದಲೂ ದೀಪಾವಳಿ ಹಬ್ಬದ ವಿಶೇಷವೇ ಬೇರೆ. ಮನೆ  ಸ್ವಚ್ಛಗೊಳಿಸಿ, ಮನೆ ಮುಂದೆ ರಂಗೋಲಿ ಇಟ್ಟು ಕತ್ತಲಾದಂತೆ ಎಣ್ಣೆಯ  ಹಣತೆ ( ಹಿಟ್ಟಿನಿಂದ ಮಾಡಿದ ಹಣತೆ ಅಥವಾ ಮಣ್ಣಿನ ಹಣತೆ )  ಸಜ್ಜು ಮಾಡಿ ಮನೆ  ಹೊಸ್ತಿಲಿಗೆರಡು ಮನೆಯ ಮಾಡಗಳಲ್ಲಿ ಹಾಗೂ ಮಾಳಿಗೆಯ ಮೇಲೆ ಇಡುತ್ತಿದ್ದೆವು. ಆದರೆ ಕಾಲ ಕ್ರಮೇಣವಾಗಿ ಬದಲಾಗಿ ಎಣ್ಣೆಯ ದೀಪ ಹಾಗೂ ಮಣ್ಣಿನ  ಹಣತೆಗಳು  ಮಾಯವಾಗುತ್ತಿವೆ. ಬದಲಾಗಿ ಕೃತಕವಾದ ಕಲರ್ ಕಲರ್ ವಿದ್ಯುತ್ತಿನ ದೀಪಗಳು, ಸಣ್ಣ ಸಣ್ಣ ಎಲ್ ಇಡಿ ಬಲ್ಬ್ ಗಳು ಬಂದು ನಿಸರ್ಗ ಪ್ರಿಯ ನಮ್ಮ ಹಳೆಯ ದೀಪಾವಳಿ ಸೊಗಡನ್ನು ಮರೆಯಾಗಿಸುತ್ತಿದೆ. ಪಟಾಕಿ ಸಿಡಿಸುವುದರಿಂದ ಮಕ್ಕಳಿಗೆ ಗಾಯ, ಪ್ರಾಣಿಗಳಿಗೆ ಹಾನಿಯಾಗುವ ಸುದ್ದಿಗಳನ್ನು ಪತ್ರಿಕೆಗಳಲ್ಲಿ ನೋಡ್ತಾನೇ ಇರುತ್ತೇವೆ. ಹೀಗಾಗಿ ಪಟಾಕಿಗಳ ಬಳಕೆ ಕಡಿಮೆ ಮಾಡಿ, ಮಾಲಿನ್ಯವನ್ನು ಸಹ ಕಡಿಮೆ ಮಾಡಿ ಉತ್ತಮವಾದ ಪರಿಸರ ಸ್ನೇಹಿ ದೀಪಾವಳಿ ಹಬ್ಬದ ಆಚರಣೆಯನ್ನು ಮಾಡೋಣ ಅನ್ನೋದು ನನ್ನ ಆಶಯ.

ವರ್ಷಗಳು ಕಳೆದಂತೆ ಎಲ್ಲವೂ ಬದಲಾಗುತ್ತಿದೆ. ಬದಲಾವಣೆಯೇ ಪ್ರಕೃತಿ ನಿಯಮ ಹೌದು. ಆದರೆ ನಮ್ಮಿಂದ ಇತರರರು, ಪ್ರಕೃತಿ ಹಾಗೂ ಪ್ರಾಣಿಗಳು ನಮ್ಮೊಡನೆ ಬದುಕುತ್ತಿವೆ ಅನ್ನೋದನ್ನ ಗಮನದಲ್ಲಿಟ್ಟುಕೊಂಡು ಅವರಿಗೆ ತೊಂದರೆಯಾಗದಂತೆ ಮುಂದಿನ ದೀಪಾವಳಿ ಹಬ್ಬವನ್ನು ಆಚರಿಸೋಣ.

ಅಭಿಷೇಕ್ ಚವ್ಹಾಣ, ವಿಜಯಪುರ

ಪತ್ರಿಕೋದ್ಯಮ ವಿದ್ಯಾರ್ಥಿ

ಇದನ್ನೂ ಓದಿ- ಜನ ಮರುಳೋ ಜಾತ್ರೆ ಮರುಳೋ ಹಾಸನಾಂಬಾ

Related Articles

ಇತ್ತೀಚಿನ ಸುದ್ದಿಗಳು