ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಗೆ ವಿದೇಶಿ ಗಣ್ಯರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಬದಿಯ ಕೊಳಗೇರಿ ಪ್ರದೇಶಗಳನ್ನು ದೊಡ್ಡದಾದ ನೀಲಿ–ಬಿಳಿ ಪರದೆಗಳಿಂದ ಮರೆಮಾಡಿರುವ ಕ್ರಮ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.
ವಸಂತ್ ವಿಹಾರ್ ಮತ್ತು ಆರ್.ಕೆ. ಪುರಂ ಪ್ರದೇಶಗಳ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಇರುವ ಬಡಾವಣೆಗಳು ಹೊರಗಿನಿಂದ ಕಾಣದಂತೆ ಉದ್ದಕ್ಕೂ ಪರದೆಗಳನ್ನು ಅಳವಡಿಸಲಾಗಿದೆ. ಗಣ್ಯರ ಭದ್ರತೆ ಮತ್ತು ಸಂಚಾರ ನಿರ್ವಹಣೆಯ ಹಿನ್ನೆಲೆಯಲ್ಲಿ ಹಲವು ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಿರುವುದರಿಂದ ಸ್ಥಳೀಯ ನಿವಾಸಿಗಳು ದೈನಂದಿನ ಬದುಕಿನಲ್ಲಿ ಹಲವು ತೊಂದರೆಗಳನ್ನು ಎದುರಿಸುತ್ತಿದ್ದಾರೆ.
ಕೆಲಸಕ್ಕೆ ತೆರಳುವ ಕಾರ್ಮಿಕರು, ಅಗತ್ಯ ವಸ್ತುಗಳನ್ನು ಖರೀದಿಸಲು ಹೊರಡುವ ನಿವಾಸಿಗಳು ಹಾಗೂ ಸಣ್ಣ ಅಂಗಡಿಗಳನ್ನು ನಡೆಸುವ ವ್ಯಾಪಾರಿಗಳು ಸಂಚಾರ ನಿರ್ಬಂಧದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನಗೂಲಿ ಕೆಲಸವನ್ನೇ ಅವಲಂಬಿಸಿರುವ ಕುಟುಂಬಗಳಿಗೆ ಕೆಲಸದ ದಿನಗಳು ಕಡಿಮೆಯಾಗಿರುವುದು ಆದಾಯದ ಮೇಲೂ ಪರಿಣಾಮ ಬೀರಿದೆ. ಅಂಗಡಿಗಳಿಗೆ ಗ್ರಾಹಕರ ಸಂಖ್ಯೆ ಕುಸಿದಿರುವುದರಿಂದ ಸಣ್ಣ ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದಾರೆ.
ಈ ಕ್ರಮಕ್ಕೆ ಸ್ಥಳೀಯರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಅಂತಾರಾಷ್ಟ್ರೀಯ ಗಣ್ಯರ ಕಣ್ಣಿಗೆ ಬಡತನ ಕಾಣಬಾರದು ಎಂಬ ಕಾರಣಕ್ಕೆ ಅದನ್ನು ಪರದೆಗಳ ಹಿಂದೆ ಮರೆಮಾಡುವುದು ಸೂಕ್ತ ಕ್ರಮವಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. 2023ರಲ್ಲಿ ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯ ಸಂದರ್ಭದಲ್ಲಿಯೂ ಇದೇ ರೀತಿಯ ಕ್ರಮ ಕೈಗೊಳ್ಳಲಾಗಿತ್ತು ಎಂದು ಕೆಲ ನಿವಾಸಿಗಳು ನೆನಪಿಸಿಕೊಂಡಿದ್ದಾರೆ.
‘ಬಡತನವನ್ನು ಮರೆಮಾಚುವ ಬದಲು ಬಡವರಿಗೆ ಅಗತ್ಯ ಮೂಲಸೌಕರ್ಯ, ವಸತಿ ಹಾಗೂ ಉತ್ತಮ ಜೀವನ ಕಲ್ಪಿಸಲು ಸರ್ಕಾರ ಮುಂದಾಗಬೇಕು’ ಎಂಬುದು ಸ್ಥಳೀಯರ ಆಗ್ರಹವಾಗಿದೆ.
‘ಕೊಳಗೇರಿ ಜನರು ಕಸ ಹರಡುತ್ತಾರೆ ಎನ್ನುತ್ತಾರೆ. ನಮಗಿಂತ ಸ್ವಚ್ಛವಾಗಿ ಯಾರೂ ಇರಲ್ಲ. ನಮ್ಮ ಓಣಿಗಳನ್ನು ನೋಡಿ. ಎಷ್ಟು ಸ್ವಚ್ಛವಾಗಿ ಇಟ್ಟುಕೊಂಡಿದ್ದೇವೆ. ಪ್ರತಿಯೊಬ್ಬರೂ ತಮ್ಮ ಮನೆ ಬಾಗಿಲ ಮುಂದಿನ ಜಾಗವನ್ನು ಸ್ವಚ್ಛ ಮಾಡಿಕೊಳ್ಳುತ್ತೇವೆ’ ಎಂದಿದ್ದಾರೆ.
‘ಇದು ಕೊಳಗೇರಿಯಲ್ಲವೇ? ಅದಕ್ಕೇ ಪರದೆ ಹಾಕಿದ್ದಾರೆ’ ಎಂದು ಮತ್ತೊಬ್ಬರು ಹೇಳಿದ್ದಾರೆ.
- ಸ್ಥಳೀಯ ನಿವಾಸಿನಾವು ಮುಖ್ಯರಸ್ತೆಯಲ್ಲಿ ಕಾಲಿಟ್ಟರೆ, ನೀವೇಕೆ ಇಲ್ಲಿಗೆ ಬಂದಿದ್ದೀರಿ ಎಂದು ಪೊಲೀಸರು ಲಾಠಿಯಿಂದ ಹೊಡೆದು ಓಡಿಸುತ್ತಾರೆ. ಈ ಹಿಂದೆ ಜಿ20 ಸಮಯದಲ್ಲೂ ಆಗಿತ್ತು.ಈ ರೀತಿ ಪರದೆ ಹಾಕುವುದು ಇದೇ ಮೊದಲಲ್ಲ. ರಾಜಧಾನಿಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳು ಆಯೋಜನೆಗೊಂಡಾಗಲೆಲ್ಲ ಇದೇ ರೀತಿಯಾಗುತ್ತದೆ ಎಂಬುದು ಅಲ್ಲಿನ ನಿವಾಸಿಗಳ ಬೇಸರದ ಮಾತು.
ಆದರೆ ಮತ್ತೊಂದೆಡೆ, ಅಂತಾರಾಷ್ಟ್ರೀಯ ಮಟ್ಟದ ಶೃಂಗಸಭೆ ನಡೆಯುತ್ತಿರುವ ಸಂದರ್ಭದಲ್ಲಿ ನಗರದ ಸ್ವಚ್ಛತೆ, ಸೌಂದರ್ಯೀಕರಣ ಹಾಗೂ ಭದ್ರತೆಗೆ ಸಂಬಂಧಿಸಿದ ಕ್ರಮಗಳನ್ನು ಕೈಗೊಳ್ಳುವುದು ಸಹಜ ಎಂದು ಕೆಲವರು ಅಧಿಕಾರಿಗಳ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಈ ನಡುವೆ, ರಸ್ತೆ ಸಂಚಾರ ನಿರ್ಬಂಧವು ಗಣ್ಯರ ಭದ್ರತೆ ಹಾಗೂ ಸುಗಮ ಓಡಾಟದ ದೃಷ್ಟಿಯಿಂದ ಕೈಗೊಳ್ಳಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ನಿವಾಸಿಗಳಿಗೆ ಪರ್ಯಾಯ ಮಾರ್ಗಗಳನ್ನು ಒದಗಿಸಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಅಂತಾರಾಷ್ಟ್ರೀಯ ಗಣ್ಯರಿಗೆ ರಾಜಧಾನಿಯ ‘ಸುಂದರ’ ಮುಖವನ್ನು ತೋರಿಸುವ ಪ್ರಯತ್ನದ ನಡುವೆ, ನಗರದ ಬಡ ನಿವಾಸಿಗಳ ಬದುಕಿನ ಮೇಲೆ ಬೀರುತ್ತಿರುವ ಪರಿಣಾಮ ಇದೀಗ ರಾಜಕೀಯ ಹಾಗೂ ಸಾಮಾಜಿಕ ಚರ್ಚೆಗೆ ಕಾರಣವಾಗಿದೆ.
