ಡಿಸಿಎಂ ಪರಮೇಶ್ವರ್ ಕ್ಷೇತ್ರದಲ್ಲಿ ಅಮಾನವೀಯ ಮತ್ತು ಕಾನೂನುಬಾಹಿರ ‘ಮಲ ಹೊರುವ ಅನಿಷ್ಟ ಪದ್ಧತಿ’ ಇನ್ನೂ ಜೀವಂತ

ತುಮಕೂರು : ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಅಮಾನವೀಯ ಮತ್ತು ಕಾನೂನುಬಾಹಿರ ‘ಮಲ ಹೊರುವ ಅನಿಷ್ಟ ಪದ್ಧತಿ’ (Manual scavenging) ತುಮಕೂರು (Tumkur) ಜಿಲ್ಲೆಯಲ್ಲಿ ಇನ್ನೂ ಜೀವಂತವಾಗಿರುವುದು ಬೆಳಕಿಗೆ ಬಂದಿದೆ.

ತುಮಕೂರು ನಗರದ ಕೆಇಬಿ (KEB) ಇಂಜಿನಿಯರ್ಸ್ ಗಳ ಸಂಘದ ಆವರಣದಲ್ಲೇ ಅಮಾಯಕ ದಲಿತ ಕಾರ್ಮಿಕರಿಂದ ಬರಿಗೈ ಹಾಗೂ ಬರಿಮೈನಲ್ಲಿ ಶೌಚ ಗುಂಡಿಯ ಮಲವನ್ನು ಬಾಚಿಸಿ, ಟ್ರ್ಯಾಕ್ಟರ್‌ಗೆ ತುಂಬಿಸಿರುವ  ಘಟನೆ ನಡೆದಿದೆ.

ದೇಶದಲ್ಲಿ ಮಲ ಹೊರುವ ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದರೂ, ಕಾನೂನು ಬಲ್ಲ ವಿದ್ಯಾವಂತ ಇಂಜಿನಿಯರ್‌ಗಳೇ ಈ ಕೃತ್ಯಕ್ಕೆ ಮುಂದಾಗಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಮಣ್ಣಿನ ಕೆಲಸ ಎಂದು ನಂಬಿಸಿ ದಲಿತ ಕಾರ್ಮಿಕರಿಗೆ ವಂಚನೆ!

ತುಮಕೂರಿನ ಕೆಇಬಿ ಇಂಜಿನಿಯರ್ಸ್ ಸಂಘದ ಆವರಣದಲ್ಲಿರುವ ಶೌಚ ಗುಂಡಿಯನ್ನು ಸ್ವಚ್ಛಗೊಳಿಸಲು ನಾಲ್ವರು ಮುಗ್ಧ ಕಾರ್ಮಿಕರನ್ನು ನಿಯೋಜಿಸಲಾಗಿತ್ತು.ತುಮಕೂರಿನ ನಂದೀಶ್ , ಅರುಣ, ಮಧುರಗಿರಿ ಮೂಲದ ಮೂರ್ತಿ ನಾಯ್ಕ ಹಾಗೂ ನವೀನ ಎಂಬ ಕಾರ್ಮಿಕರನ್ನು ಕೆಲಸಕ್ಕಾಗಿ ಕರೆತರಲಾಗಿತ್ತು.
ಆರಂಭದಲ್ಲಿ ಈ ಕಾರ್ಮಿಕರಿಗೆ “ಇಂಜಿನಿಯರ್ಸ್ ಸಂಘದ ಬಳಿ ಮಣ್ಣು ತುಂಬುವ ಕೆಲಸವಿದೆ” ಎಂದು ಸುಳ್ಳು ಹೇಳಿ ನಂಬಿಸಿ ಕರೆತರಲಾಗಿತ್ತು. ಆದರೆ ಸ್ಥಳಕ್ಕೆ ಬಂದ ಬಳಿಕ ಅದು ಶೌಚಾಲಯದ ಗುಂಡಿ (Septic Tank) ಎಂಬುದು ಗೊತ್ತಾಗಿದೆ. ಬಡತನ ಮತ್ತು ಹೊಟ್ಟೆಪಾಡಿನ ಕಾರಣಕ್ಕೆ ಬೇರೆ ದಾರಿಯಿಲ್ಲದೆ ಕಾರ್ಮಿಕರು ಯಾವುದೇ ಸುರಕ್ಷತಾ ಪರಿಕರಗಳಿಲ್ಲದೆ ಬರಿಗೈ ಮತ್ತು ಬರಿಮೈನಲ್ಲಿ ಮಲ ಬಾಚುವ ನರಕಯಾತನೆ ಅನುಭವಿಸಿದ್ದಾರೆ.

“ಹೊಟ್ಟೆ ಪಾಡಿಗಾಗಿ ಒಪ್ಪಿಕೊಂಡೆವು”: ನೊಂದ ಕಾರ್ಮಿಕರ ಅಳಲು
“ಕೆಇಬಿ ಇಂಜಿನಿಯರ್ ಒಬ್ಬರು ನಮಗೆ ಈ ಕೆಲಸ ಹೇಳಿದ್ದಾರೆ. ಕಳೆದ ಮೂರು ದಿನಗಳಿಂದ ನಾವು ಇಲ್ಲೇ ಜಾಗ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದೇವೆ. ಮಣ್ಣು ತುಂಬಲು ಎಂದು ನಮ್ಮನ್ನು ಕರೆ ತಂದಿದ್ದರು, ಆದರೆ ಇಲ್ಲಿಗೆ ಬಂದ ಮೇಲೆ ಶೌಚ ಗುಂಡಿ ಎಂದು ಗೊತ್ತಾಯಿತು. ಹೊಟ್ಟೆ ಪಾಡಿಗಾಗಿ ವಿಧಿಯಿಲ್ಲದೆ ಒಪ್ಪಿಕೊಂಡು ಈ ಕೆಲಸ ಮಾಡಿದ್ದೇವೆ. ಈ ಕೆಲಸವನ್ನು ಮಾಡಬಾರದು ಎಂಬ ಕಾನೂನು ನಮಗೆ ಗೊತ್ತಿರಲಿಲ್ಲ. ಇನ್ಮುಂದೆ ಇಂತಹ ಕೆಲಸಕ್ಕೆ ಯಾರಾದರೂ ಕರೆದರೆ ಖಂಡಿತವಾಗಿಯೂ ಹೋಗುವುದಿಲ್ಲ.” – ನೊಂದ ಕಾರ್ಮಿಕರು

ಸರಣಿ ಘಟನೆಗಳು: ಅಧಿಕಾರಿಗಳ ಪರಮ ನಿರ್ಲಕ್ಷ್ಯ!
ಜಿಲ್ಲೆಯಲ್ಲಿ ಇಂತಹ ಅನಿಷ್ಟ ಪದ್ಧತಿ ಮರುಕಳಿಸುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗಷ್ಟೇ ಕೊರಟಗೆರೆ ಬಸ್ ನಿಲ್ದಾಣದಲ್ಲಿ ಬಾಲ ಕಾರ್ಮಿಕನೊಬ್ಬನಿಂದ ಶೌಚ ಗುಂಡಿಯ ಮಲವನ್ನು ಸ್ವಚ್ಛಗೊಳಿಸಿದ ವಿಕೃತ ಘಟನೆ ನಡೆದಿತ್ತು. ಆ ವಿವಾದ ಮಾಸುವ ಮುನ್ನವೇ ಈಗ ತುಮಕೂರು ನಗರದ ಹೃದಯಭಾಗದಲ್ಲೇ ಇಂತಹದ್ದೇ ಘಟನೆ ಬೆಳಕಿಗೆ ಬಂದಿದೆ.
ದುರಂತವೆಂದರೆ, ಇಷ್ಟೊಂದು ಗಂಭೀರ ಸ್ವರೂಪದ ಮಾನವ ಹಕ್ಕು ಉಲ್ಲಂಘನೆ ಘಟನೆ ನಡೆಯುತ್ತಿದ್ದರೂ, ಈ ಬಗ್ಗೆ ಮಾಹಿತಿ ತಲುಪಿದರೂ ತುಮಕೂರು ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಾರದೆ ತೀವ್ರ ನಿರ್ಲಕ್ಷ್ಯ ವಹಿಸಿದ್ದಾರೆ. ಅಧಿಕಾರಿಗಳ ಈ ಬೇಜವಾಬ್ದಾರಿತನಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

Related Articles

ಇತ್ತೀಚಿನ ಸುದ್ದಿಗಳು