ಲಂಚ ಕೇಳುವ ಅಧಿಕಾರಿಯ ವಿರುದ್ಧ ತನಿಖೆಗೆ ಪೂರ್ವಾನುಮತಿ ಅಗತ್ಯವಿಲ್ಲ: ಸುಪ್ರೀಂ ಕೋರ್ಟ್ ತೀರ್ಪು

ದೆಹಲಿ: ಲಂಚ ಕೇಳಿದ ಆರೋಪ ಎದುರಿಸುತ್ತಿರುವ ಸರ್ಕಾರಿ ನೌಕರನ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ (ಪಿಸಿ ಕಾಯ್ದೆ) ತನಿಖೆ ನಡೆಸಲು ಸರ್ಕಾರದ ಪೂರ್ವಾನುಮತಿ ಪಡೆಯುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಲಂಚದ ಬೇಡಿಕೆ ಇಡುವುದು ಅಧಿಕೃತ ಕರ್ತವ್ಯದ ಭಾಗವಲ್ಲ ಹಾಗೂ ಅದು ಸಂಪೂರ್ಣ ಅಪರಾಧ ಕೃತ್ಯವಾಗಿರುವುದರಿಂದ ಅಂತಹ ನೌಕರರಿಗೆ ಯಾವುದೇ ಕಾನೂನು ರಕ್ಷಣೆ ಇರುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ತಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದನ್ನು ಪ್ರಶ್ನಿಸಿ ರಾಜಸ್ಥಾನದ ಪೊಲೀಸ್ ಕಾನ್‌ಸ್ಟೆಬಲ್ ತೇಜಾರಾಮ್ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳಾದ ಎಸ್.ವಿ.ಎನ್. ಭಟ್ಟಿ ಹಾಗೂ ಎನ್.ವಿ. ಅಂಜಾರಿಯಾ ಅವರಿದ್ದ ಪೀಠವು ಈ ಆದೇಶವನ್ನು ಹೊರಡಿಸಿದೆ. ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7ರ ಅಡಿಯಲ್ಲಿ ಆರೋಪ ಹೊರಿಸಿದ ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದ್ದ ರಾಜಸ್ಥಾನ ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.

ತನಿಖಾ ಸಂಸ್ಥೆಯು ಕಾಯ್ದೆಯ ಸೆಕ್ಷನ್ 17A ಪ್ರಕಾರ ಮುಂಚಿತವಾಗಿಯೇ ಸರ್ಕಾರದ ಅನುಮತಿ ಪಡೆದಿಲ್ಲ ಎಂಬ ಕಾನ್‌ಸ್ಟೆಬಲ್ ವಾದವನ್ನು ತಳ್ಳಿಹಾಕಿದ ನ್ಯಾಯಪೀಠ, ಈ ಸೆಕ್ಷನ್ ಅಧಿಕೃತ ಕರ್ತವ್ಯದ ಭಾಗವಾಗಿ ಕೈಗೊಂಡ ನಿರ್ಧಾರಗಳು ಅಥವಾ ಶಿಫಾರಸುಗಳಿಗೆ ಮಾತ್ರ ರಕ್ಷಣೆ ನೀಡುತ್ತದೆಯೇ ವಿನಃ ಲಂಚದ ಬೇಡಿಕೆಗಳಿಗೆ ಅನ್ವಯಿಸುವುದಿಲ್ಲ ಎಂದು ವಿವರಿಸಿದೆ.

ಈ ಹಿಂದಿನ ಪ್ರಮುಖ ತೀರ್ಪುಗಳನ್ನು ಉಲ್ಲೇಖಿಸಿದ ನ್ಯಾಯಾಲಯ, ನಿಧಿ ದುರುಪಯೋಗ, ಖಾತೆಗಳಲ್ಲಿ ತಪ್ಪು ನಮೂದು, ವಂಚನೆ, ವಿಶ್ವಾಸದ್ರೋಹ ಹಾಗೂ ಲಂಚ ಸ್ವೀಕಾರದಂತಹ ಅಪರಾಧಗಳು ಸೆಕ್ಷನ್ 17A ನ ರಕ್ಷಣಾತ್ಮಕ ವ್ಯಾಪ್ತಿಯೊಳಗೆ ಬರುವುದಿಲ್ಲ ಎಂದು ಪುನರುಚ್ಚರಿಸಿದೆ.

Related Articles

ಇತ್ತೀಚಿನ ಸುದ್ದಿಗಳು