ಮಣಿಪುರದಲ್ಲಿ ಪರಿಸ್ಥಿತಿ ಮತ್ತೆ ಆತಂಕಕಾರಿಯಾಗಿ ಮಾರ್ಪಟ್ಟಿದ್ದು, ಹಿಂಸಾಚಾರದ ಕಿಡಿ ಮತ್ತೆ ಹೊತ್ತಿಕೊಂಡಿದೆ. ಮಂಗಳವಾರ ತಮೆಂಗ್ಲಾಂಗ್ ಜಿಲ್ಲೆಯ ಗ್ರಾಮವೊಂದರ ಹೊರವಲಯದಲ್ಲಿ ಕುಕಿ ಸಮುದಾಯದ ಇಬ್ಬರು ಮಹಿಳೆಯರನ್ನು ಶಂಕಿತ ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಸೆಪ್ಟೆಂಬರ್ 13 ರಂದು ಇದೇ ಸಮುದಾಯದ ನಾಲ್ವರ ಹತ್ಯೆಯಾದ ಬೆನ್ನಲ್ಲೇ ಈ ಘಟನೆ ಸಂಭವಿಸಿದೆ.
ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಶಂಕಿತ ಸಶಸ್ತ್ರ ಉಗ್ರರು ಗ್ರಾಮದ ಹೊರಗೆ ಮಹಿಳೆಯರನ್ನು ಕೊಲೆ ಮಾಡಿದ್ದಲ್ಲದೆ, ಕೆಲವು ಫಾರ್ಮ್‌ಹೌಸ್‌ಗಳಿಗೂ ಬೆಂಕಿ ಹಚ್ಚಿದ್ದಾರೆ. ಲಿಸಾಂಗ್‌ಫೈ ಗ್ರಾಮದ ಒಳಭಾಗದ ನಿರ್ಜನ ಹೊಲವೊಂದಕ್ಕೆ ಉರುವಲು ಕಟ್ಟಿಗೆ ಸಂಗ್ರಹಿಸಲು ತೆರಳಿದ್ದ ವೇಳೆ ಈ ಮಹಿಳೆಯರ ಮೇಲೆ ದಾಳಿ ನಡೆಸಲಾಗಿದೆ. ಈ ಹತ್ಯೆಯ ನಂತರ ಸ್ಥಳೀಯ ಪ್ರದೇಶದಲ್ಲಿ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಮೃತರನ್ನು 60 ವರ್ಷದ ಚೊಂಗಾ ಸಿತ್ಲ್ಹೋ ಮತ್ತು 30 ವರ್ಷದ ಕಿಂಬೋಯಿ ಸಿಂಗ್ಸನ್ ಎಂದು ಗುರುತಿಸಲಾಗಿದೆ. ಹೊಲದಲ್ಲಿ ಇವರ ಮೃತದೇಹಗಳು ಗುಂಡೇಟಿನ ಗಾಯಗಳೊಂದಿಗೆ ಪತ್ತೆಯಾಗಿದ್ದು, ಗ್ರಾಮಸ್ಥರು ಶವಗಳನ್ನು ಹೊರತೆಗೆದಿದ್ದಾರೆ. ಉಗ್ರರು ಸುತ್ತಮುತ್ತಲಿನ ಕೆಲವು ಕಚ್ಚಾ ಫಾರ್ಮ್‌ಹೌಸ್‌ಗಳಿಗೂ ಬೆಂಕಿ ಹಚ್ಚಿ ಹಾನಿ ಮಾಡಿದ್ದಾರೆ.
ಇದಕ್ಕೂ ಮುನ್ನ, ಭಾನುವಾರ (ಸೆಪ್ಟೆಂಬರ್ 13) ತಮೆಂಗ್ಲಾಂಗ್ ಮತ್ತು ನೋನಿ ಜಿಲ್ಲೆಗಳಲ್ಲಿ ದಂಪತಿ ಸೇರಿದಂತೆ ನಾಲ್ವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು. ಆ ಘಟನೆಯಲ್ಲಿ ಆರು ವರ್ಷದ ಮಗುವೊಂದಕ್ಕೂ ಗುಂಡೇಟು ತಗುಲಿ ಗಾಯವಾಗಿತ್ತು. ಸುದೀರ್ಘ ಕಾಲದ ಶಾಂತಿಯ ನಂತರ ಈ ವಾರದಲ್ಲಿ ನಡೆದಿರುವ ಈ ಎರಡು ಪ್ರತ್ಯೇಕ ದಾಳಿಗಳು ರಾಜ್ಯದಲ್ಲಿ ಮತ್ತೆ ಆತಂಕ ಸೃಷ್ಟಿಸಿವೆ. ಮೇ 2023 ರಲ್ಲಿ ಕಣಿವೆ ಪ್ರದೇಶದ ಮೈತೈ ಮತ್ತು ಬೆಟ್ಟ ಪ್ರದೇಶದ ಕುಕಿ ಸಮುದಾಯಗಳ ನಡುವೆ ಆರಂಭವಾದ ಜನಾಂಗೀಯ ಸಂಘರ್ಷದಲ್ಲಿ ಈವರೆಗೆ ಕನಿಷ್ಠ 306 ಜನರು ಪ್ರಾಣ ಕಳೆದುಕೊಂಡಿದ್ದು, 49 ಮಂದಿ ನಾಪತ್ತೆಯಾಗಿದ್ದಾರೆ ಹಾಗೂ ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.
