Wednesday, June 19, 2024

ಸತ್ಯ | ನ್ಯಾಯ |ಧರ್ಮ

ಬಿಜೆಪಿಯಿಂದ 2023 ರಲ್ಲಿ ಹೆಚ್ಚು ಹಿಂಸಾಚಾರ ಮತ್ತು ಮೂಲಭೂತ ಹಕ್ಕುಗಳ ದಮನ: ಹ್ಯೂಮನ್ ರೈಟ್ಸ್ ವಾಚ್ ವರದಿ

2023 ರಲ್ಲಿ ಭಾರತೀಯ ಜನತಾ ಪಕ್ಷದ ಆಡಳಿತದಲ್ಲಿ ತಾರತಮ್ಯ ಮತ್ತು ಧ್ರುವೀಕರಣದ ನೀತಿಗಳ ಮೂಲಕ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರವನ್ನು ಹೆಚ್ಚಾಗಿದೆ, ಭಯದ ವಾತಾವರಣ ಸೃಷ್ಟಿಯಾಗಿದೆ ಮತ್ತು ಸರ್ಕಾರವನ್ನು ಟೀಕಿಸುವವರನ್ನು ಹತ್ತಿಕ್ಕಲಾಗುತ್ತಿದೆ ಎಂದು ಹ್ಯೂಮನ್ ರೈಟ್ಸ್ ವಾಚ್ (Human Rights Watch) ತನ್ನ ವಿಶ್ವ ವರದಿಯಲ್ಲಿ ಜನವರಿ 11, 2024 ಗುರುವಾರ ಹೇಳಿದೆ.

ಮೋದಿ ಸರ್ಕಾರವು ನಿರಂತರ ತಾರತಮ್ಯ ಮಾಡುವ ಮೂಲಕ ಹಕ್ಕುಗಳನ್ನು ಗೌರವಿಸುವ ಪ್ರಜಾಪ್ರಭುತ್ವವಾಗಿ ಭಾರತದ ಜಾಗತಿಕ ನಾಯಕತ್ವದ ಆಶಯಗಳನ್ನು ದುರ್ಬಲಗೊಳಿಸಿದೆ ಅದು ಹೇಳಿದೆ. 

“ಅಪರಾಧ ಮಾಡಿದವರನ್ನು  ಹೊಣೆಗಾರರನ್ನಾಗಿ ಮಾಡುವ ಬದಲು, ಅಧಿಕಾರಿಗಳು ಅಪರಾಧಕ್ಕೆ ಬಲಿಯಾದವರನ್ನು ಶಿಕ್ಷಿಸುತ್ತಿದ್ದಾರೆ ಮತ್ತು ಇದನ್ನು ಪ್ರಶ್ನಿಸಿದವರಿಗೆ ಕಿರುಕುಳ ನೀಡಿದ್ದಾರೆ,” ಎಂದು ಹ್ಯೂಮನ್ ರೈಟ್ಸ್ ವಾಚ್‌ನ ಏಷ್ಯಾದ ಉಪ ನಿರ್ದೇಶಕಿ ಮೀನಾಕ್ಷಿ ಗಂಗೂಲಿ ಹೇಳಿದರು.

740 ಪುಟಗಳ ವಿಶ್ವ ವರದಿ 2024 ರ 34 ನೇ ಆವೃತ್ತಿಯಲ್ಲಿ, ಹ್ಯೂಮನ್ ರೈಟ್ಸ್ ವಾಚ್ 100 ಕ್ಕೂ ಹೆಚ್ಚು ದೇಶಗಳಲ್ಲಿ ಮಾನವ ಹಕ್ಕುಗಳ ಸ್ಥಿತಿಗತಿಗಳನ್ನು ಪರಿಶೀಲಿಸಿದೆ. 

ಭಾರತದಲ್ಲಿ ಹಣಕಾಸಿನ ಅಕ್ರಮಗಳ ಆರೋಪ ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ವಿದೇಶಿ ಧನಸಹಾಯವನ್ನು ನಿಯಂತ್ರಿಸುವ ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆಯನ್ನು ಬಳಸಿ  ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಮತ್ತು ಟೀಕಾಕಾರ ಮೇಲೆ ದಾಳಿ ಮಾಡಿ ಕಿರುಕುಳ ನೀಡಿದ್ದಾರೆ.

ಫೆಬ್ರವರಿಯಲ್ಲಿ, ಭಾರತೀಯ ತೆರಿಗೆ ಅಧಿಕಾರಿಗಳು ನವ ದೆಹಲಿ ಮತ್ತು ಮುಂಬೈನಲ್ಲಿರುವ ಬಿಬಿಸಿ ಕಚೇರಿಗಳ ಮೇಲೆ ದಾಳಿ ನಡೆಸಿದರು. 2002 ರ ಗುಜರಾತ್‌ ಗಲಭೆಯ ಬಗ್ಗೆ ʼಇಂಡಿಯಾ: ದಿ ಮೋದಿ ಕ್ವೆಸ್ಚನ್‌ʼ ಎಂಬ ಸಾಕ್ಷ್ಯಚಿತ್ರ ನಿರ್ಮಾಣ ಮಾಡಿದ್ದಕ್ಕಾಗಿ ಪ್ರತೀಕಾರವೆಂಬಂತೆ ಇದನ್ನು ನಡೆಸಲಾಗಿತ್ತು. ದೇಶದ ಮಾಹಿತಿ ತಂತ್ರಜ್ಞಾನ ನಿಯಮಗಳ ಅಡಿಯಲ್ಲಿ ತುರ್ತು ಅಧಿಕಾರವನ್ನು ಬಳಸಿಕೊಂಡು ಸರ್ಕಾರವು ಜನವರಿಯಲ್ಲಿ ಭಾರತದಲ್ಲಿ ಈ BBC ಸಾಕ್ಷ್ಯಚಿತ್ರದ ಎರಡು ಎಪಿಸೋಡ್‌ಗಳನ್ನೂ ನಿಷೇಧಿಸಿತ್ತು.

ವರದಿಯಲ್ಲಿ ಇಂತಹ ಅನೇಕ ಘಟನೆಗಳನ್ನು ಪಟ್ಟಿಮಾಡಲಾಗಿದೆ, ಧಾರ್ಮಿಕ ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯದ ಬಗ್ಗೆ ಎತ್ತಿ ತೋರಿಸಿದೆ.

ಪೀಪಲ್‌ ಮೀಡಿಯಾದ ವಾಟ್ಸಾಪ್‌ ಗುಂಪನ್ನು ಸೇರಲು ಇಲ್ಲಿ ಕ್ಲಿಕ್‌ ಮಾಡಿ: ಪೀಪಲ್ ಮೀಡಿಯಾ

“ಜುಲೈ 31 ರಂದು, ಹರಿಯಾಣ ರಾಜ್ಯದ ನುಹ್ ಜಿಲ್ಲೆಯಲ್ಲಿ ಹಿಂದೂಗಳ ಮೆರವಣಿಗೆಯ ಸಂದರ್ಭದಲ್ಲಿ ಕೋಮು ಹಿಂಸಾಚಾರ (nuh violence) ಭುಗಿಲೆದ್ದಿತು. ಅದು ಹಲವಾರು ಪಕ್ಕದ ಜಿಲ್ಲೆಗಳಿಗೂ ಹರಡಿತು. ಹಿಂಸಾಚಾರದ ನಂತರ, ಅಧಿಕಾರಿಗಳು ನೂರಾರು ಮುಸ್ಲಿಂಮರ ಆಸ್ತಿಗಳನ್ನು ಅಕ್ರಮವಾಗಿ ಕೆಡವುವ ಮೂಲಕ ಮತ್ತು ಮುಸ್ಲಿಂ ಪುರುಷರನ್ನು ಬಂಧಿಸುವ ಮೂಲಕ ಮುಸ್ಲೀಮರ ವಿರುದ್ಧ ಪ್ರತೀಕಾರ ತೀರಿಸಿಕೊಂಡರು. ಈ ವಿಧ್ವಂಸಕ ಘಟನೆಗಳನ್ನು ನೋಡಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಸರ್ಕಾರ “ಜನಾಂಗೀಯ ನಿರ್ಮೂಲನೆ” ನಡೆಸುತ್ತಿದೆಯೇ ಎಂದು ಕೇಳಿತ್ತು ಎಂದು ವರದಿ ಹೇಳಿದೆ.

“ಮೇ ತಿಂಗಳಲ್ಲಿ ಮಣಿಪುರದಲ್ಲಿ, ಬಹುಸಂಖ್ಯಾತ ಮೈತೇಯಿ ಮತ್ತು ಅಲ್ಪಸಂಖ್ಯಾತ ಕುಕಿ ಝೋ ಸಮುದಾಯಗಳ ನಡುವೆ ಹಿಂಸಾಚಾರವು ಭುಗಿಲೆದ್ದು 200 ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟರು, ನೂರಾರು ಜನರು ಸ್ಥಳಾಂತರಗೊಂಡರು, ಮನೆಗಳು ಮತ್ತು ಚರ್ಚ್‌ಗಳು ನಾಶವಾದವು ಮತ್ತು ತಿಂಗಳುಗಳವರೆಗೆ ಇಂಟರ್ನೆಟನ್ನು ಸ್ಥಗಿತಗೊಳಿಸಲಾಯಿತು. ಮಣಿಪುರ ಮುಖ್ಯಮಂತ್ರಿ  ಬಿಜೆಪಿಯ ಎನ್ ಬಿರೇನ್ ಸಿಂಗ್ ಕುಕಿಗಳ ಬಗ್ಗೆ ಅವಮಾನಕಾರಿ ಹೇಳಿಕೆಗಳನ್ನು ನೀಡಿ ಸಮುದಾಯಗಳ ವಿಭಜನೆಗೆ ಉತ್ತೇಜನ ನೀಡಿದರು. ಬಿರೇನ್ ಅವರು‌ ಕುಕಿಗಳು ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿದ್ದಾರೆ, ಮ್ಯಾನ್ಮಾರ್‌ನಿಂದ ನಿರಾಶ್ರಿತರಿಗೆ ಆಶ್ರಯ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದರು, ”ಎಂದು ವರದಿಯಲ್ಲಿ ಹೇಳಲಾಗಿದೆ.

“ಆಗಸ್ಟ್‌ನಲ್ಲಿ, ರಾಜ್ಯ ಪೊಲೀಸರು ‘ಪರಿಸ್ಥಿತಿಯ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಾರೆ’ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಮತ್ತು ಲೈಂಗಿಕ ದೌರ್ಜನ್ಯ ಸೇರಿದಂತೆ ಹಿಂಸಾಚಾರದ ತನಿಖೆಗೆ ವಿಶೇಷ ತಂಡಗಳನ್ನು ರಚಿಸಲು ಆದೇಶಿಸಿತ್ತು. ಸೆಪ್ಟೆಂಬರ್‌ನಲ್ಲಿ, ವಿಶ್ವಸಂಸ್ಥೆಯ (United Nations)  ಹನ್ನೆರಡು ತಜ್ಞರು ಮಣಿಪುರದಲ್ಲಿ (Manipur) ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು, ಸರ್ಕಾರದ ಪ್ರತಿಕ್ರಿಯೆ ನಿಧಾನ ಮತ್ತು ಅಸಮರ್ಪಕವಾಗಿದೆ ಎಂದು ಹೇಳಿದ್ದರು.

ಪೀಪಲ್‌ ಮೀಡಿಯಾದ ವಾಟ್ಸಾಪ್‌ ಗುಂಪನ್ನು ಸೇರಲು ಇಲ್ಲಿ ಕ್ಲಿಕ್‌ ಮಾಡಿ: ಪೀಪಲ್ ಮೀಡಿಯಾ

ಭಾರತೀಯ ಅಧಿಕಾರಿಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ, ಶಾಂತಿಯುತ ಸಭೆ ಮತ್ತು ಇತರ ಹಕ್ಕುಗಳನ್ನು ನಿರಂತರವಾಗಿ ಹತ್ತಿಕ್ಕಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಭದ್ರತಾ ಪಡೆಗಳಿಂದ ಕಾನೂನುಬಾಹಿರ ಹತ್ಯೆಗಳು ವರ್ಷವಿಡೀ ಮುಂದುವರಿದವು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ (Brij Bhushan Singh) ಅವರು ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಒಂದು ದಶಕದ ಅವಧಿಯಲ್ಲಿ ಕನಿಷ್ಠ ಆರು ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ಆರೋಪಕ್ಕೆ ಗುರಿಯಾದ ಪ್ರಕರಣವನ್ನು ಕೂಡಾ ವರದಿಯಲ್ಲಿ ಹೇಳಲಾಗಿದೆ. ನ್ಯಾಯಕ್ಕಾಗಿ ಹೋರಾಡುತ್ತಿದ್ದ, ಮಹಿಳಾ ಕುಸ್ತಿಪಟುಗಳನ್ನು ಭದ್ರತಾ ಪಡೆಗಳು ಬಲವಂತವಾಗಿ ಬಂಧಿಸಿದ್ದರು.

ಸಂಪೂರ್ಣ ವರದಿಯನ್ನು ಇಲ್ಲಿ ಓದಿ: WORLD REPORT 2024 – Our Annual Review Of Human Rights Around The Globe

Related Articles

ಇತ್ತೀಚಿನ ಸುದ್ದಿಗಳು