ಸಂಸದ ಚಂದ್ರಶೇಖರ್ ಆಜಾದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣದಲ್ಲಿ ಎಸ್ಸಿ/ಎಸ್ಟಿ ಕಾಯ್ದೆಯಡಿ ದಾಖಲಾಗಿರುವ ಎಫ್ಐಆರ್ನಲ್ಲಿ ಯೂಟ್ಯೂಬರ್ ಅಜಿತ್ ಭಾರತಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ಮೇಲಿನ ತೀರ್ಪನ್ನು ದೆಹಲಿ ಹೈಕೋರ್ಟ್ ಕಾಯ್ದಿರಿಸಿದೆ. ವಿಚಾರಣೆ ವೇಳೆ ನ್ಯಾಯಮೂರ್ತಿ ಸೌರಭ್ ಬ್ಯಾನರ್ಜಿ ಅವರಿದ್ದ ಪೀಠವು, ಸಾರ್ವಜನಿಕವಾಗಿ ಇಂತಹ ಹೇಳಿಕೆಗಳನ್ನು ನೀಡುವಾಗ ಹೆಚ್ಚಿನ ಜಾಗರೂಕತೆ ವಹಿಸಬೇಕಿತ್ತು ಎಂದು ಅಜಿತ್ ಭಾರತಿಗೆ ಮೌಖಿಕವಾಗಿ ಎಚ್ಚರಿಸಿದೆ.
ವಿಚಾರಣೆ ವೇಳೆ ಖಾರವಾಗಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಸೌರಭ್ ಬ್ಯಾನರ್ಜಿ, ಜಾತಿ ಮತ್ತು ಸಾರ್ವಜನಿಕ ಕಾರ್ಯಕ್ರಮಗಳ ವಿಚಾರದಲ್ಲಿ ಯಾರದ್ದೋ ಹೆಸರನ್ನು ಪ್ರಸ್ತಾಪಿಸಿ ನಿಮ್ಮ ಅನಿಸಿಕೆ ವ್ಯಕ್ತಪಡಿಸುವ ಮಟ್ಟಕ್ಕೆ ಇಳಿಯಲು ಸಾಧ್ಯವಿಲ್ಲ, ಇದು ಕಾನೂನುಬಾಹಿರ ಸಂಕಷ್ಟ ತಂದಿಡುತ್ತದೆ ಎಂದರು. ಸಂವಿಧಾನ ಮತ್ತು ಕಾನೂನಿನಲ್ಲಿ ನಿರ್ದಿಷ್ಟ ವರ್ಗಗಳಿಗೆ ವಿಶೇಷ ರಕ್ಷಣೆ ಹಾಗೂ ಹಕ್ಕುಗಳಿವೆ, ಅಂತಹ ನಿಬಂಧನೆಗಳಿರುವಾಗ ನೀವು ಏನು ಮಾತನಾಡುತ್ತಿದ್ದೀರಿ ಎಂಬ ಎಚ್ಚರವಿರಬೇಕು ಎಂದು ತಿಳಿಸಿದರು.
ಇದೇ ವೇಳೆ, “ನನ್ನ ಕೋರ್ಟ್ನಲ್ಲಿ ನಾನು ಏನು ಬೇಕಾದರೂ ಮಾತನಾಡಬಹುದು, ಆದರೆ ಕೋರ್ಟ್ನಿಂದ ಹೊರಗಡೆ ಹಾಗೆ ಮಾಡಲು ಬರುವುದಿಲ್ಲ” ಎಂದು ನ್ಯಾಯಮೂರ್ತಿಗಳು ಕಿವಿಮಾತು ಹೇಳಿದರು. ಆರೋಪಿಗೆ ದೆಹಲಿ ಪೊಲೀಸರು ನೋಟಿಸ್ ನೀಡದಿರುವುದನ್ನು ಪ್ರಶ್ನಿಸಿದ ಪೀಠಕ್ಕೆ, ಆರೋಪಿಯ ವಿಳಾಸ ಇತ್ತೀಚೆಗಷ್ಟೇ ಪತ್ತೆಯಾದ ಕಾರಣ ನೋಟಿಸ್ ನೀಡಲು ಸಾಧ್ಯವಾಗಿಲ್ಲ ಎಂದು ಪೊಲೀಸರ ಪರ ವಕೀಲರು ಉತ್ತರಿಸಿದರು.
ವಿಚಾರಣೆ ವೇಳೆ ಭಾರತಿ ಪರ ವಕೀಲ ಜಯ್ ಅನಂತ್ ದೇಹಾದ್ರಾಯ್ ವೀಡಿಯೊದ ಪ್ರತಿಲಿಪಿ (ಟ್ರಾನ್ಸ್ಕ್ರಿಪ್ಟ್) ಸಲ್ಲಿಸಲು ಯತ್ನಿಸಿದಾಗ, ಅದರಲ್ಲಿರುವ ಪದಗಳು ಅತಿಯಾದ ಆಕ್ಷೇಪಾರ್ಹ ಹಾಗೂ ಅಸಭ್ಯತೆಯಿಂದ ಕೂಡಿವೆ ಎಂದು ನ್ಯಾಯಾಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಇಂತಹ ಆಕ್ಷೇಪಾರ್ಹ ದಾಖಲೆಗಳನ್ನು ತೆರೆದ ನ್ಯಾಯಾಲಯದಲ್ಲಿ ಪ್ರಸ್ತಾಪಿಸದಂತೆ ಎಚ್ಚರಿಸಿದ ನ್ಯಾಯಾಧೀಶರು, ನ್ಯಾಯಾಂಗ ನಿಂದನೆ ಎದುರಿಸಬೇಕಾದೀತು ಎಂದು ನುಡಿದರು. ಇದಕ್ಕೆ ಪ್ರತಿಕ್ರಿಯಿಸಿದ ವಕೀಲ ದೇಹಾದ್ರಾಯ್, ತಾವು ಕೇವಲ ಕೋರ್ಟ್ಗೆ ನೆರವಾಗಲು ಯತ್ನಿಸುತ್ತಿದ್ದು ಯಾವುದೇ ನಿಂದನೆ ಮಾಡುತ್ತಿಲ್ಲವೆಂದು ತಿಳಿಸಿ, ಪ್ರಕರಣದಿಂದ ಹಿಂದೆ ಸರಿಯುವುದಾಗಿ ಹೇಳಿದರು.
ಬಳಿಕ ನ್ಯಾಯಾಲಯವು ವಕೀಲರ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ ನಂತರ ದೇಹಾದ್ರಾಯ್ ತಮ್ಮ ವಾದವನ್ನು ಮುಂದುವರಿಸಿದರು. ತಮ್ಮ ಕಕ್ಷಿದಾರರು ಜಾತಿ ಆಧಾರಿತ ನಿಂದನೆ ಮಾಡಿಲ್ಲ, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕುಟುಂಬದ ಮಹಿಳೆಯರ ಬಗ್ಗೆ ಬಂದ ನಿಂದನೆಗೆ ಪ್ರತಿಯಾಗಿ ಆಕ್ರೋಶದಿಂದ ಪ್ರತಿಕ್ರಿಯಿಸಿದ್ದಾರೆಯೇ ಹೊರತು ಯಾವುದೇ ಸಮುದಾಯವನ್ನು ಹೀಯಾಳಿಸುವ ದುರುದ್ದೇಶ ಹೊಂದಿರಲಿಲ್ಲ ಎಂದು ವಕೀಲರು ವಾದಿಸಿದರು.
ದೆಹಲಿ ಪೊಲೀಸರು ಮತ್ತು ದೂರುದಾರರ ಪರ ವಕೀಲರು ಜಾಮೀನು ಅರ್ಜಿಯನ್ನು ಬಲವಾಗಿ ವಿರೋಧಿಸಿದರು. ಆರೋಪಿ ಸಾಮಾಜಿಕ ಜಾಲತಾಣಗಳಲ್ಲಿ ಉದ್ದೇಶಪೂರ್ವಕವಾಗಿ ನಿರ್ದಿಷ್ಟ ಸಮುದಾಯ ಹಾಗೂ ದಲಿತ ನಾಯಕರನ್ನು ಗುರಿಯಾಗಿಸಿಕೊಂಡು ಅತ್ಯಂತ ಕೀಳು ಮಟ್ಟದ ಭಾಷೆ ಬಳಸಿದ್ದಾರೆ ಮತ್ತು ಪ್ರಥಮ ದೃಷ್ಟಿಯಲ್ಲೇ ಜಾತಿ ನಿಂದನೆ ಪ್ರಕರಣ ಸಾಬೀತಾಗುವುದರಿಂದ ಎಸ್ಸಿ/ಎಸ್ಟಿ ಕಾಯ್ದೆಯಡಿ ನಿರೀಕ್ಷಣಾ ಜಾಮೀನು ನೀಡಬಾರದು ಎಂದು ಪ್ರತಿಪಾದಿಸಿದರು. ಎರಡೂ ಕಡೆಯ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠವು ಅರ್ಜಿಯ ಮೇಲಿನ ತನ್ನ ಅಂತಿಮ ಆದೇಶವನ್ನು ಕಾಯ್ದಿರಿಸಿದೆ.
