ರವಿ ಹಂಜ್ ಬಂಧನ ಸ್ವಾಗತಾರ್ಹ; ಆತನ ಪುಸ್ತಕ ಮುಟ್ಟುಗೋಲು ಹಾಕಿಕೊಳ್ಳಿ: ಟಿ.ಎ. ನಾರಾಯಣ ಗೌಡ ಆಗ್ರಹ
ಲಿಂಕ್ ನಕಲಿಸಲಾಗಿದೆ ✓
ಬೆಂಗಳೂರು: ಕರ್ನಾಟಕ ಕಂಡ ಮಹಾ ಮಾನವತಾವಾದಿ, ಸಾಮಾಜಿಕ ಕ್ರಾಂತಿಯ ಹರಿಕಾರ ಭಕ್ತಿ ಭಂಡಾರಿ ಬಸವಣ್ಣನವರನ್ನು ಕೀಳಾಗಿ ನಿಂದಿಸಿದ್ದ ಬರಹಗಾರ ರವಿ ಹಂಜ್ ಎಂಬಾತನನ್ನು ಪೊಲೀಸರು ಬಂಧಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (KRV) ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಹೇಳಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ರವಿ ಹಂಜ್ ಮಾಡಿರುವುದು ಭಯೋತ್ಪಾದನೆಗೆ ಸಮನಾದ ಕೃತ್ಯವಾಗಿದ್ದು, ಆತನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ರವಿ ಹಂಜ್ ಅವರಂತಹವರು ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವುತ್ತಿದ್ದು, ನೆಮ್ಮದಿಯ ನಾಡಿನಲ್ಲಿ ಸಮುದಾಯಗಳ ನಡುವೆ ಸಂಘರ್ಷ ಹುಟ್ಟುಹಾಕುವ ಇಂತಹವರಿಗೆ ತಕ್ಕ ಪಾಠ ಕಲಿಸಬೇಕು ಎಂದು ನಾರಾಯಣ ಗೌಡ ಕಿಡಿಕಾರಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಕರ್ನಾಟಕದ ಮಹಾಚೇತನಗಳಿಗೆ ಮಸಿ ಬಳಿಯುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇಡೀ ಕನ್ನಡ ಸಮುದಾಯಕ್ಕೆ ನೈತಿಕ ನಡಾವಳಿಯ ಸೂತ್ರವನ್ನು ರೂಪಿಸಿಕೊಟ್ಟು, ಜಗತ್ತಿಗೆ ವಿಶ್ವ ಮಾನವತೆಯ ತತ್ವವನ್ನು ಸಾರಿದ ಬಸವಣ್ಣನವರನ್ನು ನಿಂದಿಸುವುದು ಮತ್ತು ಲಿಂಗಾಯತ ಪರಂಪರೆಯನ್ನು ಅವಹೇಳನಕಾರಿಯಾಗಿ ಕರೆಯುವುದು ಆತನ ಹೀನಾಯ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಸವಣ್ಣನವರು ನಿಸ್ಸಂಶಯವಾಗಿ ಕರ್ನಾಟಕದ ಸಾಂಸ್ಕೃತಿಕ ನಾಯಕರಾಗಿದ್ದು, ಅವರ ಸಾಮಾಜಿಕ ಕ್ರಾಂತಿ ನಮಗೆ ಸ್ಫೂರ್ತಿಯಾಗಿದೆ. ಸಮಾನತೆಯ ಬೀಜ ಬಿತ್ತಿದ ಬಸವಣ್ಣನವರನ್ನು ದ್ವೇಷಿಸುವ ಜಾತಿವಾದಿಗಳು 12ನೇ ಶತಮಾನದಲ್ಲೂ ಇದ್ದರು, ಈಗಲೂ ಇದ್ದಾರೆ. ಇಂತಹವರ ಮಾತುಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಮರ್ಥಿಸಿಕೊಳ್ಳುವವರೂ ಸಹ ಸಮಾಜದ್ರೋಹಿಗಳೇ ಆಗಿದ್ದಾರೆ ಎಂದು ನಾರಾಯಣ ಗೌಡ ಟೀಕಿಸಿದ್ದಾರೆ.
ಪೊಲೀಸರು ಯಾವುದೇ ಮುಲಾಜಿಲ್ಲದೆ ರವಿ ಹಂಜ್ ವಿರುದ್ಧ ಕಠಿಣ ಕ್ರಮ ಜರುಗಿಸಿ ಜೈಲಿಗೆ ಕಳುಹಿಸಬೇಕು. ಅಲ್ಲದೆ, ಆತ ಬರೆದಿರುವ ವಿವಾದಾತ್ಮಕ ಪುಸ್ತಕವನ್ನು ತಕ್ಷಣವೇ ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ಆತನ ಬೆನ್ನಿಗೆ ನಿಂತು ಕುಮ್ಮಕ್ಕು ನೀಡಿದವರನ್ನೂ ಕಾನೂನಿನ ಅಡಿಯಲ್ಲಿ ಶಿಕ್ಷಿಸಬೇಕು ಎಂದು ಟಿ.ಎ. ನಾರಾಯಣ ಗೌಡ ಒತ್ತಾಯಿಸಿದ್ದಾರೆ.
Peepal Media
Peepal Media · ರಾಜ್ಯ ವಿಭಾಗ