ದಂಗಲ್ ಖ್ಯಾತಿಯ ನಿತೀಶ್ ತಿವಾರಿ ನಿರ್ದೇಶನದಲ್ಲಿ ಅತ್ಯಂತ ಭಾರಿ ಬಜೆಟ್ ಹಾಗೂ ಅತ್ಯುನ್ನತ ತಾಂತ್ರಿಕ ಮೌಲ್ಯಗಳೊಂದಿಗೆ ಸಿದ್ಧವಾಗಿರುವ ಪೌರಾಣಿಕ ಮಹಾಕಾವ್ಯ ‘ರಾಮಾಯಣ’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮ ಹೈದರಾಬಾದ್ನಲ್ಲಿ ಅದ್ದೂರಿಯಾಗಿ ನೆರವೇರಿದೆ. ಬಾಲಿವುಡ್ ತಾರೆ ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ‘ರಾಕಿಂಗ್ ಸ್ಟಾರ್’ ಯಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ದೃಶ್ಯವೈಭವವು ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 5ರಂದು ಜಗತ್ತಿನಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.
ನಮಿತ್ ಮಲ್ಹೋತ್ರಾ ಅವರೊಂದಿಗೆ ಯಶ್ ಕೂಡ ಸ್ವತಃ ಈ ಚಿತ್ರದ ಸಹ-ನಿರ್ಮಾಪಕರಾಗಿದ್ದು, ತೆಲುಗಿನಲ್ಲಿ ಖ್ಯಾತ ನಿರ್ಮಾಪಕ ದಿಲ್ ರಾಜು ತಮ್ಮ ‘ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್’ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ವಿತರಿಸುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಯಶ್, ತಮ್ಮ ಇತ್ತೀಚಿನ ‘ಟಾಕ್ಸಿಕ್’ ಚಿತ್ರ ಪ್ರೇಕ್ಷಕರನ್ನು ನಿರೀಕ್ಷಿತ ಮಟ್ಟದಲ್ಲಿ ತಲುಪಲು ಸಾಧ್ಯವಾಗದಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡರು. “ಎರಡು ತಿಂಗಳ ಹಿಂದಷ್ಟೇ ನಿಮ್ಮ ಮುಂದೆ ಬಂದಿದ್ದೆ, ಮತ್ತೆ ಇಷ್ಟು ಬೇಗ ಭೇಟಿಯಾಗುತ್ತಿದ್ದೇನೆ. ಆ ಸಿನಿಮಾ ಕೆಲವರಿಗೆ ಇಷ್ಟವಾಯಿತು, ಕೆಲವರಿಗೆ ಇಷ್ಟವಾಗಲಿಲ್ಲ. ಇಷ್ಟವಾದರೂ, ಆಗದಿದ್ದರೂ ನನ್ನ ಮೇಲಿನ ಪ್ರೀತಿಯಿಂದ ಚಿತ್ರಮಂದಿರಕ್ಕೆ ಬಂದ ಪ್ರತಿಯೊಬ್ಬರಿಗೂ ಧನ್ಯವಾದಗಳು, ನಿಮ್ಮ ಈ ಪ್ರೀತಿಯೇ ನಮ್ಮನ್ನು ಸದಾ ಮುನ್ನಡೆಸುತ್ತದೆ” ಎಂದರು.
ಅಲ್ಲದೆ, ರಾಜಮೌಳಿ, ಪ್ರಭಾಸ್, ರಾಮ್ ಚರಣ್, ಜೂನಿಯರ್ ಎನ್ಟಿಆರ್ ಅವರ ಹೆಸರನ್ನು ಉಲ್ಲೇಖಿಸುತ್ತಾ ತೆಲುಗು ಚಿತ್ರರಂಗ ಜಾಗತಿಕ ಮಟ್ಟದಲ್ಲಿ ತೋರುತ್ತಿರುವ ಪಾರಮ್ಯವನ್ನು ಕೊಂಡಾಡಿದ ಯಶ್, ದಕ್ಷಿಣ ಭಾರತ ಮತ್ತು ಬಾಲಿವುಡ್ ಚಿತ್ರರಂಗಗಳ ನಡುವೆ ಪರಸ್ಪರ ಪ್ರೀತಿ-ಗೌರವಗಳ ವಿನಿಮಯ ಅತ್ಯಗತ್ಯ ಎಂದು ಪ್ರತಿಪಾದಿಸಿದರು.
ಚಿತ್ರದಲ್ಲಿನ ಪಾತ್ರವರ್ಗದ ಬಗ್ಗೆ ಮಾತನಾಡುತ್ತಾ, ರಾವಣನ ಪಾತ್ರಕ್ಕೆ ಜೀವ ತುಂಬುವುದರೊಂದಿಗೆ ಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಲು ನಮಿತ್ ಮಲ್ಹೋತ್ರಾ ಅವರ ಜಾಗತಿಕ ಕನಸು ಮತ್ತು ಬದ್ಧತೆಯೇ ಪ್ರೇರಣೆ ಎಂದು ಯಶ್ ತಿಳಿಸಿದರು. ಸೀತೆಯಾಗಿ ಸಾಯಿ ಪಲ್ಲವಿ ಅಭಿನಯ ಅದ್ಭುತವಾಗಿದೆ ಹಾಗೂ ಶೂರ್ಪನಖಿಯ ಸವಾಲಿನ ಪಾತ್ರವನ್ನು ರಕುಲ್ ಪ್ರೀತ್ ಸಿಂಗ್ ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದರು.
ಇನ್ನು ರಾಮನ ಪಾತ್ರಧಾರಿ ರಣಬೀರ್ ಕಪೂರ್ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ ಅವರು, “ಅವರು ಯಾವುದೇ ಅಹಂಕಾರವಿಲ್ಲದ ಅತ್ಯಂತ ಸರಳ ಹಾಗೂ ಅದ್ಭುತ ನಟ. ರಾಮನ ಪಾತ್ರದಲ್ಲಿ ರಣಬೀರ್ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಲಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚಿತ್ರದ ಬಗ್ಗೆ ಪ್ರೇಕ್ಷಕರಿಗೆ ವಿಶೇಷ ಮನವಿ ಮಾಡಿದ ಯಶ್, “ಇಂತಹ ಮಹತ್ವಾಕಾಂಕ್ಷೆಯ ಮತ್ತು ಅದ್ಭುತ ಸಿನಿಮಾಗಳು ಮತ್ತೆ ಮತ್ತೆ ಬರುವುದಿಲ್ಲ. ಆದ್ದರಿಂದ ದಯವಿಟ್ಟು ವಿಎಫ್ಎಕ್ಸ್ (VFX) ಸೇರಿದಂತೆ ಸಣ್ಣಪುಟ್ಟ ತಾಂತ್ರಿಕ ಲೋಪಗಳನ್ನು ಭೂತಗನ್ನಡಿ ಹಿಡಿದು ಹುಡುಕಬೇಡಿ. ನಮಿತ್ ಅವರಂತಹ ಪ್ಯಾಶನೇಟ್ ನಿರ್ಮಾಪಕರನ್ನು ನಾವು ನಿರುತ್ಸಾಹಗೊಳಿಸಿದರೆ ಭಾರತೀಯ ಚಿತ್ರರಂಗ ಹಲವು ವರ್ಷಗಳಷ್ಟು ಹಿಂದಕ್ಕೆ ಹೋಗುತ್ತದೆ. ಮುಕ್ತ ಮನಸ್ಸಿನಿಂದ ಚಿತ್ರವನ್ನು ನೋಡಿ ಆನಂದಿಸಿ. ರಚನಾತ್ಮಕ ವಿಮರ್ಶೆಗಳನ್ನು ಸ್ವೀಕರಿಸಿ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಗುಣಮಟ್ಟದ ಸಿನಿಮಾಗಳನ್ನು ನೀಡಲು ನಾವು ಸದಾ ಸಿದ್ಧರಿದ್ದೇವೆ. ಭಾರತೀಯ ಸಿನಿರಂಗ ಒಟ್ಟಾಗಿ ಜಾಗತಿಕ ಮಟ್ಟದಲ್ಲಿ ಬೆಳೆಯಬೇಕು” ಎಂದು ಕರೆ ನೀಡಿದರು.
