ಬೊಗಸೆಗೆ ದಕ್ಕಿದ್ದು-93 : “ಫಾದರ್‌ಲ್ಯಾಂಡ್” RSSನ ಪಿತೃಪ್ರಧಾನ “ಮದರ್‌ಲ್ಯಾಂಡ್”!

“..ಇಸ್ರೇಲನ್ನು ಪ್ರಧಾನಿ ನರೇಂದ್ರ ಮೋದಿ ಸುಮ್ಮನೇ “ಫಾದರ್‌ಲ್ಯಾಂಡ್” ಎಂದು ಕರೆದು ನಗೆಪಾಟಲಾದುದಲ್ಲ! ಅಂದರೆ, ಆರೆಸ್ಸೆಸ್ ತನ್ನ ಲಾಭಕ್ಕೆ ಜನರನ್ನು ಸಂಘಟಿಸಲು ಮಾತ್ರವೇ ಭಾರತದಲ್ಲಿ ಜನಪ್ರಿಯವಾದ “ಮಾತೃಭೂಮಿ”ಯ ಭಾವನಾತ್ಮಕ ಸೆಳೆತವನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಿದೆ..” ನಿಖಿಲ್ ಕೋಲ್ಪೆಯವರ ಬರಹದಲ್ಲಿ

“​ನಮಸ್ತೇ ಸದಾ ವತ್ಸಲೇ ಮಾತೃಭೂಮೇ, ತ್ವಯಾ ಹಿಂದೂ ಭೂಮೇ….” (ಓ ವಾತ್ಸಲ್ಯಮಯಿ ಮಾತೃಭೂಮಿಯೇ, ನಿನಗೆ ಸದಾ ನಮಸ್ಕಾರ; ಓ ಹಿಂದೂ ಭೂಮಿಯೇ…) ಭಾರತದಾದ್ಯಂತ ಸಾವಿರಾರು ಶಾಖೆಗಳಲ್ಲಿ ಪ್ರತಿದಿನ ಬೆಳ್ಳಂಬೆಳಗ್ಗೆ ಅಥವಾ ಸಂಜೆ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ತನ್ನ ಶಾಖೆಯನ್ನು ಮಾತೃರೂಪಿ ಭೂಮಿಯ ಮೇಲಿನ ಭಕ್ತಿಯನ್ನು ಸಾರುವ ಈ ಸಂಸ್ಕೃತ ಗೀತೆಯೊಂದಿಗೆ ಪ್ರಾರಂಭಿಸುತ್ತದೆ. ಆದರೆ, ‘ಭಾರತ ಮಾತೆ’ಯಾಗಿ ರಾಷ್ಟ್ರವನ್ನು ಗೌರವಿಸುವ ಈ ಕ್ರಮದ ಹಿಂದೆ ಒಂದು ಆಳವಾದ ವೈರುಧ್ಯವಿದೆ. ಅದು ಏನು?

“ಮಾತೃಭೂಮಿ” ಎಂದು ಮೇಲ್ನೋಟಕ್ಕೆ ಹೇಳುವ ಆದರೆ, ಆಂತರ್ಯದಲ್ಲಿ “ಪಿತೃಭೂಮಿ” ಅಡಗಿರುವ ಆರೆಸ್ಸೆಸ್ಸಿನ “ಹಿಂದೂತ್ವ”ದ ಸೈದ್ಧಾಂತಿಕ ಚೌಕಟ್ಟು “ಮೇಲ್ಜಾತಿ” ಎಂದು ಹೇಳಿಕೊಳ್ಳುವವರ “ಪಿತೃಪ್ರಧಾನ” ಮತ್ತು ಬ್ರಾಹ್ಮಣೀಯ ಸಾಮಾಜಿಕ-ಧಾರ್ಮಿಕ ನಿಯಮಗಳಿಂದ ರೂಪಿಸಲ್ಪಟ್ಟಿದೆ. ಅದೇ ಹೊತ್ತಿಗೆ ಅದು, ಶಿಸ್ತುಬದ್ಧ ಹಾಗೂ ಮಿಲಿಟರಿ ಸ್ವರೂಪದ ಜರ್ಮನಿಯ ಆರ್ಯನ್‌- ನಾಝಿ, ಇಟಲಿಯ ಫ್ಯಾಸಿ ಮತ್ತು ಇಸ್ರೇಲಿನ ಯಹೂದಿ ಜನಾಂಗೀಯ-ರಾಷ್ಟ್ರೀಯತಾವಾದಗಳ ಬಗ್ಗೆ ಸ್ಪಷ್ಟವಾದ ಮೆಚ್ಚುಗೆಯನ್ನು ಹೊಂದಿದೆ ಮತ್ತು ಅವುಗಳಿಂದ ಪ್ರಭಾವಿತವಾಗಿದೆ. ಇಸ್ರೇಲನ್ನು ಪ್ರಧಾನಿ ನರೇಂದ್ರ ಮೋದಿ ಸುಮ್ಮನೇ “ಫಾದರ್‌ಲ್ಯಾಂಡ್” ಎಂದು ಕರೆದು ನಗೆಪಾಟಲಾದುದಲ್ಲ! ಅಂದರೆ, ಆರೆಸ್ಸೆಸ್ ತನ್ನ ಲಾಭಕ್ಕೆ ಜನರನ್ನು ಸಂಘಟಿಸಲು ಮಾತ್ರವೇ ಭಾರತದಲ್ಲಿ ಜನಪ್ರಿಯವಾದ “ಮಾತೃಭೂಮಿ”ಯ ಭಾವನಾತ್ಮಕ ಸೆಳೆತವನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಿದೆ; ಆದರೆ, ಅದಕ್ಕೆ ಸಮಾನಾಂತವಾಗಿ ತನ್ನ ನಿಜ ಒಲವಾದ “ಕರ್ಮಭೂಮಿ”, ಹಿಂದೂ ಧಾರ್ಮಿಕ ಗುರುತಿನ “ಪುಣ್ಯಭೂಮಿ” ಮತ್ತು “ಹಿಂದೂ ಭೂಮಿ” ಪರಿಕಲ್ಪನೆಗಳ ಮೇಲೆ ಆಧಾರಿತವಾದ, “ಪಿತೃಭೂಮಿ” ಎಂಬ “ಪಿತೃಪ್ರಧಾನ”, ಅಂದರೆ, ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯನ್ನು ಒಳಗೊಳಗೇ ರೂಪಿಸಿ, ಬೆಳೆಸುತ್ತಿದೆ.

ಈ ಸೈದ್ಧಾಂತಿಕ ಇಬ್ಬಗೆ ನೀತಿಯ ಮೂಲಗಳನ್ನು ತಿಳಿಯಲು, ಪ್ರಾಚೀನ ಇಂಡೋ-ಆರ್ಯನ್ ಬ್ರಾಹ್ಮಣ್ಯದ ಸಾಮಾಜಿಕ ವ್ಯವಸ್ಥೆಗಳು ಮತ್ತು ಅಪ್ಪಟ ಭಾರತೀಯ ಮೂಲದ, ಈ ಉಪಖಂಡದಾದ್ಯಂತ ಇರುವ ಪುರಾತನ, ಸ್ಥಳೀಯ, ದ್ರಾವಿಡ ಮತ್ತು ಬುಡಕಟ್ಟು ಸಂಪ್ರದಾಯಗಳ ನಡುವಿನ ಸಾಮಾಜಿಕ-ಧಾರ್ಮಿಕ ವ್ಯತ್ಯಾಸಗಳನ್ನು ಪರಿಶೀಲಿಸುವುದು ಅಗತ್ಯ. ಮಧ್ಯ ಏಷ್ಯಾ, ಪೂರ್ವ ಯುರೋಪಿನಿಂದ ಉತ್ತರ ಭಾರತಕ್ಕೆ ಪ್ರವೇಶಿಸಿದ ಅಲೆಮಾರಿ ಇಂಡೋ-ಯುರೋಪಿಯನ್ ಬುಡಕಟ್ಟುಗಳು, ಪುರುಷ ದೇವತೆಯ ಆರಾಧನೆ, ಪುರುಷ-ಕೇಂದ್ರಿತ ಉತ್ತರಾಧಿಕಾರ ಮತ್ತು ಪಿತೃಗಳಿಗೆ (ಪೂರ್ವಜರಿಗೆ) ಮೀಸಲಾದ ಆಚರಣೆಗಳನ್ನು ಒಳಗೊಂಡ ಪಿತೃಪ್ರಧಾನ ಸಾಮಾಜಿಕ ವ್ಯವಸ್ಥೆಯನ್ನು ಸ್ಥಾಪಿಸಿದವು. ಈ ರಚನೆಗಳು ಆರಂಭಿಕ ಬ್ರಾಹ್ಮಣೀಯ ಹಿಂದೂ ಧರ್ಮದ ಭಾಗವಾಗಿ ರೂಪುಗೊಂಡಾಗ, ಮನುಸ್ಮೃತಿಯಂತಹ ಧರ್ಮಗ್ರಂಥಗಳು ಮಹಿಳೆಯರನ್ನು ನಿಯಂತ್ರಿತ ಸಂಬಂಧಗಳ ಚೌಕಟ್ಟಿನಲ್ಲಿ ಬಂಧಿಸುವ ನಿಯಮಗಳನ್ನು ವಿಧಿಸಿದವು; ಅದರ ಪ್ರಕಾರ, ಸ್ತ್ರೀಯು ಬಾಲ್ಯದಲ್ಲಿ ತಂದೆಯ ಅಧೀನದಲ್ಲಿ, ಯೌವನದಲ್ಲಿ ಪತಿಯ ಅಧೀನದಲ್ಲಿ ಮತ್ತು ವಿಧವೆಯಾದಾಗ ಪುತ್ರರ ಅಧೀನದಲ್ಲಿ ಇರಬೇಕೆಂದು ಘೋಷಿಸಲಾಯಿತು. ಇದುವೇ ಇಂದಿಗೂ ಆರೆಸ್ಸೆಸ್ಸಿನ ವಿಚಾರ.

ಇದಕ್ಕೆ ತದ್ವಿರುದ್ಧವಾಗಿ, ಅನೇಕ ಬ್ರಾಹ್ಮಣೇತರ, ದ್ರಾವಿಡ ಮತ್ತು ಸ್ಥಳೀಯ ಬುಡಕಟ್ಟು ಗುಂಪುಗಳು ಮಾತೃಪ್ರಧಾನ ಮತ್ತು ಮಾತೃ-ನಿವಾಸಿ (ಮಹಿಳೆಯ ಮನೆಯಲ್ಲೇ ವಾಸಿಸುವ) ಸಂಪ್ರದಾಯಗಳನ್ನು ಪಾಲಿಸುತ್ತಿದ್ದವು — ಉದಾಹರಣೆಗೆ ಕೇರಳದ ‘ಮರುಮಕ್ಕತ್ತಾಯಂ’ ಪದ್ಧತಿ ಅಥವಾ ಕರಾವಳಿ ಕರ್ನಾಟಕದ ‘ಅಳಿಯ ಸಂತಾನ’ ಪದ್ಧತಿ. ಇವುಗಳಲ್ಲಿ ವಂಶಾವಳಿಯು ಸ್ತ್ರೀ ಪರಂಪರೆಯ ಮೂಲಕ ಸಾಗುತ್ತಿತ್ತು ಮತ್ತು ಮಹಿಳೆಯರಿಗೆ ರಚನಾತ್ಮಕ ಸ್ವಾಯತ್ತತೆ, ಆಸ್ತಿ ಹಕ್ಕುಗಳು ಹಾಗೂ ಸ್ವತಂತ್ರ ಸ್ಥಾನಮಾನವನ್ನು ನೀಡಲಾಗಿತ್ತು. ಇದಲ್ಲದೆ, ಸ್ಥಳೀಯ ಜಾನಪದ ಸಂಪ್ರದಾಯಗಳು ಅಲ್ಲಿನ ಸ್ತ್ರೀ ದೇವತೆಗಳನ್ನು ಕೇವಲ ಪುರುಷ ದೇವತೆಯ ಅಧೀನದಲ್ಲಿರುವ ಸೌಮ್ಯ ಸಂಗಾತಿಯರನ್ನಾಗಿ ಮಾತ್ರವಲ್ಲದೆ, ಸೃಷ್ಟಿ ಮತ್ತು ವಿನಾಶದ ಪರಮೋಚ್ಚ ಹಾಗೂ ಸ್ವಯಂ-ಅಸ್ತಿತ್ವದ ಶಕ್ತಿಗಳನ್ನಾಗಿ (ಶಕ್ತಿ) ಪರಿಗಣಿಸುತ್ತಿದ್ದವು. ಶಕ್ತಿ ಪೂಜೆಯ ವ್ಯಾಪಕ ಸಾಂಸ್ಕೃತಿಕ ಹೆಜ್ಜೆಗುರುತುಗಳ ಹೊರತಾಗಿಯೂ, ಸಾಂಪ್ರದಾಯಿಕ ಬ್ರಾಹ್ಮಣ ಸಿದ್ಧಾಂತವು ಪತಿ ದೇವತೆ (ಪತಿ ದೇವರಾಗಿ) ಮತ್ತು ಪತಿವ್ರತ ಧರ್ಮ (ಪತಿಗೆ ಭಕ್ತಿಯ ಧಾರ್ಮಿಕ ಕರ್ತವ್ಯ)ದಂತಹ ಪರಿಕಲ್ಪನೆಗಳ ಮೂಲಕ ಸೌಮ್ಯ ಸ್ತ್ರೀ ಪಾತ್ರವನ್ನು ಮಹಿಳೆಯರಿಗೆ ನೀಡಿತು. ಈ ಧಾರ್ಮಿಕ ಚೌಕಟ್ಟಿನ ಅಡಿಯಲ್ಲಿ, ಮಹಿಳೆಯ ಆಧ್ಯಾತ್ಮಿಕ ವಿಮೋಚನೆಯನ್ನು (ಮೋಕ್ಷ) ಸ್ವತಂತ್ರ ತಪಸ್ಸು ಅಥವಾ ಶಾಸ್ತ್ರ ಅಧ್ಯಯನ, ಮತ್ತು ಪೂಜೆಯ ಅಧಿಕಾರದಿಂದ ಬೇರ್ಪಡಿಸಲಾಯಿತು ಮತ್ತು ಅವಳಿಗೆ ನಿಯೋಜಿಸಲಾದ ಪುರುಷ ಅಧೀನದ “ಕರ್ಮಭೂಮಿ”ಗೆ ಕಟ್ಟುನಿಟ್ಟಾಗಿ ಬಂಧಿಸಲಾಯಿತು. ಈ ‘ಕರ್ಮಭೂಮಿ’ಯೊಳಗೆ, ಮಹಿಳೆಯ ಪ್ರಾಥಮಿಕ ಕರ್ತವ್ಯವೆಂದರೆ ವಂಶಾವಳಿಯ ಶುದ್ಧತೆ ಕಾಪಾಡುವುದು ಅಂದರೆ ಪಾತಿವ್ರತ್ಯ, ಧಾರ್ಮಿಕ ನೈರ್ಮಲ್ಯ ಮತ್ತು ಪತಿ ಹಾಗೂ ಮಕ್ಕಳ ಪಾಲನೆ-ಪೋಷಣೆ. ಸಾರ್ವಜನಿಕ ಆಡಳಿತ, ಧರ್ಮಗ್ರಂಥದ ವ್ಯಾಖ್ಯಾನ ಮತ್ತು ರಾಜಕೀಯ ಅಧಿಕಾರದಿಂದ ಪರಿಣಾಮಕಾರಿಯಾಗಿ ಮಹಿಳೆಯನ್ನು ಹೊರಗಿಡಲಾಯಿತು. ಹೆಣ್ಣು ಅಥವಾ ಗೃಹಿಣಿಯು “ಕಾರ್ಯೇಶು ದಾಸಿ, ಕರಣೇಷು ಮಂತ್ರಿ, ರೂಪೇಷು ಲಕ್ಷ್ಮೀ, ಕ್ಷಮಯಾ ಧರಿತ್ರಿ, ಭೋಜ್ಯೇಷು ಮಾತಾ, ಶಯನೇಶು ವೇಶ್ಯಾ…” ಅಂದರೆ, ಕೆಲಸದಲ್ಲಿ ದಾಸಿ, ವ್ಯವಹಾರದಲ್ಲಿ ಮಂತ್ರಿ, ರೂಪದಲ್ಲಿ ಲಕ್ಷ್ಮೀ, ಸಹನೆಯಲ್ಲಿ ಭೂಮಿ, ಭೋಜನದಲ್ಲಿ ತಾಯಿ, ಮಲಗುವಾಗ ವೇಶ್ಯೆಯಂತೆ ಇರಬೇಕು ಎಂದು ಹೇಳುವ ಬ್ರಾಹ್ಮಣ್ಯದ ಹಿಂದೂತ್ವದಲ್ಲಿ ಹೆಣ್ಣಿನ “ಕರ್ಮಭೂಮಿ” ಇದೆ. ಆರೆಸ್ಸೆಸ್ಸಿನ ಪ್ರಕಾರ ಇದನ್ನು ಅನುಸರಿಸಿ, ತನ್ನ ಪರ ಹೋರಾಡಲು ಪತಿಯನ್ನು, ಮಕ್ಕಳನ್ನು ಒದಗಿಸುವುದೇ ಮಹಿಳೆಯ ದೇಶಪ್ರೇಮ.

ಇಪ್ಪತ್ತನೇ ಶತಮಾನದ ಆರಂಭದಲ್ಲಿ ಹಿಂದೂ ರಾಷ್ಟ್ರೀಯತೆಯ ಪ್ರಮುಖ ಶಿಲ್ಪಿಗಳು ಛಿದ್ರಗೊಂಡ ಸಮಾಜವನ್ನು ಏಕೀಕೃತ, ಶಿಸ್ತುಬದ್ಧ ಮತ್ತು ಮಿಲಿಟರೀಕೃತ ಶಕ್ತಿಯಾಗಿ ಪರಿವರ್ತಿಸಲು ಸಮಕಾಲೀನ ಯುರೋಪಿಯನ್ ಫ್ಯಾಸಿಸ್ಟ್ ಚಳುವಳಿಗಳಿಂದ ಸ್ಫೂರ್ತಿ ಪಡೆದಾಗ, ಈ ಬ್ರಾಹ್ಮಣೀಯ ಚೌಕಟ್ಟನ್ನು ಮತ್ತಷ್ಟು ಬಲಪಡಿಸಲಾಯಿತು. ಆರ್‌ಎಸ್‌ಎಸ್‌ನ ಆರಂಭಿಕ ಮಾರ್ಗದರ್ಶಕರಾದ ಬಿ.ಎಸ್. ಮೂಂಜೆ, ಸ್ಥಾಪಕ ಕೆ.ಬಿ. ಹೆಡಗೇವಾರ್ ಅವರ ಈ ನಾಝೀ-ಫ್ಯಾಸಿಸ್ಟ್ ಪ್ರೇಮವನ್ನು ಇಲ್ಲಿಯೇ ಹಿಂದೆ ವಿವರವಾಗಿ ನೀಡಲಾಗಿದೆ. ಎರಡನೇ ಸರಸಂಘಚಾಲಕ ಎಂ.ಎಸ್. ಗೋಲ್ವಾಲ್ಕರ್ 1939ರ ತನ್ನ “ವೀ, ಆರ್ ಅವರ್ ನೇಷನ್‌ಹುಡ್ ಡಿಫೈನ್ಡ್” ಎಂಬ ವಿಷಪುಸ್ತಕದಲ್ಲಿ ಜರ್ಮನ್ ಸಿದ್ಧಾಂತದ ಜನಾಂಗೀಯ-ರಾಷ್ಟ್ರೀಯತಾವಾದಿ ಶಿಸ್ತು ಮತ್ತು ಜನಾಂಗೀಯ ಹೆಮ್ಮೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಜನಾಂಗೀಯ ನಿರ್ಮೂಲನೆಯನ್ನು ಮೆಚ್ಚಿ ಸಮರ್ಥಿಸಿದ್ದನ್ನು ಕೂಡಾ ಇಲ್ಲಿಯೇ ಹಿಂದೆ ವಿವರಿಸಲಾಗಿದೆ. ಈ ಯುರೋಪಿಯನ್ ಸರ್ವಾಧಿಕಾರಿ ಚೌಕಟ್ಟುಗಳನ್ನು ಸಾಂಪ್ರದಾಯಿಕ ಬ್ರಾಹ್ಮಣ ಸಾಮಾಜಿಕ ರಚನೆಗಳೊಂದಿಗೆ ಸಂಯೋಜಿಸುವ ಮೂಲಕ, ಈ ಮೂವರು ಮತ್ತು ಸಾವರ್ಕರ್- ಆರೆಸ್ಸೆಸ್ಸಿನ ಬ್ರಾಹ್ಮಣ ನೇತೃತ್ವದ ಹಿಂದೂ ರಾಷ್ಟ್ರ ಸ್ಥಾಪನೆಯ ಉದ್ದೇಶ ಸಾಧನೆಗಾಗಿ ಕಣ್ಕಟ್ಟಿನ ನಾಲ್ಕು ಅಂಶಗಳನ್ನು ಕಸಿಮಾಡಿದ ಕುಟಿಲ ಚೌಕಟ್ಟೊಂದನ್ನು ರೂಪಿಸಿದರು. ಅವುಗಳೇ: ಮಾತೃಭೂಮಿ, ಪಿತೃಭೂಮಿ, ಪುಣ್ಯಭೂಮಿ ಮತ್ತು ಕರ್ಮಭೂಮಿ. ಇವೆಲ್ಲಾ ಆರೆಸ್ಸೆಸ್ಸಿನ ಗೀತೆ ಸಾಹಿತ್ಯಗಳಲ್ಲೇ ಇವೆ.

ಈ ಒಂದು ಪರಸ್ಪರ ಸೇರದ ಮಿಶ್ರಣವು ಮೂಲ ಸೈದ್ಧಾಂತಿಕ ವಿರೋಧಾಭಾಸವನ್ನು ಸೃಷ್ಟಿಸುತ್ತದೆ: “ಪಿತೃಭೂಮಿ”ಯನ್ನು ನಿರ್ಮಿಸಲು “ಮಾತೃಭೂಮಿ”ಯ ಭಾವನಾತ್ಮಕ ಜನಪ್ರಿಯತೆಯನ್ನು ಬಳಸುವುದು. ಆರೆಸ್ಸೆಸ್ಸಿನ ಸಾರ್ವಜನಿಕ ಗುರುತು “ಮಾತೃಭೂಮಿ”ಯನ್ನು ಅವಲಂಬಿಸಿದೆ. ಇದು ದೇಶವೆಂಬ ಪವಿತ್ರ ಪ್ರದೇಶವನ್ನು ದುರ್ಬಲ ತಾಯಿ ದೇವತೆಯಾಗಿ “ಭಾರತ್ ಮಾತಾ” ಎಂದು ಬಿಂಬಿಸುತ್ತದೆ. ಅದಕ್ಕೆ ಹಿಂದೂ ಸ್ತ್ರೀದೇವತೆಯ ಶ್ರೀಮಂತ ರೂಪ ಆಕಾರಗಳನ್ನು ನೀಡುತ್ತದೆ. ಅದು ಭಾರತೀಯರಿಗೆ ತಾಯಿಯ ಮೇಲಿರುವ ಪ್ರೀತಿ, ಗೌರವದ ಆಳವಾದ ಸಾಂಸ್ಕೃತಿಕ ಭಾವನೆಗಳನ್ನು ಕೆಣಕಿ, ಬಳಸಿಕೊಳ್ಳಲು ಮತ್ತು ಪುರುಷ ಅನುಯಾಯಿಗಳನ್ನು ತನ್ನ ಹಿಂಸಾತ್ಮಕ ರಕ್ಷಕರಾಗಿ ಸಜ್ಜುಗೊಳಿಸಲು, ಧಾರ್ಮಿಕ ಸ್ವರೂಪದ ಕೇಸರಿ ಧ್ವಜವನ್ನು “ಭಾರತ ಮಾತೆ”ಯ ಕೈಗೆ ನೀಡುತ್ತದೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಈ ರಾಷ್ಟ್ರದೊಳಗಿನ ವ್ಯವಸ್ಥೆಗಳು ಮತ್ತು ರಾಜಕೀಯ ಹಕ್ಕುಗಳು ಸಂಪೂರ್ಣವಾಗಿ ಪುರುಷ ಪ್ರಧಾನ “ಪಿತೃಭೂಮಿ” ಮತ್ತು “ಪುಣ್ಯಭೂಮಿ”ಯ ಬ್ರಾಹ್ಮಣ ನೇತೃತ್ವದ “ಹಿಂದೂ” ಧಾರ್ಮಿಕ ಪರಿಕಲ್ಪನೆಯನ್ನು ಆಧರಿಸಿರಬೇಕೆಂದು ಬಯಸುತ್ತದೆ.

ವಿ.ಡಿ. ಸಾವರ್ಕರ್ ತಮ್ಮ ಕೆಲವು “ಅಡಿಪಾಯ” ಪಠ್ಯಗಳಲ್ಲಿ ನಿರೂಪಿಸಿದಂತೆ ಹಿಂದುತ್ವದ ಅಗತ್ಯ ಗುಣಲಕ್ಷಣಗಳೆಂದರೆ: “ಪಿತೃಭೂಮಿ”ಯ ಪರಿಕಲ್ಪನೆಯ ಆಧಾರದ ಮೇಲೆ ರಾಷ್ಟ್ರೀಯ ಒಗ್ಗಟ್ಟನ್ನು ಸ್ಥಾಪಿಸುವುದು, ಪುರುಷ ಪ್ರಾಬಲ್ಯದ ಅಧಿಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಪೂರ್ವಜರಾದ ಪಿತೃಗಳ ಭೂಮಿಯಾಗಿ ರಾಷ್ಟ್ರವನ್ನು ನಿರ್ಮಿಸುವುದು. ಅದೇ ಸಮಯದಲ್ಲಿ, ರಾಷ್ಟ್ರವನ್ನು ಧಾರ್ಮಿಕವಾಗಿ ಮೀಸಲಾದ ಪ್ರತ್ಯೇಕ ಸ್ಥಳವೆಂದು ವ್ಯಾಖ್ಯಾನಿಸಲು “ಪುಣ್ಯಭೂಮಿ”ಯನ್ನು ಪರಿಚಯಿಸುವುದು. ಅಂದರೆ, ಇಸ್ಲಾಂ, ಕ್ರಿಶ್ಚಿಯನ್ ಧರ್ಮ ಮತ್ತು ಇತರ ಭಾರತೀಯೇತರ ಸಂಪ್ರದಾಯಗಳ “ಪವಿತ್ರ ಭೂಮಿ”ಗಳು ಈ ಉಪಖಂಡದ ಭೌಗೋಳಿಕ ಗಡಿಗಳ ಹೊರಗೆ ಇರುವುದರಿಂದ, ಅವುಗಳ ಅನುಯಾಯಿಗಳನ್ನು ರಾಷ್ಟ್ರಕ್ಕೆ ಪ್ರಾಥಮಿಕ ನಿಷ್ಠೆಯಿಲ್ಲದವರೆಂದು ವ್ಯವಸ್ಥಿತವಾಗಿ ನಿರೂಪಿಸುವುದು!

ಅಂತಿಮವಾಗಿ, ಅದು ಜನರ ಸಾಮಾಜಿಕ ಕಾರ್ಯಭಾರದ ವಿಭಜನೆಯನ್ನು “ಕರ್ಮಭೂಮಿ”ಯ ಮೂಲಕ ನಿಯಂತ್ರಿಸುತ್ತದೆ. ಉದಾಹರಣೆಗೆ ಇದು ಮಹಿಳೆಯರ ಪ್ರಾಥಮಿಕ ಕರ್ತವ್ಯಗಳನ್ನು ಮನೆಯ ನಿರ್ವಹಣೆ, ಸಾಂಸ್ಕೃತಿಕ ಸಂರಕ್ಷಣೆ ಮತ್ತು ವಂಶಾವಳಿಯ ಸಂತಾನೋತ್ಪತ್ತಿಗೆ ಸೀಮಿತಗೊಳಿಸುವ ಲಿಂಗ-ವ್ಯಾಖ್ಯಾನಿತ ಕಾರ್ಯಕ್ಷೇತ್ರಗಳನ್ನು ಗೊತ್ತುಪಡಿಸುತ್ತದೆ. ಪುರುಷಪ್ರಧಾನ “ಪಿತೃಭೂಮಿ” ಮತ್ತು ಧಾರ್ಮಿಕ “ಪುಣ್ಯಭೂಮಿ”ಗೆ “ಕರ್ಮಭೂಮಿ”ಯನ್ನು ಜೋಡಿಸುವ ಮೂಲಕ ದೇಶದ ಭೌಗೋಳಿಕ ಸ್ಥಳವನ್ನು ಬ್ರಾಹ್ಮಣ ನೇತೃತ್ವದ-ಧಾರ್ಮಿಕ “ಹಿಂದೂ” “ಪಿತೃಭೂಮಿ”ಯಾಗಿ ಪರಿವರ್ತಿಸುತ್ತದೆ. ಮಹಿಳೆಯರನ್ನು “ರಾಷ್ಟ್ರದ ತಾಯಂದಿರು” ಎಂದು ರಕ್ಷಿಸಬೇಕಾದವರ ಸ್ಥಾನವನ್ನು ನೀಡಿ, ಪುರುಷರನ್ನು ಸ್ವಯಂಘೋಷಿತ ರಕ್ಷಕರಾಗಿ ಬಿಂಬಿಸುತ್ತದೆ. ಇಲ್ಲಿ ಹಿಂದೆ ವಿವರಿಸಿರುವಂತೆ- ಮಹಿಳೆಯರನ್ನು ಆರೆಸ್ಸೆಸ್ಸಿನೊಳಗೆ ನೇರವಾಗಿ ಸೇರಿಸಿಕೊಳ್ಳದೆ ಹೆಸರಿಗೆ ಮಾತ್ರವೇ ಸ್ವತಂತ್ರವಾದ ರಾಷ್ಟ್ರ ಸೇವಿಕಾ ಸಮಿತಿಯಂತಹ ಸಹಾಯಕ ಸಂಸ್ಥೆಗಳಲ್ಲಿ ಸಂಘಟಿಸಲಾಗುತ್ತದೆ. ಆದರೆ, ಅವರ “ಕರ್ಮಭೂಮಿ” ಅಂದರೆ, ಕಾರ್ಯಕ್ಷೇತ್ರವು ಮಾತ್ರ ಪಿತೃಪ್ರಧಾನ ಮಾನದಂಡಗಳಿಗೆ ಕಟ್ಟುನಿಟ್ಟಾಗಿ ಸೀಮಿತವಾಗಿದೆ. ಅವರು ಸಾಂಸ್ಕೃತಿಕ “ಶುದ್ಧತೆ”ಯ ಪಾಲಕರು ಮತ್ತು ಮನೆಯನ್ನು ನೋಡಿಕೊಳ್ಳಬೇಕಾದ ಭವಿಷ್ಯದ ಯೋಧರ ತಾಯಂದಿರು ಮಾತ್ರ. ಆದರೆ ರಾಜಕೀಯ, ಮಿಲಿಟರಿ ಮತ್ತು ಆಧ್ಯಾತ್ಮಿಕ ಅಧಿಕಾರವು ಸಂಪೂರ್ಣವಾಗಿ ಪುರುಷರದ್ದು. ಅದು ಪುರುಷರ ಕರ್ಮಭೂಮಿ, ಸ್ತ್ರೀಯರದ್ದಲ್ಲ! ಇದು ಆರೆಸ್ಸೆಸ್ಸಿನ ಸಹಜ ಗುಣವಾದ ಎರಡು ಮುಖಗಳ, ಎರಡು ನಾಲಗೆಗಳ ದ್ವಿಮುಖ ನೀತಿಗೆ ಅನುಗುಣವಾಗಿದೆ. “ಮಾತೃಭೂಮಿ”ಯ ಪೂಜೆಯು- ನಿಜವಾದ ಮಹಿಳೆಯರನ್ನು ಮುಕ್ತಗೊಳಿಸಲು ಅಥವಾ ಸ್ಥಳೀಯ ಮಾತೃಪ್ರಧಾನ ಸಂಪ್ರದಾಯಗಳನ್ನು ಪುನರುಜ್ಜೀವನಗೊಳಿಸಲು ಅಲ್ಲ, ಬದಲಾಗಿ ಸರ್ವಾಧಿಕಾರಿ, ಪುರುಷ ಪ್ರಾಬಲ್ಯದ ವ್ಯವಸ್ಥೆಗಳನ್ನು ಭದ್ರಪಡಿಸಲು ಸಹಾಯ ಮಾಡುತ್ತದೆ. ಇಂತಾ ಆಷಾಢಭೂತಿ ಕಲಸುಮೇಲೋಗರದ ಕಹಿಸತ್ಯವನ್ನು “ದೇಶಭಕ್ತಿ” ಮತ್ತು “ಧರ್ಮನಿಷ್ಟೆ”ಯಂತ ಸಿಹಿ ಆವರಣದಿಂದ ಮುಚ್ಚಲಾಗಿದೆ.

ಇವೆಲ್ಲವುಗಳ ಭಾಗವಾಗಿಯೇ ಈ ಕುತ್ಸಿತ, ನಕಲಿ ದೇಶಪ್ರೇಮವನ್ನು ಘರ್ಷಣೆಯ ಮೂಲಕ ಪ್ರಚೋದಿಸಲೆಂದೇ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ ‘ಆನಂದಮಠ’ ಕಾದಂಬರಿಯ 1875ರ ಕವಿತೆಯಾದ ‘ವಂದೇ ಮಾತರಂ’ನ ಎಲ್ಲಾ ಚರಣಗಳನ್ನು ಹಾಡುವುದನ್ನು ಕಡ್ಡಾಯ ಮಾಡುವ ರಾಜಕೀಯ ನಿರ್ಧಾರ ಮಾಡಲಾಗಿದೆ. ಮಾತೃಭೂಮಿಯನ್ನು ಹಿಂದೂ ದೇವತೆಗಳಿಗೆ ಸಮೀಕರಿಸಿ ಚಿತ್ರಿಸುವ ಈ ಗೀತೆಯು ವಸಾಹತುಶಾಹಿ ವಿರೋಧಿ ಚಳವಳಿಯ ಸಂದರ್ಭದಲ್ಲಿ, ವಿಶೇಷವಾಗಿ 1905ರ ಬಂಗಾಳ ವಿಭಜನೆಯ ಸಂದರ್ಭದಲ್ಲಿ ಜನರನ್ನು ಒಗ್ಗೂಡಿಸುವ ಪ್ರಮುಖ ಸಾಧನವಾಯಿತು ಎಂಬುದು ನಿಜ. ಈ ಹಾಡಿನ ಎರಡು ಚರಣಗಳನ್ನು ವ್ಯಾಪಕವಾಗಿ ಜನಪ್ರಿಯಗೊಳಿಸಿದ್ದು ಕಾಂಗ್ರೆಸ್; ಆರೆಸ್ಸೆಸ್ ಅಲ್ಲ!

ಆದರೆ, 1950ರಲ್ಲಿ ಸಂವಿಧಾನ ಸಭೆಯು ಭಾರತದ ರಾಷ್ಟ್ರೀಯ ಚಿಹ್ನೆಗಳನ್ನು ಅಂಗೀಕರಿಸಿದಾಗ, ‘ಜನ ಗಣ ಮನ’ವನ್ನು ಅದರ ವಿಶಿಷ್ಟ ಸಂಗೀತ ಲಯ ಮತ್ತು ಭೌಗೋಳಿಕವಾಗಿ ಎಲ್ಲವನ್ನೂ ಒಳಗೊಳ್ಳುವ ವ್ಯಾಪ್ತಿಯ ಕಾರಣದಿಂದಾಗಿ ಅಧಿಕೃತ ರಾಷ್ಟ್ರ ಗೀತೆಯಾಗಿ ಆಯ್ಕೆ ಮಾಡಲಾಯಿತು. ಸಂವಿಧಾನ ಸಭೆಯು ‘ವಂದೇ ಮಾತರಂ’ಗೆ “ರಾಷ್ಟ್ರೀಯ ಗೀತೆ”ಯಾಗಿ ಸಮಾನ ಸ್ಥಾನಮಾನವನ್ನು ನೀಡಿತು. ಆದರೆ, ಅದರ ಮೊದಲ ಎರಡು ಚರಣಗಳನ್ನು ಮಾತ್ರ ಅಂಗೀಕರಿಸಿತು. ಈ ನಿರ್ಧಾರಕ್ಕೆ ಬರಲು ಕಾರಣವೇನೆಂದರೆ, ಅದರ ನಂತರದ ಚರಣಗಳು ಮಾತೃಭೂಮಿಯನ್ನು ದುರ್ಗಾ, ಲಕ್ಷ್ಮೀ ಮತ್ತು ಕಮಲೆಯಂತಹ ಹಿಂದೂ ದೇವತೆಗಳಿಗೆ ನೇರವಾಗಿ ಹೋಲಿಸುತ್ತವೆ. ಇದು ಬಹು-ಧರ್ಮೀಯ ಜಾತ್ಯತೀತ ಗಣರಾಜ್ಯವೊಂದರಲ್ಲಿ ಸೂಕ್ತವಲ್ಲ ಎಂದು ವಿವೇಕದಿಂದ ನಿರ್ಧರಿಸಲಾಯಿತು. ಈ ಗೀತೆಯ ಮೊದಲ ಎರಡು ಚರಣಗಳು ಆಶಯದಲ್ಲಿ ಉದಾತ್ತವಾಗಿವೆ. ಕರ್ಮಠರನ್ನು ಬಿಟ್ಟರೆ, ಬೇರೆಬೇರೆ ಧರ್ಮದವರಿಗೂ ತಮ್ಮ “ಮಾತೆ”ಗೆ ನಮಸ್ಕಾರ ಮಾಡುವುದರಲ್ಲಿ ಯಾವುದೇ ಆಕ್ಷೇಪ ಇರಲಾರದು. ಇದು ವಂದನೆಯೇ ಹೊರತು, ಪೂಜೆಯಲ್ಲ. ಆದರೆ, ಈಗಿನ ಸರಕಾರವು ವಿವೇಕವಿಲ್ಲದೆ, ಉದ್ದೇಶಪೂರ್ವಕವಾಗಿ “ವಂದೇ ಮಾತರಂ”ನ ಎಲ್ಲಾ ಚರಣಗಳನ್ನು ಹೇರಿದೆ. ದೇಶಪ್ರೇಮ ಮತ್ತು ಸಾಂಸ್ಕೃತಿಕ ಸೋಗಿನಲ್ಲಿ ಹಿಂದೂ ದೇವತೆಗಳನ್ನು ಹಿಂದೂಯೇತರರು ಪೂಜಿಸಲು ಒತ್ತಾಯಿಸುವುದು ಮತ್ತು ಅವರು ನಿರಾಕರಿಸಿದಾಗ ಅವರ ದೇಶಪ್ರೇಮವನ್ನು ಪ್ರಶ್ನಿಸಿ ರಾಜಕೀಯ ಲಾಭ ಗಳಿಸುವುದು ಇದರ ನಿಜ ಉದ್ದೇಶ. ಏಕದೇವೋಪಾಸನೆಯ ನಂಬಿಕೆಗಳಿಗೆ ವಿರುದ್ಧವಾದ ವಿಗ್ರಹಾರಾಧನೆಯ ಚಿತ್ರಣಗಳನ್ನು ಒಳಗೊಂಡಿರುವ ಸಾಲುಗಳನ್ನು ಹಾಡಲು ಅವರು ಆಕ್ಷೇಪ ವ್ಯಕ್ತಪಡಿಸುತ್ತಾರೆ ಎಂಬುದು ಇವರಿಗೆ ಸ್ಪಷ್ಟವಾಗಿ ಗೊತ್ತಿದೆ.

ಬಹುತೇಕರಿಗೆ ಗಂಧಗಾಳಿ ಇಲ್ಲದಿದ್ದರೂ “ದೇವಭಾಷೆ” ಎಂದು ಬ್ರಾಹ್ಮಣರು ಬಿಂಬಿಸುವ, ಶೂದ್ರರು ಮಾತನಾಡುವುದನ್ನು ಕ್ರೂರವಾಗ ನಿಷೇಧಿಸಿದ, ಆರೆಸ್ಸೆಸ್ಸಿಗೆ, ಅಭಿಮಾನಹೀನರಿಗೆ ಪ್ರಿಯವಾದ ಸಂಸ್ಕೃತವೇ ತುಂಬಿದ ಬಂಗಾಳಿ ಭಾಷೆಯ, ನಾಲಿಗೆಯನ್ನು ಪರೀಕ್ಷೆಗೆ ಒಡ್ಡುವ, ಕಬ್ಬಿಣದ ಕಡಲೆಯಂತ “ವಂದೇ ಮಾತರಂ” ಪಠ್ಯವನ್ನು ಕಡ್ಡಾಯ ಮಾಡುವುದರ ಹಿಂದಿನ ದುರುದ್ದೇಶವೇ ಇದು; ಯಾವುದೇ ದೇಶಪ್ರೇಮವಲ್ಲ! ಭಾರತದ ಶಾಲೆಗೆ ಹೋದ ಹಿಂದಿನ ತಲೆಮಾರುಗಳ ಹಲವರಿಗೆ “ವಂದೇ ಮಾತರಂ” ಎರಡು ಚರಣಗಳು ಗೊತ್ತಿವೆಯಾದರೂ, ಬಹುತೇಕ ಭಾರತೀಯರಿಗೆ ಗೊತ್ತಿಲ್ಲ ಎಂಬ ಸತ್ಯ ಬಿಜೆಪಿ ಸರಕಾರಕ್ಕೆ ಗೊತ್ತಿದೆ! ಹಾಗಿರುವಾಗ ಬಹುತೇಕರಿಗೆ ಪೂರ್ಣ ಪಠ್ಯ ಗೊತ್ತಿರುವುದು ಭ್ರಮಾಧೀನ ಮಾತು! ಅಷ್ಟೇ ಏಕೆ? ಬಿಜೆಪಿಯ ಬಹುತೇಕ ನಾಯಕರಿಗೂ ಪೂರ್ಣಪಠ್ಯ ಬಿಡಿ, ರಾಷ್ಟ್ರಗೀತೆ “ಜನ ಗಣ ಮನ”ವನ್ನೂ ಸರಿಯಾಗಿ ಹೇಳಲು ಬರುವುದಿಲ್ಲ ಎಂಬುದೂ ಗೊತ್ತು. ಆದರೂ, ಅಂತವರೇ “ವಂದೇ ಮಾತರಂ” ಗೊತ್ತಿಲ್ಲದವರು ದೇಶದ್ರೋಹಿಗಳು, ಪಾಕಿಸ್ತಾನಕ್ಕೆ ಹೋಗಿ ಎನ್ನುವ ಪಾಖಂಡಿ ಆತ್ಮವಂಚನೆ ಬಿಜೆಪಿ-ಆರೆಸ್ಸೆಸ್ಸಿನ ಕಿಂಷ್ಕಿಂದಾ ಕಪಿರಾಜ್ಯದಲ್ಲಿ ಮಾತ್ರವೇ ಸಾಧ್ಯ.

ಕೊನೆಗೂ ನೆನಪಿಡಿ: ಇದು ರಾಷ್ಟ್ರೀಯ ಲಾಂಛನ ಮತ್ತು ಸಂಕೇತಗಳ ಮೇಲಿನ ವ್ಯವಸ್ಥಿತ ಆಕ್ರಮಣದ ಭಾಗ. ಮೂಲ ಗುರಿ ಸಂವಿಧಾನ. ಅಶೋಕ ಚಕ್ರದ ಸಿಂಹಗಳ ಶಾಂತ, ಸೌಮ್ಯ ಭಾವನ್ನು ತೆಗೆದು, ಕೋರೆ ಹಲ್ಲು ತೋರಿಸುವ ಆಕ್ರಮಣಕಾರಿ ಸಿಂಹಗಳಾಗಿ ಮಾಡಿದರು. ಬ್ರಿಕ್ಸ್ ಸಮ್ಮೇಳನದಲ್ಲಿ ಸಂವಿಧಾನದಲ್ಲೇ ಹೇಳಿದ, BRICS ಹೆಸರಲ್ಲೇ ಇರುವ “INDIA, that is Bharat” ಕಡೆಗಣಿಸಿ, ಇಂಗ್ಲಿಷ್‌ನಲ್ಲೇ “BHARAT” ಎಂದು ಮಾತ್ರ ಪ್ರದರ್ಶಿಸಿದರು. ಅಷ್ಟಕ್ಕೂ ಆರೆಸ್ಸೆಸ್ ಶಾಖೆಗಳಲ್ಲಿ ಮಾತೃಭೂಮಿ ಎಂದು ವಂದಿಸುವಾಗ- ಅಲ್ಲಿರುವುದು ಭಾರತದ ಅಧಿಕೃತ “ತ್ರಿವರ್ಣ” ಧ್ವಜವಲ್ಲ; ಬದಲಾಗಿ ಹಿಂದೂ ಧರ್ಮವನ್ನು ಪ್ರತಿಪಾದಿಸುತ್ತದೆ ಎಂದು ಹೇಳಲಾಗುವ “ಭಗವಾ” ಧ್ವಜ! ತ್ರಿವರ್ಣ ಧ್ವಜವನ್ನು ನಾಗಪುರದ ಕೇಂದ್ರ ಕಚೇರಿ ಸೇರಿದಂತೆ ಆರೆಸ್ಸೆಸ್ಸಿನ ಕಚೇರಿಗಳಲ್ಲಿ ಹಾರಿಸಲು ಇತ್ತೀಚಿನ ತನಕ ನಿರಾಕರಿಸಿದವರು ಇವರೆಂದು ಎಲ್ಲರಿಗೂ ಗೊತ್ತಿರುವ ವಿಷಯ. ಹಾಗಾಗಿ ಅವರ “ರಾಷ್ಟ್ರ” ಬೇರೆ, ನಮ್ಮ “ರಾಷ್ಟ್ರ” ಬೇರೆ! ಅವರ ದೇಶಪ್ರೇಮ ಬೇರೆ, ನಮ್ಮ ದೇಶಪ್ರೇಮ ಬೇರೆ! ಅವರದ್ದು- ಬ್ರಾಹ್ಮಣ ಪ್ರಾಬಲ್ಯದ, ಇತರರನ್ನು ಹೊರತುಪಡಿಸುವ, ಪುರುಷ ಪ್ರಧಾನ “ಹಿಂದೂ” ರಾಷ್ಟ್ರವಾದರೆ, ನಮ್ಮದು- ಸಂವಿಧಾನವು ವ್ಯಾಖ್ಯಾನಿಸಿದ, ಸರ್ವ ಸಮಾನತೆಯನ್ನು ಪ್ರತಿಪಾದಿಸುವ, ಅವರೂ ಸೇರಿದಂತೆ ಎಲ್ಲರನ್ನೂ ಒಳಗೊಂಡ ಜಾತ್ಯತೀತ ರಾಷ್ಟ್ರ. ಅವರದ್ದು ದೇಶದಲ್ಲಿ ವಿಭಜನೆ, ಕೋಮುದ್ವೇಷ ಹರಡುವ, ಭೂಪಟವನ್ನು ಪ್ರೀತಿಸುವ ಕಪಟ ದೇಶಪ್ರೇಮವಾದರೆ- ನಮ್ಮದು ಏಕತೆ, ಸಮಾನತೆ ಬಯಸುವ ಜನರನ್ನು ಪ್ರೀತಿಸುವ ಮತ್ತು ನಿಜವಾದ ಅರ್ಥದಲ್ಲಿ “ಸುಜಲಾಂ, ಸಫಲಾಂ, ಮಲಯಜ ಶೀತಲಾಂ” ಆಗಿರುವ ಭಾರತವನ್ನು ಬಯಸುವ ಅಪ್ಪಟ ದೇಶಪ್ರೇಮ. ಕೇವಲ ತೆಂಗಿನ ಕಾಯಿಯ ಚಿಪ್ಪನ್ನು ಜಗಿಯುವ ದೇಶಪ್ರೇಮವಲ್ಲ; ಅದರೊಳಗಿನ ನಿರ್ಮಲ ನೀರು ಮತ್ತು ಸ್ವಚ್ಚ ತಿರುಳನ್ನು ಸ್ವೀಕರಿಸುವ ದೇಶಪ್ರೇಮ!

Related Articles

ಇತ್ತೀಚಿನ ಸುದ್ದಿಗಳು