Thursday, April 24, 2025

ಸತ್ಯ | ನ್ಯಾಯ |ಧರ್ಮ

ಭಯೋತ್ಪಾದಕ ದಾಳಿಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸುವುದು ಬಿಜೆಪಿಗೆ ಹೊಸದೇನಲ್ಲ!

ಮುಂಬೈ ದಾಳಿಯಾದ ಮೊದಲ ದಿನದಂದು ಬಿಜೆಪಿ ಈ ಸಂದರ್ಭದಲ್ಲಿ ಯುಪಿಎ ಜೊತೆಗೆ ನಿಲ್ಲುವುದಾಗಿ ಘೋಷಿಸಿತು. ಆದರೆ 24 ಗಂಟೆಗಳ ಒಳಗೆ ತನ್ನ ಮಾತನ್ನು ಹಿಂತೆಗೆದುಕೊಂಡಿತು. ಈ ದಾಳಿಯನ್ನು ಸಂಪೂರ್ಣವಾಗಿ ಚುನಾವಣಾ ರಾಜಕಾರಣಕ್ಕೆ ಬಳಸಿಕೊಳ್ಳಲು ತಂತ್ರ ಹೂಡಿತು. ಇದರ ನೇತೃತ್ವ ವಹಿಸಿದ್ದು ನಮ್ಮ ಈಗಿನ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರು

ದೇಶವನ್ನು ಬೆಚ್ಚಿಬೀಳಿಸಿದ, ಅತ್ಯಂತ ಹೇಯವಾದ ಭಯೋತ್ಪಾದಕ ದಾಳಿಯನ್ನು ಪಾಕಿಸ್ತಾನಿ ಉಗ್ರರು ಪಹಲ್ಗಾಮ್ ನಲ್ಲಿ ಏಪ್ರಿಲ್ 24 ರಂದು ನಡೆಸಿದ ನಂತರ, ಉತ್ತರ ಪ್ರದೇಶದ ಕಾನ್ಪುರದಲ್ಲಿ ನಿಗದಿಯಾಗಿದ್ದ ಅಧಿಕೃತ ಸರ್ಕಾರಿ ಕಾರ್ಯಕ್ರಮವನ್ನು ರದ್ದುಗೊಳಿಸಿದ ಪ್ರಧಾನಿ ನರೇಂದ್ರ ಮೋದಿ, 2025 ರ ನವೆಂಬರ್‌ನಲ್ಲಿ ಚುನಾವಣೆ ನಡೆಯಲಿರುವ ಬಿಹಾರಕ್ಕೆ ಭೇಟಿ ನೀಡಿದ್ದಾರೆ.

ʼಬಿಹಾರದ ಮಣ್ಣಿನಲ್ಲಿʼ ನಿಂತು ಭಯೋತ್ಪಾದಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಮೋದಿಯವರು ಭಾಷಣದಲ್ಲಿ ಹೇಳಿದ್ದಾರೆ. “ಕಾನ್ಪುರದ ಧೈರ್ಯಶಾಲಿ ಪುಟ್ಟ ಮಗು ಶುಭಂ ಸೇರಿದಂತೆ ಹಲವಾರು ಜೀವಗಳನ್ನು ಬಲಿತೆಗೆದುಕೊಂಡ ಇತ್ತೀಚಿನ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಮತ್ತು ಜನರ ದುಃಖಿತ ಮನಸ್ಥಿತಿ ಮತ್ತು ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು, ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ” ಎಂದು ಪ್ರಧಾನಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ ಎಂದು ಆಲ್ ಇಂಡಿಯಾ ರೇಡಿಯೋ ವರದಿ ಮಾಡಿತ್ತು.

ಒಂದು ಕಡೆ ಇಂತಹ ನೋವಿನ ಸಂದರ್ಭದಲ್ಲಿ ಕಾನ್ಪುರಕ್ಕೆ ಹೋಗುವುದು ಸರಿಯಲ್ಲ ಎಂದು ನಿರ್ಧರಿಸಿದ ಮೋದಿಯವರು ಬಿಹಾರದ ಮಧುಬನಿಗೆ ಹೋಗಿದ್ದಾರೆ. ಅಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಹಿನ್ನಲೆಯಲ್ಲಿ ಸಾರ್ವಜನಿಕ ಕಾರ್ಯಕ್ರಮ ಮಾಡಿದ್ದಾರೆ. 13,480 ಕೋಟಿ ರುಪಾಯಿಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಿಲಾನ್ಯಾಸ ನೆರವೇರಿಸಿ, ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ.

ಇವತ್ತು ಸರ್ವಪಕ್ಷಗಳ ಸಭೆ ಕೂಡ ನಡೆಯಲಿದೆ. ಸಂಸತ್ತಿನಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷಗಳನ್ನು ಮಾತ್ರ ಆಹ್ವಾನಿಸಲು ಸರ್ಕಾರ ಯೋಜಿಸಿದೆ. ಎಲ್ಲಾ ಪಕ್ಷಗಳ ಒಬ್ಬೊಬ್ಬ ಸದಸ್ಯನನ್ನು ಕರೆದು ಅಭಿಪ್ರಾಯ ಕೇಳಬೇಕು ಎಂದು ವಿಪಕ್ಷಗಳು ಒತ್ತಾಯಿಸುತ್ತಿವೆ. ಈ ಸಭೆಯಲ್ಲಿ ಪ್ರಧಾನಿ ಮೋದಿಯವರು ಭಾಗವಹಿಸುವ ಸಾಧ್ಯತೆ ಇಲ್ಲ, ಅವರು ಬಿಹಾರದಲ್ಲಿ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ನರೇಂದ್ರ ಮೋದಿ ಸರ್ವಪಕ್ಷಗಳ ಸಭೆಯಲ್ಲಿ ಭಾಗವಹಿಸಬೇಕು ಅಂತ ಕಾಂಗ್ರೆಸ್ ಒತ್ತಾಯ ಮಾಡಿದರೂ ಬಿಹಾರ ಹೋಗಿದ್ದಾರೆ.

ನೇರ ಸೌದಿಯಿಂದ ಬಂದು, ತಮ್ಮ ಸಂತಾಪದ ಭಾಗವಾಗಿ ಕಾನ್ಪುರದ ಬೇಟಿಯನ್ನು ಮೊಟುಕುಗೊಳಿಸಿ, ಸರ್ವಪಕ್ಷಗಳ ಸಭೆಯನ್ನೂ ನಿರ್ಲಕ್ಷಿಸಿ, ಬಿಹಾರಕ್ಕೆ ಹೋದ ಮೋದಿಯವರು ಸೌದಿಯಿಂದ ಬಂದಿದ್ದಾದರು ಯಾಕೆ?

ಬಿಜೆಪಿ ಮತ್ತು ಪ್ರಧಾನಿ ಪಹಲ್ಗಾಮ್ ದಾಳಿಯನ್ನು ತಮ್ಮ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರಾ? ಈ ಪ್ರಶ್ನೆಯನ್ನು ಅನೇಕ ಜನರು ಕೇಳುತ್ತಿದ್ದಾರೆ. ಆದರೆ, ಜನರು ಭಾವನಾತ್ಮಕವಾಗಿ ಪ್ರತಿಕ್ರಿಯಿಸುವ ವಾತಾವರಣವನ್ನು ಸೃಷ್ಟಿ ಮಾಡಿ, ಹೊಣೆಗಾರ ಸರಕಾರ ತನ್ನ ಹಾಸಿಗೆಯ ಮೇಲೆ ಭದ್ರವಾಗಿ ಕೂರುತ್ತದೆ. ಈ ಹಿನ್ನಲೆಯಲ್ಲಿ 2008 ರ ಮುಂಬೈ ದಾಳಿಯ ಸಂದರ್ಭದಲ್ಲಿ, ಇಡೀ ದಾಳಿಯನ್ನು ಬಿಜೆಪಿ ಚುನಾವಣಾ ಪ್ರಚಾರಕ್ಕಾಗಿ ಬಳಸಿಕೊಂಡ ರೀತಿಯನ್ನು ನಾವು ನೆನಪಿಸಿಕೊಳ್ಳಬೇಕು.

ಇದು ನವೆಂಬರ್ 28, 2008 ರಂದು ಮುಂಬೈಯಲ್ಲಿ ನಡೆದ ಭೀಕರ ದಾಳಿಯನ್ನು ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳಲು ಬಿಜೆಪಿ ರಾಷ್ಟ್ರೀಯ ಪತ್ರಿಕೆಗಳಲ್ಲಿ ನೀಡಿದ ಜಾಹೀರಾತು.

ಮುಂಬೈ ದಾಳಿಯಾದ ಮೊದಲ ದಿನದಂದು ಬಿಜೆಪಿ ಈ ಸಂದರ್ಭದಲ್ಲಿ ಯುಪಿಎ ಜೊತೆಗೆ ನಿಲ್ಲುವುದಾಗಿ ಘೋಷಿಸಿತು. ಆದರೆ 24 ಗಂಟೆಗಳ ಒಳಗೆ ತನ್ನ ಮಾತನ್ನು ಹಿಂತೆಗೆದುಕೊಂಡಿತು. ಈ ದಾಳಿಯನ್ನು ಸಂಪೂರ್ಣವಾಗಿ ಚುನಾವಣಾ ರಾಜಕಾರಣಕ್ಕೆ ಬಳಸಿಕೊಳ್ಳಲು ತಂತ್ರ ಹೂಡಿತು. ಇದು ನವೆಂಬರ್ 28, 2008 ರಂದು ಮುಂಬೈಯಲ್ಲಿ ನಡೆದ ಭೀಕರ ದಾಳಿಯನ್ನು ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳಲು ಬಿಜೆಪಿ ರಾಷ್ಟ್ರೀಯ ಪತ್ರಿಕೆಗಳಲ್ಲಿ ನೀಡಿದ ಜಾಹೀರಾತು. ಇದರ ನೇತೃತ್ವ ವಹಿಸಿದ್ದು ನಮ್ಮ ಈಗಿನ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರು.

ನವೆಂಬರ್ 28 ರಂದು, ಮುಂಬೈ ದಾಳಿಯ ವಿರುದ್ಧ ಜನಾಕ್ರೋಶ ಹೆಚ್ಚಾಗುತ್ತಿತ್ತು. ದೇಶವೇ ಯುಪಿಎ ಸರ್ಕಾರದ ವಿರುದ್ಧ ಕೋಪವನ್ನು ತೋರಿಸುತ್ತಿತ್ತು. ಜನರು ಭದ್ರತಾ ವೈಫಲ್ಯವನ್ನು ಪ್ರಶ್ನೆ ಮಾಡುತ್ತಿದ್ದರು. ಆದರೆ ಬಿಜೆಪಿ ತನ್ನ ಜವಬ್ದಾರಿಯಾದ ಕೇಂದ್ರ ಸರ್ಕಾರವನ್ನು ಪ್ರಶ್ನಿಸುವ ಬದಲು ʼನಮಗೆ ಓಟ್‌ ಹಾಕಿʼ ಎಂದು ಅಮಾಯಕರ ರಕ್ತದ ಮಡುವಿನಲ್ಲಿಯೇ ಚುನಾವಣಾ ಪ್ರಚಾರವನ್ನು ಆರಂಭಿಸಿತು.  

ಆ ಸಮಯದಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ, ದಾಳಿಯ ಸ್ಥಳಗಳಲ್ಲಿ ಒಂದಾದ ಒಬೆರಾಯ್ ಟ್ರೈಡೆಂಟ್ ಹೋಟೆಲ್‌ನ ಹೊರಗಿನಿಂದ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲು ಮುಂಬೈಗೆ ಬಂದರು. ಎಂತಾ ದುರ್ದೈವ ನೋಡಿ, ತನ್ನ ಆಡಳಿತದಲ್ಲಿ ಪಹಲ್ಗಾಮ್ ನಂತಹ ಒಂದು ಭೀಕರ ದಾಳಿಯಾದಾಗಲೂ ಒಂದೇ ಒಂದು ಅಧಿಕೃತ ಪತ್ರಿಕಾಗೋಷ್ಟಿ ನಡೆಸಲಿಲ್ಲ!

ಮುಂಬೈ ದಾಳಿ ನಡೆದು ಮೂರೇ ದಿನದಲ್ಲಿ, ಅಂದರೆ ನವೆಂಬರ್ 29 ಮತ್ತು ಡಿಸೆಂಬರ್ 4 ರಂದು ಕ್ರಮವಾಗಿ ಚುನಾವಣೆಗೆ ಸಜ್ಜಾಗುತ್ತಿದ್ದ ದೆಹಲಿ ಮತ್ತು ರಾಜಸ್ಥಾನಕ್ಕೆ ಭಾಷಣ ಮಾಡಲು ಹೋದರು. ಅದೇ ದಿನ ಬಿಜೆಪಿ  ರಾಷ್ಟ್ರ ಮಟ್ಟದ ಪತ್ರಿಕೆಗಳಲ್ಲಿ ಮುಂಬೈ ದಾಳಿಯನ್ನು ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳುವ ಜಾಹೀರಾತುಗಳನ್ನು ಬಿಡುಗಡೆ ಮಾಡಿತು.

ಕಪ್ಪು ಹಿನ್ನಲೆಯ ಮೇಲೆ, ಮುಂಬೈ ರಕ್ತಪಾತವನ್ನು ಸೂಚಿಸುವ ರಕ್ತದ ಕೆಂಬಣ್ಣವನ್ನು ಹರಡಿಸಿ, ಅದರ ಮೇಲೆ “Brutal Terror Strikes at Will, Weak Government, Unwilling and Incapable, ಭಯೋತ್ಪಾದನೆಯ ವಿರುದ್ಧ ಹೋರಾಡಿ. ಬಿಜೆಪಿಗೆ ಮತ ಹಾಕಿ” ಎಂದು ಆ ಜಾಹೀರಾತು ನೀಡಿತು.

ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ಈ ಪತ್ರಿಕಾ ಜಾಹೀರಾತು ನೀಡಿದಕ್ಕಾಗಿ ಚುನಾವಣಾ ಆಯೋಗ ಛೀಮಾರಿ ಹಾಕಿತು, ಇವು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿವೆ ಎಂದು ಹೇಳಿತು. ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ಬರೆದ ಪತ್ರದಲ್ಲಿ, ಪಕ್ಷದ ಪ್ರಚಾರ ಜಾಹೀರಾತುಗಳಲ್ಲಿನ ಕೆಲವು ಹೇಳಿಕೆಗಳು ಮಾದರಿ ಚುನಾವಣಾ ನೀತಿ ಸಂಹಿತೆಯ ಅಕ್ಷರ ಮತ್ತು ಆಶಯವನ್ನು ಉಲ್ಲಂಘಿಸುತ್ತವೆ ಎಂದು ಆಯೋಗ ತಿಳಿಸಿತ್ತು.

ಪುಲ್ವಾಮ ಮತ್ತು ಈಗ ನಡೆದಿರುವ ಪಹಲ್ಗಾಮ್  ಉಗ್ರರ ದಾಳಿಯ ಬಗ್ಗೆ ಸರ್ಕಾರವನ್ನು ಪ್ರಶ್ನೆ ಮಾಡುವವರನ್ನು ಗೋದಿ ಮೀಡಿಯಾಗಳು ಸೇರಿದಂತೆ, ಈ ಸಂದರ್ಭದಲ್ಲೂ ದೇಶದ ರಕ್ಷಣೆಯ ಬದಲಾಗಿ ಬಿಜೆಪಿಯ ಗುರಾಣಿಯಂತೆ ಕೆಲಸ ಮಾಡುವ ಅವರ ಬೆಂಬಲಿಗರು ಒಂದು ಘಟನೆಯನ್ನು ನೆನಪಿಡಬೇಕು.

ಮುಂಬೈ ದಾಳಿಯ ಮಾರನೇ ದಿನ, ಅಂದರೆ 2008 ರ ನವೆಂಬರ್ 27 ರಂದು ಇದೇ ಮೋದಿ ಭಯೋತ್ಪಾದಕ ದಾಲಿಯ ವಿಚಾರವಾಗಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರವೊಂದನ್ನು ಬರೆದಿದ್ದರು. ಆಂತರಿಕ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಲು ಸಿಂಗ್ ಎಲ್ಲಾ ಮುಖ್ಯಮಂತ್ರಿಗಳ, ವಿಶೇಷವಾಗಿ ಕರಾವಳಿ ಮತ್ತು ಗಡಿ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಕರೆಯಬೇಕೆಂದು ಅವರು ಸೂಚಿಸಿದರು. ಭಾರತದ ದುರ್ಬಲ ಸಮುದ್ರ ಭದ್ರತೆಯ ಬಗ್ಗೆಯೂ ಅವರು ಮಾತನಾಡಿದರು.

ಈ ಪತ್ರ ಒಂದು ದಿನದಲ್ಲಿ ಬಹಿರಂಗವಾಯಿತು. ಈ ಪತ್ರ ಬರೆಯುತ್ತಿದ್ದ ಸಂದರ್ಭದಲ್ಲಿ ಮೋದಿಜಿ ಯುಪಿಎ ಸರ್ಕಾರಕ್ಕೆ ಸಲಹೆಗಳನ್ನು ನೀಡುತ್ತಾ, ಆ ಸಂದರ್ಭದಲ್ಲಿ ಸರ್ಕಾರದ ಜೊತೆಗೆ ನಿಲ್ಲುವ ಯೋಚನೆಯಲ್ಲಿದ್ದರು. ಆ ದಿನ, ಆಗ ವಿರೋಧ ಪಕ್ಷದ ನಾಯಕ ಮತ್ತು 2009 ರ ಲೋಕಸಭಾ ಚುನಾವಣೆಗೆ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿದ್ದ ಎಲ್.ಕೆ. ಅಡ್ವಾಣಿ ಮಾಧ್ಯಮಗಳ ಮುಂದೆ ಬಂದು , “ಶಾಂತಿ, ನೆಮ್ಮದಿ, ಕೋಮು ಸಾಮರಸ್ಯ ಮತ್ತು ದೇಶಭಕ್ತಿಯ ಏಕತೆಯನ್ನು ಕಾಪಾಡಿಕೊಳ್ಳುವುದು ನಮ್ಮ ಅತ್ಯುನ್ನತ ಆದ್ಯತೆಯಾಗಿರಬೇಕು” ಎಂದು ಹೇಳಿದರು.

ಆದರೆ ಮರುದಿನವೇ ಕತೆ ಉಲ್ಟಾ ಹೊಡೆದಿತ್ತು. ಬಿಜೆಪಿ ಲಜ್ಜೆಗೆಟ್ಟು ಇಂತಹ ಒಂದು ಜಾಹೀರಾತುಗಳನ್ನು ಬಿಡುಗಡೆ ಮಾಡಿತು. ಪಕ್ಷವು ತನ್ನ ಹಿಂದಿ ಜಾಹೀರಾತಿನಲ್ಲಿ, “ಹುತಾತ್ಮರ ತ್ಯಾಗಗಳನ್ನು ನೆನಪಿಸಿಕೊಳ್ಳಿ” ಎಂದೂ, ಮತ್ತೊಂದು ಜಾಹೀರಾತಿನಲ್ಲಿ ಮಾಜಿ ಪ್ರಧಾನಿ ಮತ್ತು ಬಿಜೆಪಿಯ ದಿಗ್ಗಜ ಅಟಲ್ ಬಿಹಾರಿ ವಾಜಪೇಯಿ ಅವರ ಮುಕ್ತ ಪತ್ರವನ್ನೂ ಪ್ರಕಟಿಸಿತ್ತು. ಅದರಲ್ಲಿ “ಭಯೋತ್ಪಾದನೆ ಎಸೆದ ಸವಾಲನ್ನು ಒಟ್ಟಾಗಿ ಎದುರಿಸಬೇಕು. “ಸಾಂಪ್ರದಾಯಿಕ ಸಹೋದರತ್ವ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳುತ್ತಾ, ಭಯೋತ್ಪಾದನೆಯ ವಿರುದ್ಧ ಹೋರಾಡಬಲ್ಲ ಸರ್ಕಾರವನ್ನು ನಾವು ಆಯ್ಕೆ ಮಾಡಬೇಕು,” ಎಂದು ವಾಜಪೇಯಿ ಬರೆದಿದ್ದರು.

ಆ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಇದ್ದಂತ ಜನಾಕ್ರೋಶವನ್ನು ಕಂಡು, ಸರ್ಕಾರದ ವೈಫಲ್ಯಗಳ ವಿರುದ್ಧ ಅಭಿಯಾನ ನಡೆಸಲು ಬಿಜೆಪಿಗೆ ಒಂದು ಮುಖ ಬೇಕಾಗಿತ್ತು. ಅದುವೇ ನರೇಂದ್ರ ಮೋದಿ. ಹೀಗಾಗಿ, ಸರ್ಕಾರಕ್ಕೆ ಪತ್ರ ಬರೆದು ಸಲಹೆ ನೀಡಿದ್ದ ಮೋದಿ ನವೆಂಬರ್ 28 ರಂದು ಗುಜರಾತ್‌ನಿಂದ ಮುಂಬೈಗೆ ಬಂದು ಒಬೆರಾಯ್ ಟ್ರೈಡೆಂಟ್‌ನಲ್ಲಿ ಮಾಡಿದ ಭಾಷಣ ಮಾಡಿದರು. ಸಿಂಗ್‌ ಅವರು ದಾಳಿಯ ನಂತರ ಉದ್ದೇಶಿಸಿ ಮಾಡಿದ ಭಾಷಣ  “ನಿರಾಶಾದಾಯಕ” ಎಂದು ಪತ್ರಕರ್ತರಿಗೆ ಮೋದಿ ತಿಳಿಸಿದರು. ಸಿಂಗ್‌ಗೆ ಬರೆದ ಪತ್ರದ ಬಗ್ಗೆಯೂ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು ಮತ್ತು ಭಾರತದ ಸಮುದ್ರ ಭದ್ರತೆಗೆ ಸಂಬಂಧಿಸಿದ ಪತ್ರದಲ್ಲಿದ್ದ ಮಾಹಿತಿಗಳನ್ನು ಮತ್ತೆ ಹೇಳಿದರು.  

ಪಾಕಿಸ್ತಾನದ ದುಷ್ಟ ತಂತ್ರಗಳ ಎಚ್ಚರಿಕೆಯನ್ನು ಯುಪಿಎ ಸರ್ಕಾರ ನಿರ್ಲಕ್ಷಿಸಿದೆ ಎಂದು ಮೋದಿ ಆರೋಪಿಸಿದರು, ಪಾಕಿಸ್ತಾನಿ ನೌಕಾಪಡೆಗಳು ಗುಜರಾತಿ ಮೀನುಗಾರರನ್ನು ಬಂಧಿಸಿ, ಅವರನ್ನು ಬಿಡುಗಡೆ ಮಾಡಿದ ಮೇಲೂ ಅವರ ದೋಣಿಗಳನ್ನು ವಶಪಡಿಸಿಕೊಳ್ಳುತ್ತಿವೆ ಎಂಬ ಬಗ್ಗೆ ಮೋದಿ ಮಾತನಾಡಿದರು. “ದೋಣಿಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ನಾನು ಸರ್ಕಾರಕ್ಕೆ ಸೂಚಿಸಿದ್ದೆ” ಎಂದು ಮೋದಿ ಹೇಳಿದರು.

ಇಡೀ ಮುಂಬೈ ದಾಳಿಯಲ್ಲಿ ಸರ್ಕಾರವನ್ನು ಪ್ರಶ್ನಿಸಿದ ಬಿಜೆಪಿಯೇ ಈಗಿನ ದಾಳಿಯಲ್ಲಿ ತನ್ನನ್ನು ಯಾರೇ ಪ್ರಶ್ನಿಸಿದರೂ ದೇಶದ್ರೋಹಿಗಳು ಎಂದು ನಕಲಿ ದೇಶಪ್ರೇಮದ ಆಟವನ್ನು ಆಡುತ್ತಿದೆ.

ಮುಂಬೈ ದಾಳಿಯಲ್ಲಿ ಮೃತಪಟ್ಟ ಪೊಲೀಸ್ ಸಿಬ್ಬಂದಿಯ ಸಂಬಂಧಿಕರಿಗೆ ವಿತರಿಸಲು ಗುಜರಾತ್ ಸರ್ಕಾರವು ಮಹಾರಾಷ್ಟ್ರ ಸರ್ಕಾರಕ್ಕೆ 1 ಕೋಟಿ ರುಪಾಯಿಗಳನ್ನು ದೇಣಿಗೆ ನೀಡಿದೆ ಎಂದು ಮೋದಿ ತಮ್ಮ ಭಾಷಣದಲ್ಲಿ ಘೋಷಿಸಿದರು. ಹುತಾತ್ಮರಲ್ಲಿ ಮಹಾರಾಷ್ಟ್ರ ಪೊಲೀಸ್‌ನ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥರಾಗಿದ್ದ ಹೇಮಂತ್ ಕರ್ಕರೆ ಕೂಡ ಒಬ್ಬರಾಗಿದ್ದರು.

ಕರ್ಕರೆಯವರ ಕುಟುಂಬ ಯಾರನ್ನೂ ಬೇಟಿ ಮಾಡಲು ಒಪ್ಪದಿದ್ದರೂ, ಮೋದಿ ಮಾತ್ರ ಅವರ ಮನೆಗೆ ಹೋಗಿ ಸಂತ್ವಾನ ಹೇಳಿ ಬಂದರು.  ಆದರೆ ಕರ್ಕರೆ ಪತ್ನಿ ಕವಿತಾ ಕರ್ಕರೆಯವರು ಮೋದಿಯವರ ಒಂದು ಕೋಟಿ ರುಪಾಯಿಗಳ ಆಫರನ್ನು ನಿರಾಕರಿಸಿದರು.

ಇದಕ್ಕೆ ಕಾರಣವೆಂದರೆ, ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥರಾಗಿದ್ದ ಕರ್ಕರೆ ಅವರು ಸೆಪ್ಟೆಂಬರ್ 2008 ರಲ್ಲಿ ಮಹಾರಾಷ್ಟ್ರದ ಮಾಲೇಗಾಂವ್‌ನಲ್ಲಿ ನಡೆದ ಬಾಂಬ್ ಸ್ಫೋಟಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರ ಪಾತ್ರವಿದೆ ಎಂದು ಬಹಿರಂಗವಾಗಿ ಹೇಳಿದ್ದರು. ಆಗ ಬಿಜೆಪಿ ನಾಯಕರು ಯುಪಿಎ ಸರ್ಕಾರದ ಒತ್ತಡದಿಂದಾಗಿ ಆರ್‌ಎಸ್‌ಎಸ್‌ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಪ್ರತಿಕ್ರಿಯೆ ಕೊಟ್ಟರು.  

ನವೆಂಬರ್ 28 ರಂದು, ಅಡ್ವಾಣಿ ಪತ್ರಿಕೆಗಳಿಗೆ ನೀಡಿದ ಹೇಳಿಕೆಯಲ್ಲಿ, “ಒಬ್ಬ ಭಯೋತ್ಪಾದಕನ ಮೊಬೈಲ್ ಫೋನ್ ಪಾಕಿಸ್ತಾನಿ ಮೂಲದದ್ದಾಗಿ ಈಗ ಕಂಡುಬರುತ್ತಿದೆ. ʼಹಿಂದೂ ಭಯೋತ್ಪಾದನೆʼಯ ಬಗ್ಗೆ ಗುಪ್ತಚರ ಸಂಸ್ಥೆಗಳು ಕಾಳಜಿ ವಹಿಸಿದ್ದರಿಂದ ಭಯೋತ್ಪಾದಕರ ಸಂಚು ಪತ್ತೆಯಾಗದೆ ಹೋಗಿದೆ ಎಂದು ದಾಳಿಗೆ ಗುಪ್ತಚರ ಸಂಸ್ಥೆಗಳನ್ನು ದೂಷಿಸಿದರು.

ಹಿಂದಿನ ದಿನ, ಸಿಂಗ್ ಅವರು ಅಡ್ವಾಣಿಯವರಿಗೆ ಆಹ್ವಾನ ನೀಡಿ, ಇಬ್ಬರೂ ಜಂಟಿಯಾಗಿ ಮುಂಬೈಗೆ ಭೇಟಿ ನೀಡಿ ಭಾರತೀಯ ರಾಜಕೀಯ ವರ್ಗದ ನಡುವಿನ ಐಕ್ಯತೆಯನ್ನು ಪ್ರದರ್ಶಿಸಲು ಆ ದಿನ ರಾಷ್ಟ್ರವನ್ನುದ್ದೇಶಿಸಿ ಮಾತನಾಡುವಂತೆ ಸೂಚಿಸಿದ್ದರು. ಆದರೆ ಆ ಜಂಟಿ ಭೇಟಿ ಎಂದಿಗೂ ನಡೆಯಲಿಲ್ಲ. ಅಡ್ವಾಣಿ ತಮ್ಮ ಹೇಳಿಕೆಯಲ್ಲಿ ವಿವರಿಸಿದರು, “ಪ್ರಧಾನಿಯವರು ನಾವು ಒಟ್ಟಿಗೆ ಮುಂಬೈಗೆ ಹೋಗಬೇಕೆಂದು ಸೂಚಿಸಿದ್ದರು. ನನ್ನ ಪ್ರಯಾಣ ಯೋಜನೆಗಳನ್ನು ಮುಂದೂಡುತ್ತಾ ನಾನು ತಕ್ಷಣ ಒಪ್ಪಿಕೊಂಡಿದ್ದೆ. ಆದರೆ ಮಧ್ಯಾಹ್ನ, ಕಮಾಂಡೋ ಕಾರ್ಯಾಚರಣೆಗಳು ಇನ್ನೂ ಮುಗಿದಿಲ್ಲದ ಕಾರಣ ಶುಕ್ರವಾರ [ನವೆಂಬರ್ 28] ಹೋಗುವುದು ಉತ್ತಮ ಎಂದು ನನಗೆ ತಿಳಿಸಲಾಯಿತು,” ಎಂದು ಹೇಳಿ ವಿಫಲವಾದ ಭೇಟಿಯ ಹೊಣೆಯನ್ನು ಸಿಂಗ್ ಮೇಲೆ ಹೊರಿಸಿದರು.

ಆದರೆ, ಇಡೀ ದಾಳಿಯನ್ನು ತಮ್ಮ ಚುನಾವಣಾ ಪ್ರಚಾರವಾಗಿ ಬಿಜೆಪಿ ಬಳಸಿಕೊಂಡು, ಪತ್ರಿಕೆಗಳಿಗೆ ಜಾಹೀರಾತುಗಳನ್ನು ನೀಡಿರುವಾಗ ಮನಮೋಹನ್‌ ಸಿಂಗ್‌ ಅಡ್ವಾಣಿಯನ್ನು ತಮ್ಮೊಂದಿಗೆ ಕರೆದುಕೊಂಡು ಹೇಗೆ ಹೋಗಲು ಸಾಧ್ಯ?

ಮುಂಬೈ ದಾಳಿಯಾಗಿ ಹತ್ತು ವರ್ಷಗಳಾದ ಮೇಲೆ ಮಿಂಟ್‌ – ಮಾಧ್ಯಮ ಒಂದು ವರದಿಯನ್ನು ಮಾಡಿತ್ತು. ಆಗ, ದಾಳಿಯ ಸಂದರ್ಭದಲ್ಲಿ ಬಿಜೆಪಿ ಯೂಟರ್ನ್‌ ಹೊಡೆದ ಬಗ್ಗೆ ಕೇಳಿದಾಗ ಬಿಜೆಪಿ ನಾಯಕರೊಬ್ಬರು “ಅಡ್ವಾಣಿಜೀ ಸೇರಿದಂತೆ ನಮ್ಮ ಯಾವುದೇ ಹಿರಿಯ ನಾಯಕರು ಇಷ್ಟು ಬೇಗ ಮುಂಬೈಗೆ ಬಂದು ಇಲ್ಲಿಯೇ ಸ್ಥಾನಮಾನ ಪಡೆಯಲು ಬಯಸಲಿಲ್ಲ. ಅವರು ಅದನ್ನು ದೆಹಲಿಯಲ್ಲಿ ಮಾಡಿದರು, ಆದರೆ ಮುಂಬೈನಲ್ಲಿ ಯಾರನ್ನಾದರೂ ನೋಡಬೇಕಾಗಿತ್ತು. ಹಾಗಾಗಿ ಗೋಪಿನಾಥ್ ಮುಂಡೆಯವರು ಮೋದಿಜಿಯನ್ನು ಸಂಪರ್ಕಿಸಿದರು, ಅವರು ಬರಲು ಒಪ್ಪಿದರು,” ಎಂದು ಹೇಳಿರುವುದು ವರದಿಯಾಗಿದೆ. 2008 ರ ದಾಳಿಯನ್ನು ಮೋದಿಜಿ ತಮ್ಮ ಪ್ರಧಾನಿಯಾಗುವ ಕನಸಿಗೆ ಒಂದು ಕ್ಯಟಲಿಸ್ಟ್‌ ಆಗಿ ಬಳಸಿಕೊಂಡರು.   

ರಾಜಸ್ಥಾನದಲ್ಲಿ, ಬಿಜೆಪಿ ಮುಂಬೈ ದಾಳಿಯನ್ನು ಬಳಸಿಕೊಂಡು ಮತಗಳನ್ನು ಗಳಿಸಲು ಪ್ರಯತ್ನಿಸಿತು. ನವೆಂಬರ್ 29, 2008 ರಂದು ಪ್ರಕಟವಾದ ಇಂಡಿಯಾ ಟುಡೇಯಲ್ಲಿ ವರದಿಯಾದಂತೆ, ಕೇಂದ್ರ ಸರ್ಕಾರದ ಭಯೋತ್ಪಾದಕ ದಾಳಿಗಳನ್ನು ತಡೆಯುವಲ್ಲಿ ಅಸಮರ್ಥತೆಯನ್ನು ಪ್ರತಿಭಟಿಸಲು ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ “ಭಯೋತ್ಪಾದನೆಯ ಪ್ರತಿಕೃತಿಗಳನ್ನು” ಸುಡುವ ಪಕ್ಷದ ಯೋಜನೆಗಳನ್ನು ಬಿಜೆಪಿ ಹಾಕಿಕೊಂಡಿತು. ಭಯೋತ್ಪಾದಕ ದಾಳಿಗಳನ್ನು ಕಾಂಗ್ರೆಸ್‌ನ ಅಲ್ಪಸಂಖ್ಯಾತ ಪರವಾದ ನಿಲುವಿಗೆ ಜೋಡಿಸಲು ಸಂಘಟಿತ ಪ್ರಯತ್ನವೂ ನಡೆಯಿತು. ಉದಾಹರಣೆಗೆ, ನವೆಂಬರ್ 29 ರ ಇಂಡಿಯಾ ಟುಡೇ ವರದಿಯು ರಾಜ್ಯದ ಹಿರಿಯ ಬಿಜೆಪಿ ನಾಯಕ ರಾಮದಾಸ್ ಅಗರ್ವಾಲ್ ಅವರ ಹೇಳಿಕೆಯನ್ನು ಉಲ್ಲೇಖಿಸಿ, “ಕಾಂಗ್ರೆಸ್‌ಗೆ ಓಲೈಸುವ ಇತಿಹಾಸವಿದೆ. ಅವರು ಭಯೋತ್ಪಾದನೆಯ ಮೇಲೆ ಮೃದುವಾಗಿ ವರ್ತಿಸುವ ಮೂಲಕ ದೇಶವನ್ನು ಹಾಳುಮಾಡುತ್ತಾರೆ,” ಎಂದು ವರದಿ ಮಾಡಿತ್ತು.

ಮುಂಬೈ ದಾಳಿಯ ದುರಂತವನ್ನು ಮತಗಳಾಗಿ ಪರಿವರ್ತಿಸಲು ಮೋದಿ, ಅಡ್ವಾಣಿ ಮತ್ತು ಬಿಜೆಪಿ ಪ್ರಯತ್ನಿಸಿದ ರೀತಿಗೆ ಹೋಲಿಸಿದರೆ, ಪುಲ್ವಾಮಾ ದಾಳಿಯ ಸಂದರ್ಭದಲ್ಲಿ ವಿರೋಧ ಪಕ್ಷಗಳು ಸರ್ಕಾರದೊಂದಿಗೆ ಹೆಚ್ಚಿನ ಮಟ್ಟದ ಒಗ್ಗಟ್ಟನ್ನು ಪ್ರದರ್ಶಿಸಿದ್ದವು.

ಆದರೆ, ಪಹಲ್ಗಾಮ್ ಉಗ್ರರ ದಾಳಿಯ ಸಂದರ್ಭದಲ್ಲಿ ಕಾನ್ಪುರ ಬೇಟಿಯನ್ನು ರದ್ದು ಮಾಡಿದ ನರೇಂದ್ರ ಮೋದಿಯವರು ಬಿಹಾರಕ್ಕೆ ಹೋಗಿ ಭಾಷಣ ಮಾಡಿದ್ದು, ಸಾರ್ವಜನಿಕ ರ್ಯಾಲಿ ಮಾಡಿದ್ದು ವಿಚಿತ್ರವಾಗಿದೆ. ಅದೂ ಕೂಡ ದಾಳಿಯ ಬಗ್ಗೆ ಯಾವುದೇ ಅಧಿಕೃತ ಪತ್ರಿಕಾಗೋಷ್ಟಿಯನ್ನು ನಡೆಸದೆ!

Related Articles

ಇತ್ತೀಚಿನ ಸುದ್ದಿಗಳು

You cannot copy content of this page