ರಂಗಕರ್ಮಿ ಮಾಳವಾಡರಿಗೆ ಅಂತಿಮ ನಮನ

“..ಅಪರೂಪದ ರಂಗಕರ್ಮಿಯ ಅಗಲಿಕೆ ಆ ಭಾಗದ ದೊಡ್ಡಾಟ ಪರಂಪರೆಗೆ ದೊಡ್ಡ ಏಟು ಕೊಟ್ಟಂತಾಗಿದೆ. ಮಾಳವಾಡರು ಆರಂಭಿಸಿದ ಬಯಲಾಟದ ಪುನರುತ್ಥಾನದ ಕಾಯಕವನ್ನು ಮುಂದುವರೆಸುವ ಕೆಲಸ ಅವರ ಮಗ ರಾಜಶೇಖರ ಹಾಗೂ ಅವರ ರಂಗ ಬಳಗದವರ ಹೆಗಲೇರಿದೆ..” ಚಿಂತಕರಾದ ಶಶಿಕಾಂತ ಯಡಹಳ್ಳಿ ಅವರ ಬರಹದಲ್ಲಿ

ಆಧುನಿಕ ಕನ್ನಡ ರಂಗಭೂಮಿಯ ಹಿರಿಯ ರಂಗಕರ್ಮಿಗಳಾದ ಗಂಗಾಧರಸ್ವಾಮಿಯವರು ಅಸ್ತಂಗತರಾಗಿ ಇನ್ನೂ ಎರಡು ವಾರ ಕಳೆದಿಲ್ಲ. ಅಷ್ಟರಲ್ಲಿ ಉತ್ತರ ಕರ್ನಾಟಕ ರಂಗಭೂಮಿಯ ಇನ್ನೊಂದು ಆಧಾರ ಸ್ತಂಭ ಕಾಲದ ಗರ್ಭಕ್ಕೆ ಸೇರಿಹೋಗಿದೆ.

ಆಧುನಿಕ ರಂಗಭೂಮಿ ಹಾಗೂ ಜಾನಪದ ರಂಗಭೂಮಿಯಲ್ಲಿ ನಾಟಕಕಾರರಾಗಿ, ನಿರ್ದೇಶಕರಾಗಿ, ಸಂಘಟಕರಾಗಿ ಕ್ರಿಯಾಶೀಲರಾಗಿದ್ದ ಎಂ.ಎಸ್.ಮಾಳವಾಡರವರ ಅಕಾಲಿಕ ಅಗಲಿಕೆ ನಿಜವಾದ ಅರ್ಥದಲ್ಲಿ ರಂಗಭೂಮಿಗಾದ ನಷ್ಟ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಳವಾಡರು ಸೆಪ್ಟಂಬರ್ 10 ರಂದು ತೀರಿಕೊಂಡ ಸುದ್ದಿ ಕೇವಲ ಅವರ ಕುಟುಂಬದವರಿಗೆ ಮಾತ್ರವಲ್ಲ ಮಾಳವಾಡರ ರಂಗಬಳಗಕ್ಕೆ ಆಘಾತ ತಂದಿದೆ. ಅವರ ಸಂಪರ್ಕಕ್ಕೆ ಬಂದ ಎಲ್ಲರನ್ನೂ ತಮ್ಮ ಆತ್ಮೀಯ ಬಳಗಕ್ಕೆ ಸೇರಿಸಿಕೊಂಡು ನನ್ನ “ರಂಗಬಳಗ” ಎಂದು ಹೆಮ್ಮೆಯಿಂದ ಹೇಳುತ್ತಿದ್ದ ಮಾಳವಾಡರು ತಮ್ಮ ದೊಡ್ಡದಾದ ಬಳಗವನ್ನು ಬಯಲಲ್ಲಿ ಬಿಟ್ಟು ಬಯಲಾಗಿ ಹೋಗಿದ್ದಾರೆ.

ಮಾಳವಾಡರ ವಿಶೇಷತೆ ಏನೆಂದರೆ ‘ಕೃಷಿ ಹಾಗೂ ಕಲೆ’ ಎರಡನ್ನೂ ತಮ್ಮ ಕಾಯಕದ ಭಾಗವಾಗಿಸಿಕೊಂಡಿದ್ದು. ಕೃಷಿಯಿಂದ ಬಂದ ಆದಾಯವನ್ನು ರಂಗಚಟುವಟಿಕೆಗಳಿಗೆ ತೊಡಗಿಸಿದ್ದರು. ನಶಿಸುತ್ತಿರುವ ಜಾನಪದ ದೊಡ್ಡಾಟದ ಕಲೆಯನ್ನು ಉಳಿಸಿ ಬೆಳೆಸಲು ಶ್ರಮಿಸಿದರು. ಮಗ ರಾಜಶೇಖರನನ್ನು ದೊಡ್ಡಾಟದ ಕಲಾವಿದನನ್ನಾಗಿ ರೂಪಿಸಿದರು. ಇಂಗಳಗಿ ಎನ್ನುವ ಪುಟ್ಟ ಗ್ರಾಮಕ್ಕೆ ದೊಡ್ಡಾಟದ ಊರು ಎಂಬ ಅಸ್ಮಿತೆಯನ್ನು ತಂದು ಕೊಟ್ಟರು. ಹಲವಾರು ಗ್ರಾಮೀಣ ಯುವಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕಾಲಕಾಲಕ್ಕೆ ದೊಡ್ಡಾಟ ಪ್ರಕಾರದ ರಂಗ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಿ, ಅಳಿವಿನಂಚಿನಲ್ಲಿರುವ ಈ ಜಾನಪದ ಕಲೆಯನ್ನು ಈಗಿನ ತಲೆಮಾರಿಗೆ ಪರಿಚಯಿಸಿದರು. ಸಾಂಪ್ರದಾಯಿಕ ಬಯಲಾಟಕ್ಕೆ ಆಧುನಿಕತೆಯ ಸ್ಪರ್ಷ ನೀಡಿದರು. ವೀರ ರಾಣಿ ಕಿತ್ತೂರು ಚೆನ್ನಮ್ಮ, ಬಾಹುಬಲಿ.. ಹೀಗೆ ಕೆಲವಾರು ದೊಡ್ಡಾಟದ ನಾಟಕಗಳನ್ನು ಸ್ವತಃ ರಚಿಸಿದರು. ಹತ್ತಾರು ನಾಟಕಗಳನ್ನು ನಿರ್ದೇಶಿಸಿದರು. ನೂರಾರು ತರಬೇತಿ ಶಿಬಿರಗಳನ್ನು ಸಂಘಟಿಸಿದರು.

ಧಾರವಾಡ ಜಿಲ್ಲೆಯ ಶಿಗ್ಗಾಂವ್ ಬಳಿ ಇರುವ ಪುಟ್ಟ ಗ್ರಾಮ ಇಂಗಳಗಿ ಮಾಳವಾಡರ ಜನ್ಮಭೂಮಿ. ಧಾರವಾಡ, ಹಾವೇರಿ, ಗದಗ ಜಿಲ್ಲೆಗಳೂ ಸೇರಿದಂತೆ ಉತ್ತರ ಕರ್ನಾಟಕ ಅವರ ಕರ್ಮಭೂಮಿ. ಬಯಲಾಟಕ್ಕೆ ಹೆಸರುವಾಸಿಯಾಗಿದ್ದ ಉತ್ತರ ಕರ್ನಾಟಕದಲ್ಲೇ ಬಯಲಾಟ ಪರಂಪರೆಯು ಕಾಲಕ್ರಮೇಣ ಅವಸಾನದತ್ತ ಸಾಗುತ್ತಿರುವುದನ್ನು ಸಹಿಸದ ಮಾಳವಾಡರು ಬಯಲಾಟದ ಪ್ರಮುಖ ಅಂಗವಾಗಿರುವ ದೊಡ್ಡಾಟ ಪರಂಪರೆಯನ್ನು ಉಳಿಸಿ ಬೆಳೆಸಲು ಅಪಾರವಾಗಿ ಶ್ರಮಿಸಿದರು. ಸಾಂಪ್ರದಾಯಿಕ ಯಕ್ಷಗಾನ ಬಯಲಾಟಕ್ಕೆ ಶಿವರಾಮ ಕಾರಂತರು ಹೇಗೆ ಆಧುನಿಕ ಸ್ಪರ್ಶ ನೀಡಿ ಹೊಸ ಜೀವಂತಿಕೆಯನ್ನು ತುಂಬಿದ್ದರೋ ಹಾಗೆ ಉತ್ತರ ಕರ್ನಾಟಕದ ಜೀವಂತ ಕಲೆಯಾದ ದೊಡ್ಡಾಟವನ್ನೂ ಸೃಜನಶೀಲವಾಗಿ ರಾಜ್ಯಾದ್ಯಂತ ಬೆಳೆಸಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದರು. ಅದಕ್ಕಾಗಿ ಅಪಾರ ಶ್ರಮವನ್ನೂ ಹಾಕಿದ್ದರು. ತಮ್ಮದೇ ಆದ ದೊಡ್ಡಾಟದ ವೇಶಭೂಷಣಗಳ ಸಂಗ್ರಹಾರವನ್ನು ಸ್ಥಾಪಿಸಿದ್ದರು. ತಮ್ಮ ಈ ಪ್ರಯತ್ನದಲ್ಲಿ ಒಂದಿಷ್ಟು ಯಶಸ್ಸನ್ನೂ ಹೊಂದಿದ್ದರು. ಮಾಳವಾಡರು ಆಸೆ ಪಟ್ಟಂತೆ ದೊಡ್ಡಾಟವನ್ನು ದಡಕ್ಕೆ ಸೇರಿಸುವ ಮುನ್ನವೇ ತಮ್ಮ ಬದುಕಿನ ಆಟವನ್ನು ಮುಗಿಸಿದರು.

ಮಾಳವಾಡರ ರಂಗಬದ್ದತೆ ಎಷ್ಟಿತ್ತೆಂದರೆ ಓದಿ ಕೆಲಸಕ್ಕೆ ಸೇರಿದ್ದ ತಮ್ಮ ಮಗನನ್ನೇ ಮರಳಿ ಊರಿಗೆ ಕರೆತಂದು ವೇಷಭೂಷಣ ತೊಡಿಸಿ ಬಣ್ಣ ಹಚ್ಚಿಸುವಷ್ಟು. ತಮ್ಮ ನಂತರ ತಾವು ಆರಂಭಿಸಿದ ಕಲಾ ಅಭಿಯಾನವನ್ನು ಯಾರು ಮುನ್ನಡೆಸಬೇಕು ಎಂಬುದು ಅವರ ಮುಂದಿರುವ ಪ್ರಶ್ನೆಯಾಗಿತ್ತು. ಮಾಳವಾಡರ ಬಲಗೈ ಬಂಟನಂತಿದ್ದ ದೊಡ್ಡಾಟದ ಮೇಳದ ನಾಯಕ ಬಡಿಗೇರ್ ಅಕಾಲಿಕವಾಗಿ ನಿಧನರಾದದ್ದು ಅವರನ್ನು ತುಂಬಾ ಕಾಡತೊಡಗಿತ್ತು. ತಮ್ಮ ಒಬ್ಬನೇ ಮಗ ರಾಜಶೇಖರನನ್ನು ಬಯಲಾಟದ ಯಜ್ಞಕ್ಕೆ ಸಮರ್ಪಿಸಿದರು. ‘ಈ ಕಲೆಯನ್ನು ನಂಬಿ ಆ ಹುಡುಗನ ಭವಿಷ್ಯ ಹಾಳು ಮಾಡಬೇಡಿ’ ಎಂದು ಹೇಳಿದಾಗ “ಎಲ್ಲರೂ ನೌಕರಿ ಮಾಡಲು ಪಟ್ಟಣ ಸೇರಿದರೆ ಕೃಷಿ ಮಾಡುವವರು ಯಾರು? ಕಲೆ ಬೆಳೆಸುವವರು ಯಾರು? ಮಗನ ಬದುಕಿಗೆ ಕೃಷಿ ಭೂಮಿ ಇದೆ, ರಂಗಕಲೆ ಜೊತೆಗಿದೆ. ನನ್ನ ಮಹತ್ವಾಕಾಂಕ್ಷೆಯನ್ನು ನನ್ನ ಮಗ ಮುಂದುವರೆಸಲಿ ಬಿಡಿ” ಎಂದು ಮಾಳವಾಡರು ಹೇಳುತ್ತಿದ್ದರು. ಆಧುನಿಕ ರಂಗಭೂಮಿಯ ಪರಿಚಯ ಆಗಲಿ ಎಂದು ರಾಜಶೇಖರನನ್ನು ಹೆಗ್ಗೋಡಿನ ನೀನಾಸಂ ರಂಗಶಾಲೆಗೂ ಸೇರಿಸಿದ್ದರು. ಇಂಗಳಿಗಿಯ ರೈತಾಪಿ ಕೃಷಿ ಕಾರ್ಮಿಕರನ್ನೂ ದೊಡ್ಡಾಟದ ವೇದಿಕೆಗೆ ಕರೆತಂದರು. ತಾಳ ಹಾಕಿದರು, ಮೇಳ ಕಟ್ಟಿದರು. ಅವರು ಕಟ್ಟಿದ ರಂಗ ಗರಡಿಯಲ್ಲಿ ಅನೇಕ ಕಲಾವಿದರು ರೂಪಗೊಂಡರು.

ಇಂತಹ ಅಪರೂಪದ ರಂಗಕರ್ಮಿಯ ಅಗಲಿಕೆ ಆ ಭಾಗದ ದೊಡ್ಡಾಟ ಪರಂಪರೆಗೆ ದೊಡ್ಡ ಏಟು ಕೊಟ್ಟಂತಾಗಿದೆ. ಮಾಳವಾಡರು ಆರಂಭಿಸಿದ ಬಯಲಾಟದ ಪುನರುತ್ಥಾನದ ಕಾಯಕವನ್ನು ಮುಂದುವರೆಸುವ ಕೆಲಸ ಅವರ ಮಗ ರಾಜಶೇಖರ ಹಾಗೂ ಅವರ ರಂಗ ಬಳಗದವರ ಹೆಗಲೇರಿದೆ. ಮಲ್ಲಿಕಾರ್ಜುನ ಮಾಳವಾಡರು ಭೌತಿಕವಾಗಿ ಇಲ್ಲವಾಗಿದ್ದರೂ ಬಯಲುಸೀಮೆಯ ಬಯಲಾಟದ ಬಯಲಲ್ಲಿ ಬಹುಕಾಲ ನೆನಪಿನಲ್ಲಿರುವಂತಹುದ್ದಾಗಿದೆ. ರಂಗನಿಷ್ಟ ಮಾಳವಾಡರಿಗೆ ಅಂತಿಮ ರಂಗ ನಮನಗಳು.

Related Articles

ಇತ್ತೀಚಿನ ಸುದ್ದಿಗಳು