ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಕ್ಷಮೆಯಾಚಿಸಿ ರಾಜೀನಾಮೆ ನೀಡಿ: ಧರ್ಮೇಂದ್ರ ಪ್ರಧಾನ್‌ಗೆ ರಾಹುಲ್ ಗಾಂಧಿ ಆಗ್ರಹ

ದೆಹಲಿ: ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ದೇಶದ ಯುವ ಸಮೂಹವನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ‘ಭಯೋತ್ಪಾದಕರು’ ಎಂದು ಕರೆದಿದ್ದಾರೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರವಾಗಿ ಖಂಡಿಸಿದ್ದಾರೆ. ಯುವಜನತೆಗೆ ಮಾಡಿದ ಈ ಅಪಮಾನಕ್ಕಾಗಿ ದೇಶದ ಜನರ ಕ್ಷಮೆಯಾಚಿಸಿ, ಧರ್ಮೇಂದ್ರ ಪ್ರಧಾನ್ ಅವರು ತಕ್ಷಣವೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.

ಈ ಕುರಿತು ‘X’ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಅಧಿಕಾರದ ಅಹಂಕಾರದಲ್ಲಿ ಮುಳುಗಿರುವ ಮೋದಿ ಸರ್ಕಾರ ಈಗ ಅತ್ಯಂತ ಕೆಳಮಟ್ಟಕ್ಕೆ ತಲುಪಿದೆ. ತಮ್ಮ ಹಕ್ಕುಗಳು, ನ್ಯಾಯಸಮ್ಮತವಾದ ಪರೀಕ್ಷೆಗಳು ಮತ್ತು ಸುರಕ್ಷಿತ ಭವಿಷ್ಯಕ್ಕಾಗಿ ಹೋರಾಡುತ್ತಿರುವ ವಿದ್ಯಾರ್ಥಿಗಳನ್ನು ದೇಶದ ಶಿಕ್ಷಣ ಸಚಿವರೇ ಭಯೋತ್ಪಾದಕರು ಎಂದು ಸಂಬೋಧಿಸಿದ್ದಾರೆ,” ಎಂದು ಆಕ್ರೋಶ ಹೊರಹಾಕಿದ್ದಾರೆ.

ನಿರಂತರವಾಗಿ ನಡೆಯುತ್ತಿರುವ ಪ್ರಶ್ನೆಪತ್ರಿಕೆ ಸೋರಿಕೆಗಳು ಮತ್ತು ಶಿಕ್ಷಣ ವ್ಯವಸ್ಥೆಯ ವೈಫಲ್ಯಗಳು ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲಿಗೆ ತಳ್ಳಿವೆ ಎಂದು ರಾಹುಲ್ ಆರೋಪಿಸಿದ್ದಾರೆ. “ಒಮ್ಮೆ ಯೋಚಿಸಿ, ಯಾರ ವೈಫಲ್ಯದಿಂದಾಗಿ ಪದೇ ಪದೇ ಪೇಪರ್ ಲೀಕ್ ಆಗುತ್ತಿದೆ? ಯಾರ ಆಡಳಿತಾವಧಿಯಲ್ಲಿ 20 ಕ್ಕೂ ಹೆಚ್ಚು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ? ದೇಶದ ಲಕ್ಷಾಂತರ ಯುವಕರ ಭವಿಷ್ಯವನ್ನು ಹಾಳು ಮಾಡಿದ ವ್ಯಕ್ತಿಯೇ, ಇಂದು ಸಂಕಷ್ಟದಲ್ಲಿರುವ ಮತ್ತು ನ್ಯಾಯಕ್ಕಾಗಿ ಧ್ವನಿ ಎತ್ತುತ್ತಿರುವ ಮಕ್ಕಳನ್ನು ಭಯೋತ್ಪಾದಕರು ಎಂದು ಕರೆಯುತ್ತಿದ್ದಾರೆ,” ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ನಾಯಕರು ಇಂತಹ ಹೇಳಿಕೆಗಳನ್ನು ನೀಡುವುದು ಹೊಸದೇನಲ್ಲ ಎಂದಿರುವ ರಾಹುಲ್, “ಹಿಂದೆ ದೇಶಕ್ಕೆ ಅನ್ನ ನೀಡುವ ರೈತರನ್ನು ‘ವೃತ್ತಿಪರ ಪ್ರತಿಭಟನಾಕಾರರು ಮತ್ತು ಪರಾವಲಂಬಿಗಳು’ ಎಂದು ಕರೆದಿದ್ದರು. ಪ್ರಶ್ನೆ ಕೇಳುವವರನ್ನು ‘ದೇಶದ್ರೋಹಿಗಳು’ ಎಂದು ಮುದ್ರೆ ಒತ್ತಿದ್ದರು. ಈಗ ದೇಶದ ಯುವಕರನ್ನು ‘ಭಯೋತ್ಪಾದಕರು’ ಎನ್ನುತ್ತಿದ್ದಾರೆ. ಸರ್ಕಾರವನ್ನು ಪ್ರಶ್ನಿಸುವ ಯಾರನ್ನೇ ಆದರೂ ದೇಶದ್ರೋಹಿ ಎಂದು ಬಿಂಬಿಸುವುದೇ ಅವರ ರಾಜಕಾರಣದ ಸಾರಾಂಶವಾಗಿದೆ,” ಎಂದು ಕಟುವಾಗಿ ಟೀಕಿಸಿದ್ದಾರೆ.

“ನಾನು ಹಿಂದೆ ಕೋಟಾದಲ್ಲಿ ಹೇಳಿದ್ದನ್ನೇ ಮತ್ತೊಮ್ಮೆ ಹೇಳುತ್ತಿದ್ದೇನೆ. ಇಂದು ದೇಶದ ಶಿಕ್ಷಣ ವ್ಯವಸ್ಥೆಯು ಕೇವಲ ಒಂದು ಲೂಟಿ ಮಾಡುವ ದಂದೆಯಾಗಿ ಮಾರ್ಪಟ್ಟಿದೆ. ಇದನ್ನು ಹೀಗೆಯೇ ಮುಂದುವರಿಯಲು ನಾನು ಬಿಡುವುದಿಲ್ಲ. ಪ್ರತಿಯೊಂದು ಮಗುವಿಗೂ ಕೈಗೆಟುಕುವ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ನ್ಯಾಯಸಮ್ಮತವಾದ ಪರೀಕ್ಷೆಗಳು ಸಿಗುವಂತೆ ನೋಡುವುದು ನನ್ನ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತುವುದನ್ನು ನಾನು ಎಂದಿಗೂ ನಿಲ್ಲಿಸುವುದಿಲ್ಲ,” ಎಂದು ರಾಹುಲ್ ಗಾಂಧಿ ತಮ್ಮ ಪೋಸ್ಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು