ಒಟಿಟಿ ಕಂಟೆಂಟ್‌ಗೆ ಕಡಿವಾಣ ಹಾಕಲು ಸಮಿತಿ ರಚಿಸಿದ ಆರ್‌ಎಸ್‌ಎಸ್: ಕ್ರಮ ಕೈಗೊಳ್ಳುವಂತೆ ಸೆನ್ಸಾರ್ ಮಂಡಳಿಗೂ ಒತ್ತಾಯ

ವಿಡಿಯೋ ಸ್ಟ್ರೀಮಿಂಗ್ (ಒಟಿಟಿ) ವೇದಿಕೆಗಳಲ್ಲಿ ಹರಡುತ್ತಿರುವ ‘ಸಾಂಸ್ಕೃತಿಕ ಮಾಲಿನ್ಯ’ವನ್ನು ತಡೆಗಟ್ಟುವ ಕ್ರಮಗಳ ಕುರಿತು ಶಿಫಾರಸುಗಳನ್ನು ನೀಡಲು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ವಿಶೇಷ ಸಮಿತಿಯೊಂದನ್ನು ರಚಿಸಿದೆ. ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿಯ ಪ್ರಕಾರ, ಈ ಸಮಿತಿಯಲ್ಲಿ ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರು, ಮಾಜಿ ಕುಲಪತಿಗಳು ಹಾಗೂ ಹಿರಿಯ ಪ್ರಚಾರಕರು ಸದಸ್ಯರಾಗಿದ್ದಾರೆ. ಒಟಿಟಿ ಕಂಟೆಂಟ್ ಸಮಾಜದ ನೈತಿಕ ಪತನಕ್ಕೆ ಕಾರಣವಾಗುತ್ತಿದೆ ಎಂದು ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಕಳವಳ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ಕಳೆದ ತಿಂಗಳು ಈ ಸಮಿತಿಯ ಮೊದಲ ಸಭೆ ನಡೆದಿದ್ದು, ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರವಾಗುವ ಅಶ್ಲೀಲ ಮತ್ತು ಆಕ್ಷೇಪಾರ್ಹ ವಿಷಯಗಳಿಗೆ ಕಡಿವಾಣ ಹಾಕಲು ಕರಡು ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗುತ್ತಿದೆ. ಈ ಸಮಗ್ರ ಪ್ರಸ್ತಾವನೆಯನ್ನು ಕೇಂದ್ರ ಸಂಸ್ಕೃತಿ ಸಚಿವಾಲಯ ಹಾಗೂ ಸಂಬಂಧಿತ ಇಲಾಖೆಗಳಿಗೆ ಸಲ್ಲಿಸಲು ಸಂಘ ನಿರ್ಧರಿಸಿದೆ. ಇಂತಹ ಸಾಂಸ್ಕೃತಿಕ ಮಾಲಿನ್ಯವು ಕುಟುಂಬ ವ್ಯವಸ್ಥೆ ಹಾಗೂ ಯುವ ಪೀಳಿಗೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ, ಚಿತ್ರಮಂದಿರಗಳ ಚಲನಚಿತ್ರಗಳ ಮಾದರಿಯಲ್ಲೇ ಒಟಿಟಿಗೂ ಸೆನ್ಸಾರ್ ಮಂಡಳಿಯಂತಹ ಕಟ್ಟುನಿಟ್ಟಿನ ನಿಯಂತ್ರಣ ವ್ಯವಸ್ಥೆ ಅತ್ಯಗತ್ಯ ಎಂದು ಆರ್‌ಎಸ್‌ಎಸ್ ಮೂಲಗಳು ತಿಳಿಸಿವೆ. ಕಾನೂನು ತಜ್ಞರೊಂದಿಗೆ ವಿಸ್ತೃತ ಸಮಾಲೋಚನೆ ನಡೆಸಿದ ಬಳಿಕ ಅಂತಿಮ ಪ್ರಸ್ತಾವನೆಯನ್ನು ರೂಪಿಸಲಾಗುವುದು ಎಂದು ತಿಳಿದುಬಂದಿದೆ.

ಅಕ್ಟೋಬರ್ 12, 2024 ರಂದು ನಾಗ್ಪುರದಲ್ಲಿ ನಡೆದ ವಾರ್ಷಿಕ ವಿಜಯದಶಮಿ ಭಾಷಣದಲ್ಲಿ ಈ ಕುರಿತು ಮಾತನಾಡಿದ್ದ ಸರಸಂಘಚಾಲಕ ಮೋಹನ್ ಭಾಗವತ್, ಒಟಿಟಿ ವೇದಿಕೆಗಳಲ್ಲಿ ಪ್ರಸಾರವಾಗುವ ವಿಷಯಗಳು ಅತ್ಯಂತ ಜುಗುಪ್ಸೆ ಹುಟ್ಟಿಸುವಂತಿದ್ದು, ಅವು ಸಮಾಜದ ನೈತಿಕ ಅಧಃಪತನಕ್ಕೆ ಪ್ರಮುಖ ಕಾರಣವಾಗುತ್ತಿವೆ ಎಂದು ಎಚ್ಚರಿಸಿದ್ದರು. ಕಾನೂನಿನ ಮೂಲಕ ಇವುಗಳ ಮೇಲೆ ನಿಗಾ ಇಡುವುದು ಅನಿವಾರ್ಯ ಎಂದೂ ಅವರು ಪ್ರತಿಪಾದಿಸಿದ್ದರು. ಸಾಂಪ್ರದಾಯಿಕ ಕೌಟುಂಬಿಕ ಮೌಲ್ಯಗಳನ್ನು ಪುನರುಜ್ಜೀವನಗೊಳಿಸುವ ಸಂಘದ ‘ಕುಟುಂಬ ಪ್ರಬೋಧನ್’ ವಿಭಾಗದಿಂದ ಬಂದ ಪ್ರತಿಕ್ರಿಯೆಗಳನ್ನು ಆಧರಿಸಿ ಈ ಸಮಿತಿ ರಚಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಪ್ರಸ್ತುತ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುವ ಚಲನಚಿತ್ರಗಳಿಗೆ ‘ಸಿನಿಮಾಟೋಗ್ರಾಫ್ ಕಾಯ್ದೆ 1952’ರ ಅಡಿಯಲ್ಲಿ ‘ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ’ಯ (ಸಿಬಿಎಫ್‌ಸಿ) ಪ್ರಮಾಣಪತ್ರ ಕಡ್ಡಾಯವಾಗಿದೆ. ಆದರೆ ಒಟಿಟಿ ಕಂಟೆಂಟ್‌ಗೆ ಅಂತಹ ಯಾವುದೇ ಪ್ರತ್ಯೇಕ ನಿಯಂತ್ರಣ ಅಥವಾ ಸೆನ್ಸಾರ್ ಮಂಡಳಿ ಇಲ್ಲ. ಬದಲಿಗೆ, ‘ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ನೀತಿ ಸಂಹಿತೆ) ನಿಯಮಗಳು 2021’ರ ಅಡಿಯಲ್ಲಿ ಮಾತ್ರ ಇವುಗಳನ್ನು ನಿಯಂತ್ರಿಸಲಾಗುತ್ತಿದ್ದು, ಈ ವ್ಯವಸ್ಥೆಯಲ್ಲಿ ಹಲವು ಲೋಪಗಳಿವೆ ಎಂಬ ಆಕ್ಷೇಪಗಳು ಕೇಳಿಬರುತ್ತಿವೆ.

ಇತ್ತೀಚೆಗೆ ಜುಲೈ 22 ರಂದು ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್. ಮುರುಗನ್, ಅಶ್ಲೀಲ ಕಂಟೆಂಟ್ ಪ್ರಸಾರ ಮಾಡುತ್ತಿದ್ದ ಆರೋಪದ ಮೇಲೆ ಹಾಗೂ ಐಟಿ ಕಾಯ್ದೆ, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 294 ಮತ್ತು ಮಹಿಳೆಯರ ಅಸಭ್ಯ ಚಿತ್ರಣ (ನಿಷೇಧ) ಕಾಯ್ದೆ 1986ರ ಉಲ್ಲಂಘನೆಯಡಿ ಕಳೆದ ಎರಡು ವರ್ಷಗಳಲ್ಲಿ 50 ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ ಎಂದು ಸ್ಪಷ್ಟಪಡಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು