ಇ-ಕೆವೈಸಿ ಯಶಸ್ವಿಯಾದರೂ ‘ನಿಧನ’ ಎಂದು ತೋರಿಸಿದ ತಂತ್ರಾಂಶ – ಗೃಹಲಕ್ಷ್ಮಿ ಯೋಜನೆಯ ಮಹಾಲೋಪ
ಲಿಂಕ್ ನಕಲಿಸಲಾಗಿದೆ ✓
ಬೆಂಗಳೂರು : ರಾಜ್ಯ(Karnataka) ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ(Guarantee Schemes) ಅನುಷ್ಠಾನದಲ್ಲಿ ತಾಂತ್ರಿಕ ದೋಷಗಳು ಮತ್ತೊಮ್ಮೆ ಬಯಲಾಗಿವೆ. ಅರ್ಹ ಫಲಾನುಭವಿಗಳು ಜೀವಂತವಾಗಿದ್ದರೂ ಸರ್ಕಾರಿ ದಾಖಲೆಗಳು ಮತ್ತು ತಂತ್ರಾಂಶದಲ್ಲಿ ಅವರು ‘ನಿಧನರಾಗಿದ್ದಾರೆ’ ಎಂದು ನಮೂದಾಗುತ್ತಿರುವ ಎಡವಟ್ಟುಗಳು ಬೆಳಕಿಗೆ ಬಂದಿವೆ. ಇದರಿಂದ ಅರ್ಹ ಮಹಿಳೆಯರು ಗೃಹಲಕ್ಷ್ಮಿ ಹಣ ಹಾಗೂ ಪಡಿತರ ಸೌಲಭ್ಯದಿಂದ ವಂಚಿತರಾಗುತ್ತಿದ್ದು, ಕೊನೆಗೂ ತಂತ್ರಾಂಶದ ಲೋಪವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಒಪ್ಪಿಕೊಂಡಿದೆ.
ಇ-ಕೆವೈಸಿ ಯಶಸ್ವಿಯಾದರೂ ‘ನಿಧನ’ ಎಂದು ತೋರಿಸಿದ ತಂತ್ರಾಂಶ
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ವಿಧವೆಯೊಬ್ಬರು ಬದುಕಿದ್ದರೂ ತಂತ್ರಾಂಶದಲ್ಲಿ ಮೃತಪಟ್ಟಿದ್ದಾರೆ ಎಂದು ತೋರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆ ಅಧಿಕೃತ ಸ್ಪಷ್ಟನೆ ನೀಡಿದೆ. ಅರ್ಜಿದಾರರಾದ ಕಲ್ಪನಾ ರಾಜೇಶ್ ದುರ್ಗೆಕರ್ ಎಂಬುವವರು 2023-24ನೇ ಸಾಲಿನಲ್ಲಿಯೇ ಸೇವಾ ಕೇಂದ್ರದ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ಎರಡು ಬಾರಿ ಅಪ್ಲೋಡ್ ಮಾಡಲಾದ ಇ-ಕೆವೈಸಿ ಕೂಡ ಯಶಸ್ವಿಯಾಗಿತ್ತು. ಆದರೂ ತಂತ್ರಾಂಶದಲ್ಲಿ ಅರ್ಜಿಯ ಸ್ಥಿತಿ ‘ನಿಧನ’ ಎಂದೇ ತೋರಿಸುತ್ತಿತ್ತು.
ಈ ಸಮಸ್ಯೆ ಬಗೆಹರಿಸಿಕೊಳ್ಳಲು ಕಲ್ಪನಾ ಅವರಿಗೆ ಜನನ ಮತ್ತು ಮರಣ ನೋಂದಣಾಧಿಕಾರಿಗಳ ಕಚೇರಿ ಸಂಪರ್ಕಿಸಿ ಆಧಾರ್ ಸಂಖ್ಯೆಯೊಂದಿಗೆ ಪರಿಶೀಲಿಸಲು ಸೂಚಿಸಲಾಗಿತ್ತು. ಆ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರವೂ ತಂತ್ರಾಂಶದಲ್ಲಿ ‘ನಿಧನ’ ಎಂಬ ದಾಖಲೆ ಬದಲಾಗಿರಲಿಲ್ಲ. ಸದ್ಯ ಈ ತಾಂತ್ರಿಕ ಸಮಸ್ಯೆಯ ಬಗ್ಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಸ್ಪಷ್ಟ ಅಭಿಪ್ರಾಯದೊಂದಿಗೆ ಪ್ರಸ್ತಾವನೆ ಸಿದ್ಧಪಡಿಸಿ, ಸಮಸ್ಯೆ ಇತ್ಯರ್ಥಕ್ಕಾಗಿ ಕೇಂದ್ರ ಕಚೇರಿಗೆ ಕಳುಹಿಸಲಾಗಿದೆ ಎಂದು ಇಲಾಖೆ
ಗ್ಯಾರಂಟಿ ಸಭೆಗೆ ಖುದ್ದು ಹಾಜರಾದ ‘ಮೃತ’ ಮಹಿಳೆ: ಅಧಿಕಾರಿಗಳು ತಬ್ಬಿಬ್ಬು
ಮತ್ತೊಂದೆಡೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲೂ ಇಂಥದ್ದೇ ವಿಚಿತ್ರ ಘಟನೆ ನಡೆದಿದೆ. ಗರ್ಲಗುಂಜಿ ಗ್ರಾಮದ ವಿಜಯಾ ಪುಂಡಲೀಕ ಪಾಟೀಲ ಎಂಬ ಮಹಿಳೆ ಜೀವಂತವಾಗಿದ್ದರೂ, ಆಹಾರ ಇಲಾಖೆ ಅಧಿಕಾರಿಗಳು ಅವರನ್ನು ಪಡಿತರ ಚೀಟಿಯಲ್ಲಿ ‘ಮೃತಪಟ್ಟಿದ್ದಾರೆ’ ಎಂದು ನಮೂದಿಸಿ ಹೆಸರನ್ನು ತೆಗೆದುಹಾಕಿದ್ದರು.
ಶುಕ್ರವಾರ ಖಾನಾಪುರ ಪಟ್ಟಣದಲ್ಲಿ ನಡೆದ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಗೆ ಸಂತ್ರಸ್ತ ಮಹಿಳೆಯನ್ನೇ ಖುದ್ದಾಗಿ ಹಾಜರುಪಡಿಸಿದ ಸಮಿತಿ ಸದಸ್ಯ ಪ್ರಕಾಶ ಮಾದಾರ, ಅಧಿಕಾರಿಗಳ ನಿರ್ಲಕ್ಷ್ಯವನ್ನು ಬಯಲಿಗೆಳೆದರು. ‘ಮೃತ’ ಮಹಿಳೆ ಕಣ್ಮುಂದೆ ನಿಂತಿದ್ದನ್ನು ಕಂಡು ಅಧಿಕಾರಿಗಳು ಉತ್ತರಿಸಲು ತಡಕಾಡಿ ತಬ್ಬಿಬ್ಬಾದರು. ಈ ಪ್ರಮಾದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಮಿತಿ ಸದಸ್ಯರು, ತಕ್ಷಣವೇ ವಿಜಯಾ ಅವರ ಹೆಸರನ್ನು ಪಡಿತರ ಚೀಟಿಗೆ ಮರುಸೇರ್ಪಡೆಗೊಳಿಸಿ ಕಾರ್ಡ್ ವಿತರಿಸುವಂತೆ ತಾಲೂಕು ಪಂಚಾಯಿತಿ ಇಒ ಅವರನ್ನು ಒಕ್ಕೊರಲಿನಿಂದ ಆಗ್ರಹಿಸಿದರು.
ರಮೇಶ್ ಹಾಸನ್
Peepal Media · ಬ್ರೇಕಿಂಗ್ ಸುದ್ದಿ ವಿಭಾಗ