ವರ್ತೂರು ಅಕ್ರಮ ವಲಸಿಗರ ವದಂತಿ: ವೈರಲ್ ವಿಡಿಯೋದಲ್ಲಿನ ಆರೋಪಗಳನ್ನು ತಳ್ಳಿಹಾಕಿದ ಪೊಲೀಸರು
ಲಿಂಕ್ ನಕಲಿಸಲಾಗಿದೆ ✓
ಬೆಂಗಳೂರು: ನಗರದ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಾಲಗೆರೆ ಗ್ರಾಮದ ಬಳಿ ಶಂಕಿತ ಅಕ್ರಮ ವಲಸಿಗರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಲಾಗಿದೆ ಎಂಬ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ತಪ್ಪು ಮಾಹಿತಿಗಳನ್ನು ವೈಟ್ಫೀಲ್ಡ್ ವಿಭಾಗದ ಉಪ ಪೊಲೀಸ್ ಆಯುಕ್ತ (DCP) ಶ್ರೀಹರಿ ಬಾಬು ಬಿ.ಎಲ್. ತಳ್ಳಿಹಾಕಿದ್ದಾರೆ.
ನವೆಂಬರ್ 19, 2026 ರಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋ ಕುರಿತು ವಿಡಿಯೋ ಹೇಳಿಕೆ ಮೂಲಕ ಸ್ಪಷ್ಟನೆ ನೀಡಿರುವ ಡಿಸಿಪಿ ಶ್ರೀಹರಿ ಬಾಬು, ವಿಡಿಯೋದಲ್ಲಿ ಮಾಡಲಾಗಿರುವ ಹಲವು ಆರೋಪಗಳು “ಸತ್ಯಕ್ಕೆ ದೂರವಾಗಿವೆ” ಎಂದು ತಿಳಿಸಿದ್ದಾರೆ. ಅಲ್ಲದೆ, ಈ ಸುಳ್ಳು ಮಾಹಿತಿಯನ್ನು ಹರಡಿದವರ ಬಗ್ಗೆ ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಅಧಿಕೃತ ಮಾಹಿತಿಯ ಪ್ರಕಾರ, ನವೆಂಬರ್ 19 ರಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಬಾಲಗೆರೆ ಗ್ರಾಮದ ಕಾರ್ಮಿಕರ ಶೆಡ್ಗಳ ಬಳಿ ಶಂಕಿತ ಅಕ್ರಮ ವಲಸಿಗರು ವಾಸಿಸುತ್ತಿದ್ದಾರೆ ಎಂದು ಪೊಲೀಸ್ ಸಹಾಯವಾಣಿ ‘112’ಕ್ಕೆ ದೂರು ಬಂದಿತ್ತು. ಮಾಹಿತಿ ತಿಳಿದ ತಕ್ಷಣ 112 ಸಿಬ್ಬಂದಿ ನಂಜುಂಡೇಶ್ವರ ಸ್ಥಳಕ್ಕೆ ಭೇಟಿ ನೀಡಿ, ದೂರುದಾರರನ್ನು ಸಂಪರ್ಕಿಸಿ ಐವರು ವ್ಯಕ್ತಿಗಳನ್ನು ವಿಚಾರಣೆ ಮತ್ತು ದಾಖಲೆಗಳ ಪರಿಶೀಲನೆಗಾಗಿ ವರ್ತೂರು ಪೊಲೀಸ್ ಠಾಣೆಗೆ ಕರೆತಂದಿದ್ದರು.
ವರ್ತೂರು ಪೊಲೀಸ್ ಇನ್ಸ್ಪೆಕ್ಟರ್ ಮತ್ತು ತಂಡದ ತನಿಖೆಯ ವೇಳೆ, ಐವರಲ್ಲಿ ಬಾಬುಲ್ ಶೇಖ್ ಎಂಬ ವ್ಯಕ್ತಿ ಬಾಂಗ್ಲಾದೇಶ ಮೂಲದವನಾಗಿದ್ದು, ಆತನ ಬಳಿ ಅಧಿಕೃತ ಪಾಸ್ಪೋರ್ಟ್ ಮತ್ತು ವೀಸಾ ಇರುವುದು ಕಂಡುಬಂದಿದೆ. ಹೆಚ್ಚಿನ ಖಚಿತತೆಗಾಗಿ ಆತನನ್ನು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ (FRRO) ಕಳುಹಿಸಲಾಗಿತ್ತು. ಎಫ್ಆರ್ಆರ್ಒ ಅಧಿಕಾರಿಗಳು ಆತನ ಪ್ರಯಾಣ ದಾಖಲೆಗಳು ಅಸಲಿಯಾಗಿವೆ ಎಂದು ದೃಢಪಡಿಸಿದ ಬಳಿಕ ಆತನನ್ನು ಕಾನೂನುಬದ್ಧವಾಗಿ ಬಿಡುಗಡೆ ಮಾಡಲಾಗಿದೆ.
ಉಳಿದ ನಾಲ್ವರು ನೀಡಿದ್ದ ವಿಳಾಸದ ವಿವರಗಳನ್ನು ಪರಿಶೀಲಿಸಿದ ವರ್ತೂರು ಪೊಲೀಸರು, ಅಸ್ಸಾಂನ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿದ್ದರು. ಅಲ್ಲಿನ ಪೊಲೀಸರು ಇ-ಮೇಲ್ ಮೂಲಕ ಆ ನಾಲ್ವರೂ ಅಸ್ಸಾಂ ರಾಜ್ಯದ ಗ್ರಾಮವೊಂದರ ಅಧಿಕೃತ ನಿವಾಸಿಗಳು ಎಂದು ಖಚಿತಪಡಿಸಿದ್ದಾರೆ. ಅಧಿಕೃತ ದೃಢೀಕರಣದ ಬಳಿಕ ವಿಚಾರಣೆ ಮುಕ್ತಾಯಗೊಳಿಸಿ ಅವರನ್ನೂ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈಟ್ಫೀಲ್ಡ್ ವಿಭಾಗದ ಪ್ರತಿ ಪೊಲೀಸ್ ಠಾಣೆ ಮತ್ತು ಉಪವಿಭಾಗ ಮಟ್ಟದಲ್ಲಿ ಶಂಕಿತ ಅಕ್ರಮ ವಲಸಿಗರನ್ನು ನಿರಂತರವಾಗಿ ಪತ್ತೆಹಚ್ಚಿ ಪರಿಶೀಲಿಸಲು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಮುಂದಿನ ದಿನಗಳಲ್ಲೂ ಈ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಡಿಸಿಪಿ ಶ್ರೀಹರಿ ಬಾಬು ಸ್ಪಷ್ಟಪಡಿಸಿದ್ದಾರೆ.
Peepal Media
Peepal Media · ರಾಜ್ಯ ವಿಭಾಗ