ಬ್ರಿಕ್ಸ್‌ ಶೃಂಗಸಭೆ : ದೆಹಲಿ ಬಡತನ ಮರೆಮಾಚಲು ಹರಸಾಹಸ – ಕೊಳೆಗೇರಿಗಳಿಗೆ ಪರದೆ ಹಾಕ್ತಿದ್ದಾರೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಆಯೋಜನೆಗೊಂಡಿರುವ ಬ್ರಿಕ್ಸ್‌ ಶೃಂಗಸಭೆಗೆ (BRICS Summit) ವಿದೇಶಿ ಗಣ್ಯರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ರಸ್ತೆ ಬದಿಯ ಕೊಳಗೇರಿಗಳು (Slums) ಹೊರಗಿನವರಿಗೆ ಕಾಣದಂತೆ ನೀಲಿ ಮತ್ತು ಬಿಳಿ ಬಣ್ಣದ ದೊಡ್ಡ ಪರದೆಗಳನ್ನು ಹಾಕಿ ಮುಚ್ಚಲಾಗಿದೆ. ಅಧಿಕಾರಿಗಳ ಈ ಕ್ರಮ ಭಾರೀ ಚರ್ಚೆಗೆ ಗ್ರಾಸವಾಗಿದೆ. ವಸಂತ್‌ ವಿಹಾರ್ ಹಾಗೂ ಆರ್‌.ಕೆ. ಪುರಂ ಭಾಗದ ಹೆದ್ದಾರಿ ಮಗ್ಗುಲಲ್ಲಿರುವ ಬಡಾವಣೆಗಳ ರಸ್ತೆಯುದ್ದಕ್ಕೂ ಈ ರೀತಿ ತಡೆಗೋಡೆಗಳನ್ನು ನಿರ್ಮಿಸಲಾಗಿದ್ದು, ಇದು ಸ್ಥಳೀಯ ನಿವಾಸಿಗಳ ದೈನಂದಿನ ಬದುಕಿನ ಮೇಲೆ ತೀವ್ರ ವ್ಯತಿರಿಕ್ತ ಪರಿಣಾಮ ಬೀರಿದೆ. ಶೃಂಗಸಭೆಯ ಕಾರ್ಯಾಚರಣೆ ಹಾಗೂ ಭದ್ರತೆಯ ನೆಪದಲ್ಲಿ ದೆಹಲಿ ಪೊಲೀಸರು ಮುಖ್ಯರಸ್ತೆ ಸಂಚಾರವನ್ನು ಬಂದ್‌ ಮಾಡಿದ್ದು, ಅಲ್ಲಿನ ನಿವಾಸಿಗಳು ಕೆಲಸಕ್ಕೆ ತೆರಳಲು, ಅಗತ್ಯ ಸಾಮಗ್ರಿಗಳನ್ನು ತರಲು ಮತ್ತು ಸಣ್ಣಪುಟ್ಟ ಅಂಗಡಿಗಳನ್ನು ನಡೆಸಲು ಪರದಾಡುವಂತಾಗಿದೆ.

ದಿನಗೂಲಿ ನೆಚ್ಚಿಕೊಂಡು ಬದುಕುತ್ತಿರುವ ಕಾರ್ಮಿಕರಿಗೆ ಕೆಲಸವಿಲ್ಲದೆ ಆದಾಯಕ್ಕೆ ಕಡಿತ ಬಿದ್ದಿದ್ದರೆ, ವ್ಯಾಪಾರಿಗಳು ಗ್ರಾಹಕರಿಲ್ಲದೆ ಭಾರಿ ನಷ್ಟ ಅನುಭವಿಸುತ್ತಿದ್ದಾರೆ. 2023ರ ಜಿ20 ಶೃಂಗಸಭೆ ನಡೆದಾಗಲೂ ಇದೇ ರೀತಿ ಮಾಡಲಾಗಿತ್ತು ಎಂದು ನೆನಪಿಸಿಕೊಳ್ಳುವ ಸ್ಥಳೀಯರು, ಬಡತನವನ್ನು ಪರದೆ ಹಾಕಿ ಮುಚ್ಚಿಡುವ ಬದಲು ತಮಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಿ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇನ್ನೊಂದೆಡೆ, ನಗರಕ್ಕೆ ಬರುವ ವಿದೇಶಿ ಅತಿಥಿಗಳ ಎದುರು ದೇಶದ ಗೌರವ ಕಾಪಾಡಲು ಮತ್ತು ಸೌಂದರ್ಯೀಕರಣದ ದೃಷ್ಟಿಯಿಂದ ಇಂತಹ ಸ್ವಚ್ಛತಾ ಕ್ರಮಗಳು ಅಗತ್ಯ ಎಂದು ಕೆಲವರು ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಪೊಲೀಸರು, ಗಣ್ಯರ ಭದ್ರತೆ ಹಾಗೂ ಓಡಾಟಕ್ಕೆ ಅನುಕೂಲವಾಗುವಂತೆ ಸಂಚಾರ ಬಂದ್ ಮಾಡಲಾಗಿದ್ದು, ಸ್ಥಳೀಯರಿಗೆ ಪರ್ಯಾಯ ಮಾರ್ಗದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು