ಹಂಪೆಯನಾಡಿನೊಳ್ : ನವೋದಯ ಕವಿ ಸಿದ್ಧಯ್ಯ ಪುರಾಣಿಕ
ಲಿಂಕ್ ನಕಲಿಸಲಾಗಿದೆ ✓
“..ಹೊಸಗನ್ನಡ ಸಾಹಿತ್ಯ ಚರಿತ್ರೆಯನ್ನು ಬರೆದವರ ಪಟ್ಟಿಯಲ್ಲಿ ಹಲವು ಸಾಹಿತಿಗಳ ಹೆಸರಿರದಿರುವುದನ್ನು ಗಮನಿಸಬಹುದು. ಈ ನೆಲೆಯಲ್ಲಿ ಡಾ. ಸಿದ್ಧಯ್ಯ ಪುರಾಣಿಕರ ಕಾವ್ಯವನ್ನು ನವೋದಯದ ಕಾಲಘಟ್ಟದಲ್ಲಿ ಇಟ್ಟು ನೋಡುವ ಜರೂರಿ ಈ ಲೇಖನಕ್ಕಿದೆ..” ಲೇಖಕರಾದ ಡಾ.ಜಾಜಿ ದೇವೇಂದ್ರಪ್ಪ ಅವರ ಬರಹದಲ್ಲಿ
ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ನವೋದಯ ಕಾಲ ಮಹತ್ವದ್ದು. ಈ ಕಾಲಘಟ್ಟದಲ್ಲಿ ಕರ್ನಾಟಕದಾದ್ಯಂತ ಹಲವು ನುಡಿ ನಿರೂಪಣೆಗಳು ಬಂದವು. ಸಾಹಿತ್ಯ ಚರಿತ್ರೆಯನ್ನು ಬರೆಯುವಾಗ ಎಲ್ಲಾ ಕಾಲದಲ್ಲಿಯೂ ಕೆಲವು ಸಾಂಸ್ಕೃತಿಕ ಸಮಸ್ಯೆಗಳು ಆಗುತ್ತವೆ. ಇಲ್ಲವೇ ಪ್ರಾದೇಶಿಕ ಮತ್ತು ಸಾಹಿತ್ಯಿಕ ರಾಜಕಾರಣದ ಫಲವಾಗಿಯೂ ಕೆಲವು ಬರಹಗಾರರ ಚರಿತ್ರೆಯನ್ನು ನಗಣ್ಯ ಮಾಡಲಾಗುತ್ತದೆ. ಅಂತೆಯೇ ಸಶಕ್ತ ಬರಹಗಾರರಾಗಿದ್ದಾಗಿಯೂ ಪ್ರಾದೇಶಿಕ ಕಾರಣಕ್ಕಾಗಿ ಚರಿತ್ರೆಯಲ್ಲಿ ನಮೂದು ಮಾಡುವುದನ್ನು ಗೈರು ಮಾಡಲಾಗಿದೆ. ಕಲ್ಯಾಣ ಕರ್ಣಾಟಕ ಮತ್ತು ಉತ್ತರ ಕರ್ನಾಟಕ ಭೌಗೋಳಿಕವಾಗಿ ತನ್ನ ವಿಶಿಷ್ಟ ಚಹರೆಯನ್ನು ಹೊಂದಿದೆ. ಹಳಗನ್ನಡದ ಸಂದರ್ಭದಲ್ಲಿ ಪಂಪ, ರನ್ನ, ಕುಮಾರವ್ಯಾಸಾದಿ ಮಹಾ ಕವಿಗಳು ಈ ಭಾಗದಲ್ಲಿ ನುಡಿಚಹರೆ ಉತ್ತಿದ್ದಾರೆ. ಅಂತೆಯೇ ಕನ್ನಡ ನೆಲಕ್ಕೆ ಕ್ರಾಂತಿ ದೀಪ ಹಚ್ಚಿದ ಅದರಲ್ಲಿಯೂ ಅಕ್ಷರಗಳ ಮುಖೇನ ದಮನೀತರ ಧ್ವನಿಯಾಗಿ ಜಾತ್ಯಾತೀತ ಮಹಾಮಾರ್ಗವನ್ನು ರೂಪಿಸಿದ ವಚನಕಾರರು ಕಲ್ಯಾಣದ ಬಟ್ಟಲಿನಲ್ಲಿ ಇದ್ದವರು. ಹಾಗೆಯೇ ಹರಿದಾಸ ಪಂಥ ಕೂಡ. ಮಧ್ಯಕಾಲೀನ ಸಾಹಿತ್ಯ ಸಂದರ್ಭದಲ್ಲಿ ಈ ಭಾಗದ ಹಲವು ಮಹಾ ಕವಿಗಳು ಮಹಾ ಕೃತಿಗಳನ್ನು ನೀಡಿದ್ದಾರೆ. ಆದರೆ ಆಧುನಿಕ ಸಾಹಿತ್ಯದ ಸಂದರ್ಭದಲ್ಲಿ ಒಂದರ್ಥದಲ್ಲಿ ಇಲ್ಲಿ ಒಂದು ಸಣ್ಣ ವಿರಾಮ ದೊರೆತದ್ದು ನಿಜ. ವಿಶೇಷವಾಗಿ ನವೋದಯ ಕಾಲಘಟ್ಟದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಜೋಳದರಾಶಿ ದೊಡ್ಡನಗೌಡರು, ಹಿ.ಮಾ. ನಾಗಯ್ಯನವರು, ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತಿçಯವರು, ಬಳ್ಳಾರಿ ರಾಘವ, ಡಾ. ಸಿದ್ಧಯ್ಯ ಪುರಾಣಿಕ ಮುಂತಾದ ಅನೇಕ ಜನರು ಸಶಕ್ತವಾದ ಬರಹದ ವ್ಯವಸಾಯವನ್ನು ಮಾಡಿದ್ದಾರೆ. ಇವರಿಗೆ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯಂತಹ ತಾಂತ್ರಿಕ ಗೌರವಗಳು ದೊರೆತಿವೆ. ಆದರೆ ಸಾಹಿತ್ಯ ಚರಿತ್ರೆಯನ್ನು ಬರೆಯುವಾಗ ನವೋದಯ ಕಾಲಘಟ್ಟದ ಪಟ್ಟಿಯಲ್ಲಿ ಇವರನ್ನು ನಮೂದಿಸಲಿಲ್ಲ ಮತ್ತು ಸಾಹಿತ್ಯ ವಿಮರ್ಶೆಯು ಇವರನ್ನು ಗಂಭೀರವಾಗಿ ಪರಿಗಣಿಸದೇ ಇರುವುದು ಮೇಲ್ನೋಟಕ್ಕೆ ತಿಳಿಯುತ್ತದೆ. ಕುವೆಂಪು, ಬೇಂದ್ರೆ, ಪು.ತಿ.ನ, ಕಾರಂತರು, ಬಿ.ಎಂ.ಶ್ರೀ, ಮಾಸ್ತಿ ಮುಂತಾದವರ ಸಮಕಾಲೀನರಾಗಿ ಬರೆದ ಇವರು ಚರಿತ್ರೆಯ ವ್ಯಂಗ್ಯವೆಂಬಂತೆ ಚರ್ಚೆಯಾಗದೇ ಉಳಿದರು. ಇದಕ್ಕೆ ಸಾಹಿತ್ಯಿಕ ರಾಜಕಾರಣ ಮಾನದಂಡವಾಗಿರಬಹುದು. ಇಲ್ಲವೇ ಕಾವ್ಯವನ್ನು, ಸಾಹಿತ್ಯವನ್ನು ಸಿದ್ಧ ಮಾದರಿಯ ವಿಮರ್ಶಾ ಮಾನದಂಡದ ಅಳತೆಗೋಲಿನಲ್ಲಿಟ್ಟು ತೂಗಿದ್ದು ಇರಬಹುದು. ಆದರೆ ಹೊಸಗನ್ನಡ ಸಾಹಿತ್ಯ ಚರಿತ್ರೆಯನ್ನು ಬರೆದವರ ಪಟ್ಟಿಯಲ್ಲಿಯೂ ಇವರುಗಳ ಹೆಸರಿರದಿರುವುದನ್ನು ಗಮನಿಸಬಹುದು. ಈ ನೆಲೆಯಲ್ಲಿ ಡಾ. ಸಿದ್ಧಯ್ಯ ಪುರಾಣಿಕರ ಕಾವ್ಯವನ್ನು ನವೋದಯದ ಕಾಲಘಟ್ಟದಲ್ಲಿ ಇಟ್ಟು ನೋಡುವ ಜರೂರಿ ಈ ಲೇಖನಕ್ಕಿದೆ.
ಡಾ. ಸಿದ್ಧಯ್ಯ ಪುರಾಣಿಕರು ತಿರುಳ್ಗನ್ನಡ ನಾಡಿನ ಕೊಪ್ಪಳ ಸೀಮೆಯವರು. ವಿಶೇಷವಾಗಿ ಪುರಾಣ ಕವಿಗಳಲ್ಲಿ ಪ್ರಸಿದ್ಧರಾದ ಕಲ್ಲಿನಾಥ ಶಾಸ್ತ್ರಿಯವರು ಇವರ ತಂದೆ. ದ್ಯಾಂಪುರದ ಚೆನ್ನಕವಿ ಇವರ ತಾತ. ಕರ್ನಾಟಕದಲ್ಲಿ ಪುರಾಣ ಪರಂಪರೆಯ ಮಹತ್ವದ ಕವಿಗಳಲ್ಲಿ ಚೆನ್ನಕವಿಯೂ ಒಬ್ಬರು. ಇಂತಹ ಮನೆತನದಿಂದ ಬಂದ ಸಿದ್ಧಯ್ಯ ಪುರಾಣಿಕರು ಸಹಜವಾಗಿಯೇ ಸಾಹಿತ್ಯಿಕ ಧಾರೆಯನ್ನು ಒಡಲಲ್ಲಿ ಇರಿಸಿಕೊಂಡು ಬಂದವರು. ಕನ್ನಡದಲ್ಲಿ ನವೋದಯ ಎಂಬ ಪರಿಕಲ್ಪನೆ ‘ಇಂಗ್ಲೀಷ್ ಗೀತಗಳು’ ಮೂಲಕ ಆರಂಭವಾಯಿತೆಂಬ ನೆಲೆಯಲ್ಲಿ ನೋಡುವುದಾದರೆ ಅದೇ ಕಾಲಘಟ್ಟದಲ್ಲಿ ಅಂದರೆ ೧೯೩೨ರಲ್ಲಿ ಸಿದ್ಧಯ್ಯರು “ಬೆಳಗು” ಎಂಬ ಕವಿತೆಯನ್ನು ರಚನೆ ಮಾಡಿದರು. ಅದನ್ನು ಸ್ಥೂಲವಾಗಿ ನೋಡಿದರೆ ನವೋದಯದ ಸ್ವರೂಪಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಪುರಾಣಿಕರ ಕವನ ಸಂಕಲನಗಳ ಶೀರ್ಷಿಕೆಯನ್ನು ಗಮನಿಸಿದರೆ ಆ ಕಾಲಘಟ್ಟದ ಲಕ್ಷಣ ಕಂಡುಬರುತ್ತದೆ. ೧೯೩೫ರಲ್ಲಿ ಬರೆದ ಜಲಪಾತ, ಆನಂತರ ಬಂದ ಕರುಣಾ ಶ್ರಾವಣ, ಮಾನಸ ಸರೋವರ, ಮೊದಲು ಮಾನವನಾಗು, ಚೆರಗ, ಹಾಲ್ದೆನೆ, ಮರುಳಸಿದ್ಧನ ಕಂತೆ ಮುಂತಾದ ಶೀರ್ಷಿಕೆಗಳು ನವೋದಯದ ಒಲುಮೆಯನ್ನು ಒಡಲಲ್ಲಿಟ್ಟುಕೊಂಡಂತೆ ತೋರುತ್ತದೆ. ಇವರು ಅಭಿವ್ಯಕ್ತಿ ಮಾಡಿದ ವಚನೋಧ್ಯಾನ ಎಂಬ ಶೀರ್ಷಿಕೆಯಲ್ಲಿಯೇ ವಚನ ಈ ನಾಡಿನಲ್ಲಾದ ಮಹತ್ ಕ್ರಾಂತಿಯನ್ನು ಉದ್ಯಾನ, ಸೌಮ್ಯ ಚೆಲುವನ್ನು ನಿರೂಪಿಸುವಂತಿದೆ. ಅದೇನೆ ಇದ್ದರೂ ಕುವೆಂಪು, ಬೇಂದ್ರೆ, ಪು.ತಿ.ನ.ರವರ ಸಮಕಾಲೀನರಾಗಿ ಇದ್ದುಕೊಂಡು ಸಾಹಿತ್ಯದ ವ್ಯವಸಾಯದಲ್ಲಿ ತೊಡಗಿದ ಪುರಾಣಿಕರ ಕಾವ್ಯವನ್ನು ನಿಸ್ಸಂಶಯವಾಗಿ ನವೋದಯ ಕಾಲಘಟ್ಟದ ಚಾರಿತ್ರಿಕ ಸನ್ನಿವೇಶದಿಂದಲೇ ಅರ್ಥೈಸಿಕೊಳ್ಳಬೇಕಾಗುತ್ತದೆ. ನವೋದಯದಿಂದ ನವ್ಯ ಕಾಲಘಟ್ಟದವರೆಗೂ ಅವರು ಬರೆದರೂ ಕೂಡಾ ಅವರ ಕಾವ್ಯ ಲಕ್ಷಣಗಳನ್ನು ಆಧರಿಸಿ ಕಲ್ಯಾಣ ಕರ್ನಾಟಕ ಭಾಗದಿಂದ ರೂಪುಗೊಂಡ ನವೋದಯ ಕವಿಗಳಲ್ಲಿ ಒಬ್ಬರು ಎಂಬುದು ನಿರ್ವಿವಾದ. ಈ ಮಾತುಗಳನ್ನು ಅವರ ಕಾವ್ಯದ ಮೂಲಕವೇ ನೋಡಬಹುದು.
ಡಾ. ಸಿದ್ಧಯ್ಯ ಪುರಾಣಿಕರ ಕಾವ್ಯದಲ್ಲಿ ಪ್ರಮುಖವಾಗಿ ಕಾಣುವ ತಾತ್ವಿಕತೆಗಳೆಂದರೆ
ನಿಸರ್ಗ ಆರಾಧನೆ.
ಕನ್ನಡತ್ವದ ಚಿಂತನೆ.
ವೈಚಾರಿಕ ಚಿಂತನೆ.
ರಾಷ್ಟ್ರೀಯತೆಯ ನೆಲೆ.
ಅನುಭಾವದ ನೆಲೆ.
ಪ್ರೇಮ ಮೀಮಾಂಸೆ.
ಈ ಮುಖ್ಯ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ನವೋದಯ ಕಾವ್ಯವೂ ಕೂಡ ಚಲನಶೀಲವಾಗಿದ್ದದನ್ನು ನೋಡಬಹುದು. ಡಾ. ಪುರಾಣಿಕರು ಸಹಜವಾಗಿಯೇ ಆ ಕಾಲದಲ್ಲಿ ಚಾಲ್ತಿಯಲ್ಲಿದ್ದ ಅಪಾರ ಪ್ರಕೃತಿ ರಮ್ಯ ವರ್ಣನೆಯನ್ನು ತಮ್ಮ ಕಾವ್ಯದಲ್ಲಿಯೂ ಯಥೇಚ್ಛವಾಗಿ ತಂದಿದ್ದಾರೆ. ಕುವೆಂಪು, ಬೇಂದ್ರೆ, ಕಾರಂತ ಮಲೆನಾಡು ಮತ್ತು ಅರೆ ಮಲೆನಾಡಿನ ಸಮೃದ್ಧ ಸೊಬಗನ್ನು ಶಿವಮಯವಾಗಿ ವರ್ಣಿಸಿದರು. ಆದರೆ ಬಯಲು ಸೀಮೆಯ ಪುರಾಣಿಕರು ಕಲ್ಲೇ ಅಡವಿ, ಬಯಲೇ ಹಸಿರು ಮಾಡಿಕೊಂಡು ನಿಸರ್ಗಾರಾಧನೆಯ ಅಮೋಘ ದರ್ಶನವನ್ನು ಮಾಡಿದ್ದು ಸವಾಲೇ ಸರಿ. ಒಬ್ಬ ಕವಿ ತನ್ನ ಅಂತರಂಗದ ಒಳಗಡೆಯೇ ಸಮೃದ್ಧ ನಿಸರ್ಗವನ್ನು ಬೆಳೆಯುತ್ತಾನೆ ಮತ್ತು ಬಿತ್ತುತ್ತಾನೆ. ರಮ್ಯತೆ ಕೇವಲ ಬಾಹ್ಯ ಚಹರೆಯಲ್ಲ, ಕವಿಯೊಬ್ಬನ ಎದೆಯ ದನಿಯೂ ಆಗಿರುತ್ತದೆಂಬುದನ್ನು ನಂಬಿದ್ದ ಪುರಾಣಿಕರು ತಮ್ಮ ಕಾವ್ಯದಲ್ಲಿ ಸಾಬೀತು ಮಾಡಿದ್ದಾರೆ.
ತರುಗಿರಿ ಸೃಷ್ಠಿಯ ಸ್ವರ್ಗಾರೋಹಣ
ದೃಷ್ಠಿಯು ಸೃಷ್ಠಿಗೆ ಶಿವನವರೋಹಣ
———————
ಭೂಮಿಗೆ ವ್ಯೋಮಕೆ ಪಾಣಿಗ್ರಹಣ
ಮೋಡದ ಚಪ್ಪರ ಮಿಂಚಿನ ತೋರಣ
ಎಂದು ಕರುಣಾ ಶ್ರಾವಣ ಪದ್ಯದಲ್ಲಿ ಪುರಾಣಿಕರು ಬರೆಯುತ್ತಾರೆ. ಇದನ್ನು ಸೂಕ್ಷö್ಮವಾಗಿ ಗಮನಿಸಿದರೆ ಬೇಂದ್ರೆಯವರ ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ ಬಂತು ಬೀಡಿಗೆ ಎಂಬುದನ್ನು ಪರ್ಯಾಯ ರೂಪದಲ್ಲಿ ಕಟ್ಟಿದಂತೆ ತೋರುತ್ತದೆ. ಅಂದರೆ ಆ ಕಾಲಘಟ್ಟದಲ್ಲಿ ಪ್ರಕೃತಿ ವರ್ಣನೆ ಎಂಬ ತಾತ್ವಿಕ ಆಧಾರದಲ್ಲಿ ಕಾವ್ಯ ರಚನೆಯ ಸಮಾನ ಮಾನದಂಡ ಇತ್ತೆಂಬುದು ತಿಳಿಯುತ್ತದೆ. ಅಂತೆಯೇ ಬೇಂದ್ರೆಯವರು ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎಂದು ಬರೆದಂತೆ ಸಿದ್ಧಯ್ಯ ಪುರಾಣಿಕರು ಹೊಸ ದಿನವನ್ನು ಆಹ್ವಾನಿಸುವ ಪರಿ ತುಂಬ ಸೊಗಸಾಗಿದೆ.
ಬಂದಿದೆ ಬಾ ಹೊಸದಿನ
ಮೈವೆತ್ತಿಹ ಹೊಸತನ
ತಿಳಿಯಾದವು ಬಾನ ಬಯಲು
ತಿಳಿಯಾದವು ಕಾನು ಹೊನಲು
ಎಂಬ ಪದ್ಯ ಬೇಂದ್ರೆ ಮತ್ತು ಪುರಾಣಿಕರನ್ನು ಒಟ್ಟೊಟ್ಟಿಗೆ ಇಟ್ಟು ನೋಡಬೇಕೆಂಬುದನ್ನು ಒತ್ತಾಯಿಸುವಂತಿದೆ. ನವೋದಯ ಕಾಲದಲ್ಲಿ ಕುವೆಂಪು, ಬೇಂದ್ರೆ, ಪು.ತಿ.ನ.ರವರು ನಿಸರ್ಗದ ಆತ್ಮವಾದ ಮಳೆ, ಮೋಡ, ಕಾನನ, ಕಂದರಗಳನ್ನು ಅಪ್ರತಿಮ ರೂಪಕಗಳಿಂದ ಅಚ್ಚೊತ್ತಿದಂತೆ ಕಟ್ಟಿದರು. ಬಯಲು ಸೀಮೆಯ ಗುಡ್ಡ ಪರಿಸರದ ಪುರಾಣಿಕರ ಕಾವ್ಯವೂ ಮಳೆಯಿಲ್ಲದ ನೆಲದಲ್ಲಿ ಮಳೆ ಕಾಡನ್ನು ವರ್ಣಿಸಿದರು. ಮೋಡಗಳೇ ಇಲ್ಲದ ಈ ಪರಿಸರದಲ್ಲಿ ಮೋಡಗಳನ್ನು ಕಾವ್ಯಾತ್ಮಕವಾಗಿ ತಂದು ನಿಲ್ಲಿಸಿದರು.
ಹುಬ್ಬು ಹಾರಿಸುತಿಹುದು ಮಿಂಚಿನಲಿ ಮೋಡ
ಶೃಂಗಾರದ ಚೇಷ್ಟೆಯಿದು ಯಾರ ಕೂಡ?
ಬಿಳುಪಾಯ್ತು ಕಪ್ಪಾಯ್ತು ಕೆಂಪಾಯ್ತು ಮೋಡ
ಕ್ಷಣಕೊಂದು ರೂಪಾಯ್ತು ಯಾರ ಕೈವಾಡ?
ಎಂಬ ಕವಿತೆ ಮೋಡವನ್ನು ವರ್ಣಿಸುವ ಸುದೀರ್ಘ ಕವಿತೆಯಾಗಿದೆ. ಈ ಮೋಡಗಳು ಬೆಟ್ಟಕ್ಕೆ ತಾಗುವ ಪರಿಯನ್ನು ಕವಿ ವರ್ಣಿಸುವುದು ಹೀಗೆ.
ಗಂಡು ಹೆಣ್ಣಿನ ವೇಷ ಧರಿಸಲು
ಕೇಶ ಕಟ್ಟುವ ತೆರದಲಿ.
ಬೆಟ್ಟದೀ ಬೋಳ್ದೆಲೆಗೆ ದೊರೆಯಿತು
ವ್ಯೋಮ ಕೇಶವು ಭರದಲಿ
ಎಂದು ಬರೆಯುವುದರ ಒಳಗಡೆ ರೂಪಕಾತ್ಮಕ ನೆಲೆಯನ್ನು ನೋಡಬಹುದು. ನವೋದಯ ಕಾಲಘಟ್ಟದಲ್ಲಿ ಎಲ್ಲ ಕವಿಗಳು ಸಾಮಾನ್ಯವಾಗಿ ಸೂರ್ಯೋದಯ, ಚಂದ್ರೋದಯ, ಬೆಳಗು ಇತ್ಯಾದಿ ರೂಪಕಗಳನ್ನು ಇಟ್ಟುಕೊಂಡು ಕಾವ್ಯ ರಚನೆ ಮಾಡಿದರು. ಅದರಲ್ಲಿಯೂ ಬೇಂದ್ರೆಯವರ ಬೆಳಗು ಕವಿತೆ ಅತ್ಯಂತ ಜನಪ್ರಿಯವಾದದ್ದು. ಬಹುಶಃ ಅದರ ಪ್ರೇರಣೆಯಿಂದ ಎಂಬಂತೆ ಪುರಾಣಿಕರು ಬೆಳಗನ್ನು ವರ್ಣಿಸುವ ಪರಿ ತುಂಬ ಸೊಗಸಾಗಿದೆ.
ಚಣಚಣವೂ ಹೊಸತನವ ತಳೆವ ಚೆಲುವನು ತೊಟ್ಟು
ಮತ್ತೊಮ್ಮೆ ಕರೆಯುತಿದೆ ಪ್ರಕೃತಿಯಿಂದು
ಈ ರೂಪವನು ನೋಡಿ, ಈ ರಾಗವನು ಕೇಳಿ
ಶತಮಾನಗಳ ಕೊಳೆಯ ತೊಳಿಯಿರೆಂದು
ಹೀಗೆ ಈ ಪದ್ಯ ಸೊಗಸಾಗಿ ಸಾಗುತ್ತದೆ. ಅಷ್ಟೇನು ಜನಪ್ರಿಯವಲ್ಲದ ಈ ಪದ್ಯ ನಮಗೆ ಬೆಳಗು ಎಂಬ ನಿಸರ್ಗ ಪರಿಕಲ್ಪನೆಯನ್ನು ಮಾತ್ರ ಮುಂದೆ ತಂದು ನಿಲ್ಲಿಸುತ್ತದೆ. ಮಳೆ ಈ ಕವಿಯ ಬರಹದಲ್ಲಿ ಮತ್ತೊಂದು ಹೊಸರೂಪ ಪಡೆಯುತ್ತದೆ. ಕವಿ ತಾನು ಬದುಕಿದ ಒಣ ನೆಲದಲ್ಲಿ ಮಳೆಯ ಸೊಬಗನ್ನು ಅಭಿವ್ಯಕ್ತಿಸುವುದೇ ಅಂತಃಚಕ್ಷ. ಮಳೆ ಕುರಿತಾಗಿ ಪುರಾಣಿಕರು ಬರೆಯುವ ಪದ್ಯ ಹೀಗಿದೆ,
ಮೋಡಗಳ ಜಡೆಬಿಚ್ಚಿ ಮೈದೊಳೆದುಕೊಳುತಿಹಳು
ಬಯಲ ಭಾಮಿನಿ ಜಗದ ಮಣೆಯ ಮೇಲೆ
ಕೇಶರಾಶಿಯ ನೀರು ತೊಟ್ಟಿಕ್ಕಿ ಸುರಿಯುತಿದೆ
ಇದಕೆ ಜನ ಎನ್ನುವುದು ಮಳೆಯ ಲೀಲೆ…
ಎಂದು ಬರೆದ ಈ ಪದ್ಯದಲ್ಲಿ ಬಳಸುವ ಪದಜಾಲವನ್ನು ಗಮನಿಸಬೇಕು. ಕುವೆಂಪುರವರು ಆ ಕಾಲಘಟ್ಟದಲ್ಲಿ ಬಾ ಮಲೆಯನಾಡಿಗೆ ಎಂದು ಕರೆಕೊಟ್ಟಂತೆ ಪುರಾಣಿಕರು ಅದರಿಂದ ಪ್ರೇರಣೆಗೊಂಡು
ಬಾ ನನ್ನೀ ತೋಟಕ್ಕೆ
ಆನಂದದ ಊಟಕ್ಕೆ ……
……………….
ಹೂಗಳ ಜೊಂಪಿಹುದು, ಫಲಗಳ ಬಿಣ್ಪಿಹುದು
ಬರೆದದ್ದು ಗಮನಿಸಿದರೆ ಬಹುಶಃ ಪುರಾಣಿಕರು ಆ ಕಾಲದ ಮೊದಲ ಸಾಲಿನಲ್ಲಿ ಪ್ರಸಿದ್ಧರಾಗಿದ್ದ ಅನೇಕ ಕವಿಗಳ ಕಾವ್ಯದ ರಚನೆಗೆ ಒಲಿದಿದ್ದಾರೆ, ಪ್ರೇರಣೆಗೊಂಡಿದ್ದಾರೆಂಬುದು ತಿಳಿಯುತ್ತದೆ. ಸೂರ್ಯೋದಯ ಕುವೆಂಪುರವರಲ್ಲಿ ಒಂದು ಅದ್ಭುತವಾದ ಪ್ರತಿಮಾತ್ಮಕ ನೆಲೆ. “ಸೂರ್ಯೋದಯ, ಚಂದ್ರೋದಯ ದೇವರ ವರ ಕಾಣೋ” ಎಂದು ಬರೆಯುವ ಕುವೆಂಪು ಎಲ್ಲಾ ಕಾಲದ ಸತ್ಯವಾದ ನಿಸರ್ಗದ ಎರಡು ದಡಗಳನ್ನು ರೂಪಿಸಿದರು. ಪುರಾಣಿಕರು ಸೂರ್ಯೋದಯವನ್ನು ಬರೆದದ್ದು ಹೀಗೆ.
ಬಂದನದೋ ಆನಂದ ಮಂದಿರ
ತಳೆದು ತೊಳಗುವ ಸಿಂಧುರ
ಏನು ಹಿಗ್ಗಿತೋ ಹರುಷದಲಿ
ಹುಸೇನ ಸಾಗರ ಸರೋವರ.
ಹಾಗೆಯೇ ಕುವೆಂಪು ಅವಕಾಶ ಸಿಕ್ಕಲ್ಲೆಲ್ಲ ತಮ್ಮನ್ನು ತಾವು ಕಾಡಿನ ಕವಿ ಎಂದು ಹೇಳಿಕೊಂಡಿದ್ದಾರೆ. ಪುರಾಣಿಕರು ಹೇಳುವ ಬಗೆ ಹೀಗಿದೆ.
ಕಾಡಿನ ಕವಿಗಳೇ ಓ ಕಲೆಗಾರರೆ
ಆಡಿರಿ ಹಾಡಿರಿ ನರ್ತಿಸಿರಿ
ಕಲರವ ಮಂಜುಳ ಅಲೆಅಲೆಯಾಗಿರೆ
ಬನಶಂಕರಿಯನು ಕೀರ್ತಿಸಿರಿ
ಎಂದು ಬರೆಯುವಾಗ ಒಂದು ಬಗೆಯ ಶ್ಲೇಷ ರೂಪಕ ಕಂಡುಬರುತ್ತದೆ. ಕುವೆಂಪುವನ್ನು ಸಂಬೋಧನಾ ರೂಪಕದಲ್ಲಿ ಕರೆಕೊಟ್ಟಂತೆ ಭಾಸವಾಗುತ್ತದೆ. ಪುರಾಣಿಕರು ಸುಗ್ಗಿಯನ್ನು “ಶಿವಸುಗ್ಗಿ” ಎಂದು ಕರೆಯುತ್ತಾರೆ. ಕುವೆಂಪು, ಬೇಂದ್ರೆ ಮತ್ತು ಪು.ತಿ.ನ.ರವರ ಕಾವ್ಯದಲ್ಲಿ ಸತ್ಯ, ಶಿವ, ಸೌಂದರ್ಯ ಲಾಸ್ಯವಾಡಿದೆ. ಹಾಗೆಯೇ ಪುರಾಣಿಕರು
ಒಣ ಬಿದಿರಿನ ಕೊರಳಿಂದಲೇ ಸುರಕಿನ್ನರ ಗಾನ
ಬಡ ಕಬ್ಬಿಗನೆದೆಯಿಂದಲೆ ನವಭಾವವಿಸಾನ
ಎಂಬ ಪದ್ಯದಲ್ಲಿ ಒಣ ಬಿದಿರಿನ ಕೊರಳಲ್ಲಿ ಎಂಬ ಮಾತು ಕಲ್ಯಾಣ ಕರ್ನಾಟಕದ ಪ್ರಾದೇಶಿಕ ಸಂಸ್ಕೃತಿಯ ಜೀವ ಇದ್ದಂತಿದೆ. ಈ ನೆಲದಲ್ಲಿಯೂ ಅಂದರೆ ಬಯಲ ಆಲಯದಲ್ಲಿಯೂ ಸುರಕಿನ್ನರ ಗಾನ ಹೊರಡಬಲ್ಲದೆಂಬ ಆಶಯ ಇದ್ದಂತಿದೆ. ಹೀಗೆ ಹಲವು ನೆಲೆಯಲ್ಲಿ ಪುರಾಣಿಕರ ನಿಸರ್ಗಾರಾಧನೆ ಸಮಗ್ರ ಕಾವ್ಯದಲ್ಲಿ ಅವಕಾಶ ಸಿಕ್ಕಲ್ಲೆಲ್ಲ ಬರೆದಿದ್ದಾರೆ.
ಡಾ. ಸಿದ್ಧಯ್ಯ ಪುರಾಣಿಕರ ಕಾವ್ಯದ ಮತ್ತೊಂದು ಮಗ್ಗಲನ್ನು ಶೋಧಿಸಿದರೆ ಅವರ ಕನ್ನಡಪರ ಚಿಂತನೆ ಮಡುಗಟ್ಟಿ ನಿಂತಿದೆ. ನವೋದಯ ಕಾಲದಲ್ಲಿ ಅಬ್ಬರದಿಂದ ಬರೆಯಿಸಿಕೊಂಡ ಕನ್ನಡ ನಾಡು ನುಡಿ ರೂಪಕಗಳು ಜನಮನದ ಮೇಲಿವೆ. ಕರ್ನಾಟಕ ಏಕೀಕರಣ ಆಗಬೇಕಿದ್ದ ಕಾಲಘಟ್ಟವದು. ಕುವೆಂಪು ಆದಿಯಾಗಿ ಮೇರು ಕವಿಗಳೆಲ್ಲ ಈ ನಾಡಿನ ನೆಲ, ಜಲ, ಭಾಷೆ ಕುರಿತು ಬರೆದರು. ಕುವೆಂಪು ಕನ್ನಡ ಎನೆಕುಣಿದಾಡುವುದೆನ್ನೆದೆ, ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ, ಜಹಯೇ ಕರ್ನಾಟಕ ಮಾತೆ ಇತ್ಯಾದಿ ಕನ್ನಡಿಗರ ಭಾವ ಹೃದಯವನ್ನು ಮೀಟುವ ಪದ್ಯಗಳನ್ನು ಬರೆದರು. ಹಾಗೆಯೇ ವಿ.ಕೃ ಗೋಕಾಕ್ರು, ಹುಯಿಲಗೋಳ ನಾರಾಯಣರಾಯರು, ಬಿ.ಎಂ.ಶ್ರೀಯವರು ಈ ಬಗೆಯ ಕನ್ನಡಾತ್ಮಕ ಪದ್ಯಗಳನ್ನು ನೀಡಿದರು. ಇದೇ ಕಾಲಘಟ್ಟದ ಎರಡನೇ ಸಾಲಿನಲ್ಲಿ ಬರೆಯುತ್ತಿದ್ದ ಪುರಾಣಿಕರ ಕನ್ನಡತ್ವದ ಚಿಂತನೆ ಬಹುಜನರ ಮನೋಭಿತ್ತಿಯ ಮೇಲೆ ಯಶಸ್ವಿಯಾಗಿ ನಿಂತದ್ದು ಒಂದು ದೊಡ್ಡ ಸವಾಲೇ ಸರಿ. ಪುರಾಣಿಕರು ವೃತ್ತಿಯಿಂದ ಅಧಿಕಾರಿಗಳಾಗಿದ್ದರು. ಸಹಜವಾಗಿ ಆಡಳಿತಾತ್ಮಕ ದೃಷ್ಟಿಕೋನದಿಂದ ಅವರು ಇಂಗ್ಲೀಷ್ನ್ನು ಬಳಸಲೇಬೇಕಾಗಿತ್ತು. ಈ ಇಕ್ಕಟ್ಟಿನ ಸಂದರ್ಭದಲ್ಲಿಯೇ ಈ ನೆಲದ ಮಗನಾಗಿ ಅದನ್ನು ಮೀರಿಯೂ ಕನ್ನಡ ನಾಡು ನುಡಿಗೆ ಅವರು ಕೊಟ್ಟ ಸಾಹಿತ್ಯಿಕ ಕೊಡುಗೆ ಅವಿಸ್ಮರಣೀಯ. ಅವರು ಬರೆದ “ಕನ್ನಡದ ಬೆಳೆ” ಎನ್ನುವ ಪದ್ಯ ಏಕಕಾಲದಲ್ಲಿ ಎರಡು ಅರ್ಥಗಳನ್ನು ಸೃಜಿಸುತ್ತದೆ. ಬೆಳೆ ಎಂಬುದು ಪೈರಾಗಿ, ಹಾಗೆಯೇ ಅಭಿವೃದ್ಧಿ ಕಾಣುವ ಮಾನದಂಡವಾಗಿ ತೋರುತ್ತದೆ.
ಹೊನ್ನಬೆಳೆ ಬರುತ್ತಿದ್ದ ಕನ್ನಡದ ಹುಲುಸು ಹೊಲ
ಬೀಳು ಬಿದ್ದಿಹುದಿಂದು ಬಂಜೆ ಬಯಲಾಗಿ
ಉತ್ತುವುದು ಬಹಳಾಯ್ತು, ಬಿತ್ತುವರೇ ಬರಲಿಲ್ಲ.
ಎಂಬ ಆತಂಕದ ನಡುವೆ ೧೯೪೦ರಲ್ಲಿ ಬರೆದರು. ಈ ಪದ್ಯದ ಕೊನೆಯಲ್ಲಿ ಕಿರಿಯರಿದನೇ ಕೇಳಲಿ, ಹಿರಿಯರುತ್ತರ ಹೇಳಲಿ ಎಂದು ಎರಡು ತಲೆಮಾರಿಗೆ ಆಹ್ವಾನ ನೀಡುತ್ತಾರೆ. ಅಂದರೆ ಹಿರೀಕ ತಲೆಮಾರಿನ ಕನ್ನಡ ಪ್ರೇಮ, ಕಿರಿಯರ ಆಂಗ್ಲ ವ್ಯಾಮೋಹ ಈ ಎರಡು ಮುಖಾಮುಖಿಯಾದ ಕಾಲಘಟ್ಟ ಅದಾಗಿತ್ತು. ಹಾಗಾಗಿ ಅವರು ಈ ಬಗೆಯ ನಿಲುವು ತಾಳುತ್ತಾರೆ. ಕನ್ನಡ ಎಂಬುದು ಕೇವಲ ನುಡಿಯಲ್ಲ ಅದು ಬೆಳಕು ಎಂದು ಪುರಾಣಿಕರ ಅಭಿಪ್ರಾಯ.
**ಭಾರತಿಯ ಮನೆಯಲ್ಲಿ ಲಕ್ಷö್ಯ ದೀಪಗಳಿಂದು
ನಕ್ಷತ್ರಗಳ ತೆರದಿ ಹೊಳೆಯುತಿಹವು
ಕನ್ನಡದ ಸಿರಿಬೆಳಕು ಮುನ್ನೀರು ದಾಟಿ
ನಿಟ್ಟು ನಿಟ್ಟಿನ ನಾಡು ತೊಳಗಬಹುದು
ಭಾರತದ ದೀವಳಿಗೆಯಲ್ಲಿ ಶಿವಗನ್ನಡದ ಜ್ಯೋತಿಯಿದು
ತೇಜಸ್ಸಿನೊಡ್ಡಿಯಾಗಿರಲಿ.**
ಎಂಬ ಮಾತಿನಲ್ಲಿ ಪುರಾಣಿಕರು ರೂಪಿಸಿದ ಕನ್ನಡತನ ಅದ್ಭುತವಾಗಿದೆ. ಇಲ್ಲಿ ಅವರು ಕನ್ನಡವನ್ನು ಶಿವಗನ್ನಡ ಎಂದು ಬಳಸಿರುವುದು ಒಂದು ಹೊಸ ಪರಿಕಲ್ಪನೆ. ಕನ್ನಡದ ಅಸ್ಮಿತೆಗೆ ನವೋದಯ ಕಾಲಘಟ್ಟದಲ್ಲಿಯೇ ಬಂದು ಎರಗಿದ ಆತಂಕಗಳನ್ನು ಕವಿ ಚಿಂತಾಕ್ರಾಂತನಾಗಿ ಎದುರಿಸಿದ್ದಾನೆ. ಹಾಗಾಗಿ ಕನ್ನಡಿಗರನ್ನು ಕವಿ ಬೇಡುವ ಪರಿ ಹೀಗಿದೆ.
ನಂಬು ಕನ್ನಡವನ್ನು ನಂಬು ಕನ್ನಡ ಜನರ
ನಂಬು ಕನ್ನಡ ನಾಡ ಭವಿತವ್ಯವನ್ನು
ಎಂದು ವಿಶ್ವಾಸ ಮೂಡಿಸುವ ಇರಾದೆ ಒಂದು ಮನವಿಯೋ ಅಥವಾ ಕನ್ನಡ ಭಿಕ್ಷೆಯೋ ಬೇಡಿದಂತಿದೆ. ನಂಬು ಕನ್ನಡವನ್ನು ಎಂದು ಎರಡೆರಡು ಸಾರಿ ಒತ್ತಿ ಕೇಳುವ ಕವಿಯೊಳಗಿನ ಕನ್ನಡ ಭಾಷೆಯ ಆತಂಕದ ನೆಲೆಯನ್ನು ಗಮನಿಸಬೇಕಾಗುತ್ತದೆ. ಒಂದೇ ಕನ್ನಡ ನೆಲವು, ಒಂದೇ ಕನ್ನಡ ಕುಲವು ಎಂಬ ಮತ್ತೊಂದು ಪದ್ಯದಲ್ಲಿ ನೆಲ ಮತ್ತು ಸಮುದಾಯಗಳನ್ನು ಏಕೀಭವಿಸಿ ನೋಡುವ ಅವರ ಚಿಂತನೆ ಜಾತ್ಯಾತೀತವಾದುದು. ಶರಣರು ಹೇಳುವ “ನೆಲನೊಂದೆ ಹೊಲಗೇರಿ ಶಿವಾಲಯಕೆ” ಎಂಬ ಮಾತು ಮತ್ತೆ ಮತ್ತೆ ನೆನಪಾಗುತ್ತದೆ.
ನೂರು ಕುಲಗಳ ಸೇರಿ ಕನ್ನಡದ ಕುಲವಾಗಿ
ಭಾರತಕೆ ಬಲವಾಗಿ ಬೆಳಗುತಿಹುದು.
ಎಂಬ ಪದ್ಯವಂತೂ ಬಹುತ್ವದ ಭಾರತದಲ್ಲಿ ಹಲವು ಜಾತಿ ಸಮುದಾಯಗಳ ಸಂಸ್ಕೃತಿಯ ಅಸ್ಮಿತೆಯಲ್ಲಿ ಭಾಷೆ ಯಾವತ್ತೂ ಮನುಷ್ಯರನ್ನು ಒಗ್ಗೂಡಿಸುವ ಸಂವಹನ ಆಗಿರುತ್ತದೆಂಬುದನ್ನು ಸೊಗಸಾಗಿ ಈ ಪದ್ಯ ಹೇಳುತ್ತದೆ. ನೂರು ಕುಲಗಳು ಕನ್ನಡ ಕುಲವಾಗುವ ಬಗೆ ತುಂಬ ಅದ್ಭುತವಾಗಿದೆ. ಹಾಗೆಯೇ
ಹೊತ್ತಿತೋ ಹೊತ್ತಿತೋ ಕನ್ನಡದ ದೀಪ,
ಮುಗಿಯಿತೋ ಮುಗಿಯಿತೋ ಶತಮಾನಗಳ ಶಾಪ
ಎಂಬ ಅವರ ಪದ್ಯವಂತೂ ಕನ್ನಡ ನಾಡ ನುಡಿಯಲ್ಲಿ ಅತ್ಯಂತ ಪ್ರಸಿದ್ಧವಾಗಿದೆ. ಹೀಗೆ ಅವರು ಕನ್ನಡದ ಸಂದರ್ಭ ಬಂದಾಗಲೆಲ್ಲ ಜೀವ ಭಾಷೆಯ ಪರವಾಗಿ ನಿಂತು ಮಾತನಾಡಿದ್ದಾರೆ.
ನವೋದಯ ಕಾಲಘಟ್ಟದಲ್ಲಿ ಬಹುತೇಕ ಎಲ್ಲ ಕವಿಗಳ ಕಾವ್ಯದ ಶಕ್ತಿಯಾಗಿದ್ದ ಮತ್ತೊಂದು ಅಂಶವೆಂದರೆ ರಾಷ್ಟ್ರೀಯ ಪ್ರಜ್ಞೆ. ಅದು ಸ್ವಾತಂತ್ರö್ಯ ಹೋರಾಟದ ಕಾಲಘಟ್ಟ. ಆದ್ದರಿಂದ ಕನ್ನಡ ಮಾತೆ, ಭಾರತಮಾತೆ ಇಬ್ಬರನ್ನು ಒಂದೇ ಪರಡಿಯ ಮೇಲಿಟ್ಟು ನೋಡುತ್ತಿದ್ದ ಸಂದರ್ಭವದು. ಭಾರತ ಜನನೀಯ ತನುಜಾತೆ, ಜಯಹೇ ಕರ್ನಾಟಕ ಮಾತೆ ಎಂದು ಕುವೆಂಪು ಬರೆದರು. ಹಾಗೆಯೇ ಪುರಾಣಿಕರು ಕೂಡಾ ಧನ್ಯ ಭಾರತ ಎಂಬ ಪದ್ಯದಲ್ಲಿ
ಕೋಟಿ ಹೃದಯ ಮೀಟಿ ಬಂತು ಇಂದು ಒಂದೇ ಶುಭಶೃತಿ
ಪ್ರಜಾರಾಜ್ಯ ಪಟ್ಟವೇರುತಿಹಳು ತಾಯಿ ಭಾರತಿ
ಎಂದು ಒಂದು ಕಡೆ ಬರೆದರೆ ಮತ್ತೊಂದು ಕಡೆ ಅಜೇಯವಾಗು ಭಾರತ ಎಂಬ ಅದ್ಭುತವಾದ ರಾಷ್ಟಿçÃಯ ಪ್ರಜ್ಞೆಯಿರುವ ಕವಿತೆ ಬರೆದಿದ್ದಾರೆ. ಈ ರಾಷ್ಟಿçÃಯ ಪ್ರಜ್ಞೆಯ ಒಳಗಡೆ ಯಾವ ಕೇಡಿಲ್ಲ, ಕೋಮುವಾದವಿಲ್ಲ, ಕುಹಕವಿಲ್ಲ. ಇದು ಅಪ್ಪಟ ಭಾರತೀಯ ಕವಿಯೊಬ್ಬನ ರಾಷ್ಟಿçÃಯ ಪ್ರೀತಿ, ಪ್ರೇಮ.
ಅದಮ್ಯವಾಗು, ಅಜೇಯವಾಗು
ಅಬೇಧ್ಯವಾಗು ಭಾರತ
ಬಲಾಢ್ಯವಾಗು, ಗುಣಾಢ್ಯವಾಗು
ಸಮೃದ್ಧವಾಗು ಭಾರತ
ಎಂದು ಸುದೀರ್ಘವಾಗಿ ಈ ಪದ್ಯ ಸಾಗುತ್ತದೆ. ಪುರಾಣಿಕರು ತಮ್ಮ ಎಲ್ಲ ಕವನ ಸಂಕಲನಗಳಲ್ಲಿ ಕೆಲವು ಕಡೆ ರಾಷ್ಟ್ರೀಯ ಪ್ರಜ್ಞೆಯನ್ನು ತುಂಬ ಎಚ್ಚರದಿಂದ ಮೆರೆದಿದ್ದಾರೆ.
ಭಾಗ್ಯಶಾಲಿಯು ನೀನು ಭಾರತದಿ ಬದುಕಿರುವೆ
ಈ ಹಿಗ್ಗು ಸಾಹಸದ ಬುಗ್ಗೆಯಾಗಿ
ಮಾಡಿಸಲಿ ನಿನ್ನಿಂದ ನಿರ್ಮಾಣ ಕಾರ್ಯಗಳ
ಬೆಳಗಲಿ ಭಾರತವು ಸಗ್ಗವಾಗಿ
ಎಂಬ ಅಪರೂಪದ ಭಾರತವನ್ನು ಅವರು ಚಿತ್ರಿಸಿದ್ದಾರೆ. ಸ್ವಾತಂತ್ರö್ಯದ ಸಂದರ್ಭದಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಬರೆದ ಕವಿ ಸ್ವಾತಂತ್ರೋತ್ತರ ಕಾಲಘಟ್ಟದಲ್ಲಿ ಎಂಥ ಭಾರತವ ಬಿಟ್ಟು ಹೋಗುವಿರಿ, ನಮ್ಮ ನಾಯಕರೇ ಹೇಳಿ ಎಂದು ಅವರು ಕೇಳುವಲ್ಲಿ ಈ ದೇಶದಲ್ಲಿ ಆದ ಅಡಾಹುಡಿಗಳನ್ನು ಸೂಕ್ಷö್ಮವಾಗಿ ಗಮನಿಸಬೇಕಾಗುತ್ತದೆ.
ನವೋದಯ ಕಾಲಘಟ್ಟದಲ್ಲಿ ಎಲ್ಲ ಕವಿಗಳಲ್ಲಿ ಮನೆಮಾಡಿದ್ದ ದೇಸಿ ಪ್ರಜ್ಞೆ ಮತ್ತು ಜಾನಪದ ಲಯಗಳು ಸಹಜ ಸ್ವರೂಪವೆಂಬಂತೆ ಪುರಾಣಿಕರ ಕಾವ್ಯದಲ್ಲಿಯೂ ಎಡತಾಕಿವೆ. ಅವರು ಕೆಲವು ಕಡೆ ಶುದ್ಧ ಯಲಬುರ್ಗಿಯ ಕನ್ನಡವನ್ನು ಸಮೃದ್ಧವಾಗಿ ಕಾವ್ಯಭಾಷೆಯನ್ನಾಗಿ ಮಾಡಿಕೊಂಡಿದ್ದುಂಟು. ಬೇಂದ್ರೆ ಜಾನಪದ ಲಯಗಳನ್ನೇ ಉಸಿರಾಡಿದರು. ಬಹುಶಃ ಆ ಪ್ರೇರಣೆ ಪುರಾಣಿಕರ ಮೇಲೆ ಇದೆ.
ಹೊನ್ನಿ ಏ ಹೊನ್ನಿ ಬಾಯಿಲ್ಲಿ ಕೆಲಸವಿದೆ
ಏನಿಲ್ಲ ನಿನಗೊಂದು ಕಿವಿಮಾತು ಹೇಳ್ಬೇಕು
ಹೆದರಬ್ಯಾಡ ನಾನೇನೂ ಮಾಡಲ್ಲ
ನೀ ಕೇಳ್ಬೇಕು ಮಾತು ನಾಚಬ್ಯಾಡ ನಾರಿ
ಎಂದು ಹೊಸ ಹೆಂಡತಿಗೆ ಎಂಬ ಪದ್ಯದಲ್ಲಿ ಬರೆದಿದ್ದಾರೆ. ಅಂತೆಯೇ
ಹಳ್ಳಿಯ ಹಾಡೆಂದು ಹಾಸ್ಯ ಮಾಡಲುಬೇಡಿ
ಕಳ್ಳೀನ ಬಳ್ಳೀಯ ಕುಡಿಗೋಳು
ಎಂಬಂತಹ ಸಹಜ ಸುಂದರ ಜಾನಪದ ಲಯಗಳನ್ನು ಸಮರ್ಥವಾಗಿ ತಮ್ಮ ಕಾವ್ಯದಲ್ಲಿ ಕಟ್ಟಿರುವುದೊಂದು ವಿಶೇಷ.
ಪುರಾಣಿಕರ ಕಾವ್ಯದಲ್ಲಿ ಸಾಂದ್ರವಾಗಿ ಮತ್ತು ಸ್ಥಾಯಿಯಾಗಿ ಬರುವ ಮತ್ತೊಂದು ಸಹಜ ಗುಣ ಎಂದರೆ ವೈಚಾರಿಕತೆ. ಅವರ ಅನೇಕ ಪದ್ಯಗಳಲ್ಲಿ ಜಾತಿ, ಮತ, ವರ್ಗ, ವರ್ಣದ ವೈರುಧ್ಯಗಳನ್ನು ಚಿತ್ರಿಸಿದ್ದಾರೆ. ಶರಣ ಪರಂಪರೆಯಲ್ಲಿ ಬೆಳೆದ ಕವಿ. ಸಹಜವಾಗಿ ಆ ಧಾರೆಯನ್ನು ತಮ್ಮ ಅಭಿವ್ಯಕ್ತಿಯ ಮಾಧ್ಯಮದಲ್ಲಿ ಬಿಂಬಿಸಿದ್ದಾರೆ. ನವೋದಯ ಕಾಲಘಟ್ಟದಲ್ಲಿ ಕಾರಂತರು ಚೋಮನದುಡಿಯ ಮೂಲಕ ದಲಿತ ಸಾಹಿತ್ಯದ ಆರಂಭಿಕ ಕಿಚ್ಚು ಎಂಬಂತೆ ಅದನ್ನು ಗಂಭೀರವಾಗಿ ಬರೆದರು. ಅಂತೆಯೇ ಈ ಕವಿಯೂ ಅಂತಹ ಕೆಲವು ಪದ್ಯಗಳನ್ನು ಬರೆದದ್ದು ಮತ್ತೊಂದು ವಿಶೇಷ. ದಲಿತ ಡಮರು ಎಂಬ ಶೀರ್ಷಿಕೆಯ ಪದ್ಯ ಖಂಡಿತವಾಗಿಯೂ ಮುಂದೆ ಬರಲಿದ್ದ ದಲಿತ-ಬಂಡಾಯ ಸಾಹಿತ್ಯದ ಪೂರ್ವ ಸೂಚನೆಯಂತೆ ತೋರುತ್ತದೆ.
ಭಂ ಭಂ ಭಂ
ಭಭಂ ಭಂ ಬಭಂ ಭಂ
ದಲಿತ ಡಮರು ನಾದ
ಕ್ರಾಂತಿ ಭೈರವನ ಕರಾಳ ಡಮರು ನಾದ
ಎಂದು ಬರೆಯುತ್ತ ಧರ್ಮದ ಬೊಂತೆ, ಕರ್ಮಘದ ಕಂತೆಗಳನ್ನು ಕಟ್ಟಿದ ವಿಕೃತವಾದ ಈ ದೇಶದ ವರ್ಣವಾದವನ್ನು ಉಚ್ಛ ನೀಚ ಬೇಧವನ್ನು ಪುರಾಣಿಕರು ಬಸವನ ಹಾದಿಯಲ್ಲಿ, ಬುದ್ಧನಹಾದಿಯಲ್ಲಿ ನಿವಾರಿಸಬೇಕೆಂಬ ಆಶಯವನ್ನು ಈ ಪದ್ಯದಲ್ಲಿ ಹೇಳಿದ್ದಾರೆ. ಹಾಗೆಯೇ ದುಡಿವ ಕೈಗಳಿಗೆ ನಮೋ ನಮೋ ಎಂಬ ಪದ್ಯದಲ್ಲಿ ಕಾರ್ಲ್ಮಾರ್ಕ್ಸ್ ರೂಪಿಸಿದ ಕಾರ್ಮಿಕ ಸಿದ್ಧಾಂತವನ್ನು ಮನಗಂಡು ಬರೆದಂತಿದೆ. ಇಡೀ ಪದ್ಯದಲ್ಲಿ ಕಸವ ಬಳಿವ ಕೈ, ಸಗಣಿ ಎತ್ತುವ ಕೈ, ಗಿಡನೆಟ್ಟ ಕೈ, ಬಟ್ಟೆ ನೇಯುವ ಕೈ ಇತ್ಯಾದಿ ಬಹುತ್ವದ ವೃತ್ತಿಪರರನ್ನು ಗೌರವಿಸುವ ಪರಿ ಸೊಗಸಾಗಿದೆ. ಈ ದೇಶವನ್ನು ಕಾಡುತ್ತಿದ್ದ ಬಡತನವನ್ನು ಹೋಗಲಾಡಿಸಬೇಕೆಂಬ ಆಶಯವಿರುವ “ಏ ಬಡತನವೇ ಹೊರಟುಹೋಗು, ದೂರ ತೊಲಗು ದೂರ ತೊಲಗು” ಎಂದು ಸುದೀರ್ಘ ಪದ್ಯವೊಂದರಲ್ಲಿ ಅರಿಕೆ ಮಾಡಿಕೊಳ್ಳುತ್ತಾರೆ. ಅಷ್ಟೇ ಅಲ್ಲ ಭಾರತದ ಸ್ವಾತಂತ್ರಾö್ಯನಂತರ ಈ ದೇಶದಲ್ಲಿ ಉಂಟಾದ ನಿರಾಶ್ರಿತ ಭಾವವನ್ನು ಒಂದು ಪದ್ಯದಲ್ಲಿ ಅಚ್ಚುಕಟ್ಟಾಗಿ ಬರೆದಿದ್ದಾರೆ. ಹಾಗೆಯೇ ಇವರ ವೈಚಾರಿಕ ನಿಲುವುಗಳು ಈ ನೆಲದ ಮಣ್ಣಿನಿಂದಲೆ ಬಂದದ್ದು.
ಬರುತಿದೆ ಬಡವರ ಯುಗ ನೆನಪಿಡು ಓ ಧನಿಕ
ತರುತಿದೆ ನಿನಗೆ ಕ್ಷಯ ನಿನ್ನಯ ಧನಕನಕ
———————
ಎನ್ನುತ್ತಲೇ ಬಂಡವಾಳಶಾಹಿಗಳನ್ನು ಟೀಕಿಸುತ್ತಾರೆ. ಈ ದೇಶದ ನಿಜ ವಾರಸುದಾರರಾದ ಆದಿವಾಸಿಗಳ ಕುರಿತಾಗಿಯೂ ಪುರಾಣಿಕರು ಬರೆದದ್ದು ಅವರ ಕಾವ್ಯದ ವಿಸ್ತಾರತೆಯನ್ನು ಹೇಳುತ್ತದೆ. ಆದಿ ಜನಗಳ ಆಕ್ರೋಶ ಎಂಬ ಪದ್ಯದಲ್ಲಿ
ಬಾಳುವೆವು ಗುಲಾಮರಾಗಿ
ಮೇಲಿನವರ ಹಮಾಲರಾಗಿ
ಹೇಳುವರು ವೇದವಿದರು
ಆಳಿಗೂ ಆಳ್ವಿಕೆಯು ಬೇಕು
ಎನ್ನುವ ಮೂಲಕ ಆದಿವಾಸಿ ಬುಡಕಟ್ಟು ಸಮುದಾಯಿಗಳು ಆಡಳಿತ ಅಂದರೆ ಅಧಿಕಾರ ರಾಜಕಾರಣವನ್ನು ಪಡೆಯಬೇಕೆಂಬ ಮಹತ್ತರ ಆಶಯ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಪುರಾಣಿಕರ ಕಾವ್ಯದಲ್ಲಿ ಆತ್ಯಂತಿಕವಾದ ಪ್ರೇಮದ ಮೀಮಾಂಸೆ, ಆನುಭಾವಿಕ ದರ್ಶನ ಎಲ್ಲೆಡೆ ಲಾಸ್ಯವಾಡಿದೆ. ಅವರ ಪ್ರೇಮ, ನಿಸರ್ಗವಾಗಿ, ಭಾಷೆಯಾಗಿ, ಬದುಕಾಗಿ ರೂಪುಗೊಂಡದ್ದು ವಿಶೇಷ. ಅವರ ವಚನೋಧ್ಯಾನ ಎಂಬ ಕೃತಿ ಕನ್ನಡ ನಾಡಿನ ಆಧುನಿಕ ವಚನಗಳ ಅದ್ಭುತ ಲೋಕ. ಪುರಾಣಿಕರ ಒಟ್ಟು ದರ್ಶನ ಇದರಲ್ಲಿದೆ. ಶಿವಗನ್ನಡದಲ್ಲಿ ಆಧುನಿಕ ವಚನಗಳನ್ನು ರೂಪಿಸಿ ಹೊಸಲೋಕ ದರ್ಶನ ಮಾಡಿದ್ದಾರೆ. ಡಾ. ಸಿದ್ಧಯ್ಯ ಪುರಾಣಿಕರ ಆತ್ಯಂತಿಕ ಕಾವ್ಯದ ನೆಲೆಯೆಂದರೆ ಮಾನವೀಕರಣ. ಕುವೆಂಪು ಅನಿಕೇತನ ಪ್ರಜ್ಞೆಯನ್ನು ಜಗತ್ತಿಗೆ ನೀಡಿದರು. ಅಂತೆಯೇ ಪುರಾಣಿಕರು ಕೂಡ ಮನುಷ್ಯ ಪ್ರಜ್ಞೆಯನ್ನು ನೀಡಿದರು.
ಓದಿ ಬ್ರಾಹ್ಮಣನಾಗು
ಕಾದಿ ಕ್ಷತ್ರಿಯನಾಗು
ಶೂದ್ರ ವೈಶ್ಯನೇ ಆಗು
ದುಡಿದು ಗಳಿಸಿ
ಏನಾದರೂ ಆಗು,
ಮೊದಲು ಮಾನವನಾಗು!!!
ಎಂಬುದೇ ಡಾ. ಸಿದ್ಧಯ್ಯ ಪುರಾಣಿಕರ ಬರಹದ ಕೇಂದ್ರ ಆಶಯ.
Peepal Media Desk
Peepal Media · ಅಂಕಣ ವಿಭಾಗ