ಸರ್ಕಾರಿ ಕಛೇರಿಗಳಲ್ಲಿ ಲೋಕಾಯುಕ್ತ ಸಹಾಯವಾಣಿ ಫಲಕ ಕಡ್ಡಾಯ: ಮುಖ್ಯ ಕಾರ್ಯದರ್ಶಿ ಸುತ್ತೋಲೆ

ಭ್ರಷ್ಟಾಚಾರ ನಿಯಂತ್ರಣಕ್ಕೆ ಸರ್ಕಾರದ ಹೊಸ ಹೆಜ್ಜೆ; ದೂರು ನೀಡಲು ಸಾರ್ವಜನಿಕರಿಗೆ ಅನುಕೂಲ

ರಾಜ್ಯದಲ್ಲಿ ಭ್ರಷ್ಟಾಚಾರ ನಿಯಂತ್ರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡುತ್ತಾ, ರಾಜ್ಯ ಸರ್ಕಾರದ ಎಲ್ಲಾ ಕಛೇರಿಗಳ ಪ್ರವೇಶ ದ್ವಾರ ಹಾಗೂ ಸಾರ್ವಜನಿಕರಿಗೆ ಗೋಚರಿಸುವ ಸ್ಥಳಗಳಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಸಹಾಯವಾಣಿ ಸಂಖ್ಯೆಗಳನ್ನೊಳಗೊಂಡ ಪ್ರದರ್ಶನ ಫಲಕಗಳನ್ನು ಅಳವಡಿಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ದಿನಾಂಕ 30 ಮಾರ್ಚ್ 2026 ರಂದು ಸುತ್ತೋಲೆ ಹೊರಡಿಸಿದ್ದಾರೆ.

ಸುತ್ತೋಲೆಯ ಹಿನ್ನೆಲೆ
ಈ ಸುತ್ತೋಲೆಯು ಸರ್ಕಾರ ಹಿಂದಿನ ದಿನಾಂಕ 13 ಆಗಸ್ಟ್ 2024 ರಂದು ಹೊರಡಿಸಿದ್ದ ಆದೇಶದ ಮುಂದುವರಿದ ಭಾಗವಾಗಿದ್ದು, ಲೋಕಾಯುಕ್ತ ಸಂಸ್ಥೆಯ ರಚನೆ, ಕಾರ್ಯವ್ಯಾಪ್ತಿ ಮತ್ತು ಕಾರ್ಯನಿರ್ವಹಣಾ ರೀತಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ.

ಯಾವ ಕಛೇರಿಗಳಿಗೆ ಅನ್ವಯ?
ರಾಜ್ಯ ಸರ್ಕಾರದ ವ್ಯಾಪ್ತಿಗೆ ಒಳಪಡುವ ಸಮಸ್ತ ಇಲಾಖೆಗಳು, ಕಛೇರಿಗಳು, ಸಂಸ್ಥೆಗಳು, ಪಾಲಿಕೆಗಳು, ನಗರಸಭೆಗಳು, ನಿಗಮ ಹಾಗೂ ಮಂಡಳಿಗಳಿಗೆ ಈ ಸುತ್ತೋಲೆ ಅನ್ವಯಿಸಲಿದ್ದು, ಫಲಕಗಳನ್ನು ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಪ್ರದರ್ಶಿಸತಕ್ಕದ್ದು ಎಂದು ಸ್ಪಷ್ಟಪಡಿಸಲಾಗಿದೆ.

ಫಲಕದಲ್ಲಿ ಏನಿರಬೇಕು?
ಸುತ್ತೋಲೆ ಪ್ರಕಾರ, ಪ್ರದರ್ಶನ ಫಲಕದಲ್ಲಿ ಈ ಕೆಳಗಿನ ಮಾಹಿತಿ ಇರತಕ್ಕದ್ದು:
* ಲೋಕಾಯುಕ್ತ ಸಹಾಯವಾಣಿ ಸಂಖ್ಯೆಗಳು: 080-22375014 ಮತ್ತು 080-22011298
* ಟೋಲ್ ಫ್ರೀ ಸಂಖ್ಯೆ (ಮೊಬೈಲ್‌ನಿಂದ): 1800-425-5320
* ಆಯಾ ಜಿಲ್ಲೆಯಲ್ಲಿರುವ ಲೋಕಾಯುಕ್ತ ಜಿಲ್ಲಾ ಪೊಲೀಸ್ ಠಾಣೆಯ ಸ್ಥಿರ ದೂರವಾಣಿ ಸಂಖ್ಯೆ
* ಪೊಲೀಸ್ ಅಧಿಕಾರಿಗಳ ಸಿ.ಯು.ಜಿ. ಸಿಮ್ ಮಾಹಿತಿ
* ಇಲಾಖಾ ಮುಖ್ಯಸ್ಥರ ಪದನಾಮ, ಪೂರ್ಣ ವಿಳಾಸ, ಇ-ಮೇಲ್ ವಿಳಾಸ
ಜೊತೆಗೆ, “ಲಂಚ ನೀಡಬೇಡಿ” ಎಂಬ ಸಂದೇಶವನ್ನೂ ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಪ್ರದರ್ಶಿಸಬೇಕು. ಕಛೇರಿಯಲ್ಲಿ ಲಂಚ ಕೇಳಿದರೆ ಅಥವಾ ಭ್ರಷ್ಟಾಚಾರಕ್ಕೆ ಬಲಿಯಾದರೆ ಇಲಾಖಾ ಮುಖ್ಯಸ್ಥರಿಗೆ ಅಥವಾ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಬಹುದು ಎಂಬ ಮಾಹಿತಿಯನ್ನೂ ಸೇರಿಸಬೇಕು.

ಆಡಳಿತ ಸುಧಾರಣಾ ಆಯೋಗದ ಶಿಫಾರಸಿಗೆ ಅನುಗುಣ
ಈ ಸುತ್ತೋಲೆಯು 2ನೇ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಮೊದಲನೇ ವರದಿಯ ಅಧ್ಯಾಯ-2, ಕ್ರಮ ಸಂಖ್ಯೆ 112 ರಲ್ಲಿ ಮಾಡಲಾದ ಶಿಫಾರಸಿಗೆ ಅನುಗುಣವಾಗಿದೆ. ಆಡಳಿತದಲ್ಲಿ ಪಾರದರ್ಶಕತೆ ತರಲು ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಇಂತಹ ಫಲಕಗಳನ್ನು ಅಳವಡಿಸಬೇಕೆಂದು ಆಯೋಗ ಶಿಫಾರಸು ಮಾಡಿತ್ತು.

ಅಧಿಕಾರಿಗಳಿಗೆ ಕಠಿಣ ಸೂಚನೆ
ರಾಜ್ಯದ ಎಲ್ಲಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳಿಗೆ ಈ ಸುತ್ತೋಲೆ ರವಾನಿಸಲಾಗಿದ್ದು, ತಮ್ಮ ಆಡಳಿತ ವ್ಯಾಪ್ತಿಗೊಳಪಡುವ ಎಲ್ಲಾ ಇಲಾಖಾ ಮುಖ್ಯಸ್ಥರು, ನಿಗಮ, ಮಂಡಳಿ ಹಾಗೂ ಸ್ವಾಯತ್ತ ಸಂಸ್ಥೆಗಳಿಗೆ ಅಗತ್ಯ ಸೂಚನೆ ನೀಡುವಂತೆ ಮುಖ್ಯ ಕಾರ್ಯದರ್ಶಿ ಅವರು ತಾಕೀತು ಮಾಡಿದ್ದಾರೆ.

ಈ ಕ್ರಮವು ರಾಜ್ಯದಲ್ಲಿ ಭ್ರಷ್ಟಾಚಾರ ವಿರೋಧಿ ಅಭಿಯಾನಕ್ಕೆ ಹೊಸ ಚಾಲನೆ ನೀಡುವ ನಿರೀಕ್ಷೆ ಮೂಡಿಸಿದ್ದು, ಸಾರ್ವಜನಿಕರು ತಮ್ಮ ಹಕ್ಕುಗಳ ಬಗ್ಗೆ ಹೆಚ್ಚು ಜಾಗೃತರಾಗಲು ಸಹಕಾರಿಯಾಗಲಿದೆ ಎಂಬುದನ್ನು ಶಾಲಿನಿ ರಜನೀಶ್ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು