ಪಿಯುಸಿ SSLC ಪರೀಕ್ಷಾ ಶುಲ್ಕದರ ಹೆಚ್ಚಳ – ಕಂಗಾಲಾದ ವಿದ್ಯಾರ್ಥಿಗಳು

ಬೆಂಗಳೂರು : ದ್ವಿತೀಯ ಪಿಯುಸಿ (PUC) ಪರೀಕ್ಷಾ ಶುಲ್ಕ ಪರಿಷ್ಕರಣೆಯ ಬೆನ್ನಲ್ಲೇ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷಾ ಶುಲ್ಕದಲ್ಲೂ ಏರಿಕೆ ಮಾಡಿದೆ. 2027ರ ಮಾರ್ಚ್/ಏಪ್ರಿಲ್‌ನಲ್ಲಿ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಶುಲ್ಕವನ್ನು ಶೇಕಡಾ 5 ರಷ್ಟು ಹೆಚ್ಚಿಸಿ ಮಂಡಳಿಯು ಅಧಿಕೃತ ಸುತ್ತೋಲೆ ಹೊರಡಿಸಿದೆ.

ಮಂಡಳಿಯ ಈ ನಿರ್ಧಾರದಿಂದಾಗಿ ಹೊಸದಾಗಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು, ಖಾಸಗಿ ಅಭ್ಯರ್ಥಿಗಳು ಹಾಗೂ ಪುನರಾವರ್ತಿತ (ರಿಪೀಟರ್ಸ್) ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ವರ್ಗದ ಅಭ್ಯರ್ಥಿಗಳ ಮೇಲೂ ಶುಲ್ಕದ ಹೊರೆ ಬಿದ್ದಿದೆ. ವಾರ್ಷಿಕ ಪರೀಕ್ಷೆಗಳನ್ನು ನಡೆಸಲು ತಗುಲುವ ವೆಚ್ಚ ಹೆಚ್ಚಿರುವುದನ್ನು ಉಲ್ಲೇಖಿಸಿ, ವರ್ಷಕ್ಕೊಮ್ಮೆ ಶುಲ್ಕ ಪರಿಷ್ಕರಣೆ ಮಾಡಲು ಅವಕಾಶ ನೀಡಿದ್ದ 2020ರ ಸರ್ಕಾರಿ ಆದೇಶದ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಂಡಳಿ ತನ್ನ ಸುತ್ತೋಲೆಯಲ್ಲಿ ಸಮರ್ಥಿಸಿಕೊಂಡಿದೆ.

ಯಾರಿಗೆ ಎಷ್ಟು ಶುಲ್ಕ ಹೆಚ್ಚಳ?
ಹೊಸ ಪರಿಷ್ಕೃತ ದರಗಳ ಪ್ರಕಾರ, ಮೊದಲ ಬಾರಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ನೋಂದಾಯಿಸಿಕೊಳ್ಳುವ ನಿಯಮಿತ ವಿದ್ಯಾರ್ಥಿಗಳು ಈ ಹಿಂದೆ ಪಾವತಿಸುತ್ತಿದ್ದ 710 ರೂಪಾಯಿಗಳ ಬದಲಾಗಿ ಇನ್ಮುಂದೆ 746 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ.
ಖಾಸಗಿ ಅಭ್ಯರ್ಥಿಗಳಾಗಿ ಹೊಸದಾಗಿ ನೋಂದಣಿ ಮಾಡಿಕೊಳ್ಳುವ ವಿದ್ಯಾರ್ಥಿಗಳ ಅರ್ಜಿಯ ಶುಲ್ಕವನ್ನು 248 ರೂಪಾಯಿಯಿಂದ 260 ರೂಪಾಯಿಗೆ ಹೆಚ್ಚಿಸಲಾಗಿದೆ. ಈಗಾಗಲೇ ಖಾಸಗಿ ಅಭ್ಯರ್ಥಿಗಳಾಗಿ ನೋಂದಾಯಿಸಿಕೊಂಡು, ಮತ್ತೆ ಪರೀಕ್ಷೆ ಬರೆಯಲು ನೋಂದಣಿ ನವೀಕರಣ (ರಿನ್ಯೂವಲ್) ಮಾಡಿಕೊಳ್ಳುವ ಅಭ್ಯರ್ಥಿಗಳ ಶುಲ್ಕ 72 ರೂಪಾಯಿಯಿಂದ 76 ರೂಪಾಯಿಗೆ ಏರಿಕೆಯಾಗಿದೆ.

ಪುನರಾವರ್ತಿತ ಪರೀಕ್ಷೆ ಬರೆಯುವ (ರಿಪೀಟರ್ಸ್) ನಿಯಮಿತ ಮತ್ತು ಖಾಸಗಿ ವಿದ್ಯಾರ್ಥಿಗಳಿಗೂ ವಿಷಯಗಳ ಆಧಾರದ ಮೇಲೆ ಶುಲ್ಕ ಹೆಚ್ಚಳ ಅನ್ವಯವಾಗಲಿದೆ. ಒಂದು ವಿಷಯದ ಪರೀಕ್ಷೆಗೆ ಈ ಮುಂಚೆ ಇದ್ದ 448 ರೂಪಾಯಿ ಶುಲ್ಕವನ್ನು 470 ರೂಪಾಯಿಗೆ, ಎರಡು ವಿಷಯಗಳಿಗೆ ಇದ್ದ 559 ರೂಪಾಯಿ ಶುಲ್ಕವನ್ನು 587 ರೂಪಾಯಿಗೆ ಹಾಗೂ ಮೂರು ಅಥವಾ ಅದಕ್ಕಿಂತ ಹೆಚ್ಚಿನ ವಿಷಯಗಳಿಗೆ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಶುಲ್ಕವನ್ನು 752 ರೂಪಾಯಿಯಿಂದ 790 ರೂಪಾಯಿಗೆ ಪರಿಷ್ಕರಿಸಲಾಗಿದೆ.

ರಾಜ್ಯದ ಎಲ್ಲಾ ಶಾಲಾ ಮುಖ್ಯಸ್ಥರು ಹಾಗೂ ಆಡಳಿತ ಮಂಡಳಿಗಳು ಮಂಡಳಿ ನಿಗದಿಪಡಿಸಿರುವ ಈ ಪರಿಷ್ಕೃತ ಶುಲ್ಕದಂತೆಯೇ ವಿದ್ಯಾರ್ಥಿಗಳಿಂದ ಅರ್ಜಿ ನೋಂದಣಿ ಪ್ರಕ್ರಿಯೆಯನ್ನು ನಡೆಸಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು