ಇಂಫಾಲ್: ಸುಮಾರು ನಾಲ್ಕು ವರ್ಷಗಳು ಕಳೆದರೂ ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ಮತ್ತು ಹಿಂಸಾಚಾರದ ಬೆಂಕಿ ತಣ್ಣಗಾಗಿಲ್ಲ. ಸೋಮವಾರ ರಾಜ್ಯದಲ್ಲಿ ನಡೆದ ಎರಡು ಪ್ರತ್ಯೇಕ ಹಿಂಸಾಚಾರದ ಘಟನೆಗಳಲ್ಲಿ ನಾಲ್ವರು ಸಾವನ್ನಪ್ಪಿದ್ದು, ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೆ ಮತ್ತಿಬ್ಬರು ಅಥವಾ ಮೂವರು ಗ್ರಾಮಸ್ಥರು ನಾಪತ್ತೆಯಾಗಿದ್ದಾರೆ.
ಈ ಭೀಕರ ಘಟನೆಯನ್ನು ಖಂಡಿಸಿ ರೊಚ್ಚಿಗೆದ್ದ ಸ್ಥಳೀಯರು ಎರಡು ಮೃತದೇಹಗಳನ್ನು ಮುಖ್ಯಮಂತ್ರಿ ನಿವಾಸದ ಮುಂಭಾಗಕ್ಕೆ ತಂದು ಧರಣಿ ನಡೆಸಿದ್ದರಿಂದ ರಾಜಧಾನಿ ಇಂಫಾಲ್ನಲ್ಲಿ ತೀವ್ರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಭಾನುವಾರ ರಾತ್ರಿ ಮೈತೇಯಿ ಮತ್ತು ಮುಸ್ಲಿಂ ಸಮುದಾಯಗಳು ವಾಸಿಸುವ ಪ್ರದೇಶದಲ್ಲಿ ಆಯೋಜಿಸಲಾಗಿದ್ದ ಸಂಗೀತ ಕಾರ್ಯಕ್ರಮದ ವೇಳೆ ಆರಂಭವಾದ ಕಲಹ ಕಲ್ಲು ತೂರಾಟ ಮತ್ತು ಗುಂಡಿನ ಚಕಮಕಿಗೆ ತಿರುಗಿತ್ತು. ಈ ಸಂದರ್ಭದಲ್ಲಿ ಗುಂಡೇಟು ತಗುಲಿ 24 ವರ್ಷದ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದನು.
ಇದರ ಬೆನ್ನಲ್ಲೇ ಸೋಮವಾರ ಮುಂಜಾನೆ 7 ಗಂಟೆಯ ಸುಮಾರಿಗೆ ಇಂಫಾಲ್ ಪೂರ್ವ ಮತ್ತು ಕಾಂಗ್ಪೋಕ್ಪಿ ಜಿಲ್ಲೆಗಳ ಗಡಿ ಸಮೀಪದ ಖಮೇನ್ಲೋಕ್ ಅರಣ್ಯ ಪ್ರದೇಶಕ್ಕೆ ಸೌದೆ ತರಲು ತೆರಳಿದ್ದ ಸುಮಾರು 30 ಗ್ರಾಮಸ್ಥರ ಮೇಲೆ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಅರುಬಮ್ ರೋನಿಲ್ (35), ಲೈರೆನ್ಲಕ್ಪಾಮ್ ಇನಾಬಿ (44) ಮತ್ತು ಕ್ಷೇತ್ರೀಮಯುಮ್ ಸುಶೀಲ್ (32) ಎಂಬುವವರು ಹತ್ಯೆಗೀಡಾಗಿದ್ದಾರೆ.
ಹತ್ಯೆಯಿಂದ ಆಕ್ರೋಶಗೊಂಡ ನೂರಾರು ಸ್ಥಳೀಯರು ಎರಡು ಮೃತದೇಹಗಳೊಂದಿಗೆ ಮುಖ್ಯಮಂತ್ರಿ ನಿವಾಸದತ್ತ ಮೆರವಣಿಗೆ ನಡೆಸಿ ಪ್ರತಿಭಟನೆ ಆರಂಭಿಸಿದರು. ಭದ್ರತಾ ಪಡೆಗಳು ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಹಾಗೂ ಲಘು ಲಾಠಿಪ್ರಹಾರ ನಡೆಸಿ, ಮೃತದೇಹಗಳನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ರವಾನಿಸಿದವು.
ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಸ್ಥಳೀಯ ಶಾಸಕ ಥೋಕ್ಚೋಮ್ ಲೋಕೇಶ್ವರ್ ಸಿಂಗ್, ಗಡಿ ಭಾಗದಲ್ಲಿರುವ ಸಸ್ಪೆನ್ಷನ್ ಆಫ್ ಆಪರೇಷನ್ಸ್ (SoO) ಶಿಬಿರವನ್ನು ತಕ್ಷಣವೇ ತೆರವುಗೊಳಿಸಬೇಕು ಮತ್ತು ಉನ್ನತ ಮಟ್ಟದ ಭದ್ರತಾ ಪಡೆಗಳು ಶಾಂತಿ ಕಾಪಾಡಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
