ಕಾಡಾನೆಗಳ ಹಾವಳಿ ಮಡಿಗೆರೆಯಲ್ಲಿ 50ಕ್ಕೂ ಹೆಚ್ಚು ಗ್ರಾಮಗಳಲ್ಲಿ – ನಿಷೇಧಾಜ್ಞೆ ಜಾರಿ
ಲಿಂಕ್ ನಕಲಿಸಲಾಗಿದೆ ✓
ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನಾದ್ಯಂತ (Chikkamagaluru) 38 ಕಾಡಾನೆಗಳು (Elephants) ಬೀಡುಬಿಟ್ಟಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ತಾಲೂಕು ಆಡಳಿತ ಕಟ್ಟೆಚ್ಚರ ವಹಿಸಿದೆ. ಆನೆಗಳ ಸಂಚಾರವಿರುವ 50ಕ್ಕೂ ಹೆಚ್ಚು ಗ್ರಾಮಗಳಲ್ಲಿ ಬಿಎನ್ಎಸ್ ಸೆಕ್ಷನ್ 163ರ (Section 163 Burns) ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ತಹಶೀಲ್ದಾರ್ ಅಶ್ವಿನಿ ಸೋಮವಾರ ಆದೇಶ ಹೊರಡಿಸಿದ್ದು, ಮುಂದಿನ ಆದೇಶದವರೆಗೆ ಇದು ಜಾರಿಯಲ್ಲಿರಲಿದೆ.
ಯಾವೆಲ್ಲಾ ಗ್ರಾಮಗಳಲ್ಲಿ ನಿಷೇಧ?
ನಿಷೇಧಾಜ್ಞೆಯನ್ನು ಗೋಣಿಬೀಡು ಹೋಬಳಿ ಮತ್ತು ಕಸಬಾ ಹೋಬಳಿ ವ್ಯಾಪ್ತಿಯ 50ಕ್ಕೂ ಹೆಚ್ಚು ಗ್ರಾಮಗಳಲ್ಲಿ ವಿಧಿಸಲಾಗಿದೆ. ಗೋಣಿಬೀಡು, ಕಸಬಾ, ಜಿ.ಹೊಸಳ್ಳಿ, ಪೋಡಿಯಾ ಕಾಲೋನಿ, ಹೊಸಪುರ, ಗೋಣಿಬೀಡು ಮಕ್ಕಿ, ವಲಕೇರಟ್ಟಿ, ಮಾಲಹಳ್ಳಿ ಕಾರ್ಬೈಲು, ಬೊಮ್ಮನಹಳ್ಳಿ, ಮುಡಸಸಿ, ಸಿದ್ದಾಂತವನ, ತತ್ಕೋಳ, ಕುನ್ನಳ್ಳಿ, ಮತ್ತು ನಂದಿಪುರ ದುಂಡುಗ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜನರು ಗುಂಪುಗೂಡುವುದು, ಅನಗತ್ಯವಾಗಿ ಓಡಾಡುವುದು ಮತ್ತು ರಾತ್ರಿ ವೇಳೆ ಸಂಚರಿಸುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ.
ಆನೆ ಓಡಿಸುವ ಕಾರ್ಯಾಚರಣೆ ಸ್ಥಗಿತ
ಹಾಸನ ಜಿಲ್ಲೆಯ ಅರಣ್ಯ ಪ್ರದೇಶದಿಂದ ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ ಭಾನುವಾರ ಮಧ್ಯರಾತ್ರಿಯೇ ಈ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ ಎಂದು ಚಿಕ್ಕಮಗಳೂರು ವಿಭಾಗದ ಡಿಎಫ್ಒ (DFO) ಬೋರಯ್ಯ ತಿಳಿಸಿದ್ದಾರೆ.
ಮುಂದಿನ ಸ್ಪಷ್ಟ ಸೂಚನೆ ಬರುವವರೆಗೆ ಆನೆಗಳನ್ನು ಓಡಿಸುವ ಯಾವುದೇ ಪ್ರಯತ್ನವನ್ನು ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸದ್ಯ ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 38 ಕಾಡಾನೆಗಳು ಇರುವುದನ್ನು ಅರಣ್ಯ ಇಲಾಖೆ ಖಚಿತಪಡಿಸಿದೆ. ಈ ಆನೆಗಳು ಎರಡು ಗುಂಪುಗಳಾಗಿ ವಿಭಜನೆಯಾಗಿದ್ದು, ಒಂದು ಗುಂಪು ಬಾರದಹಳ್ಳಿ ಪ್ರದೇಶದಲ್ಲಿದ್ದರೆ, ಮತ್ತೊಂದು ಗುಂಪು ಮಾಕೋನಹಳ್ಳಿ ಬಳಿ ಇದೆ. ಇವೆರಡೂ ಗುಂಪುಗಳ ನಡುವೆ ಸುಮಾರು 2-3 ಕಿಲೋಮೀಟರ್ ಅಂತರವಿದೆ. ಕಳೆದ 3-4 ದಿನಗಳಿಂದ ನಿರಂತರವಾಗಿ ಚಲಿಸುತ್ತಿದ್ದ ಆನೆಗಳು ಸದ್ಯ ವಿಶ್ರಾಂತಿ ಪಡೆಯುತ್ತಿವೆ ಎಂದು ಡಿಎಫ್ಒ ಮಾಹಿತಿ ನೀಡಿದ್ದಾರೆ.
ಸಿಬ್ಬಂದಿ ಮತ್ತು ಡ್ರೋನ್ ಕಣ್ಗಾವಲು
ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆ ಸ್ಥಗಿತಗೊಂಡಿದ್ದರೂ, ಅರಣ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಮುಂದುವರಿಸಿದೆ. ಆನೆಗಳ ಚಲನವಲನದ ಮೇಲೆ ನಿರಂತರ ನಿಗಾ ಇರಿಸಲು ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು, ಆನೆಗಳಿರುವ ಪ್ರದೇಶಗಳ ಸುತ್ತಮುತ್ತ 60ರಿಂದ 70 ಅರಣ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೆ, ಡ್ರೋನ್ಗಳ ಮೂಲಕ ವೈಮಾನಿಕ ಸಮೀಕ್ಷೆ ಮತ್ತು ಕಣ್ಗಾವಲು ನಡೆಸಲಾಗುತ್ತಿದ್ದು, ಸದ್ಯ ಆನೆಗಳು ಅಶಾಂತ ಸ್ಥಿತಿಯಲ್ಲಿಲ್ಲ ಎಂದು ಡಿಎಫ್ಒ ಬೋರಯ್ಯ ತಿಳಿಸಿದ್ದಾರೆ.
ಕಾಫಿ ಕೊಯ್ಲು ಮಾಡಲು ಬೆಳೆಗಾರರ ಪರದಾಟ
ಮಲೆನಾಡು ಭಾಗದಲ್ಲಿ ವರ್ಷದ ಪ್ರಮುಖ ಕೃಷಿ ಚಟುವಟಿಕೆಯಾದ ಕಾಫಿ ಕೊಯ್ಲು ಭರದಿಂದ ಸಾಗುತ್ತಿರುವ ಸಮಯದಲ್ಲೇ, ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿರುವುದು ಬೆಳೆಗಾರರು ಮತ್ತು ರೈತರಲ್ಲಿ ತೀವ್ರ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಒಂದೆಡೆ ಕಾಫಿ ಹಣ್ಣು ಕಟಾವು ಮಾಡುವ ನಿರ್ಣಾಯಕ ಸಮಯ ಎದುರಾಗಿದ್ದರೆ, ಮತ್ತೊಂದೆಡೆ ತೋಟಗಳಲ್ಲಿ ಆನೆಗಳ ಸಂಚಾರ ಹೆಚ್ಚಾಗಿರುವುದರಿಂದ ಬೆಳೆ ನಷ್ಟದ ಜೊತೆಗೆ ಕೊಯ್ಲು ಕಾರ್ಯಕ್ಕೂ ಭಾರಿ ಅಡ್ಡಿಯಾಗುವ ಆತಂಕ ಎದುರಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಎನ್.ಆರ್. ಪುರ ಹಾಗೂ ಹಾಸನ ಜಿಲ್ಲೆಯ ಬೇಲೂರು, ಸಕಲೇಶಪುರ ಭಾಗದ ಕಾಫಿ ತೋಟಗಳಲ್ಲಿ ಆನೆಗಳ ಹಿಂಡು ಕಾಣಿಸಿಕೊಂಡಿದೆ. ತೋಟದೊಳಗೆ ಯಾವ ಕ್ಷಣದಲ್ಲಾದರೂ ಕಾಡಾನೆಗಳು ಎದುರಾಗಬಹುದು ಎಂಬ ಜೀವಭಯದಿಂದ ಕಾರ್ಮಿಕರು ಕಾಫಿ ಹಣ್ಣು ಕೊಯ್ಯಲು ತೋಟಗಳಿಗೆ ಇಳಿಯಲು ಹಿಂದೇಟು ಹಾಕುತ್ತಿದ್ದಾರೆ. ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಕಾಫಿ ಫಸಲು ಇದೀಗ ಕಟಾವಿಗೆ ಬಂದಿದೆ.
ಸರಿಯಾದ ಸಮಯಕ್ಕೆ ಕಾಫಿ ಹಣ್ಣು ಕೊಯ್ಯದಿದ್ದರೆ ಹಣ್ಣು ಗಿಡದಲ್ಲೇ ಒಣಗಿ ಅಥವಾ ಉದುರಿ ಭಾರಿ ನಷ್ಟವಾಗುವ ಆತಂಕವಿದೆ. ಇದರ ಜೊತೆಗೆ, ತೋಟಗಳಲ್ಲಿ ಸಂಚರಿಸುವ ಕಾಡಾನೆಗಳು ಕಾಫಿ ಗಿಡಗಳು, ಮೆಣಸಿನ ಬಳ್ಳಿಗಳು ಹಾಗೂ ನೀರಾವರಿ ಪೈಪ್ಗಳನ್ನು ತುಳಿದು ಮತ್ತು ಮುರಿದು ನಾಶಪಡಿಸುತ್ತಿರುವುದು ಬೆಳೆಗಾರರನ್ನು ಕಂಗಾಲಾಗಿಸಿದೆ. ಸರ್ಕಾರ ಮತ್ತು ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.
ರಮೇಶ್ ಹಾಸನ್
Peepal Media · ಬ್ರೇಕಿಂಗ್ ಸುದ್ದಿ ವಿಭಾಗ