ಇತ್ತೀಚೆಗೆ ರಾಜ್ಯದ ತುಂಬಾ ಎಸ್‌ಐಆರ್ ನೋಟಿಸಿನದೇ ಸುದ್ದಿ. ಕೆಲವರಿಗೆ ಹೆಸರು ಸರಿಯಿಲ್ಲ ಎನ್ನುವ ಕಾರಣಕ್ಕೆ ನೋಟೀಸ್ ಬಂದಿದ್ದರೆ, ಇನ್ನೂ ಕೆಲವರಿಗೆ ಹುಟ್ಟಿದ ದಿನ ಸರಿಯಿಲ್ಲ ಎನ್ನುವ ಕಾರಣಕ್ಕೆ ನೋಟಿಸ್ ಬಂದಿದೆ. ಮತ್ತೆ ಕೆಲಸವರಿಗೆ ಹಲವು ಕಾರಣಗಳಿಗೆ ನೋಟಿಸ್ ಬಂದಿದೆ. ಇದೆಲ್ಲದರ ನಡುವೆ ಶಿಫ್ಟೆಡ್ ಇತ್ಯಾದಿ ಕಾರಣ ಕೊಟ್ಟು ಮತ್ತಷ್ಟು ಜನರನ್ನು ಮತದಾರರ ಪಟ್ಟಿಯಿಂದಲೇ ಹೊರಹಾಕಲಾಗಿದೆ.
ಈಗಾಗಲೇ ತಾರೀಖು 12 ದಾಟಿದೆ, ಆದರೆ ಸಾಕಷ್ಟು ಜನರಿಗೆ ನೋಟಿಸ್ ಇನ್ನೂ ತಲುಪಿಲ್ಲ. ನೋಟಿಸ್ ತಲುಪಿರುವ ಜನರು ಈ ದಾಖಲೆಗಳನ್ನು ಎಲ್ಲಿಂದ ತರುವುದಪ್ಪಾ ಎಂದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಮುಂದಿನ ಅಕ್ಟೋಬರ್ ತಿಂಗಳ 22 ಎಸ್‌ಐಆರ್ ಹಿಯರಿಂಗಿನ ಕೊನೆಯ ದಿನವಾಗಿರಲಿದೆ. ಈಗ ಜನಸಾಮಾನ್ಯರು ತಮ್ಮ ಹೊಟ್ಟೆಪಾಡಿನ ಕೆಲಸಗಳನ್ನು ಬಿಟ್ಟು ಸರ್ಕಾರಿ ಕಚೇರಿಗಳ ಮೆಟ್ಟಿಲು ಹತ್ತಿಳಿಯುವ ಸರ್ಕಸ್ಸಿಗೆ ತಯಾರಾಗಬೇಕಿದೆ.
ಆದರೆ ಇನ್ನೊಂದೆಡೆ ಇದೇ ಆಯೋಗ ಖ್ಯಾತನಾಮರಿಗೆ ನೋಟಿಸ್ ಕೊಟ್ಟು, ಮತ್ತೆ ಜೀ ಹುಜೂರ್ ತಪ್ಪಾಯಿತು ಎಂದು ಅವರ ಮನೆ ಬಾಗಿಲನ್ನು ತಲುಪಿ, ಅವರ ವೋಟರ್ ಲಿಸ್ಟಿನಲ್ಲಿರುವ ತಪ್ಪುಗಳನ್ನು ತಾನೇ ಸ್ವತಃ ಸರಿಪಡಿಸಿಕೊಡಲು ಮುಂದಾಗಿದೆ. ಆದರೆ ಅಶಕ್ತ ಜನರು ಮಾತ್ರ ಚುನಾವಣಾ ಆಯೋಗ ನೀಡಿರುವ ನೋಟಿಸ್ ಹಿಡಿದುಕೊಂಡು ಮುಂದೇನು ಮಾಡಬೇಕೆನ್ನುವುದನ್ನು ತಿಳಿಯದೇ ಕಂಗಾಲಾಗಿದೆ.

ಎಲ್ಲ ಮತಾದಾರರೂ ಸಮಾನರು, ಪ್ರಜಾಪ್ರಭುತ್ವದಲ್ಲಿ ಎಲ್ಲರ ವೋಟಿಗೂ ಒಂದೇ ಬೆಲೆಯೆನ್ನುವ ಆಯೋಗ ಎಸ್‌ಐಆರ್ ವಿಷಯದಲ್ಲಿ ಮಾತ್ರ ವಿಐಪಿ ವೋಟರ್ಸ್ ಎನ್ನುವ ವಿಭಾಗವನ್ನು ಮಾಡಿಕೊಂಡು ಅವರಿಗೆ ಮನೆ ಮನೆ ಸೇವೆ ನೀಡುತ್ತಿದೆ.
ಇತ್ತೀಚೆಗೆ ಭಾರತರತ್ನ ವಿಜೇತ ವಿಜ್ಙಾನಿ ಪ್ರೊ. ಸಿಎನ್‌ಆರ್ ರಾವ್ ಅವರ ಹೆಸರು ಮತದಾರರ ಪಟ್ಟಿಯಲ್ಲಿ ತಪ್ಪಾಗಿ ನಮೂದಾದ ಕಾರಣ ಅವರಿಗೆ ನೋಟಿಸ್ ಹೋಗಿದೆ ಎಂದು ಸುದ್ದಿಯಾಗಿತ್ತು. ಆದರೆ ಕೂಡಲೇ ಎಚ್ಚೆತ್ತ ಆಯೋಗ ನಾವು ಅವರಿಗೆ ನೋಟಿಸ್ ಕೊಟ್ಟಿಲ್ಲ ಎಂದು, ಅವರ ಮನೆಗೆ ಹೋಗಿ ಎಪಿಕ್ ಕಾರ್ಡಿನಲ್ಲಿನ ತಪ್ಪನ್ನು ಸರಿಪಡಿಸಿಕೊಟ್ಟಿದ್ದೇವೆ ಎಂದೂ ಪತ್ರಿಕಾ ಹೇಳಿಕೆ ಕೊಟ್ಟಿತ್ತು.
ಇದೀಗ ಹಿರಿಯ ನಟ ಡಾ. ಶಿವರಾಜ್ ಕುಮಾರ್ ಅವರಿಗೆ ನೋಟಿಸ್ ಹೋಗಿರುವ ಬಗ್ಗೆ ಸುದ್ದಿಯಾಗಿದ್ದು, ಕೂಡಲೇ ಅಲರ್ಟ್ ಆದ ಆಯೋಗ, “ಆಯೋಗದ ಪರಿಷ್ಕೃತ ವೇಳಾಪಟ್ಟಿಯಂತೆ ಹಕ್ಕು ಮತ್ತು ಆಕ್ಷೇಪಣೆಗಳ ಸಲ್ಲಿಕೆ ಹಾಗೂ ವಿಚಾರಣೆ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ. ಈ ಪ್ರಕ್ರಿಯೆಯ ವೇಳೆ ನಟ ಶಿವರಾಜ್‌ಕುಮಾರ್ ಅವರು ತಮ್ಮ ಗಣತಿ ನಮೂನೆಯಲ್ಲಿ (Enumeration Form) 2002ರ ಹಿಂದಿನ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ ವಿವರಗಳನ್ನು ನಮೂದಿಸದ ಕಾರಣ ತಂತ್ರಾಂಶದಲ್ಲಿ ‘No Mapping’ ಎಂದು ಗುರುತಿಸಲ್ಪಟ್ಟು, ಸ್ವಯಂಚಾಲಿತವಾಗಿ ನೋಟಿಸ್ ಸೃಷ್ಟಿಯಾಗಿತ್ತು” ಎಂದು ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಅಲ್ಲದೆ ಸಮಾಜ ಸೇವಕರಾದ ಹಾಜಬ್ಬನವರಿಗೂ ನೋಟಿಸ್ ಜಾರಿಯಾಗಿದ್ದು ಸುದ್ದಿಯಾದ ನಂತರ ಅದನ್ನು ವಾಪಸ್ ಪಡೆದಿರುವುದಾಗಿ ಆಯೋಗ ಹೇಳಿರುವುದು ಸಹ ಸುದ್ದಿಯಾಗಿದೆ.
ಅಂದರೆ ಖ್ಯಾತನಾಮರು ಮತ್ತು ಧನಿಕರ ನೋಟಿಸ್ ಹಿಂಪಡೆಯವುದು ಮತ್ತು ಅವರಿಗೆ ಇದ್ದಲ್ಲೇ ಸೇವೆ ನೀಡಲು ಆಯೋಗಕ್ಕೆ ಸಾಧ್ಯವಾಗುತ್ತದೆ, ಆದರೆ ಬಡಜನರು ಮಾತ್ರ ಇಲ್ಲದ ದಾಖಲೆಗಳಿಗಾಗಿ ಸರ್ಕಾರಿ ಕಚೇರಿಗಳನ್ನು ಅಲೆದು ಪರದಾಡಬೇಕು. ಹಿಯರಿಂಗ್ ದಿನ ಸಲ್ಲಿಸಲು ದಾಖಲೆಗಳನ್ನು ಒಟ್ಟು ಮಾಡಲು ಈ ಜನರು ದಿನಗಟ್ಟಲೆ ತಮ್ಮ ಕೂಲಿ ಕೆಲಸ ಬಿಟ್ಟು ತಿರುಗಾಡಬೇಕಿದೆ.
ದೊಡ್ಡವರಿಗೆ ನೋಟಿಸ್ ಕೊಟ್ಟು ವಾಪಸ್ ಪಡೆಯಬಹುದಾದರೆ ಈ ಬಡಜನರಿಗೆ ಕೊಟ್ಟ ನೋಟಿಸುಗಳನ್ನು ವಾಪಸ್ ಪಡೆದು ಅದಕ್ಕೆ ಪರ್ಯಾಯ ವ್ಯವಸ್ಥೆಗಳನ್ನು ಚಿಂತಿಸಲು ಆಯೋಗಕ್ಕೆ ಏಕೆ ಸಾಧ್ಯವಿಲ್ಲ? ಈ ಆನ್ಲೈನ್ ಕಾಲದಲ್ಲಿ ದೂರದ ಊರುಗಳಲ್ಲಿ ದುಡಿಯುವ ಜನರು ಏಕೆ ಪದೇ ಪದೇ ಪ್ರಯಾಣದ ಖರ್ಚು ಭರಿಸಿ ಊರಿಗೆ ಅಲೆಯಬೇಕು? ವಿದೇಶದಲ್ಲಿರುವವರಿಗೆ ಅವರ ಮನೆಯವರು ದಾಖಲೆಗಳನ್ನು ಒದಗಿಸಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ಮತ್ತೆ ಸೇರಿಸಿಕೊಳ್ಳಲು ಸಾಧ್ಯವಾಗಬಹುದಾದರೆ ದೂರದ ಊರುಗಳಲ್ಲಿರುವ ಜನರಿಗೆ ಏಕೆ ಈ ಸೌಲಭ್ಯವಿಲ್ಲ?
ನೋಟ್ ಬ್ಯಾನ್ ಸಂದರ್ಭದಲ್ಲೂ ಹೀಗೆ ಬೀದಿಯಲ್ಲಿ ನಿಂತವರು ಜನಸಾಮಾನ್ಯರು ಮಾತ್ರ ಎನ್ನುವುದು ನಮಗೆ ನೆನಪಿರಬೇಕು. ಸರ್ಕಾರಿ ವ್ಯವಸ್ಥೆಗಳು ಹೀಗೆ ಪಕ್ಷಪಾತಿತನದಿಂದ ಕೂಡಿರುವುದು ನಿಜಕ್ಕೂ ದುರಂತ.
