ಹೃದಯಭಾಗದಲ್ಲಿ ಫುಡ್‌ಕೋರ್ಟ್ ನಿರ್ಮಾಣಕ್ಕೆ ವಿರೋಧ: ಎಚ್.ಎಂ. ವಿಶ್ವನಾಥ್ ಆಗ್ರಹ

ಸಕಲೇಶಪುರ : ಪಟ್ಟಣದ ಹೃದಯಭಾಗದಲ್ಲಿ, ಎಸ್‌ಬಿಐ ಬ್ಯಾಂಕ್ ಸಮೀಪ ನಿರ್ಮಾಣವಾಗುತ್ತಿರುವ ಫುಡ್‌ಕೋರ್ಟ್ ಯೋಜನೆಗೆ ಸಾರ್ವಜನಿಕ ಹಿತಾಸಕ್ತಿಯಿಂದ ತೀವ್ರ ವಿರೋಧ ವ್ಯಕ್ತವಾಗಿದೆ.ಈ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಅವರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

​ಸಂಚಾರ ದಟ್ಟಣೆಯ ಆತಂಕ : ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, “ಎಸ್‌ಬಿಐ, ಕೆನರಾ ಬ್ಯಾಂಕ್, ಎಚ್‌ಡಿಎಫ್‌ಸಿ, ಕರ್ನಾಟಕ ಬ್ಯಾಂಕ್‌ಗಳು ಸೇರಿದಂತೆ ಪ್ರಮುಖ ವಾಣಿಜ್ಯ ಮಳಿಗೆಗಳು, ಪಟ್ಟಣ ಪಂಚಾಯಿತಿ, ಸಹಾಯಕ ಆಯುಕ್ತರ ಕಚೇರಿ ಹಾಗೂ ತಾಲೂಕು ಕಚೇರಿಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ಈಗಾಗಲೇ ಇಲ್ಲಿ ವಾಹನ ನಿಲುಗಡೆಗೆ ಜಾಗವಿಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದಾರೆ.ಇಂತಹ ಜನನಿಬಿಡ ಪ್ರದೇಶದಲ್ಲಿ ಯಾವುದೇ ವೈಜ್ಞಾನಿಕ ಅಧ್ಯಯನವಿಲ್ಲದೆ ಫುಡ್‌ಕೋರ್ಟ್ ನಿರ್ಮಿಸುವುದು ಸಮಂಜಸವಲ್ಲ” ಎಂದು ಕಿಡಿಕಾರಿದ್ದಾರೆ.

​ಪ್ರತಿಷ್ಠೆಯ ಪ್ರಶ್ನೆಯಾಗದಿರಲಿ : “ಈ ಕಾಮಗಾರಿಯಿಂದ ಭವಿಷ್ಯದಲ್ಲಿ ತೀವ್ರ ಸಂಚಾರ ಸಮಸ್ಯೆ ಉಂಟಾಗಲಿದೆ ಮತ್ತು ಅಪಘಾತಗಳ ಸಾಧ್ಯತೆಯೂ ಹೆಚ್ಚಿದೆ. ಈ ಬಗ್ಗೆ ಸಾರ್ವಜನಿಕರು ಮತ್ತು ಮಾಧ್ಯಮಗಳು ಆಕ್ಷೇಪ ವ್ಯಕ್ತಪಡಿಸಿದ್ದರೂ, ಆಡಳಿತ ವರ್ಗವು ಇದನ್ನು ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಮಾಡಿಕೊಂಡು ಕಾಮಗಾರಿ ಮುಂದುವರಿಸುತ್ತಿರುವುದು ಸರಿಯಲ್ಲ” ಎಂದು ಅವರು ಟೀಕಿಸಿದ್ದಾರೆ.

​ಆಡಳಿತದ ದ್ವಂದ್ವ ನೀತಿ : ಇತ್ತೀಚೆಗೆ ಪಟ್ಟಣದ ಸುಗಮ ಸಂಚಾರಕ್ಕಾಗಿ ಪಾದಚಾರಿ ಮಾರ್ಗಗಳ ಮೇಲಿನ ಅತಿಕ್ರಮಣ ಮತ್ತು ಗೂಡಂಗಡಿಗಳನ್ನು ತೆರವುಗೊಳಿಸಿರುವ ಆಡಳಿತದ ಕ್ರಮವನ್ನು ಶ್ಲಾಘಿಸಿರುವ ಅವರು, “ಒಂದೆಡೆ ಅತಿಕ್ರಮಣ ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವುದು, ಇನ್ನೊಂದೆಡೆ ಅದೇ ಪ್ರದೇಶದಲ್ಲಿ ಜನಸಂದಣಿ ಹೆಚ್ಚಿಸುವ ಫುಡ್‌ಕೋರ್ಟ್ ನಿರ್ಮಿಸುವುದು ಆಡಳಿತದ ದ್ವಂದ್ವ ನೀತಿಗೆ ಸಾಕ್ಷಿ” ಎಂದು ಆರೋಪಿಸಿದ್ದಾರೆ.

​ಜಿಲ್ಲಾಧಿಕಾರಿಗಳಿಗೆ ಮನವಿ : ಶುಕ್ರವಾರದಿಂದ ಭಾನುವಾರದವರೆಗೆ ಸಕಲೇಶಪುರಕ್ಕೆ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವುದರಿಂದ ಈ ರಸ್ತೆಯಲ್ಲಿ ದಟ್ಟಣೆ ಅತೀವವಾಗಿರುತ್ತದೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಬೇಕು. ತಮ್ಮ ವಿಶೇಷ ಅಧಿಕಾರ ಬಳಸಿ ಈ ಯೋಜನೆಯನ್ನು ತಡೆಹಿಡಿಯಬೇಕು ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ಬೇರೆ ಸೂಕ್ತ ಸ್ಥಳದಲ್ಲಿ ಫುಡ್‌ಕೋರ್ಟ್ ನಿರ್ಮಾಣದ ಬಗ್ಗೆ ಮರುಪರಿಶೀಲನೆ ನಡೆಸಬೇಕು ಎಂದು ಎಚ್.ಎಂ. ವಿಶ್ವನಾಥ್ ಆಗ್ರಹಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು