ದೆಹಲಿ: ವಿಶ್ವದ ಅತ್ಯಂತ ಕಲುಷಿತ ನಗರಗಳ ಜಾಗತಿಕ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ನಗರಗಳೇ ಅಗ್ರಸ್ಥಾನ ಪಡೆದುಕೊಂಡಿದ್ದು, ದೇಶದಲ್ಲಿ ವಾಯುಮಾಲಿನ್ಯದ ಭೀಕರತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಇತ್ತೀಚೆಗೆ ಬಿಡುಗಡೆಯಾದ ಜಾಗತಿಕ ವಾಯು ಗುಣಮಟ್ಟ ಸೂಚ್ಯಂಕದ (AQI) ಟಾಪ್-20 ಕಲುಷಿತ ನಗರಗಳ ಪಟ್ಟಿಯಲ್ಲಿ ಬರೋಬ್ಬರಿ 13 ನಗರಗಳು ಭಾರತಕ್ಕೆ ಸೇರಿವೆ. ಆದರೆ, ಸಾಮಾನ್ಯವಾಗಿ ದೇಶದಲ್ಲೇ ಅತಿ ಹೆಚ್ಚು ವಾಯುಮಾಲಿನ್ಯ ಎದುರಿಸುವ ರಾಷ್ಟ್ರ ರಾಜಧಾನಿ ದೆಹಲಿ ಈ ಬಾರಿಯ ಟಾಪ್ ಪಟ್ಟಿಯಲ್ಲಿ ಇಲ್ಲದಿರುವುದು ವಿಶೇಷ ಸಂಗತಿಯಾಗಿದೆ.
ಸೋಮವಾರ ಮಧ್ಯಾಹ್ನ ಸಂಗ್ರಹಿಸಲಾದ ವಾಯು ಗುಣಮಟ್ಟ ಸೂಚ್ಯಂಕದ (AQI) ಅಂಕಿ-ಅಂಶಗಳ ಪ್ರಕಾರ, ಉತ್ತರ ಪ್ರದೇಶದ ಬುಲಂದ್ಶಹರ್ ನಗರವು 198 AQI ಮೌಲ್ಯದೊಂದಿಗೆ ಜಾಗತಿಕವಾಗಿ 3ನೇ ಸ್ಥಾನದಲ್ಲಿದೆ. ಇದನ್ನು ‘ಅನಾರೋಗ್ಯಕರ’ ವಿಭಾಗಕ್ಕೆ ವರ್ಗೀಕರಿಸಲಾಗಿದೆ. ತ್ರಿಪುರದ ಅಗರ್ತಲಾ ನಗರವು 181 AQI ನೊಂದಿಗೆ 4ನೇ ಸ್ಥಾನದಲ್ಲಿದ್ದರೆ, ಇಂಡೋನೇಷ್ಯಾದ ಮಧ್ಯ ಕಾಲಿಮಂಟನ್ನ ಪಲಾಂಗ್ಕರಾಯಾ ನಗರವು ಅತ್ಯಂತ ತೀವ್ರ ಮಾಲಿನ್ಯ ವಿಭಾಗದಲ್ಲಿ ವಿಶ್ವದಲ್ಲೇ ಮೊದಲ ಸ್ಥಾನ ಪಡೆದುಕೊಂಡಿದೆ.
ಉಳಿದಂತೆ ಭಾರತದ ಪ್ರಮುಖ ನಗರಗಳಾದ ರಾಜಸ್ಥಾನದ ಪಾಲಿ (174) ಮತ್ತು ಉತ್ತರ ಪ್ರದೇಶದ ಮುಜಫರ್ನಗರ (174) ನಂತರದ ಸ್ಥಾನಗಳಲ್ಲಿವೆ. ಮಧ್ಯಪ್ರದೇಶದ ಬುರ್ಹಾನ್ಪುರ (174), ಹರಿಯಾಣದ ರೋಹ್ಟಕ್ (172), ರಾಜಸ್ಥಾನದ ಕೋಟಾ (170), ಮುಂಬೈ (167), ಹಾಪುರ್ (166), ಹಿಸಾರ್ (165), ಬಿಕಾನೆರ್ (165) ಹಾಗೂ ಬರೇಲಿ (164) ನಗರಗಳು ಟಾಪ್-20 ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಈ ನಗರಗಳಲ್ಲಿ ವಾಯು ಗುಣಮಟ್ಟ ಗಂಭೀರ ಮಟ್ಟಕ್ಕೆ ಕುಸಿದಿದ್ದು, ಜನಸಾಮಾನ್ಯರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.
