Wednesday, June 19, 2024

ಸತ್ಯ | ನ್ಯಾಯ |ಧರ್ಮ

ನಿಜವಾದ ಮೋದಿ ದರ್ಶನ!

ನರೇಂದ್ರ ಮೋದಿಯವರಿಗೆ ಯಾವಾಗಲೂ ನಾಟಕೀಯವಾಗಿ ಬದುಕಲು ಸಾಧ್ಯವಿಲ್ಲ. ಅವರನ್ನು ಆಳದಲ್ಲಿ ಕಾಡುವ, ಭಯಭೀತಗೊಳಿಸುವ ಕೀಳರಿಮೆಯ ಫಲವಾಗಿಯೇ ಅವರು ತಮ್ಮ ಇಡೀ ಜೀವನದ ಬಗ್ಗೆ ಸುಳ್ಳಿನ ಕಥನಗಳನ್ನು ಕಟ್ಟಿದರು. ಆದರೆ ಅವೆಲ್ಲವೂ ಸೋಲುವ ದಿನಗಳು ಹತ್ತಿರ ಬರುತ್ತಿದೆ ಎನ್ನುವಾಗ, ತಾನು ಭಾರತದ ಇತಿಹಾಸದಲ್ಲಿ ಅಪ್ರಸ್ತುತನಾಗುತ್ತೇನೆ ಎಂಬ ಭೀತಿ ಕಾಡುವಾಗ ಅವರೊಳಗಿನ ʼನಿಜವಾದ ನರೇಂದ್ರ ಮೋದಿʼ ಆಗಾಗ ಹೊರಗೆ ಬರುತ್ತದೆ. ಈ ʼಮಿಥ್ಯ ನರೇಂದ್ರʼನ ಒಳಗಿನಿಂದ ʼಸತ್ಯ ನರೇಂದ್ರʼ ಹೊರಗೆ ಬಂದದ್ದನ್ನು ನಾವು ಅವರು ರಾಜಸ್ಥಾನದಲ್ಲಿ ಮಾಡಿದ ಚುನಾವಣಾ ಭಾಷಣದಲ್ಲಿ ನೋಡಬಹುದು.

ಈ ಸತ್ಯ ನರೇಂದ್ರನೇ ಮುಸ್ಲೀಂ ದ್ವೇಷದ, ಕೋಮುವಾದಿ ಮೆದುಳಿನ ನರೇಂದ್ರ ಮೋದಿ. ರಾಜಸ್ಥಾನದ ಚುನಾವಣಾ ಭಾಷಣದಲ್ಲಿ ಬಹಿರಂಗವಾಗಿ ಮುಸ್ಲೀಂ ದ್ವೇಷವನ್ನು ಕಾರಿದರು. ಜಾತ್ಯಾತೀತ ದೇಶವೊಂದರ ಘನವೆತ್ತ ಪ್ರಧಾನಿ ಲಜ್ಜೆಯಿಲ್ಲದೆ ಖುಲ್ಲಂಖುಲ್ಲಾಗಿ ಈ ರೀತಿಯ ಭಾಷಣವನ್ನು ಮಾಡುತ್ತಿದ್ದಾರೆ ಎಂದರೆ, ಮುಂದೆ ಗೆದ್ದು ಬಂದರೆ ತಮ್ಮ ಕೋಮುವಾದಿ ಅಜೆಂಡಾಗಳನ್ನು ಹಿಂದಿಗಿಂತಲೂ ಹೆಚ್ಚು ತೀವ್ರಗತಿಯಲ್ಲಿ ಜಾರಿಗೆ ತರುತ್ತಾರೆ.

ಮುಸಲ್ಮಾನರನ್ನು ʼನುಸುಳುಕೋರರುʼ ಎಂದು ಕರೆದ ನರೇಂದ್ರ ಮೋದಿಯವರು ಯಾವುದೇ ಮುಲಾಜು ಇಲ್ಲದೆ ಹಸಿಹಸಿ ಸುಳ್ಳನ್ನು ತಮ್ಮ ಭಾಷಣದಲ್ಲಿ ಹೇಳಿದರು. ಮಾಜೀ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಅವರ ಮಾತುಗಳನ್ನು ತಿರುಚಿ ಇತಿಹಾಸದಲ್ಲಿ ತಮ್ಮ ವ್ಯಕ್ತಿತ್ವದ ಮೇಲೆಯೇ ಮತ್ತೊಮ್ಮೆ ಮಸಿಯನ್ನು ಎರಚಿಕೊಂಡರು.

 ಡಾ. ಮನಮೋಹನ್ ಸಿಂಗ್ ಅವರು “ಮೊದಲ ಹಕ್ಕು ಮುಸ್ಲಿಮರದ್ದು ಎಂದು ಹೇಳಿದರು” ಎಂದು ಮೋದಿಯವರ ಸುಳ್ಳು ಹೇಳಿದಾಗ, ಈ ಸುಳ್ಳಿನ ಸತ್ಯವನ್ನು ಅನೇಕರು ಬಯಲಿಗೆ ಎಳೆದರು.  

ಮೋದಿ ಹೇಳಿದ ಸುಳ್ಳು: ಈ ದೇಶದ ಸಂಪತ್ತಿನ ಮೊದಲ ಅಧಿಕಾರ ಮುಸಲ್ಮಾನರದ್ದು. ಇದರ ಅರ್ಥ, ಸಂಪತ್ತನ್ನು ಸಂಗ್ರಹಿಸಿ ಯಾರಿಗೆ ಹಂಚುತ್ತಾರೆ? ಯಾರಿಗೆ ಹೆಚ್ಚು ಮಕ್ಕಳಿದ್ದಾರೋ ಅವರಿಗೆ ಹಂಚುತ್ತಾರೆ.  ನುಸುಳುಕೋರರಿಗೆ ಹಂಚುತ್ತಾರೆ. ನೀವು ಕಷ್ಟಪಟ್ಟು ಸಂಪಾದಿಸಿದ ಹಣವು ನುಸುಳುಕೋರರಿಗೆ ಹೋಗಬೇಕೇ…?

ಬಹುಶಃ ಭಾರತದ ಇತಿಹಾಸದಲ್ಲಿ ಪ್ರಧಾನಿ ಹುದ್ದೆಯಲ್ಲಿ ಕುಳಿತಿದ್ದ ಓರ್ವ ವ್ಯಕ್ತಿ ಇಷ್ಟು ಕೀಳಾದ ಹೇಳಿಕೆಯನ್ನು ನೀಡಿರುವುದು ಮೊದಲೇ ಇರಬೇಕು. ಹೆಚ್ಚು ಮಕ್ಕಳು ಮಾಡಿದವರು ಎಂದು ನೇರಾನೇರವಾಗಿ ಮುಸಲ್ಮಾನರನ್ನು ಗುರಿಯಾಗಿಸಿ ದ್ವೇಷ ಕಾರಿದ ಮೋದಿಯವರು ತಾವೂ ಸೇರಿದಂತೆ ತಮ್ಮ ಹೆತ್ತವರಿಗೆ ಆರು ಮಕ್ಕಳು ಎಂಬುದನ್ನು ಮರೆತಂತಿದೆ.

ʼನಿಜ ನರೇಂದ್ರʼನ ಈ ದ್ವೇಷಕಾರಿ ಭಾಷಣದ ಅಸಲಿಯತ್ತಿನ ಬಗ್ಗೆ ದೇಶದಲ್ಲಿ ಚರ್ಚೆ ನಡೆದಿದೆ. ಮನಮೋಹನ್‌ ಸಿಂಗ್‌ ಅವರ ಈ ಭಾಷಣದ ಬಗ್ಗೆ 2006ರಲ್ಲಿಯೇ ಸ್ಪಷ್ಟನೆ ನೀಡಲಾಗಿತ್ತು. 

ಮನಮೋಹನ್‌ ಸಿಂಗ್‌ ಅವರ ಭಾಷಣದ ಪೂರ್ಣ ಪಠ್ಯ ಇಲ್ಲಿದೆ :‌ 2006ರ ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ ಪ್ರಧಾನಮಂತ್ರಿಯವರ ಭಾಷಣ

ಇದರಲ್ಲಿ,

“ನಮ್ಮ ಸಾಮೂಹಿಕ ಆದ್ಯತೆಗಳು ಸ್ಪಷ್ಟವಾಗಿವೆ ಎಂದು ನಾನು ನಂಬುತ್ತೇನೆ: ಕೃಷಿ, ನೀರಾವರಿ ಮತ್ತು ಜಲಸಂಪನ್ಮೂಲ, ಆರೋಗ್ಯ, ಶಿಕ್ಷಣ, ಗ್ರಾಮೀಣ ಮೂಲಸೌಕರ್ಯದಲ್ಲಿ ನಿರ್ಣಾಯಕ ಹೂಡಿಕೆ, ಮತ್ತು ಸಾಮಾನ್ಯ ಮೂಲಸೌಕರ್ಯಗಳ ಅಗತ್ಯ ಸಾರ್ವಜನಿಕ ಹೂಡಿಕೆ ಅಗತ್ಯಗಳು, ಜೊತೆಗೆ SC/ST ಗಳು, ಇತರ ಹಿಂದುಳಿದ ವರ್ಗಗಳ ಉನ್ನತಿಗಾಗಿ ಕಾರ್ಯಕ್ರಮಗಳು. , ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ಪಂಗಡಗಳ ಘಟಕ ಯೋಜನೆಗಳನ್ನು ಪುನಶ್ಚೇತನಗೊಳಿಸಬೇಕಾಗಿದೆ, ವಿಶೇಷವಾಗಿ ಮುಸ್ಲಿಂ ಅಲ್ಪಸಂಖ್ಯಾತರು ಅಭಿವೃದ್ಧಿಯ ಫಲವನ್ನು ಸಮಾನವಾಗಿ ಹಂಚಿಕೊಳ್ಳಲು ನಾವು ನವೀನ ಯೋಜನೆಗಳನ್ನು ರೂಪಿಸಬೇಕಾಗಿದೆ. ಅವರು ಸಂಪನ್ಮೂಲಗಳ ಮೇಲಿನ ಮೊದಲ ಹಕ್ಕನ್ನು ಹೊಂದಿರಬೇಕು.

ಇದರಲ್ಲಿ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಇತರ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ಮಹಿಳೆಯರು ಮತ್ತು ಮಕ್ಕಳ ಬಗ್ಗೆ ಮಾತನಾಡುತ್ತಾ, ಮುಸಲ್ಮಾನರನ್ನೂ ಉಲ್ಲೇಖಿಸಿದ್ದಾರೆ. ಆದರೆ ನರೇಂದ್ರ ಮೋದಿಯವರಿಗೆ ಮುಸಲ್ಮಾನರು ಎಂಬುದು ಮಾತ್ರ ಕಂಡಿರುವುದು ಅವರ ಆಂತರ್ಯದಲ್ಲಿ ಇರುವ ಮಾನವ ದ್ವೇಷವನ್ನು ತೋರಿಸುತ್ತದೆ. 

ನೀವು ಮೇಲಿರುವ ಡಾ. ಸಿಂಗ್‌ ಅವರ ಭಾಷಣದ ಪೂರ್ಣ ಪಠ್ಯವನ್ನು ಓದಿದರೆ ಒಂದು ವಿಚಾರ ಸ್ಪಷ್ಟವಾಗುತ್ತದೆ. ಅದೇನೆಂದರೆ, ನರೇಂದ್ರ ಮೋದಿಯವರಿಗೆ ಈ ರೀತಿಯ ಭಾಷಣವನ್ನು ಮಾಡಲು ಸಾಧ್ಯವಿಲ್ಲ. ಅವರಲ್ಲಿ ಅಂತಹ ಪಾಂಡಿತ್ಯವಾಗಲೀ, ದೂರದೃಷ್ಟಿಯಾಗಲೀ ಇಲ್ಲ. ಈ ಕೀಳರಿಮೆ ಅವರನ್ನು ಆಳದಲ್ಲಿ ಘಾಸಿಗೊಳಿಸಿದೆ.

ಯಾವಾಗ ಕೀಳರಿಮೆ ಹೆಚ್ಚಾಗುತ್ತದೆಯೋ, ಆಗ ಮನುಷ್ಯ ಅಡ್ಡದಾರಿಯ ಮೂಲಕ ತನ್ನ ಸುಳ್ಳು ವ್ಯಕ್ತಿತ್ವವನ್ನು ಮರುಕಟ್ಟಲು ಹೆಣಗಾಡುತ್ತಾನೆ. ಈ ಹಂತದಲ್ಲಿ ಸದ್ಯ ನರೇಂದ್ರ ಮೋದಿಯವರು ಇದ್ದಾರೆ. 

ತನ್ನನ್ನು ದೇವರು, ದೈವಾಂಶ ಸಂಭೂತ, ದೇಶದ ಏಕಮೇವಾದ್ವಿತೀಯ ಉದ್ಧಾರಕ ಎಂದು ಅವರು ತಮ್ಮ ಒಳಗೆ ತಮ್ಮದಲ್ಲದ ವ್ಯಕ್ತಿತ್ವವನ್ನು ಬೆಳೆಸಿಕೊಂಡಿದ್ದಾರೆ. ಇದಕ್ಕೆ ಬೇಕಾದಂತೆ ಬದುಕುತ್ತಾರೆ. ನಡೆ ನುಡಿ ಸಾಧು -ಸನ್ಯಾಸಿಯಂತೆ, ಶಾಂತಿಯ ದೂತನಂತೆ ಇರುತ್ತದೆ. ಆದರೆ ಆಂತರ್ಯದಲ್ಲಿ ಇರುವ ನಿಜವಾದ ಮೋದಿ ಓರ್ವ ದ್ವೇಷಕಾರುವ ಮನುಷ್ಯ. ಆದು ಆಗಾಗ ಹತಾಶ ಸ್ಥಿತಿಯಲ್ಲಿದ್ದಾಗ ಹೊರಗೆ ಬರುತ್ತದೆ.

ಈ ವ್ಯಕ್ತಿತ್ವಕ್ಕೆ ಕಾರಣ ಅವರಲ್ಲಿರುವ ʼಮೆಸಿಯಾ ಕಾಂಪ್ಲೆಕ್ಸ್‌ʼ ಎಂಬ ಮಾನಸಿಕ ಸ್ಥಿತಿ. ಈ ಸ್ಥಿತಿಯಲ್ಲಿ ಮನುಷ್ಯ ತಾನೇ ದೇವರಂತೆ ವರ್ತಿಸುತ್ತಾನೆ, ಇಲ್ಲವೇ ದೇವರ ದೂತನಾಗುತ್ತಾನೆ. ಇದು ಆತನ ಒಳಗಿರುವ ಗೊಂದಲ, ಭಯ, ಕೀಳರಿಮೆಯನ್ನು ಅಡಗಿಸಲು ಬೆಳೆಸಿಕೊಳ್ಳುವ ಸುಳ್ಳು ವ್ಯಕ್ತಿತ್ವ. 

Related Articles

ಇತ್ತೀಚಿನ ಸುದ್ದಿಗಳು