ಬಸವೇಶ್ವರರು ಪ್ರತಿಪಾದಿಸಿದ ಜಾತಿರಹಿತ ಸಮಾಜದ ನೆಲೆ ಇರುವುದು ಆರ್ಎಸ್ಎಸ್ನಲ್ಲಿ ಮಾತ್ರ: ಬಿ.ವೈ. ವಿಜಯೇಂದ್ರ
ಲಿಂಕ್ ನಕಲಿಸಲಾಗಿದೆ ✓
ಬೆಂಗಳೂರು: ‘ಬಸವ ಮಂಟಪ’ ಕೃತಿಯ ವಿವಾದಕ್ಕೆ ಸಂಬಂಧಿಸಿದಂತೆ ಬರಹಗಾರ ರವಿ ಹಂಜ್ ಅವರ ವ್ಯಕ್ತಿತ್ವದೊಂದಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (RSS) ತಳುಕು ಹಾಕಲು ಹೊರಟಿರುವವರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಸವೇಶ್ವರರು ಪ್ರತಿಪಾದಿಸಿದ ಜಾತಿರಹಿತ ಸಮಾಜದ ನೆಲೆ ಇರುವುದು ಆರ್ಎಸ್ಎಸ್ನಲ್ಲಿ ಮಾತ್ರ ಎಂದು ಅವರು ಪ್ರತಿಪಾದಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ವಿಜಯೇಂದ್ರ, ‘ಬಸವ ಮಂಟಪ’ ಕೃತಿಯ ಮೂಲಕ ತನ್ನ ವಿಕೃತಿ ಮೆರೆಯಲು ಹೋಗಿ ಬಸವ ವಿರೋಧಿ ಮನಸ್ಥಿತಿಯನ್ನು ಅನಾವರಣಗೊಳಿಸಿಕೊಂಡಿರುವ ರವಿ ಹಂಜ್ ಅವರೊಂದಿಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಆರ್ಎಸ್ಎಸ್ ಅನ್ನು ತಳುಕು ಹಾಕುತ್ತಿರುವುದು ಸಮಯಸಾಧಕತನ ಹಾಗೂ ಅವರ ಹೀನ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಕಿಡಿಕಾರಿದ್ದಾರೆ.
ಜಾತಿ, ಪ್ರಾಂತೀಯತೆ ಹಾಗೂ ಭಾಷೆಗಳ ಎಲ್ಲೆಯನ್ನು ಮೀರಿ, ಜಾತಿ ವ್ಯವಸ್ಥೆಯನ್ನು ಎಂದಿಗೂ ಬೆಂಬಲಿಸದೆ, ಜಾತಿಯ ಸಂಕೇತಗಳು ತನ್ನಲ್ಲಿ ಬೇರುಬಿಡಲು ಅವಕಾಶವನ್ನೇ ನೀಡದೆ ತನ್ನ ಸಿದ್ಧಾಂತದೊಂದಿಗೆ ಬಸವ ತತ್ವವನ್ನು ಅಳವಡಿಸಿಕೊಂಡಿರುವ ಸಂಘಟನೆ ಯಾವುದಾದರೂ ಇದ್ದರೆ ಅದು ರಾಷ್ಟ್ರಭಕ್ತಿಯೊಂದನ್ನೇ ಏಕೈಕ ಆದ್ಯತೆಯನ್ನಾಗಿಸಿಕೊಂಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾತ್ರ ಎಂದು ಅವರು ಹೇಳಿದ್ದಾರೆ.
‘ಇವನಾರವ, ಇವನಾರವ’ ಎನ್ನದೆ, ‘ಇವ ನಮ್ಮವ, ಇವ ನಮ್ಮವ’ ಎಂದು ಭಾರತೀಯತೆಯನ್ನು ಪೂಜಿಸುವವರನ್ನು ಅಪ್ಪಿಕೊಂಡಿರುವ ಏಕೈಕ ಸಂಘಟನೆ ಆರ್ಎಸ್ಎಸ್ ಎಂಬುದನ್ನು ಕುಚೋದ್ಯದ ಹಾಗೂ ತಿಳಿಗೇಡಿ ಹೇಳಿಕೆಗಳನ್ನು ನೀಡುವವರು ಮನಗಾಣಲಿ ಎಂದು ವಿಜಯೇಂದ್ರ ತಿರುಗೇಟು ನೀಡಿದ್ದಾರೆ.
ಅವಕಾಶ ಸಿಕ್ಕಾಗಲೆಲ್ಲ ಆರ್ಎಸ್ಎಸ್ ವಿರುದ್ಧ ವಿಷಕಾರುವುದೇ ಕೆಲವರಿಗೆ ತೆವಲಾಗಿದ್ದು, ಬೆಂದ ಮನೆಯಲ್ಲಿ ಗಳ ಇರಿದುಕೊಳ್ಳುವ ಬುದ್ಧಿ ಹೊಂದಿರುವ ಇಂಥವರಿಗೆ ರವಿ ಹಂಜ್ ಅವರ ಪುಸ್ತಕ ಈಗ ಸರಕಾಗಿದೆ ಎಂದು ವಿಜಯೇಂದ್ರ ಟೀಕಿಸಿದ್ದಾರೆ.
Peepal Media
Peepal Media · ರಾಜ್ಯ ವಿಭಾಗ