ಹೈದರಾಬಾದ್ ಕಾಂಗ್ರೆಸ್ ಖಾತೆ ನಿರ್ಬಂಧ ಮೆಟಾ ಕಚೇರಿ – ಧ್ವಂಸಗೊಳಿಸಿದ ಕಾರ್ಯಕರ್ತರು
ಲಿಂಕ್ ನಕಲಿಸಲಾಗಿದೆ ✓
ಹೈದರಾಬಾದ್ : ಯುವ ಕಾಂಗ್ರೆಸ್ನ (Congress) ಇಬ್ಬರು ರಾಷ್ಟ್ರೀಯ ಪದಾಧಿಕಾರಿಗಳ ಸಾಮಾಜಿಕ ಜಾಲತಾಣ ಖಾತೆಗಳ ಮೇಲೆ ನಿರ್ಬಂಧ ಹೇರಿರುವುದನ್ನು ವಿರೋಧಿಸಿ, ತೆಲಂಗಾಣ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಹೈದರಾಬಾದ್ನಲ್ಲಿರುವ ಮೆಟಾ (Meta) ಕಚೇರಿ ಆವರಣಕ್ಕೆ ನುಗ್ಗಿ ಹೂವಿನ ಕುಂಡಗಳನ್ನು ಎಸೆದು ದಾಂಧಲೆ ನಡೆಸಿದ್ದಾರೆ.
ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಜಕ್ಕಿಡಿ ಶಿವಚರಣ್ ರೆಡ್ಡಿ ನೇತೃತ್ವದಲ್ಲಿ ಜಮಾಯಿಸಿದ ಕಾರ್ಯಕರ್ತರು, ಮೆಟಾ ಸಂಸ್ಥೆ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಹಸ್ತಕ್ಷೇಪ ನಡೆಯುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ನಿರ್ಬಂಧಿಸಲಾದ ಪೋಸ್ಟ್ಗಳನ್ನು ತಕ್ಷಣವೇ ಮರುಸ್ಥಾಪಿಸುವಂತೆ ಆಗ್ರಹಿಸಿದರು. ಪ್ರತಿಭಟನಾಕಾರರು ಕಚೇರಿಯ ಕಾರಿಡಾರ್ ಹಾಗೂ ಕೆಫೆಟೇರಿಯಾ ಬಳಿ ಓಡಾಡುತ್ತಾ ಹೂವಿನ ಕುಂಡಗಳನ್ನು ಒಡೆದು ಹಾಕುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಮೆಟಾ ಸಂಸ್ಥೆಗೆ ಏಳು ದಿನಗಳ ಅಲ್ಟಿಮೇಟಮ್
ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಮತ್ತು ರಾಷ್ಟ್ರೀಯ ಉಸ್ತುವಾರಿ ಮನೀಶ್ ಶರ್ಮಾ ಅವರ ಖಾತೆಗಳ ಮೇಲೆ ಮೆಟಾ ನಿರ್ಬಂಧ ಹೇರಿದೆ ಎನ್ನಲಾಗಿದೆ. ಈ ಕುರಿತು ‘ಎಕ್ಸ್’ (X) ಖಾತೆಯಲ್ಲಿ ಪೋಸ್ಟ್ ಮಾಡಿರುವ ಭಾರತೀಯ ಯುವ ಕಾಂಗ್ರೆಸ್, ಮೆಟಾ ಸಂಸ್ಥೆಯು ಬೆನ್ನುಮೂಳೆ ಬೆಳೆಸಿಕೊಳ್ಳಬೇಕು ಎಂದು ಕಿಡಿಕಾರಿದೆ. ನಿರ್ಬಂಧಿಸಲಾದ ಖಾತೆಗಳು ಮತ್ತು ಪೋಸ್ಟ್ಗಳನ್ನು ಮರುಸ್ಥಾಪಿಸಲು ಏಳು ದಿನಗಳ ಗಡುವು ನೀಡಿದ್ದು, ಒಂದು ವೇಳೆ ಬೇಡಿಕೆ ಈಡೇರಿಸದಿದ್ದರೆ ನ್ಯಾಯಾಲಯ, ಬೀದಿ ಹಾಗೂ ಕಚೇರಿಗಳಲ್ಲೂ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದೆ.
ಮುಂಬೈನಲ್ಲೂ ಭುಗಿಲೆದ್ದ ಪ್ರತಿಭಟನೆ
ಇದೇ ವೇಳೆ ಮುಂಬೈನ ಬಿಕೆಸಿ (BKC) ಪ್ರದೇಶದ ವರ್ಲ್ಡ್ ಒನ್ನಲ್ಲಿರುವ ಮೆಟಾ ಕಚೇರಿ ಎದುರು ಮುಂಬೈ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮುಂಬೈ ಯುವ ಕಾಂಗ್ರೆಸ್ ಅಧ್ಯಕ್ಷೆ ಜೀನತ್ ಶಬ್ರೀನ್ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರ ಪೋಸ್ಟರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು. ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧದ ಧ್ವನಿಗಳನ್ನು ಹತ್ತಿಕ್ಕುವ ಉದ್ದೇಶದಿಂದಲೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಮೆಟಾ ಸಂಸ್ಥೆಯು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆ ಎಂದು ಘೋಷಣೆ ಕೂಗಿದರು.
ಮೆಟಾ ವಿರುದ್ಧ ಅಖಿಲೇಶ್ ಯಾದವ್ ಕಿಡಿ
ಖಾತೆಗಳ ಮೇಲಿನ ನಿರ್ಬಂಧದ ಕುರಿತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಎಕ್ಸ್ ಮೂಲಕ ಮೆಟಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ವಿದೇಶಿ ಕಂಪನಿಗಳು ನಮ್ಮ ದೇಶದಲ್ಲಿ ವ್ಯಾಪಾರ ಮಾಡಬೇಕೇ ಹೊರತು ರಾಜಕೀಯವನ್ನಲ್ಲ. ಎಲ್ಲರನ್ನೂ ಸಮಾನವಾಗಿ ಕಾಣುವುದು ಒಂದು ಉತ್ತಮ ಮತ್ತು ಒಳಗೊಳ್ಳುವ ಕಂಪನಿಯ ಲಕ್ಷಣವಾಗಿದೆ. ಸರ್ಕಾರವೂ ಸಹ ವಿದೇಶಿ ಕಂಪನಿಗಳ ಮೇಲೆ ಅನಗತ್ಯ ಒತ್ತಡ ಹೇರಿ ಅವುಗಳ ವ್ಯವಹಾರವನ್ನು ರಾಜಕೀಯಗೊಳಿಸಬಾರದು ಎಂದು ಅವರು ಬರೆದುಕೊಂಡಿದ್ದಾರೆ.
ರಮೇಶ್ ಹಾಸನ್
Peepal Media · ಬ್ರೇಕಿಂಗ್ ಸುದ್ದಿ ವಿಭಾಗ